ಪರಮಪೂಜ್ಯ ಜಗದ್ಗುರು ಶಂಕರಾಚಾರ್ಯ ಶ್ರೀ ಶ್ರೀ ರಾಘವೇಶ್ವರಭಾರತೀಮಹಾಸ್ವಾಮಿಗಳವರ ದಿವ್ಯಚರಣಾರವಿಂದಗಳಲ್ಲಿ
ಮಂಗಳೂರು ಮಂಡಲಾಂತರ್ಗತ, ಮಂಗಳೂರು ದಕ್ಷಿಣವಲಯದ ಪಡೀಲುಘಟಕ (ಸಂ.೧೦೦೧) ವ್ಯಾಪ್ತಿಯ ನಿವಾಸಿಯಾದ ಗೋಪಾಲಕೃಷ್ಣ ಭಟ್ಟನು ಮಾಡಿಕೊಳ್ಳುವ ವಿಜ್ಞಾಪನೆಗಳು.
ಪೂಜ್ಯರೇ.
ನಾನು ೨೦೧೫ನೇ ಇಸವಿಯ ಕೊನೆಯ ಭಾಗದಲ್ಲಿ ಅರ್ಬುದ ವ್ಯಾಧಿಗೆ ತುತ್ತಾದ ಸಂಗತಿಯನ್ನೂ, ದೀರ್ಘಾವಧಿ ಚಿಕಿತ್ಸೆಯ ಕಾರಣದಿಂದ ಗುರಿಕ್ಕಾರ ಜವಾಬ್ದಾರಿಯನ್ನು ನಿರ್ವಹಣೆ ಮಾಡಲಾಗದ ಸ್ಥಿತಿಯನ್ನೂ ವಲಯಾಧ್ಯಕ್ಷರ ಮೂಲಕ ಬಿನ್ನವಿಸಿಕೊಂಡಿದ್ದೆ. ಆ ಬಳಿಕ, ಶಸ್ತ್ರಚಿಕಿತ್ಸೆಗೆ ಒಳಗಾಗುವ ಮೊದಲು ಶ್ರೀಮಠಕ್ಕೆ (ಗಿರಿನಗರ) ಬಂದು ಶ್ರೀಕರಾರ್ಚಿತ ದೇವರುಗಳ ಸನ್ನಿಧಿಯಲ್ಲಿ ಆರೋಗ್ಯ ಪ್ರಾಪ್ತಿಗಾಗಿ ಪ್ರಾರ್ಥನೆಯನ್ನು ಸಲ್ಲಿಸಿದ್ದೆ. ಶ್ರೀಸಂಸ್ಥಾನದವರ ದಿವ್ಯಹಸ್ತದಿಂದ ಮಂತ್ರಾಕ್ಷತೆಯ ಅನುಗ್ರಹ ಪಡೆದಿದ್ದೆ. ಅಂದು, “ಯು.ಜಿ.ಕೆ, ನಿನಗೆಂತದೂ ಆವುತ್ತಿಲ್ಲೆ. ರಾಮಂಗೆ ನೀನು ಬೇಕು, ನಿನಗೆ ರಾಮ ಬೇಕು’ ಎಂಬ ಅಭಯವಾಕ್ಯ ಸಂಸ್ಥಾನದ ಮುಖದಿಂದ ಹೊಮ್ಮಿದಾಗ ನನಗೂ ನನ್ನ ಕುಟುಂಬಕ್ಕೂ ಸಾಕಷ್ಟು ಧೈರ್ಯ ಪ್ರಾಪ್ತಿಯಾಗಿತ್ತು.
ಶ್ರೀ ಗುರುದೇವತಾನುಗ್ರಹದಿಂದ, ೯ ತಿಂಗಳಚಿಕಿತ್ಸೆಯ ನೆರವಿನಿಂದ, ಆರೋಗ್ಯ ಸುಧಾರಣೆಯಾಗಿ, ಸಕುಟುಂಬ ಸನ್ನಿಧಾನಕ್ಕೆ ಬಂದು, ಯಥಾ ಸಾಧ್ಯ ಸೇವೆ-ಸಮರ್ಪಣೆ ಮಾಡಿ, ಮಂತ್ರಾಕ್ಷತೆ ಪಡೆದು ಧನ್ಯನಾಗಿದ್ದೆ.
ಈಗ ನನ್ನ ದುರಾದೃಷ್ಟವೋ, ಜನ್ಮಾಂತರದ ಪಾಪಶೇಷದ ಪರಿಣಾಮವೋ ಮತ್ತೆ ನನ್ನ ದೇಹದಲ್ಲಿ ರೋಗಲಕ್ಷಣಗಳು ಆರಂಭವಾಗಿದೆಯೆಂದು ವೈದ್ಯರು ಗುರುತಿಸಿದ್ದಾರೆ. ಇದೇ ಆಗಸ್ಟ್ ತಿಂಗಳಾರಂಭದಿಂದ ಮತ್ತೆ ಚಿಕಿತ್ಸೆಗೆ ಒಳಗಾಗುತ್ತಿದ್ದೇನೆ (೧೨ ಆವೃತ್ತಿಯ ಕೀಮೋಥೆರಪಿ – ೬ ತಿಂಗಳ ಅವಧಿಯಲ್ಲಿ)
ಈ ಪರಿಸ್ಥಿತಿಯಲ್ಲಿ ಈ ವರ್ಷದ ಚಾತುರ್ಮಾಸ್ಯದ ಪುಣ್ಯಕಾಲದಲ್ಲಿ ಶ್ರೀಕರಾರ್ಚಿತ ದೇವರುಗಳ ಪೂಜೆಯನ್ನು ವೀಕ್ಷಿಸುವ, ಶ್ರೀಕರಗಳಿಂದ ಮಂತ್ರಾಕ್ಷತೆ ಪಡೆಯುವ ಭಾಗ್ಯದಿಂದ ವಂಚಿತನಾಗಿದ್ದೇನೆಂದು ವ್ಯಥಿತನಾಗಿ ಅರಿಕೆ ಮಾಡಿಕೊಳ್ಳುತ್ತಿದ್ದೇನೆ. ನಿತ್ಯ ಇಲ್ಲಿಂದಲೇ ಮನಸಾ ಪ್ರಾರ್ಥನೆ ಸಲ್ಲಿಸುತ್ತಿದ್ದೇನೆ.
ಇತೀ,
ಶ್ರೀ ಗುರುದೇವರ ಅನುಗ್ರಹಾಕಾಂಕ್ಷಿ,
ತಮ್ಮ ಬೃಹತ್ ಶಿಷ್ಯಸಾಗರದ ಸಣ್ಣ ಬಿಂದು…
ಯು. ಗೋಪಾಲಕೃಷ್ಣ ಭಟ್ಟ (ಯು.ಜಿ.ಕೆ.)
*****************************
“ದೇಸೀಹಸುವಿನ ತುಪ್ಪ + ಜೋನಿ ಬೆಲ್ಲ – ಎಂಥಾ ಪವರ್”
ಎರಡು ವರ್ಷ ಹಿಂದಿನ ಘಟನೆ …
ಗೋಸ್ವರ್ಗಚಾತುರ್ಮಾಸ್ಯದ ಸಂದರ್ಭದಲ್ಲಿ ಈ ಅನುಭವವನ್ನು ಹಂಚಿಕೊಳ್ಳುವುದು ಹೆಚ್ಚು ಸೂಕ್ತವೆನಿಸಿತು.
ನಾನು ದೊಡ್ಡಕರುಳಿನ ಕ್ಯಾನ್ಸರ್ ಗೆ ತುತ್ತಾಗಿ, ಚಿಕಿತ್ಸೆ ಪಡೆಯುತ್ತಿದ್ದಾಗ ನಡೆದದ್ದು. ರೇಡಿಯೇಶನ್ ಥೆರಪಿ, ಶಸ್ತ್ರ ಚಿಕಿತ್ಸೆಗಳ ಬಳಿಕ ಕೀಮೋಥೆರಪಿ ಎಂಬ ಹೆಸರಿನ ತೀವ್ರವಾದ ಚಿಕಿತ್ಸೆಯ ಹಂತವದು. ಅತ್ಯಂತ ಪ್ರಬಲವಾದ ರಾಸಾಯನಿಕ ವಸ್ತು ದೇಹದೊಳಕ್ಕೆ ಹೋಗುತ್ತಿದ್ದಂತೆ, ದೇಹದೊಳಗೆ ಆಗುತ್ತಿದ್ದ ಪ್ರಭಾವ, ಅದರಿಂದಾಗುವ ನೋವು ಎಲ್ಲವೂ ‘ಅಸಹ್ಯಮ್, ಅನುಭೋಕ್ತವ್ಯಮ್’.
ಕೀಮೋಥೆರಪಿಯ ಅಡ್ಡಪರಿಣಾಮಗಳು ಹಲವಾರು ಇರುತ್ತವೆ. ಅವುಗಳಲ್ಲಿ ಅತ್ಯಂತ ಅಪರೂಪವಾದ (ಲಕ್ಷಕ್ಕೊಬ್ಬರಿಗೆ ಬರುವ) ಲಕ್ಷಣ ಬಿಕ್ಕಳಿಕೆ (hiccough) ‘ಈ’ ಲಕ್ಷಾಧೀಶ್ವರ’ನಾಗುವ ದೌರ್ಭಾಗ್ಯ ನನ್ನ ಪಾಲಿಗಿತ್ತು. ಬಿಕ್ಕಳಿಕೆ ಆರಂಭವಾದರೆ ನಿಮಿಷಕ್ಕೆ ಹದಿನೈದು – ಇಪ್ಪತ್ತು ಬಾರಿಯಂತೆ ನಿರಂತರವಾಗಿ ಬರುತ್ತಿತ್ತು. ಆಹಾರ – ನೀರು ಸೇವನೆ, ನಿದ್ರೆ ಯಾವುದೂ ಅಸಾಧ್ಯ. ನನಗೆ ಚಿಕಿತ್ಸೆ ನೀಡುತ್ತಿದ್ದ ವೈದ್ಯರು ತಮ್ಮ ಅನುಭವದಲ್ಲಿದ್ದ ಎಲ್ಲಾ ಔಷಧ, ಇಂಜೆಕ್ಷನ್ಗಳನ್ನೂ ನನ್ನ ಮೇಲೆ ಪ್ರಯೋಗಿಸಿದ್ದರೂ, ಪ್ರಯೋಜನ ಶೂನ್ಯ. ನಾನು ಚಿಕಿತ್ಸೆ ಪಡೆಯುತ್ತಿದ್ದ ಬೃಹತ್ ಆಸ್ಪತ್ರೆಯ ಮಹಾತಜ್ಞ (super specialist) ವೈದ್ಯರೂ ಬಂದು ಪರೀಕ್ಷಿಸಿ ಸಲಹೆ ನೀಡಿಯಾಯಿತು. ಪ್ರಯೋಜನವೇನೂ ಆಗಲಿಲ್ಲ. ಆಗ ನಮ್ಮ ಬಂಧುಗಳೊಬ್ಬರು ಸಲಹೆ ನೀಡಿದ್ದು “ನಿಂಗೊ ಊರ ಹಸುವಿನ ತುಪ್ಪ, ಜೋನಿ ಬೆಲ್ಲತಿಂದು ನೋಡಿ” ಎಂದು. ಅವರ ಬಂಧುಗಳಿಗೆ ಇದು ಉಪಯುಕ್ತವಾಗಿತ್ತಂತೆ. ಸರಿ, ಮುಳುಗುವವನಿಗೆ ಹುಲ್ಲುಕಡ್ಡಿಯೂ ಆಸರೆಯಲ್ಲವೇ. ಇದೂ ಒಂದು ಪ್ರಯತ್ನ ಮಾಡೋಣ ಎಂದಾಯಿತು. ಕೂಡಲೇ ನಮ್ಮ ಸಮೀಪದ ಬಂಧುಗಳು ತಮ್ಮ ಮನೆಯಿಂದ ದನದ ತುಪ್ಪ ತಂದುಕೊಟ್ಟರು (ಅವರಲ್ಲಿ ಮಲೆನಾಡುಗಿಡ್ಡ ತಳಿ ಹಸು ಮಾತ್ರ ಇರುವುದು) ಇನ್ನೊಬ್ಬರು ಜೋನಿ ಬೆಲ್ಲ ತಂದರು.ಅರ್ಧ ಚಮಚ ತುಪ್ಪ, ಅರ್ಧ ಚಮಚ ಜೋನಿ ಬೆಲ್ಲ ಬೆರೆಸಿ ನಾಲಗೆಗೆ ಸವರಿಕೊಂಡೆ. ಅದು ಗಂಟಲೊಳಗಿಳಿದದ್ದೇ ತಡ, ‘ಏನೀ ಸೋಜಿಗವು!’. ಬಿಕ್ಕಳಿಕೆ ಬಂದ್!! ಮರುಕ್ಷಣ ನನಗೆ ನಿದ್ದೆ.(ಗಂಟೆಗಳದ್ದಲ್ಲ, ಎರಡು ದಿನಗಳ ನಿದ್ದೆ ಬಾಕಿ ಇತ್ತು.) ಕೆಲವು ಗಂಟೆಗಳ ಬಳಿಕ ಮೂತ್ರ ವಿಸರ್ಜನೆಗಾಗಿ ಎದ್ದೆ. ಮತ್ತೆ ಬಿಕ್ಕಳಿಕೆ ಸುರುವಾಯಿತು. ಪುನಃ ತುಪ್ಪ+ಜೋನಿ ಬೆಲ್ಲದ ಪ್ರಯೋಗ, ಅಂತೂ ನನ್ನ ಒಂದು ಸಂಕಟ ತಾತ್ಕಾಲಿಕವಾಗಿ ಶಮನಗೊಂಡಿತು. ‘ತಜ್ಞ’ ವೈದ್ಯರುಗಳು ಹುಬ್ಬೇರಿಸಿದ್ದರು. (ಕೀಮೋಥೆರಪಿ ನೀಡಿದ್ದ ವೈದ್ಯರು ತಮ್ಮ ಡೈರಿಯಲ್ಲಿ ಬರೆದಿಟ್ಟುಕೊಂಡರು ಕೂಡ.
ಇದಾದ ಬಳಿಕ, ಮುಂದಿನ ಆವೃತ್ತಿಯ ಕೀಮೋಥೆರಪಿಗೆ ಮೊದಲೇ ದೇಸಿ ಹಸುವಿನ ತುಪ್ಪ, ಜೋನಿ ಬೆಲ್ಲ ಸಿದ್ದ ಮಾಡಿಕೊಂಡೆವು. ಅವುಗಳ ನೆರವಿನಿಂದಲೇ ಬಿಕ್ಕಳಿಕೆಯ ಸಂಕಟದಿಂದ ಪಾರಾಗಿದ್ದೆ.
ಅದೇ ದೇಸೀ ಹಸುವಿನ ತುಪ್ಪದ ಬದಲು ಬೇರೆ ತುಪ್ಪ, ಜೋನಿ ಬೆಲ್ಲದ ಬದಲು ಇತರ ಬೆಲ್ಲದ ಪಾಕ ಉಪಯೋಗಿಸಿದರೆ ಏನೂ ಪ್ರಯೋಜನವಾಗಲಿಲ್ಲ…
ಇದುವೇ ನಮ್ಮ ದೇಸೀ ಹಸುವಿನ ತುಪ್ಪದ, ನಮ್ಮ ದೇಸೀ ಜೋನಿ ಬೆಲ್ಲದ ಪವರ್!