ಶ್ರೀ ರಾಮಚಂದ್ರಾಪುರ ಮಠದಲ್ಲಿ ಏಕಾದಶಿಯಂದು ಸುಗ್ರಾಸ ಸಂತರ್ಪಣೆ!

ಸ್ವಾನುಭವ

ಹೌದು.. ಈ ಸಂತರ್ಪಣೆಯು ಪ್ರತಿ ಏಕಾದಶಿಯಂದೂ ಶ್ರೀ ರಾಮಚಂದ್ರಾಪುರ ಮಠದ ಆಶ್ರಯದಲ್ಲಿ ಸಂಜೆ ಆರು ಗಂಟೆಗೆ ಸರಿಯಾಗಿ ನಡೆಯುವಂತಾದ್ದು. ಇದೇನು ಶ್ರೀಮಠದಲ್ಲಿ ಏಕಾದಶಿಯಂದು, ಅದೂ ಸಂಜೆ ದೇವರು ಬರುವ ಹೊತ್ತಿನಲ್ಲಿ ಊಟ ಮಾಡುವುದೇ…., ಎಂದು ಬೆಚ್ಚಿ ಬಿದ್ದಿರಾ!! ಬನ್ನಿ…. ನೋಡಿ… ನೀವೂ ಈ ಸಂತರ್ಪಣೆಯಲ್ಲಿ ಭಾಗವಹಿಸಿ, ಮನಃತೃಪ್ತಿಯಾಗಿ ಉಣಬನ್ನಿ. ಈ ಸಮಾರಾಧನೆ ಬಹಳ ವಿಶಿಷ್ಟವಾದದ್ದು, ಅನನ್ಯವಾದ್ದದ್ದು. ಪುರಂದರದಾಸರು ಹೇಳಲಿಲ್ಲವೇ? ‘ರಾಮನಾಮ ಪಾಯಸಕ್ಕೆ ಕೃಷ್ಣನಾಮ ಸಕ್ಕರೆ, ವಿಠಲನಾಮ ತುಪ್ಪ ಬೆರೆಸಿ ಬಾಯಿ ಚಪ್ಪರಿಸಿರೋ ಎಂದು! ಈ ಏಕಾದಶಿ ಉತ್ಸವದ ಸಮಾರಾಧನೆಯಲ್ಲಿ ಆಧ್ಯಾತ್ಮ, ಭಕ್ತಿ, ವೈಚಾರಿಕತೆ, ಸಂಗೀತ, ಸಾಹಿತ್ಯಗಳೆಂಬ , ಹಲವು ರೀತಿಯ ಖಾದ್ಯಗಳನ್ನು ರುಚಿ ರುಚಿಯಾಗಿ, ಪ್ರಾಣೋತ್ಪತ್ತಿಕಾರಕ ಪ್ರವಚನವೆಂಬ ಅನ್ನದೊಂದಿಗೆ ಉಣಬಡಿಸುತ್ತಾರೆ. ಈ ಸಮಾರಾಧನೆಗೆ ಅಟ್ಟಲು ಹಲವು ಭಕ್ತಾಗ್ರೇಸರ ವಾಗ್ಗೇಯಕಾರರ ರಚನೆಗಳೇ ಅಡುಗೆಯ ಆಹಾರ ವಸ್ತುಗಳು. ವಾದ್ಯಕುತಪವೇ ರುಚಿಯನ್ನೀವ ಸಂಬಾರವಸ್ತುಗಳು. ಸಾಹಿತ್ಯವೇ ಇವನ್ನೆಲ್ಲ ಬೇಯಿಸುವ ಪಾತ್ರಪಡಗ ಪರಿಕರಗಳು. ಹಳೆಯ, ಹೊಸ ಕಲಾವಿದರ ಗಾಯನವೇ ಮಾಮೂಲಿನ ಮತ್ತು ನವಭಕ್ಷ್ಯಗಳು. ಇವನ್ನೆಲ್ಲ ಒಟ್ಟುಗೂಡಿಸಿ ಭಕ್ತಿಯ ಪ್ರಾಣದಿಂದೊಡಗೂಡಿದ ನಾದದ ಅಗ್ನಿಯಿಂದ ಸಂಗೀತದ ರಸಪಾಕಮಾಡಿ ಆತ್ಮಕ್ಕೆ ಉಣಬಡಿಸುವವರು ಸಾಕ್ಷಾತ್ ಶ್ರೀಶಂಕರಾಚಾರ್ಯ ಸ್ವರೂಪರಾದ ಶ್ರೀಚರಣರು. ಉಣುವವರಿಗೆ ಇದಕ್ಕಿಂತ ಭಾಗ್ಯ ಬೇಕೆ? ಈ ಸಮಾರಾಧನೆಯಲ್ಲಿ ಮನಃತೃಪ್ತಿಯಾಗಿ ಉಂಡ ಮೇಲೆ ಆನಂದ ಆನಂದವೆಂಬ ತೃಪ್ತಿಯ ತೇಗು ಬರದೇ ಇದ್ದೀತೇ?!

 

ದಿನಾಂಕ 19 ನವೆಂಬರ್ 2018ರಂದು ನಡೆದ ಈ ನಾದಸಮಾರಾಧನೆಯಲ್ಲಿ ಸಂತೃಪ್ತಿಯಿಂದ ಉಂಡವರಲ್ಲಿ ನಾನೂ ಒಬ್ಬಳು. ಪುರಂದರದಾಸರ ಪಿಳ್ಳಾರಿ ಗೀತೆಗಳಾದ ‘ಲಂಬೋದರ ಲಕುಮಿಕರ’ ಹಾಗೂ ‘ಕೆರೆಯ ನೀರನು ಕೆರೆಗೆ ಚೆಲ್ಲಿ’ ಗಳ ಬಗ್ಗೆ ಸಂಗೀತಶಾಸ್ತ್ರಾಂಶಗಳು, ಸಾಹಿತ್ಯಾಂಶಗಳು, ಪುರಂದರದಾಸರ ಆಶಯ ಇತ್ಯಾದಿ ಅವುಗಳ ಪ್ರಮುಖಾಂಶಗಳನ್ನು ಒಳಗೊಂಡ ತಮ್ಮ ಪ್ರವಚನಪ್ರಾಣಾಮೃತವನ್ನು ಉಣಬಡಿಸಿ ನಂತರ, ಸಂತ ಶಿಶುನಾಳ ಷರೀಫರ, ಕನಕದಾಸರ ಎರಡು ರಚನೆಗಳ, ಭದ್ರಾಚಲರಾಮದಾಸರ ಎರಡು ರಚನೆಗಳೆಂಬ ವಿವಿಧ ರುಚಿಕಟ್ಟಾದ ಖಾದ್ಯಗಳನ್ನೂ ಅನ್ನಪ್ರಾಣದೊಂದಿಗೆ ಉಣಬಡಿಸಿದ್ದನ್ನು ಮನಃತೃಪ್ತಿಯಾಗಿ ಉಂಡೆವು.

 

ಶ್ರೀಚರಣರು ವಾಗ್ಗೇಯಕಾರರ ಸದಾಶಯಗಳನ್ನು, ಆ ಕೃತಿಯ ಉದ್ದೇಶವನ್ನು ಭಕ್ತಾದಿಗಳಿಗೆ ಹೇಳುತ್ತ, ಪ್ರತಿ ಸಾಹಿತ್ಯದ ನಿಗೂಢಾರ್ಥಗಳನ್ನು, ವಾಗ್ಗೇಯಕಾರರ ಹೃದಯವನ್ನು ಹೊಕ್ಕು, ನನ್ನಂತಹ ಪಾಮರರಿಗೂ ಅರ್ಥವಾಗುವಂತೆ ಬೋಧಿಸುತ್ತ, ನಾದೋಪಾಸನೆಯಲ್ಲಿ ಆಸಕ್ತಿಯನ್ನು ಹುಟ್ಟಿಸುತ್ತ, ಸಂಗೀತಸಾಧನೆಯನ್ನು ಕುರಿತಾಗಿ ‘ಧರ್ಮಾರ್ಥಕಾಮಮೋಕ್ಷಾಣಾಂ ಇದಮೇವೈಕ ಸಾಧನಮ್’ ಎಂದು ಸಂಗೀತಶಾಸ್ತ್ರವು ಪದೇ ಪದೇ ಉಪದೇಶಿಸುವುದನ್ನು ಭಕ್ತ ಶ್ರೋತೃಗಳಿಗೆ ಸಂಗೀತ ಕೃತಿಗಳ ಮೂಲಕ ಬೋಧಿಸಿ ಮನದಟ್ಟು ಮಾಡಿಸಿದರು. ಇದನ್ನೆ ಪ್ರತಿ ರಾಮಪದ, ಭಾವಪೂಜೆ, ರಾಮಕಥಾ ಇತ್ಯಾದಿ ಹಲವು ಕಾರ್ಯಕ್ರಮಗಳ ಮೂಲಕ ತೋರಿಸಿಕೊಡುತ್ತಲೇ ಇದ್ದಾರೆ.

 

ಪ್ರತಿ ‘ರಾಮಪದ’ ಕಾರ್ಯಕ್ರಮವು ಆಧ್ಯಾತ್ಮ ವಿಷಯಗಳನ್ನು ಬೋಧಿಸುವುದು ಮಾತ್ರವಲ್ಲದೆ ಹಲವಾರು ವಾಗ್ಗೇಯಕಾರರನ್ನೂ, ಅವರ ಕೃತಿರತ್ನಗಳನ್ನೂ ಪರಿಚಯಿಸುವುದರೊಂದಿಗೆ, ಹೊಸ ಹೊಸ ಕಲಾವಿದರಿಗೂ ವೇದಿಕೆಯನ್ನಿತ್ತು ಶ್ರೋತೃಗಳಿಗೆ ಅವರ ಕಲಾಪ್ರೌಡಿಮೆಯನ್ನು ಪರಿಚಯಿಸುತ್ತದೆ. ಸಂಗೀತದ ಅನೇಕ ಮಾಹಿತಿಗಳನ್ನು ಒಳಗೊಳ್ಳುವ, ಕೃತಿಕಾರರ ಆಶಯಗಳನ್ನು, ಆದರ್ಶಗಳನ್ನು ಸಾರುವ ಈ ಕಾರ್ಯಕ್ರಮಗಳಿಗೆ ಸಂಗೀತಗಾರರೂ, ವಿದ್ಯಾರ್ಥಿಗಳೂ ಬಂದು, ಕೇಳಿ, ತಾವು ಹಾಡುವಂತಹ ಸಾಹಿತ್ಯದ ಹೃದಯವನ್ನು ಹೇಗೆ ಅರ್ಥ ಮಾಡಿಕೊಳ್ಳಬೇಕು, ಸಾಹಿತ್ಯ ಪುಷ್ಟಿಗೆ ಸಂಗೀತವನ್ನು ಹೇಗೆ ಅಳವಡಿಸಿಕೊಳ್ಳಬೇಕು ಇತ್ಯಾದಿ ವಿಷಯಗಳನ್ನು ತಿಳಿದು ಗಮನಿಸಿ ರೂಪಿಸಿಕೊಂಡು ಅಳವಡಿಸಿಕೊಂಡರೆ ಎಷ್ಟು ಚೆನ್ನ, ಎಂದೆನಿಸಿತು.

ಶ್ರೀ ಶ್ರೀ ಸನ್ನಿಧಾನದವರು ಅತ್ಯಂತ ಭಾವಪೂರ್ಣ, ಮೃದು ಮಧುರ, ಸುಶ್ರಾವ್ಯ ಕಂಠದಲ್ಲಿ ಹಾಡುವ ಶ್ಲೋಕ-ಗೀತಗಳನ್ನು ಸದಾಕಾಲವೂ ನಮ್ಮ ಹೃದಯವೇ ಆಲಿಸುತ್ತದೆ, ಆರ್ದ್ರವಾಗುತ್ತದೆ. ಪೂರಕವಾಗಿ ಸಹಗಾಯನವನ್ನು ಮಾಡುವ ಕಲಾವಿದರೂ ಬಹಳ ಉತ್ತಮವಾಗಿ ಸಹಕರಿಸುತ್ತಾರೆ. ಹಾರ್ಮೋನಿಯಂನಲ್ಲಿ ವಿ. ಪ್ರಜ್ಞಾನ ಲೀಲಾಶುಕ ಉಪಾಧ್ಯಾಯ, ಸಿತಾರ್ ನಲ್ಲಿ ವಿ. ಸುಬ್ರಹ್ಮಣ್ಯ ಹೆಗಡೆ. ಹಾಗೂ ತಬಲಾವಾದನದಲ್ಲಿ ವಿ. ಗಣೇಶ ಭಾಗವತ್ ರವರು ಬಹಳ ಚೆನ್ನಾಗಿ, ಶ್ರುತಿಮಧುರವಾಗಿ, ಸ್ವರಲಯಗಳನ್ನು ಅನುಸರಿಸುತ್ತ ಅಲಂಕರಿಸಿ ಕಾರ್ಯಕ್ರಮವನ್ನು ಶೋಭೆಗೊಳಿಸುತ್ತಾರೆ.

 

*-ಗಣಪತಿಯ ಕಣ್ಣಿನಂತೆ ಕಾಣುವ ಕಣ್ಣು ಸಣ್ಣದಾಗಿದ್ದು, ಜೀರ್ಣಿಸಿಕೊಳ್ಳುವ ಉದರವು ದೊಡ್ಡದಾಗಿರಬೇಕಲ್ಲದೆ, ಮಾನವನಂತೆ ಎತ್ತೆತ್ತಲೂ ನೋಡಿ ಎಲ್ಲವೂ ತನಗೇ ಬೇಕೆಂದು ಆಸೆಪಡುವ ದೊಡ್ಡ ಕಣ್ಣಾಗಿ ಅದನ್ನು ಜೀರ್ಣಿಸಿಕೊಳ್ಳಲಾಗದ ಪುಟ್ಟ ಉದರವುಳ್ಳ ಜೀವನಾಗಬಾರದು.

*-ಕೆರೆಯ ನೀರನ್ನು ಕೆರೆಗೆ ಚೆಲ್ಲಿ, ವರವ ಪಡೆದವರಂತೆ ಕಾಣಿರಿ, ಆ ನೀರನ್ನು ಚೆಲ್ಲಿದ ನಂತರವೂ ಕೈಯಲ್ಲಿ ಆ ನೀರಿನ ಶೇಷವು ಉಳಿದ ಭಾಗ್ಯವಂತರೇ ನೀವಾಗುತ್ತೀರಿ.
*-ತಲ್ಲಣಿಸದಿರಿ, ಮನವನ್ನು ತಾಳುವಂತಹವರಾಗಿ, ಭಗವಂತನ ಇರುವಿಕೆಯನ್ನು ನಂಬಿ ನಿಮ್ಮ ಆತ್ಮಕ್ಕೆ ಬಲವನ್ನು ತುಂಬಿ.

*- ಮಾನವನ ಆಸೆಗಳು, ಮನಃಸ್ಥಿತಿಗಳು ಹೇಗಿರುತ್ತವೊ ಅದಕ್ಕೆ ತಕ್ಕಂತೆ ಮಂತ್ರಗಳೂ ಉಂಟಾಗುತ್ತವೆ. ಅವು ಕೆಟ್ಟ ಮತ್ತು ಒಳ್ಳೆಯ ಉದ್ದೇಶಗಳೆರಡಕ್ಕೂ ಪ್ರಯೋಗವಾಗಬಹುದು. ಆದರೆ ಯಾವುದೇ ಕೋರಿಕೆಗಳನ್ನು ಒಳಗೊಳ್ಳದ ‘ಶ್ರೀರಾಮ ಜಯರಾಮ ಜಯ ಜಯ ರಾಮ’ ಎಂಬ ತಾರಕ ಮಂತ್ರವನ್ನು ಜಪಿಸಿ. ರಾಮನಾಮವೆಂಬ ಈ ಅಸ್ತ್ರವು ಭಕ್ತನ ಅಂತರಂಗದ ಅಜ್ಞಾನದೊಂದಿಗೆ ಯುದ್ಧವನ್ನು ಮಾಡಿ ಸಾತ್ವಿಕದಿಂದ ಗೆಲ್ಲುತ್ತದೆ. ಈ ರೀತಿಯಾದ ಶ್ರೀರಾಮನ ಜಯವು ನಿಮ್ಮದೇ ಜಯವಾಗುತ್ತದೆ.

*-ಸಂಗೀತವು ಸರಸ್ವತಿ. ಆಕೆಯೇ ಲೋಕಮಾತೆ. ಹಾಗಿರುವಾಗ ಪುರಂದರದಾಸರನ್ನು ಸಂಗೀತಪಿತಾಮಹರೆಂದೆನುವುದಾಗಲಿ, ರಾಷ್ಟಕ್ಕೆ ಗಾಂಧಿಯವರನ್ನು ಪಿತರೆನ್ನುವುದಾಗಲಿ ಇತ್ಯಾದಿ ಶಬ್ದಗಳನ್ನು ವಿಪರೀತಾರ್ಥವಾಗಿ ಗ್ರಹಿಸಬಾರದು.
*- *ಹಾಡುವವರು ಮೊದಲು ತಾವು ರಾಗ – ಸಾಹಿತ್ಯಗಳ ಸೌಖ್ಯವನ್ನನುಭವಿಸಿ, ತಮಗೆ ಆನಂದವಾಗುವಂತೆ ಹಾಡಬೇಕು*.

*- ಸಹಜ, ವಿರೋಧಾಭಾಸ, ಇತ್ಯಾದಿ ಶಬ್ದಗಳ ನಿಜಾರ್ಥಗಳನ್ನು ವಿವರಿಸಿದ ಪರಿ.—
ಇತ್ಯಾದಿ ಅನೇಕ
ಶ್ರೀಗುರುವಾಕ್ಯಗಳಲ್ಲಿನ ಭಾವಾರ್ಥಗಳನ್ನು ಇನ್ನೂ ಮೆಲುಕು ಹಾಕುತ್ತಲೇ…. , ಚಪ್ಪರಿಸುತ್ತಲೇ… ಇದ್ದೇನೆ.

 

ಶಿಷ್ಯನ ಅಹಂಕಾರ – ಅಜ್ಞಾನಗಳೆಂಬ ವಿಷಸರ್ಪವನ್ನು ಮುಗುಳ್ನಗುತ್ತಲೇ ಪಳಗಿಸಿ ಹಾಲಾಹಲವನ್ನು ಶಮನಗೊಳಿಸುವ ಹಾವಾಡಿಗನಾದ, ಮೃತನನ್ನು ಅಮೃತನನ್ನಾಗಿಸುವ ಮಹಾಸಂಸ್ಥಾನ ಶ್ರೀ ಶಂಕರಾಚಾರ್ಯ ರಾಘವೇಶ್ವರ ಭಾರತೀ ಮಹಾಸ್ವಾಮಿಗಳು ಸದಾಕಾಲವೂ ಹಸನ್ಮುಖದಿಂದ ಶಿಷ್ಯಕೋಟಿಗೆ ಅಮೃತವನುಣಿಸುವ ಶ್ರೀಮಾತೆ. ಪರಮಪೂಜ್ಯರ ಚರಣಾರವಿಂದಗಳಿಗೆ ಭಕ್ತಿ ಪೂರ್ವಕವಾದ ನತಿಸಹಸ್ರಗಳನ್ನು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಎಲ್ಲ ಭಕ್ತಶ್ರೋತೃವರ್ಗದ ಪರವಾಗಿ ಕೃತಜ್ಞತಾಪೂರ್ವಕವಾಗಿ ಸಮರ್ಪಿಸುತ್ತೇನೆ.

Author Details


Srimukha

2 thoughts on “ಶ್ರೀ ರಾಮಚಂದ್ರಾಪುರ ಮಠದಲ್ಲಿ ಏಕಾದಶಿಯಂದು ಸುಗ್ರಾಸ ಸಂತರ್ಪಣೆ!

  1. ಹರೇರಾಮ.’ರಾಮಪದ’ದ ಅನುಗ್ರಹ ಶಿಷ್ಯಕೋಟಿಯ ಮಹಾ ಸೌಭಾಗ್ಯ.

Leave a Reply

Your email address will not be published. Required fields are marked *