ಕನ್ಯಾಸಂಸ್ಕಾರ – ಒಂದು ಸ್ವಾನುಭವ : ಕು. ಅಂಕಿತಾ ನೀರ್ಪಾಜೆ

ಸ್ವಾನುಭವ

ಹೆಣ್ಣೊಬ್ಬಳು ಕಲಿತರೆ ಶಾಲೆಯೊಂದು ತೆರೆದಂತೆ! ಹೆಣ್ಣೊಬ್ಬಳು ಸಂಸ್ಕಾರವಂತಳಾದರೆ ಸಮಾಜವೇ ಸಂಸ್ಕಾರ ಪಡೆದಂತೆ! ಈ ಮಾತು ಹಿರಿಯರದು. ಆದರೆ ಅದು ಇಂದಿಗೂ ಎಂದೆಂದಿಗೂ ಪ್ರಸ್ತುತವೇ! ಕೂಡು ಕುಟುಂಬದ ಚಿಂತನೆ ಬದಲಾಗಿರಬಹುದು. ಹೆಣ್ಣಿನ ಸ್ಥಾನ-ಮಾನಗಳು, ಪುರುಷರಿಗೆ ಸಮಾನವೆನ್ನುವ ಮನೋಭಾವ ಬೆಳೆದಿರಬಹುದು. ಅದು ಮಹಿಳೆಯ ಜವಾಬ್ದಾರಿಗಳನ್ನು ಹೆಚ್ಚಿಸಿದೆ ಮತ್ತು ಎಲ್ಲಾ ದಿಕ್ಕುಗಳಿಂದ ಎಸೆಯುವ ಬಾಣಗಳನ್ನು ಎದುರಿಸುವ ಮನೋಬಲ, ಚೈತನ್ಯ, ವಿವೇಚನೆಯಿರಬೇಕಾದುದು ಅನಿವಾರ್ಯ ಎಂದು ಹೇಳಲಾಗುತ್ತದೆ. ತಪ್ಪು ಒಪ್ಪುಗಳನ್ನು ಅರ್ಥೈಸಿಕೊಳ್ಳುವ ಅರಿವಿರಬೇಕು, ಸರಿಯಾದ ಪಥದಲ್ಲಿ ನಡೆಯುವ ಸಾಮರ್ಥ್ಯ ಬೇಕು, ಮಕ್ಕಳಿಗೂ ಉತ್ತಮ ನಡವಳಿಕೆ ತಿಳಿಸಿಕೊಡುವ ರೀತಿ ತಿಳಿದಿರಬೇಕು. ಇದೆಲ್ಲದಕ್ಕೆ ಅಡಿಪಾಯವೆಂಬಂತೆ ಆಕೆಗೆ ಸಂಸ್ಕಾರ ಬೇಕು.

 

_ಮತ್ತೆ ಕನ್ಯಾ ಸಂಸ್ಕಾರ :_

 

ವೇದಗಳ ಕಾಲದಿಂದಲೂ ಕನ್ಯೆಯರಿಗೆ ಸಂಸ್ಕಾರ ನೀಡುವ ಪದ್ಧತಿ ಇತ್ತೆಂದು ಹಿರಿಯರು ಹೇಳುತ್ತಾರೆ. ಆದರೆ ಅದು ಕಾಲ ಕಳೆದಂತೆ ಹುದುಗಿ ಹೋಗಿತ್ತು! ಆದರೆ ಇದೀಗ ಮತ್ತೆ ಕನ್ಯಾ ಸಂಸ್ಕಾರ ಆರಂಭಗೊಂಡಿದೆ. ಇದು ನಮ್ಮೆಲ್ಲರ ಭಾಗ್ಯ. ಪರಮಪೂಜ್ಯ ಶ್ರೀಸಂಸ್ಥಾನದವರು ಭಕ್ತರ ಕೋರಿಕೆಯ ಮೇರೆಗೆ ಆ ಸಂಪ್ರದಾಯವನ್ನು ಪುನಃ ಚಾಲ್ತಿಗೆ ತಂದಿರುವುದು ನಮಗೆ ಹೆಮ್ಮೆ. ಒಂದು ದಿನ, ಶ್ರೀಸಂಸ್ಥಾನದವರ ದಿವ್ಯ ಉಪಸ್ಥಿತಿಯಲ್ಲಿ ತಮ್ಮನಿಗೆ ಉಪನಯನ ಆಗುವ ಸಂಭ್ರಮವನ್ನು ಅನುಭವಿಸಿದ ಅಕ್ಕ ತನಗೂ ಉಪನಯನ ಸಂಸ್ಕಾರವಿದ್ದರೆ ಎಷ್ಟು ಚೆನ್ನ ಎಂದು ಯೋಚಿಸಿದಳಂತೆ. ಅವಳು ಅದನ್ನು ನೇರವಾಗಿ ಶ್ರೀಸಂಸ್ಥಾನದವರಲ್ಲಿ ಅರುಹಿದಳಂತೆ. ಮಕ್ಕಳ ಭಾವನೆಯನ್ನು ಅತೀವವಾಗಿ ಅರ್ಥೈಸುವ ಮತ್ತು ಮಕ್ಕಳನ್ನು ಪ್ರೀತಿಸುವ ಶ್ರೀ ಸಂಸ್ಥಾನದವರು  ಒಪ್ಪಿಗೆಯನ್ನು ಅನುಗ್ರಹಿಸಿದರು.

_ಕನ್ಯಾ ಸಂಸ್ಕಾರ ಹೇಗೆ ?_

 

ಮೊದಲಿಗೆ ವೈದಿಕರಿಂದ ಪಂಚಗವ್ಯ ಹವನ, ತದನಂತರ ಶ್ರೀಸಂಸ್ಥಾನದವರಿಂದ ಬೋಧಾಯನ ಗೃಹ್ಯಸೂತ್ರದಿಂದ ಆಯ್ದ ಒಂದು ಮಂತ್ರೋಪದೇಶ; ಅನುಗ್ರಹ, ಆಶೀರ್ವಾದ. ಮಂತ್ರೋಪದೇಶವನ್ನು ನಿತ್ಯವೂ ಎರಡು ಬಾರಿ ಜಪಿಸಬೇಕು. ಇದು ಸಂಭ್ರಮದ  ಕನ್ಯಾಸಂಸ್ಕಾರ ಕಾರ್ಯಕ್ರಮ! ಕನ್ಯೆಯರಿಗೂ ಉಪನಯನ! ಶ್ರೀಗಳಿಂದ ಉಪದೇಶಿತವಾದ ಶ್ಲೋಕವನ್ನು ಪ್ರತಿನಿತ್ಯ ಎರಡು ಹೊತ್ತು 108 ಬಾರಿ ಜಪಿಸುವುದು. ನನಗೂ ಇಂತಹ ಅವಕಾಶ ಸಿಕ್ಕಿದ್ದು ಭಾಗ್ಯ.

 

_ಸಾರ್ಥಕ ಕ್ಷಣ :_

 

ಹುಡುಗರಿಗೆ ಉಪನಯನ ಸಂಸ್ಕಾರವಿರುವಂತೆ ಹುಡುಗಿಯರಿಗೂ ಸಂಸ್ಕಾರ ಕೊಡುವ ಕಾರ್ಯಕ್ರಮವಿದ್ದಿದ್ದರೆ ಎಷ್ಟು ಒಳ್ಳೆಯದಿತ್ತು ಎಂದು ಎಷ್ಟೋ ಬಾರಿ ನನಗೂ ಅನ್ನಿಸಿತ್ತು. ಆದರೆ ಆ ಬಗ್ಗೆ ಯಾವುದೇ ಕಲ್ಪನೆಯಿರಲಿಲ್ಲ. ‘ಕನ್ಯಾಸಂಸ್ಕಾರ’ವನ್ನು ನಾನು ಪಡೆದ ದಿನ ಪರಮಪೂಜ್ಯ ಶ್ರೀಸಂಸ್ಥಾನದವರು  ತಮ್ಮನ ಬಳಿ ‘ನಿನಗೆ ಉಪನಯನ ಆಯಿದ?’ ಎಂದು ಕೇಳಿದರು. ಅವನು ಇಲ್ಲವೆಂದಾಗ ‘ಅಕ್ಕಂಗೆ ಆತು ನೋಡು’ ಎಂದಾಗ ಜನ್ಮವೇ ಸಾರ್ಥಕವಾಯಿತೆಂದೆನಿಸಿತು.

_ಬದಲಾವಣೆ :_

 

ಹೌದು! ಕನ್ಯಾಸಂಸ್ಕಾರ ಪಡೆದಂದಿನಿಂದ ನನ್ನಲ್ಲಿ ಗಮನಾರ್ಹ ಬದಲಾವಣೆಯಾಯಿತು. ಪ್ರತಿದಿನ ಎದ್ದೊಡನೆಯೇ ಸ್ನಾನ ಮಾಡಿ ಜಪ ಮಾಡಿಯೇ ದೈನಂದಿನ ಕಾರ್ಯಗಳನ್ನು ಆರಂಭಿಸುವ ಹೊಸ ಪರಿಪಾಠವು ಬೆಳೆಯಿತು. ಬೆಳಗ್ಗೆ ~ ಸಂಜೆ ಎರಡು ಹೊತ್ತೂ ಸ್ನಾನ ಮಾಡಿ ದೇವರ ಕೋಣೆಗೆ ಹೊಕ್ಕು ಜಪ ಮಾಡಿ ಹೊರಬರಬೇಕಾದರೆ ಸಿಗುವ ಆ ಆನಂದವೋ.. ಅದ್ಭುತ! ನಾನು ಎಲ್ಲೇ ಹೋದರೂ, ಎಲ್ಲೇ ಇದ್ದರೂ ‘ಜಪ’ದ ಸಮಯ ಬಂದಾಗ ಖುಷಿ. ದೇವರ ಮುಂದೆ ಕುಳಿತು ಜಪ ಮುಗಿಸಿ ಬರುವವರೆಗೆ ಸಮಾಧಾನವಿಲ್ಲ. ಅದರಲ್ಲೂ ಮಠದಲ್ಲೇ ಕುಳಿತು ಜಪ ಮಾಡುವಾಗ ಸಿಗುವ ತೃಪ್ತಿ ಅವರ್ಣನೀಯ!

 

_ಏಕಾಗ್ರತೆ :_

 

ಓದಲ್ಲೂ ಏಕಾಗ್ರತೆ ಹೆಚ್ಚಿದೆ. ಕಡಿಮೆ‌ ಓದಿದರೂ ಹೆಚ್ಚು ನೆನಪುಳಿಯುವ ಸಾಮರ್ಥ್ಯ ಬಂದಿದೆ. ಮನಸ್ಸಿಗೊಂದು ಹಿಡಿತ ಸಿಕ್ಕಿದೆ. ಜೀವನದಲ್ಲಿ ಮುಂದುವರೆಯಲು ವಿಶಿಷ್ಟ ಯೋಚನೆ, ಗುರಿ, ಯೋಜನೆಗಳ ಬಗ್ಗೆ ಕಲ್ಪನೆಗಳು ಗರಿಗೆದರುತ್ತವೆ. ಇದೆಲ್ಲ ಸಾಧ್ಯವಾಗಿದ್ದು ‘ಕನ್ಯಾಸಂಸ್ಕಾರ’ ಪಡೆದ ಅನಂತರ ಮಾತ್ರ. ಮಿಗಿಲಾಗಿ, ನಮ್ಮ ಸಂಸ್ಕೃತಿಯಾದ ಕುಂಕುಮದ ಹಣೆಬೊಟ್ಟು ಇಟ್ಟು ಕೈತುಂಬ ಗಾಜಿನ ಬಳೆಗಳನ್ನು ತೊಟ್ಟುಕೊಳ್ಳುವ ನಿತ್ಯಕಾರ್ಯಕ್ಕೆ ನನಗೆ ಪ್ರೇರಣೆ ನೀಡಿದ್ದು ‘ಕನ್ಯಾಸಂಸ್ಕಾರ’. ನಮ್ಮ ಮಠದ ಅಂಗಸಂಸ್ಥೆಯಾದ ಮಂಗಳೂರು, ನಂತೂರಿನ ಶ್ರೀ ಭಾರತೀ ಕಾಲೇಜಿನಲ್ಲಿ ಧಾರ್ಮಿಕ ವಾತಾವರಣವಿದ್ದು, ಅಲ್ಲಿ ಪ್ರತೀ ವಾರವೂ ಭಜನೆ ನಡೆಯುತ್ತದೆ. ಆ ಭಜನೆಯಲ್ಲಿ ನಾನೂ ಪಾಲ್ಗೊಳ್ಳುತ್ತೇನೆ. ಇತರ ಧಾರ್ಮಿಕ ಕಾರ್ಯಗಳಲ್ಲಿ ಸಕ್ರಿಯಳಾಗಿರಲು, ಶ್ರೀ ಮಠದ ಶ್ರೀ ಗುರುಗಳ ಮಾರ್ಗದರ್ಶನದಲ್ಲಿ ಯಾವುದೇ ಸತ್ಕಾರ್ಯಗಳಲ್ಲಿ ಭಾಗಿಯಾಗುವುದೆಂದರೆ ಸಂತಸವಾಗುತ್ತದೆ.

 

ಒಟ್ಟಿನಲ್ಲಿ, ಕನ್ಯಾಸಂಸ್ಕಾರ ಬಾಳಿಗೊಂದು ಸಕಾರಾತ್ಮಕ ಚೈತನ್ಯವನ್ನು ತುಂಬಿರುವುದಂತೂ ಖಂಡಿತ‌.

 

ಈ ಪುಟ್ಟ ಲೇಖನ ನನ್ನ ಸ್ವಾನುಭವ.‌ ಕನ್ಯಾಸಂಸ್ಕಾರವನ್ನು ಪಡೆದುಕೊಂಡ ಪ್ರತಿ ಕನ್ಯೆಯೂ, ಪ್ರತಿ ಕನ್ಯೆಯ ಮನೆಯವರೂ ಆಕೆಯಲ್ಲಾದ ಹಲವು ಬದಲಾವಣೆಗಳನ್ನು ಕಂಡುಕೊಂಡಿರುವುದನ್ನು ಕೇಳಿ ತಿಳಿದಿದ್ದೇನೆ. ನಾನು ಕನ್ಯಾಸಂಸ್ಕಾರವನ್ನು ಪಡೆದ ಅದೃಷ್ಟವಂತ ಹೆಣ್ಣುಮಕ್ಕಳಲ್ಲಿ ಒಬ್ಬಳು ಎಂಬ ಹೆಮ್ಮೆ ನನಗಿದೆ. ನನ್ನಂತೆಯೇ ಸಂಸ್ಕಾರ ಪಡೆದುಕೊಂಡ ನೂರಾರು ಕನ್ಯೆಯರೆಲ್ಲರಿಗೂ ಇಂತಹ ಅನುಭವ ಆಗಿರಬಹುದು ಎಂದು ತಿಳಿದುಕೊಂಡಿದ್ದೇನೆ.

ಹರೇರಾಮ🙏🏻

 

3 thoughts on “ಕನ್ಯಾಸಂಸ್ಕಾರ – ಒಂದು ಸ್ವಾನುಭವ : ಕು. ಅಂಕಿತಾ ನೀರ್ಪಾಜೆ

  1. It is a self-experience of a girl who had received ‘Kanya-Samskaram’ ritual. She has narrated well the positive changes she had in her life after undergoing the ‘Kanya-Samskaram’ ceremony. A much required ‘Samskaram’ instilling ritual in our girl children should be a continuous programme, on the request of the the parents of the girl children. There is no need to bother about the nasty comments of a few loose talkers who oppose this ‘Kanya Samskaram’ Ceremony.

  2. Good to know about Kanya Samskara from a devotee, with her words filled with expressions of real experience. Words attain a valuable heights, only if it accustomed with the wisdom of self experience. Ms Ankitha Neerpaje has narrated the essence of the Kanya Samskara & stressed the necessity rightly, for the younger generation. May her dreams to enlighten the culture of present generation come true.

Leave a Reply

Your email address will not be published. Required fields are marked *