ಒಂದು ಊರಿನಲ್ಲಿ ಧನದತ್ತ ಮತ್ತು ದೇವದತ್ತ ಎಂಬ ಈರ್ವರು ಅಕ್ಕಪಕ್ಕದ ಮನೆಗಳಲ್ಲಿ ವಾಸಿಸುತ್ತಿದ್ದರು. ಧನದತ್ತ ಹೆಸರಿಗೆ ತಕ್ಕಂತೆ ಅಪಾರ ಐಶ್ವರ್ಯ ಉಳ್ಳವನಾಗಿದ್ದ. ಆದರೆ ದೇವದತ್ತನಿಗೆ ದೈನಂದಿನ ಜೀವನಕ್ಕೆ ಸಾಕಾಗುವಷ್ಟು ಧನ ಮಾತ್ರ ಇತ್ತು.
ಧನದತ್ತನಿಗೆ ರಾತ್ರಿ ಸರಿಯಾಗಿ ನಿದ್ದೆ ಬರುತ್ತಿರಲಿಲ್ಲ. ಕಾರಣ ಹೆದರಿಕೆ. ಯಾವುದೇ ಸಮಯದಲ್ಲಿ ಕಳ್ಳರು ಬರಬಹುದು; ತನ್ನ ಐಶ್ವರ್ಯವನ್ನು ದೋಚಿಕೊಂಡು ಹೋಗಬಹುದು ಎಂದು ಸದಾ ಚಿಂತಿತನಾಗಿ ರಾತ್ರಿ ಪದೇ ಪದೇ ಎದ್ದು, ಬಾಗಿಲು ಹಾಕಿದ್ದೇನೆಯೇ? ಚಿಲಕ ಹಾಕಿದ್ದೇನೆಯೇ? ಎಂದು ಆಗ ಆಗ ಪರೀಕ್ಷಿಸುತ್ತಿದ್ದ. ಶಂಕರಾಚಾರ್ಯರು ಹೇಳಿದಂತೆ ‘ಹಣ ಉಳ್ಳವನಿಗೆ ಮಕ್ಕಳಿಂದಲೂ ಹೆದರಿಕೆಯಂತೆ’.
ಆದರೆ ಧನದತ್ತ ಪ್ರತಿದಿನ ನೋಡುತ್ತಾನೆ, ದೇವದತ್ತ ನೆಮ್ಮದಿಯಿಂದ ನಿದ್ದೆ ಮಾಡುತ್ತಿರುತ್ತಾನೆ, ಅವನಿಗೆ ಯಾವ ಚಿಂತೆಯೂ ಇರುವಂತೆ ಕಾಣುವುದಿಲ್ಲ.
ಒಂದು ದಿನ ಧನದತ್ತ, ಒಂದು ಪೆಟ್ಟಿಗೆಯ ತುಂಬಾ ಧನಕನಕಗಳನ್ನು ತುಂಬಿಕೊಂಡು ದೇವದತ್ತನ ಮನೆಗೆ ಹೋಗಿ, ಅವನಿಗೆ ಅದನ್ನು ಕೊಟ್ಟು-
“ಈ ಧನಕನಕಗಳಿಂದ ನೀನು ಸುಖವಾಗಿ ಬಾಳು” ಎನ್ನುತ್ತಾನೆ.
ಹಿಂದೆಂದೂ ಅಷ್ಟೊಂದು ಐಶ್ವರ್ಯ ನೋಡಿರದ ದೇವದತ್ತ ತುಂಬ ಖುಷಿಯಿಂದ ಕುಣಿದಾಡುತ್ತಾನೆ. ಆದರೆ ರಾತ್ರಿ ಅವನಿಗೆ ನೆಮ್ಮದಿಯಿರದೆ ನಿದ್ದೆಯೇ ಬರುವುದಿಲ್ಲ. ಅರೆ ನಿದ್ದೆಯಲ್ಲಿಯೇ ಬೆಳಗು ಮಾಡುತ್ತಾನೆ.
ಅವನು ಆಲೋಚಿಸುತ್ತಾನೆ. ‘ಈ ಐಶ್ವರ್ಯದ ಪೆಟ್ಟಿಗೆಯೇ ನನ್ನ ನೆಮ್ಮದಿ ಹಾಳು ಮಾಡಿತು’ ಎಂದು ತೀರ್ಮಾನಿಸಿ ಮರುದಿನ ಅದನ್ನು ಧನದತ್ತನಿಗೆ ಹಿಂತಿರುಗಿಸಿ-
“ನನಗೆ ಇದು ಬೇಡ; ನನ್ನ ನೆಮ್ಮದಿಯೇ ನನಗೆ ಸಾಕು”ಎಂದು ಹೇಳುತ್ತಾನೆ.
ಹಣ ಎಲ್ಲರಿಗೂ ಬೇಕು; ಆದರೆ ಮನಸ್ಸಿನ ನೆಮ್ಮದಿ ಅದಕ್ಕಿಂತ ಮುಖ್ಯ. ಹಣವಿಲ್ಲದಿದ್ದರೆ ಹಾಹಾಕಾರ, ಹಣವಿದ್ದರೆ ಅಹಂಕಾರ ಉಂಟಾಗುತ್ತದೆ. ಅವೆರಡನ್ನೂ ನಿಯಂತ್ರಿಸುವಷ್ಟು ಐಶ್ವರ್ಯ ನಮಗಿದ್ದರೆ ಸಾಕು. ಪ್ರತಿಯೊಬ್ಬನೂ ಈ ದಿಶೆಯಲ್ಲಿ ಚಿಂತಿಸಿ ಕರ್ತವ್ಯ ನಿರ್ವಹಿಸಿದರೆ ದೇಶವೇ ಸುಭಿಕ್ಷವಾಗುತ್ತದೆ.