ದೇವರಿಗೆ ಭಕ್ತಿಯಿಂದ ಸಲ್ಲಿಸುವ ಎಲ್ಲ ರೀತಿಯ ಸೇವೆಗಳೂ ಸಮಾನ
ವಿಟ್ಲ ಫೆ.17: ಕಲ್ಲಡ್ಕ ಗೇರುಕಟ್ಟೆ ಶ್ರೀ ಉಮಾಶಿವ ಕ್ಷೇತ್ರದಲ್ಲಿ ಶ್ರೀ ದೇವರ ಪ್ರತಿಷ್ಠಾ ಬ್ರಹ್ಮಕಲಶದ ಷಷ್ಟಮ ವರ್ಧಂತ್ಯುತ್ಸವ ಶ್ರೀರಾಮಚಂದ್ರಾಪುರ ಮಠದ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳವರ ಮಾರ್ಗದರ್ಶನದಲ್ಲಿ ಶನಿವಾರ ನಡೆಯಿತು.
ಧಾರ್ಮಿಕ ಸಭೆಯಲ್ಲಿ ಮಾತನಾಡಿದ ವೇ.ಮೂ. ಶಂಕರನಾರಾಯಣ ಭಟ್ ನಡಿಬೈಲು ಅವರು, ಕ್ಷೇತ್ರದ ಹಿನ್ನೆಲೆಯಂತೆ ಇಲ್ಲಿ ಅನ್ನಸಂತರ್ಪಣೆಗೆ ಮಹತ್ವವಿದ್ದು, ದೇವರ ಸಾನ್ನಿಧ್ಯಕ್ಕೆ ಭಕ್ತರ ಆಗಮನವೂ ಪ್ರಾಮುಖ್ಯತೆ ಪಡೆಯುತ್ತದೆ. ದೇವರಿಗೆ ಭಕ್ತಿಯಿಂದ ಸಲ್ಲಿಸುವ ಎಲ್ಲ ರೀತಿಯ ಸೇವೆಗಳೂ ಸಮಾನ ಎಂದರು.
ಹವ್ಯಕ ಮಹಾಮಂಡಲದ ಉಲ್ಲೇಖ ವಿಭಾಗ ಪ್ರಧಾನ ಗೋವಿಂದ ಭಟ್ ಬಳ್ಳಮೂಲೆ ಅಧ್ಯಕ್ಷತೆ ವಹಿಸಿ, ಮಾತನಾಡಿ, ಇಂದು ಯುವಜನರು ಹಾಗೂ ಮಕ್ಕಳು ಧಾರ್ಮಿಕ ಆಚರಣೆಗಳಲ್ಲಿ ಪಾಲ್ಗೊಳ್ಳುವಂತೆ ಮಾಡುವುದು ಭವಿಷ್ಯದ ದೃಷ್ಟಿಯಿಂದ ಪ್ರಾಮುಖ್ಯತೆ ಪಡೆಯುತ್ತದೆ ಎಂದರು.
ಅತಿಥಿಗಳಾಗಿ ಆಗಮಿಸಿದ ಮಾಜಿ ಸೈನಿಕ ರಾಮಯ್ಯ ಶೆಟ್ಟಿ ಸಂಪಿಲ ಮಾತನಾಡಿ, ಸೈನಿಕ ಮತ್ತು ರೈತ ದೇಶವನ್ನು ಉಳಿಸುತ್ತಾನೆ. ದೇವತಾ ಸನ್ನಿಧಿಗಳು ಈರ್ವರನ್ನೂ ಕಾಪಾಡುವಂತೆ ಪ್ರಾರ್ಥಿಸಬೇಕು ಎಂದರು.
ಸೇವಾ ಸಮಿತಿ ಗೌರವಾಧ್ಯಕ್ಷ ಸಿ.ವಿ.ಗೋಪಾಲಕೃಷ್ಣ, ಹವ್ಯಕ ಮಹಾಮಂಡಲದ ಮುಷ್ಟಿಭಿಕ್ಷಾ ಪ್ರಧಾನರಾದ ಮಲ್ಲಿಕಾ ಜಿ.ಭಟ್, ಕಲ್ಲಡ್ಕ ಹವ್ಯಕ ವಲಯ ಅಧ್ಯಕ್ಷ ಯು.ಎಸ್.ಚಂದ್ರಶೇಖರ ಭಟ್ ನೆಕ್ಕಿದರವು ಉಪಸ್ಥಿತರಿದ್ದರು.
ಹುತಾತ್ಮ ಯೋಧರಿಗೆ ಶ್ರದ್ಧಾಂಜಲಿ :
ಇದೇ ಸಂದರ್ಭ ಕಾಶ್ಮೀರದಲ್ಲಿ ಭಯೋತ್ಪಾದಕರಿಂದ ಹತರಾದ ಯೋಧರ ಆತ್ಮಕ್ಕೆ ಶಾಂತಿ ಕೋರಿ ಮೌನ ಪ್ರಾರ್ಥನೆ ಸಲ್ಲಿಸಲಾಯಿತು. ಸೇವಾ ಸಮಿತಿ ಅಧ್ಯಕ್ಷ ರಾಕೋಡಿ ಈಶ್ವರ ಭಟ್ ಸ್ವಾಗತಿಸಿ, ಪ್ರಸ್ತಾವನೆಗೈದು, ಸೈನಿಕರ ಕಲ್ಯಾಣ ನಿಧಿಗೆ ವೈಯಕ್ತಿಕವಾಗಿ ಒಂದು ತಿಂಗಳ ವೇತನ ಹಾಗೂ ಉಮಾಶಿವ ಕ್ಷೇತ್ರದ ಸ್ವಸಹಾಯ ಸಂಘದ ವತಿಯಿಂದ ನೆರವು ಘೋಷಿಸಿದರು. ಈ ಸಂದರ್ಭ ಸಮೀಪದಲ್ಲೇ ನಿರ್ಮಾಣವಾಗುತ್ತಿರುವ ಮಂಗಲಧಾಮಕ್ಕೆ ಆರ್ಥಿಕ ನೆರವು ನೀಡಬೇಕು ಎಂದು ವಿನಂತಿಸಿದರು.
ನವಕ ಪ್ರತಿಷ್ಠೆ, ಶತರುದ್ರ ಜಪ :
ಮಂಗಳೂರು ಹವ್ಯಕ ಮಂಡಲ ವೈದಿಕ ಪ್ರಧಾನ ವೇ.ಮೂ.ಅಮೈ ಶಿವಪ್ರಸಾದ ಭಟ್ ನೇತೃತ್ವದಲ್ಲಿ ಪುಣ್ಯಾಹವಾಚನ, ಗಣಪತಿ ಹವನ, ನವಕ ಪ್ರತಿಷ್ಠೆ, ಶತರುದ್ರ ಜಪ, ನಾಗ ರಕ್ತೇಶ್ವರಿ ತಂಬಿಲ, ಸಾಮೂಹಿಕ ಕುಂಕುಮಾರ್ಚನೆ, ನವಕ ಕಲಶಾಭಿಷೇಕ, ಮಹಾಪೂಜೆ ನಡೆಯಿತು. ಬಳಿಕ ಅನ್ನಸಂತರ್ಪಣೆ, ಯಕ್ಷಗಾನ ತಾಳಮದ್ದಳೆ ಕಾರ್ಯಕ್ರಮಗಳು ನಡೆದವು. ಸೇವಾ ಸಮಿತಿಯ ಕಾರ್ಯದರ್ಶಿ ಕೆ.ಟಿ.ಗಣೇಶ, ಕೋಶಾಧಿಕಾರಿ ಎನ್.ಎಸ್.ಶ್ರೀಕಾಂತ್, ಸಮಿತಿ ಸದಸ್ಯರಾದ ಯತಿನ್ ಕುಮಾರ್ ಯೆಳ್ತಿಮಾರ್, ಶ್ಯಾಮ ಭಟ್ ಪಂಜಿಗದ್ದೆ, ಅಡ್ಕತ್ತಿಮಾರು ರಾಮಚಂದ್ರ ಭಟ್, ನೆಕ್ರಾಜೆ ಈಶ್ವರ ಭಟ್ ಉಪಸ್ಥಿತರಿದ್ದರು.
ವಿಟ್ಲ ಹವ್ಯಕ ವಲಯದ ಕೋಶಾಧಿಕಾರಿ ಮುರಳೀಕೃಷ್ಣ ಕುಕ್ಕಿಲ ಕಾರ್ಯಕ್ರಮ ನಿರೂಪಿಸಿದರು. ಮಾನಸ ನೆಕ್ರಾಜೆ ಆಶಯಗೀತೆ ಹಾಡಿದರು. ಕೇಪು ಹವ್ಯಕ ವಲಯದ ಅಧ್ಯಕ್ಷ ಜನಾರ್ದನ ಭಟ್ ಅಮೈ ವಂದಿಸಿದರು.