ಕುಂಡಡ್ಕ ವಿಷ್ಣುಮೂರ್ತಿ ದೇವಸ್ಥಾನ ಪುನಃಪ್ರತಿಷ್ಠಾ ಬ್ರಹ್ಮಕಲಶ : ರಾಜದರ್ಬಾರ್ ಗತವೈಭವ ಸ್ಥಿತವೈಭವವಾಗಿದೆ : ರಾಘವೇಶ್ವರಭಾರತೀ ಮಹಾಸ್ವಾಮಿಗಳವರು

ಉಪಾಸನೆ

ವಿಟ್ಲ, ಫೆ.11 : ಅರಸರು ಧರ್ಮದ ರಕ್ಷಕರು. ಧರ್ಮಬಾರ ಪದವೇ ದರ್ಬಾರ್ ಎಂದಾಗಿದೆ. ದೇವರು, ಗುರುಗಳು, ಅರಸರನ್ನು ಹೊಂದಿರುವ ಸಭೆ ರಾಜದರ್ಬಾರ್. ಅದು ಇಂದು ಕುಂಡಡ್ಕದಲ್ಲಿ ಸಂಭವಿಸಿದೆ. ಗತ ವೈಭವ ಸ್ಥಿತ ವೈಭವವಾಗಿದೆ ಎಂದು ಶ್ರೀರಾಮಚಂದ್ರಾಪುರ ಮಠದ ಶ್ರೀ ರಾಘವೇಶ್ವರಭಾರತೀ ಮಹಾಸ್ವಾಮಿಗಳವರು ಉಲ್ಲೇಖಿಸಿದರು.

 

ಅವರು ರವಿವಾರ ಕುಂಡಡ್ಕ ಶ್ರೀ ವಿಷ್ಣುಮೂರ್ತಿ ದೇವಸ್ಥಾನ, ಮಾಡ ಶಿಬರಿಕಲ್ಲ ಶ್ರೀ ಮಲರಾಯ – ಮೂವರ್ ದೈವಂಗಳ ದೈವಸ್ಥಾನ ಪುನಃ ಪ್ರತಿಷ್ಠಾ ಬ್ರಹ್ಮಕಲಶೋತ್ಸವ ಅಂಗವಾಗಿ ನಡೆದ ರಾಜದರ್ಬಾರ್‌ನಲ್ಲಿ ಆಶೀರ್ವಚನ ನೀಡಿದರು.

 

ಶತಮಾನಗಳ ಬಳಿಕ ವಿಟ್ಲದ ಅರಸರ ಐತಿಹಾಸಿಕ ಕಾರ್ಯಕ್ರಮ ನಡೆಯಿತು. ಪ್ರಭುವಿಗೆ ಪ್ರಭುತ್ವ ಕೊಡುವ ಸ್ಥಳ ಕುಂಡಡ್ಕ. ಆನುವಂಶಿಕ ವ್ಯವಸ್ಥೆಗೆ ಇಂದೂ ಬೆಲೆಯಿದೆ. ವಿಟ್ಲ ಸೀಮೆಯಲ್ಲಿ ಮುಂದುವರಿಯುತ್ತಿರುವುದೇ ಅದಕ್ಕೆ ಸಾಕ್ಷಿ. ಸ್ವಾಭಿಮಾನದ ಗ್ರಾಮ ಪರಮವೈಭವಕ್ಕೆ ಕಾರಣವಾಗುತ್ತದೆ. ದೇವರಿಗೆ ಸಮರ್ಪಣೆ ಮಾಡಿದ ದೇಣಿಗೆ ಗ್ರಾಮದ ಏಳಿಗೆಗೆ ಕಾರಣವಾಗುತ್ತದೆ. ಗ್ರಾಮದ ಒಳಗೆ ರಾಮನಿದ್ದಾನೆ. ವಿಟ್ಲ ಅರಸರ ಪಟ್ಟಾಭಿಷೇಕ ಮತ್ತೆ ನಡೆಯಬೇಕು. ಅದಕ್ಕೆ ಶ್ರೀಮಠದ ಸಂಪೂರ್ಣ ಸಹಕಾರವಿದೆ ಎಂದರು.

 

ವಿಟ್ಲ ಅರಮನೆಯ ವಿ.ಜನಾರ್ದನ ವರ್ಮ ಅರಸರು ಅಧ್ಯಕ್ಷತೆ ವಹಿಸಿದ್ದರು. ಮಾಣಿಲ ಶ್ರೀಧಾಮದ ಶ್ರೀ ಮಹಾಲಕ್ಷ್ಮಿ ಕ್ಷೇತ್ರದ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ ಅವರು ಆಶೀರ್ವಚನ ನೀಡಿ, ಅರಸರ ಪಟ್ಟಾಭಿಷೇಕ, ಅರಮನೆಯ ವೈಭವ ಮತ್ತೆ ಮೆರೆಯಬೇಕು. ಅದಕ್ಕೆ ಎಲ್ಲರೂ ಸಹಕಾರ ನೀಡಬೇಕು ಎಂದರು.

 

ಕಣಿಯೂರು ಶ್ರೀ ಚಾಮುಂಡೇಶ್ವರಿ ದೇವೀ ಸನ್ನಿಧಿಯ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ, ಬಾಳೆಕೋಡಿ ಶ್ರೀ ಶಿಲಾಂಜನ ಕ್ಷೇತ್ರದ ಡಾ. ಶಶಿಕಾಂತಮಣಿ ಸ್ವಾಮೀಜಿ, ವೇ.ಮೂ.ಕುಂಟುಕುಡೇಲು ರಘುರಾಮ ತಂತ್ರಿಯವರು, ವೇ.ಮೂ.ಕುಂಟುಕಡೇಲು ಗುರುರಾಜ ತಂತ್ರಿಯವರು ಉಪಸ್ಥಿತರಿದ್ದರು.

 

ಇತಿಹಾಸ ಸಂಶೋಧಕ ಡಾ.ಪುಂಡಿಕಾ ಗಣಪಯ್ಯ ಭಟ್ ಅರಸು ಮನೆತನ – ವಿಟ್ಲ ಸೀಮೆ ಬಗ್ಗೆ ಉಪನ್ಯಾಸ ನೀಡಿ, 19 ಗ್ರಾಮಗಳನ್ನು ಹೊಂದಿದ ವಿಟ್ಲ ಸೀಮೆಯನ್ನು ವಿಟ್ಲ ಅರಸರು ಆಳುತ್ತಿದ್ದರು. 1784ರಲ್ಲಿ ಟಿಪ್ಪುಸುಲ್ತಾನ್ ಅರಮನೆಗೆ ದಾಳಿ ಮಾಡಿರುವ ಬಗ್ಗೆ ದಾಖಲೆಗಳು ಸಿಗುತ್ತವೆ. ವಿಟ್ಲ ಅರಸರು ಸ್ವಾತಂತ್ರ್ಯಹೋರಾಟದಲ್ಲಿಯೂ ಭಾಗಿಯಾಗಿದ್ದರೆಂಬ ದಾಖಲೆಯಿದೆ ಎಂದರು.

 

ಬ್ರಹ್ಮಕಲಶ ಸಮಿತಿ ಅಧ್ಯಕ್ಷ ಕೆ.ಟಿ.ವೆಂಕಟೇಶ್ವರ ನೂಜಿ ಸ್ವಾಗತಿಸಿ, ಪ್ರಸ್ತಾವನೆಗೈದರು. ನಾರಾಯಣ ಪೂಜಾರಿ ಎಸ್.ಕೆ. ವಂದಿಸಿದರು. ಬ್ರಹ್ಮಕಲಶ ಸಮಿತಿ ಪ್ರಧಾನ ಕಾರ್ಯದರ್ಶಿ ವೇಣುಗೋಪಾಲ  ಶೆಟ್ಟಿ ಮರುವಾಳ, ಶ್ರೀಪತಿ ನಾಯಕ್, ನಾಗೇಶ್  ಕೆ., ಪದ್ಮಯ್ಯ ಗೌಡ ಪೈಸಾರಿ ನಿರೂಪಿಸಿದರು.

 

ರಾಜದರ್ಬಾರ್ :

 

ರಾಜಗುರುಪೀಠವಾದ ಶ್ರೀರಾಮಚಂದ್ರಾಪುರ ಮಠ ಹಾಗೂ ವಿಟ್ಲ ಅರಸರ ಬಿರುದುಗಳ ಘೋಷ ನಡೆಯಿತು. ಅರ್ಚಕರು ಸೀಮೆಯ ದೈವ ದೇವಸ್ಥಾನದ ಪ್ರಸಾದ ಸಮರ್ಪಿಸಿದರು. ಮನೆತನದ ಕಾಣಿಕೆ ಸಮರ್ಪಣೆ, ಗ್ರಾಮಸ್ಥರಿಂದ ಕಾಣಿಕೆ ಸಂಗ್ರಹ ನಡೆಯಿತು. ಅಷ್ಟಾವಧಾನ ಸೇವೆ ನಡೆಯಿತು. ರಾಜದರ್ಬಾರ್‌ನಲ್ಲಿ ಅರಸು ಮನೆತನ, ಕರ್ಗಲ್ಲು ನೂಜಿ ಮನೆತನ, ಕುಂಡಡ್ಕ ಕುಡ್ವ ಮನೆತನ, ಕುಳ ಮನೆತನ, ಕುಂಡಡ್ಕ ಮನೆತನದವರು, ವಿಟ್ಲ ಸೀಮೆಯ ಗುರಿಕ್ಕಾರರು, ತಂತ್ರಿಗಳು, ಪುರೋಹಿತರು, ಶ್ರೀದೇವರ ಚಾಕರಿ ಮನೆತನದವರು, ಜೀರ್ಣೋದ್ಧಾರ ಮತ್ತು ಬ್ರಹ್ಮಕಲಶ ಸಮಿತಿ ಪದಾಧಿಕಾರಿಗಳು ಕಚ್ಚೆ ಹಾಕಿ, ಪೇಟ ಧರಿಸಿ ಭಾಗವಹಿಸಿದ್ದರು.

Author Details


Srimukha

Leave a Reply

Your email address will not be published. Required fields are marked *