ಪ್ರತಿವರ್ಷ ದಂತೆ ಫಾಲ್ಗುಣದಲ್ಲಿ ಮೂರು ದಿನಗಳ ಶ್ರೀಮಹಾಗಣಪತಿ ದೇವರ ಮಹಾರಥೋತ್ಸವದ ಕಾರ್ಯಕ್ರಮಗಳು 18-03-2019 ರಂದು ಆರಂಭವಾದವು. ಬೆಂಗಳೂರು ಮಹಾನಗರದ ಪವಿತ್ರತಮವಾದ ಗಿರಿನಗರದಲ್ಲಿ ನಮ್ಮ ಪರಮಗುರುಗಳ ಕರಾಂಬುಜಗಳಿಂದ ಪ್ರತಿಷ್ಠಾಪಿತನಾದ ಶ್ರೀ ಮಹಾಗಣಪತಿಯು ವಿಶಿಷ್ಟವೂ ಅನನ್ಯವೂ ಆದ ಮಹಿಮಾನ್ವಿತನಾಗಿ ನೆಲೆ ನಿಂತಿದ್ದಾನೆ. ಮೊದಲದಿನವಾದ ನಿನ್ನೆ ಧ್ವಜಾರೋಹಣ, ಮಹಾಗಣಪತಿ ಹವನ ಇತ್ಯಾದಿ ಧಾರ್ಮಿಕವಿಧಿಗಳು ವಿಧ್ಯುಕ್ತವಾಗಿ ನಡೆದವು. ಮುಸ್ಸಂಜೆಯಿಂದ ಆರಂಭಿಸಿ ಶ್ರೀದೇವರ ಉತ್ಸವ ಮೂರ್ತಿಯ ನಗರ ಪರ್ಯಟನ ಪಲ್ಲಕ್ಕಿ ಉತ್ಸವವು ವಿಜೃಂಭಣೆಯಿಂದ ನಡೆಯಿತು. ಗಿರಿನಗರದ ನಿರ್ದಿಷ್ಟ ಬೀದಿಗಳಲ್ಲಿ ಸಾಲಂಕೃತ ಪಲ್ಲಕ್ಕಿಯ ಮೆರವಣಿಗೆಯು ಪತಾಕೆ ಮಕರತೋರಣ ಛತ್ರ ಚಾಮರ ದೀವಟಿಗೆ ವಾದ್ಯಗಳೊಂದಿಗೆ ಸಂಪನ್ನವಾಯಿತು. ಸುಮಾರು 3ಕಿ.ಮೀ. ಪರಿಕ್ರಮದಲ್ಲಿ ಶ್ರೀಮಠದ ಶಿಷ್ಯಭಕ್ತರು ಪಲ್ಲಕ್ಕಿ ಹೊತ್ತು ನಡೆವ ಸೇವೆಯಲ್ಲಿ ತಾ ಮುಂದು ತಾ ಮೊದಲು ಎಂದು ಸೇವೆ ಸಲ್ಲಿಸಿರು. ಮೆರವಣಿಗೆಯ ದಾರಿಯಲ್ಲಿಯ ಮನೆಗಳ ಭಕ್ತರು ಗಣಪನಿಗೆ ಹಣ್ಣುಕಾಯಿ ಅರ್ಪಿಸಿ ಪ್ರಸಾದ ಪಡೆದರು. ಮರುದಿನ ನಡೆಯಲಿರುವ ರಥೋತ್ಸವಕ್ಕೆ ಅವರನ್ನು ಆಮಂತ್ರಿಸಲಾಯಿತು. ಸಾಮಾನ್ಯವಾಗಿ ಇಂಥ ಧಾರ್ಮಿಕ ಉತ್ಸವದಲ್ಲಿ ಹಿರಿಯರೇ ಹೆಚ್ಚು ಭಾಗವಹಿಸುವುದು ಎಲ್ಲೆಡೆ ಕಂಡುಬರುತ್ತದೆ. ಆದರೆ ಇಲ್ಲಿ ನೂರಾರು ಸಂಖ್ಯೆಯ ಯುವಕರು ಉತ್ಸಾಹದಿಂದ ಪಾಲ್ಗೊಂಡಿದ್ದು ಶ್ರೀಸಂಸ್ಥಾನದವರ ಯುವೋತ್ತೇಜನ ಮತ್ತು ಅಭಿಪ್ರೇರಣೆಯ ಫಲವೆನ್ನಬಹುದು. ರಾತ್ರಿ ರಂಗಪೂಜೆ ಸೊಗಸಾಗಿ ಸಂಪನ್ನವಾಯಿತು. ಮುಂದಿನ ಎರಡು ದಿನಗಳಲ್ಲಿ ತೇರನೆಳೆಯುವುದು, ಸಹಸ್ರಮೋದಕ ಹವನ, ಅವಭೃತ ಮಹಾನ್ನದಾನಗಳು ನಡೆಯಲಿವೆ ಎಂದು ದೇವಾಲಯದ ನಿರ್ವಹಣೆಯ ಜವಾಬ್ದಾರಿ ಹೊತ್ತ ಚಿಂಚನೂರು ಮಹಾಬಲೇಶ್ವರ ತಿಳಿಸಿದ್ದಾರೆ.