ನಂತೂರು: ಮಂಗಳೂರು ನಂತೂರು ಶ್ರೀಭಾರತೀ ಸಮೂಹ ಸಂಸ್ಥೆಗಳ ಶಂಕರಶ್ರೀ ಸಭಾಭವನದಲ್ಲಿ ಶ್ರೀಭಾರತೀ ಪದವಿ ಕಾಲೇಜಿನ ಸಾಂಸ್ಕೃತಿಕ ಸಂಘದ ವತಿಯಿಂದ ಸಾಂಸ್ಕೃತಿಕ ದಿನಾಚರಣೆಯನ್ನು ಮಾರ್ಚ್ 16ರಂದು ನಡೆಸಲಾಯಿತು.
ವಕೀಲರು ಮತ್ತು ನೋಟರಿ ಶ್ರೀ ರಾಮಚಂದ್ರ ಭಟ್ಟ ಮಾಣಿಪ್ಪಾಡಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಶ್ರೀ ಭಾರತೀ ವಿದ್ಯಾಸಂಸ್ಥೆಯು ಸಂಸ್ಕೃತಿಯ ದೇಗುಲ. ವಿದ್ಯಾದೇಗುಲದಲ್ಲಿ ಸಂಸ್ಕೃತಿಯೊಂದಿಗೆ ವಿದ್ಯೆಯನ್ನು ನೀಡುವುದು, ವಿದ್ಯಾರ್ಥಿಗಳನ್ನು ಉತ್ತಮ ಪ್ರಜೆಗಳನ್ನಾಗಿ ರೂಪಿಸುವುದಕ್ಕೆ ಸಹಕಾರಿ, ಎಂದು ಹೇಳಿದರು.
ಶ್ರೀಭಾರತೀ ಪದವಿ ಕಾಲೇಜಿನ ಪ್ರಾಂಶುಪಾಲ ಡಾ. ಈಶ್ವರಪ್ರಸಾದ್ ಎ. ಅಧ್ಯಕ್ಷತೆ ವಹಿಸಿ ಮಾತನಾಡಿ, ವೇದಪುರಾಣಗಳ ಕಾಲದಲ್ಲಿಯೇ ಸಂಸ್ಕಾರಯುತ ಶಿಕ್ಷಣಕ್ಕೆ ಹಿರಿಯರು ಹೆಚ್ಚಿನ ಒತ್ತು ನೀಡಿದ್ದರು. ವಿದ್ಯಾರ್ಥಿಗಳಲ್ಲಿ ಸಂಸ್ಕೃತಿಯ ಉಳಿವಿನ ಪಾಠ ಬೆಳೆದು ಹೆಮ್ಮರವಾಗಲಿ, ಎಂದು ಆಶಿಸಿದರು.
ಮುಖ್ಯ ಅಭ್ಯಾಗತರಾಗಿ ಆಗಮಿಸಿದ ಶ್ರೀರಾಮ ಪ್ರಥಮ ದರ್ಜೆ ಕಾಲೇಜಿನ ಉಪನ್ಯಾಸಕಿ ಶ್ರೀಮತಿ ಸುಕನ್ಯಾ ಸಿ. ಮಾತನಾಡಿ, ಭಾರತ ದೇಶ ಸಂಸ್ಕೃತಿಯ ತವರೂರು, ಸಂಸ್ಕೃತಿಯನ್ನು ಜೀವನದಲ್ಲಿ ಅಳವಡಿಸಿಕೊಳ್ಳುವುದರಿಂದ ಯಾರೂ ಹೀಯಾಳಿಕೆಗೆ ಗುರಿಯಾಗುವುದಿಲ್ಲ. ನಮ್ಮ ಎಲ್ಲ ಆಚರಣೆಗಳಿಗೆ ವೈಜ್ಞಾನಿಕ ಕಾರಣಗಳಿವೆ. ವಿದ್ಯಾರ್ಥಿ ಜೀವನದಲ್ಲಿ ಸಂಸ್ಕೃತಿಗೆ ಹೆಚ್ಚಿನ ಮಹತ್ತ್ವ ನೀಡಿದಾಗ ಉತ್ತಮ ವ್ಯಕ್ತಿತ್ವ ರೂಪುಗೊಳ್ಳುತ್ತದೆ ಎಂದು ಹೇಳಿದರು.
ನಮ್ಮ ಕುಡ್ಲ ಚಾನಲ್ ನ್ಯೂಸ್ ರೀಡರ್ ಶ್ರೀಮತಿ ಪ್ರಿಯಾ ಹರೀಶ್ ಶೆಟ್ಟಿ ಮಾತನಾಡಿ, ಸಂಸ್ಕಾರದೊಂದಿಗೆ ಜೀವನದಲ್ಲಿ ಶಿಸ್ತನ್ನು ರೂಪಿಸಿಕೊಂಡಾಗ ಯಶಸ್ಸಿನ ಮೆಟ್ಟಿಲೇರಲು ಸಾಧ್ಯ. ಶಿಸ್ತು ಮತ್ತು ತಾಳ್ಮೆ ಸಂಸ್ಕಾರದ ಒಂದು ಭಾಗ. ಸಂಸ್ಕೃತಿಯ ಆಚರಣೆ ಒಂದು ದಿನಕ್ಕೆ ಸೀಮಿತವಾಗಬಾರದು ಎಂದರು.
ಸಾಂಸ್ಕೃತಿಕ ಸಂಘದ ಸಂಯೋಜಕ ಶ್ರೀ ಪ್ರವೀಣ ಪಿ. ಪ್ರಸ್ತಾವಿಸಿದರು. ವಿದ್ಯಾರ್ಥಿ ನಾಯಕಿ ಕು. ಜಾಹ್ನವಿ ಸ್ವಾಗತಿಸಿದರು. ವಿದ್ಯಾರ್ಥಿನಿ ಕು. ಅಂಕಿತಾ ಎನ್. ವಂದಿಸಿದರು. ವಿದ್ಯಾರ್ಥಿ ಶ್ರೀ ವೆಂಕಟೇಶ್ ನಿರೂಪಿಸಿದರು.
ಅತಿಥಿ-ಅಭ್ಯಾಗತರು ಮತ್ತು ವಿದ್ಯಾರ್ಥಿಗಳು ಸ್ವಾಮಿ ವಿವೇಕಾನಂದರ ಭಾವಚಿತ್ರಕ್ಕೆ ಪುಷ್ಪಾರ್ಚನೆಗೈದರು. ಅಭ್ಯಾಗತರನ್ನು ಪೂರ್ಣಕುಂಭ ಮತ್ತು ಚೆಂಡೆವಾದನ, ಅರಶಿನ, ಕುಂಕುಮ ಹಾಗೂ ಹೂಗಳ ಮೂಲಕ ಸ್ವಾಗತಿಸಲಾಯಿತು. ವಿದ್ಯಾರ್ಥಿಗಳು ಮತ್ತು ಉಪನ್ಯಾಸಕರು ಎಲ್ಲರೂ ಸಾಂಪ್ರದಾಯಿಕ ಉಡುಗೆ ತೊಟ್ಟು ಸಂಭ್ರಮಿಸಿದರು. ಸೆಲ್ಪೀ ಕಾರ್ನರ್ ಎಲ್ಲರ ಗಮನ ಸೆಳೆಯಿತು. ಅನಂತರ ಅಂತಿಮ ವರ್ಷದ ವಿದ್ಯಾರ್ಥಿನಿಯರು ಮನೋರಂಜನಾ ಕಾರ್ಯಕ್ರಮ ನಡೆಸಿದರು.