ಬೆಂಗಳೂರು: ಬ್ರಹ್ಮರ್ಷಿ ಮಿತ್ತೂರು ಪುರೋಹಿತ ತಿಮ್ಮಯ್ಯ ಭಟ್ ಸಂಪ್ರತಿಷ್ಠಾನವು ಇದೇ ಬರುವ 12-11-2018, ಸೋಮವಾರದಿಂದ 20-11-2018, ಮಂಗಳವಾರದವರೆಗೆ ಶ್ರೀಮದ್ವಾಲ್ಮೀಕಿರಾಮಾಯಣ ಪಾರಾಯಣ ಹಮ್ಮಿಕೊಂಡಿದೆ.
ರಾಮಾಶ್ರಮದಲ್ಲಿ ಶ್ರೀಸಂಸ್ಥಾನದವರನ್ನು ಭೇಟಿ ಮಾಡಿದ ಸಂಪ್ರತಿಷ್ಠಾನದ ಸದಸ್ಯರು, ಹಮ್ಮಿಕೊಂಡಿರುವ ಪಾರಾಯಣದ ವಿಚಾರ ಅರುಹಿ ಮಂತ್ರಾಕ್ಷತೆ ಪಡೆದುಕೊಂಡರು. ಇದೇ ಸಂದರ್ಭದಲ್ಲಿ ಡಾ.ಪಾದೆಕಲ್ಲು ವಿಷ್ಣು ಭಟ್ ಹಾಗೂ ಮಿತ್ತೂರು ಪುರೋಹಿತ ಶ್ರೀ ತಿರುಮಲೇಶ್ವರ್ ಭಟ್ ಸಂಪಾದಿಸಿದ ‘ಮಿತ್ತೂರು ಪುರೋಹಿತ ಶಂಕರನಾರಾಯಣ ಭಟ್ಟ ಹಾಗೂ ಮೈಕೆ ಶಂಕರನಾರಾಯಣ ಭಟ್ಟ ಜನ್ಮಶತಮಾನ ಸ್ಮರಣಸಂಪುಟ’ ಗ್ರಂಥವನ್ನು ಶ್ರೀಸಂಸ್ಥಾನದವರಿಗೆ ಅರ್ಪಿಸಿ ಆಶೀರ್ವಾದ ಪಡೆದುಕೊಂಡರು.
ಮಿತ್ತೂರು ಸಂಪ್ರತಿಷ್ಠಾನದ ಸದಸ್ಯರ ಮನೆಯಲ್ಲಿ ಪ್ರತಿನಿತ್ಯ ಬೆಳಗ್ಗೆ 7.30ರಿಂದ ಮಧ್ಯಾಹ್ನ 12.30ರ ತನಕ ಪಾರಾಯಣ ನಡೆಯಲಿದ್ದು, ಅಪರಾಹ್ಣ 3 ರಿಂದ 4 ಗಂಟೆಯ ತನಕ ಪ್ರವಚನವಿರಲಿದೆ.
ಬ್ರಹ್ಮಶ್ರೀ ಮಿತ್ತೂರು ಶ್ರೀ ತಿಮ್ಮಣ್ಣ ಭಟ್ಟರು ಅವರ ಜೀವಿತಾವಧಿಯಲ್ಲಿ ರಾಮಾಯಣವನ್ನು ಸದಾಕಾಲ ಓದುತ್ತಿದ್ದರು. ಪ್ರಸ್ತುತ ಸಂಪ್ರತಿಷ್ಠಾನವು ಅದನ್ನು ನೆನಪಿಸಿಕೊಂಡು ಶ್ರೀಸಂಸ್ಥಾನದವರ ಮಾರ್ಗದರ್ಶನ , ಅನುಗ್ರಹ ಹಾಗೂ ಮಹಾಸಂಕಲ್ಪದಂತೆ ಹಮ್ಮಿಕೊಂಡಿರುವ ಶ್ರೀಮದ್ವಾಲ್ಮೀಕಿರಾಮಾಯಣದ ಮೂರು ಪಾರಾಯಣಗಳನ್ನು ನವಾಹ ಪದ್ಧತಿಯಂತೆ ಹಮ್ಮಿಕೊಂಡಿದೆ. ಇದಕ್ಕೆ ಸಂಪ್ರತಿಷ್ಠಾನವು ಸರ್ವರ ಸಹಕಾರ ಹಾಗೂ ಉಪಸ್ಥಿತಿಯನ್ನು ಅಪೇಕ್ಷಿಸಿದೆ.