ಗೋಸ್ವರ್ಗ

ಕವಿತೆ

ನೋಡ ಬನ್ನಿರಿ ಭಾನ್ಕುಳಿಯ ಗೋಸ್ವರ್ಗದಿವ್ಯಾವರಣವ
ನಡುವಿರುವ ಪುಷ್ಕರಿಣಿ ತೊಟ್ಟಿಹ ಶುದ್ಧನೀರಾಭರಣವ

ನವುರುಕೆತ್ತನೆಯಿಹ ಶಿಲಾಮಂಡಪ ಸರೋವರಮಧ್ಯದಿ
ಸಪ್ತಸನ್ನಿಧಿಯಲ್ಲಿ ನೆಲೆಸಿದೆ ದೇವತಾಸಾಕ್ಷಾನ್ನಿಧಿ

ಪಾವಟಿಗೆ ಪಟ್ಟಿಕೆಯು ಸುತ್ತಲು ಮುಡಿಪು ಜನರಿಗೆ ತಪಿಸಲು
ತೀರ್ಥಪಥ ನಾಲ್ಕಿಹುದು ಗೋತೀರ್ಥವನು ಸುಲಭದಿ ತಲುಪಲು

ಬಳಿಕಿರುವ ಪರಿವೃತ್ತ ಮೀಸಲು ಗೋವಿರಾಮದ ಬಳಕೆಗೇ
ನೆರಳ ಬಯಸುವ ಗೋವುಗಳು ವಿಶ್ರಾಂತಿ ಪಡೆಯುವುದಿಲ್ಲಿಯೇ

ಮತ್ತೆ ಮುಂದಿನ ಪರಿಧಿಯಲ್ಲಿದೆ ಗೋವಿಹಾರದ ವಿಸ್ತರ
ತೆರೆದ ಬಯಲಲಿ ಸಂಚರಿಸೆ ಗೋವುಗಳಿಗಿದುವೆ ಮಹತ್ತರ

ಕೊನೆಯಲಿರುವ ಪರಿಕ್ರಮವೆ ಗೋಭಕ್ತಜನಪ್ರೇಕ್ಷಾಪಥ
ಸಾವಿರದ ಗೋವುಗಳ ಒನ್ನೋಟದಲಿ ತೋರಿಪ ಸತ್ಪಥ

ಇಲ್ಲಿ ಗೋವೇ ದೇವತೇ
ಕಾಣುವುದು ಮಹಿಮಾನತೇ
ಗೋವುಗಳ ಸ್ವಚ್ಛಂದತೆ
ಸ್ವರ್ಗವೆನಿಸಿದೆ ಸಹಜತೆ

1 thought on “ಗೋಸ್ವರ್ಗ

Leave a Reply

Your email address will not be published. Required fields are marked *