ಗೋಕರ್ಣದ ಸಾರ್ವಭೌಮ ಶ್ರೀಮಹಾಬಲೇಶ್ವರ ದೇವಾಲಯದಲ್ಲಿ ಕಾರ್ತಿಕ ಪೌರ್ಣಿಮೆ ಸಂಭ್ರಮ : ಕಣ್ಮನಸೆಳೆದ ಹೂವಿನ ಅಲಂಕಾರ

ಶ್ರೀಗೋಕರ್ಣ

ಗೋಕರ್ಣ: ಪುರಾಣ ಪ್ರಸಿದ್ಧ ಗೋಕರ್ಣದ ಸಾರ್ವಭೌಮ ಶ್ರೀಮಹಾಬಲೇಶ್ವರ ದೇವಾಲಯದಲ್ಲಿ ಕಾರ್ತಿಕ ಪೌರ್ಣಿಮೆ ಪ್ರಯುಕ್ತ ಶ್ರೀ ದೇವರಿಗೆ ವಿಶೇಷ ಪೂಜೆ, ದೀಪಾಲಂಕಾರ ಹಾಗೂ ಹೂವಿನ ಅಲಂಕಾರ ನೆರವೇರಿತು. ದೇವಾಲಯದ ಒಳ-ಹೊರ ಪ್ರಾಕಾರದ ಸುತ್ತ ದೀಪಗಳಿಂದ ಪ್ರಜ್ವಲಿಸಿ, ಶ್ರೀಮಹಾಬಲೇಶ್ವರ ದೇವರ ಉತ್ಸವವು ದೇವಾಲಯದ ಸುತ್ತ ಮೂರು ಪ್ರದಕ್ಷಿಣೆ ನಡೆಸಿ ಮಹಾಮಂಗಳಾರತಿ, ಪ್ರಸಾದ ವಿತರಣೆ ನಡೆಸಲಾಯಿತು.

 

ಮಧ್ಯಾಹ್ನದಿಂದಲೇ ದೇವಾಲಯದಲ್ಲಿ ಮಹಾಪೂಜೆ, ಬಲಿ ನಡೆಸಿ, ದೇವರ ಉತ್ಸವವು ವನ ಭೋಜನಕ್ಕಾಗಿ ಸಮೀಪದ ಭೀಮಕುಂಡ ಎಂಬ ಸುಂದರ ಗುಡ್ಡ ಪ್ರದೇಶಕ್ಕೆ ತೆರಳಲಾಯಿತು. ಅಲ್ಲಿ ಭೀಮಕುಂಡೇಶ್ವರನ ಸನ್ನಿಧಿಯಲ್ಲಿ ಧಾತ್ರೀಹವನವೇ ಮೊದಲಾದ ಧಾರ್ಮಿಕ ಆಚರಣೆ ನಡೆಸಿ, ದೇವಾಲಯದ ಬಾಣಸಿಗರು ವನಭೋಜನಕ್ಕಾಗಿ ಸಿದ್ಧಪಡಿಸಿದ ಊಟೋಪಹಾರಗಳ ನೈವೇದ್ಯ, ಮಂಗಳಾರತಿ, ಪ್ರಾರ್ಥನೆ ನಡೆಸಿದ ಅನಂತರ ಕೋಟಿತೀರ್ಥದ ದಾರಿಯಲ್ಲಿ ದೇವರ ಉತ್ಸವವು ಸಾಗಿ ದೇವಾಲಯ ಪ್ರವೇಶಿಸಿತು.

 

ಸಂಜೆ 6 ಗಂಟೆಗೆ ದೇವರ ಉತ್ಸವವು ಊರ ಮುಖ್ಯ ರಸ್ತೆಯಲ್ಲಿ ಸಾಗಿ, ಊರ ನಾಗರಿಕರ ಮನೆಮನೆಗಳಿಂದ ಮಂಗಳಾರತಿ ಸ್ವೀಕರಿಸಲಾಯಿತು. ಅನಂತರ ದೇವಾಲಯ ಪ್ರವೇಶಿಸಿ, ದೀಪಾರಾಧನೆ ನಡೆಸಿ, ರಾತ್ರಿ 12ರ ಸುಮಾರಿಗೆ ಕೋಟಿತೀರ್ಥದಲ್ಲಿ ದೀಪಾರಾಧನೆ ಹಾಗೂ ತೆಪ್ಪೋತ್ಸವ ನಡೆಸಿದ್ದು ಭಕ್ತರ ಸಂಭ್ರಮಕ್ಕೆ ಕಾರಣವಾಯಿತು. ದೋಣಿಯಲ್ಲಿ ದೇವರ ಮೂರ್ತಿ ಹೊತ್ತ ಉತ್ಸವವು ಕೋಟಿತೀರ್ಥದ ಮಧ್ಯೆ ಇರುವ ಕೋಟೇಶ್ವರ ಸನ್ನಿಧಿಗೆ ತಲುಪಿ, ಮಂಗಳಾರತಿ ನಡೆಸಿ, ಪುನಃ ದಡಕ್ಕೆ ಬಂದು, ನಾಗೇಶ್ವರ ಓಣಿ ಮಾರ್ಗವಾಗಿ ಸಾಗಿ ದೇವಾಲಯವನ್ನು ಪ್ರವೇಶಿಸಿತು.
ದೇವಾಲಯದಿಂದ ರಥದ ಮನೆಗೆ ತೆರಳಿದ ಉತ್ಸವ ಮೂರ್ತಿಯು, ಚಿಕ್ಕ ರಥದಲ್ಲಿ ಕುಳಿತು ಮುಖ್ಯ ರಥ ಬೀದಿ ಮಾರ್ಗವಾಗಿ ವೆಂಕಟರಮಣ ದೇವಾಲಯದವರೆಗೂ ಸಾಗಿ, ಅಲ್ಲಿ ಮಂಗಳಾರತಿ ಸ್ವೀಕರಿಸಿ ರಥದ ಮನೆಗೆ ಮರಳುವ ಮೂಲಕ ರಥೋತ್ಸವವು ಪೂರ್ಣಗೊಂಡಿತು.

ಆನಂತರ ದೇವಾಲಯದಲ್ಲಿ ಗ್ರಾಮ, ರಾಜ್ಯ, ರಾಷ್ಟ್ರದ ಕ್ಷೇಮಾಭಿವೃದ್ಧಿಗಾಗಿ, ಸಾಮೂಹಿಕ ಪ್ರಾರ್ಥನೆ ನಡೆಸಲಾಯಿತು. ಕೊನೆಗೆ ಪ್ರಸಾದ ವಿತರಣೆಯ ಮೂಲಕ ಶ್ರೀಮಹಾಬಲೇಶ್ವರ ದೇವರ ಕಾರ್ತಿಕೋತ್ಸವವು ಸಂಪನ್ನಗೊಂಡಿತು.

 

ಈ ಬಾರಿಯ ಕಾರ್ತಿಕ ಪೌರ್ಣಿಮೆಗೆ ಇನ್ನೊಂದು ಮೆರುಗು ಎಂಬಂತೆ ನುರಿತ ಹೂವಿನ ಅಲಂಕಾರದಲ್ಲಿ ನುರಿತವರನ್ನು ಬೆಂಗಳೂರಿನಿಂದ ಕರೆಸಿ ಅಲಂಕಾರ ಮಾಡಿಸಲಾಗಿತ್ತು, ದೇವಾಲಯದ ಸುತ್ತ ಸುಮಾರು ಟ್ರಕ್ ಗಳಷ್ಟು ವಿವಿಧ ಹೂವುಗಳನ್ನು ತಂದು ನಿನ್ನೆ ರಾತ್ರಿಯಿಂದಲೇ ಹೂವಿನ ಅಲಂಕಾರದ ತಯಾರಿ ನಡೆಸಲಾಗಿತ್ತು. ಆ ಮೂಲಕ ಇಂದು ದೇವಾಲಯವನ್ನು ಕಣ್ಮನ ಸೆಳೆಯುವಂತೆ ಮಾಡಲಾಗಿದೆ. ತಮ್ಮ ಹೆಸರನ್ನು ಹೇಳಲಿಚ್ಛಿಸದ ದೇವಾಲಯದ ಭಕ್ತರೊಬ್ಬರು ಕಳೆದ ಮೂರ್ನಾಲ್ಕು ವರ್ಷಗಳಿಂದಲೂ ಈ ವಿಶೇಷ ಹೂವಿನ ಅಲಂಕಾರವನ್ನು ನಡೆಸುತ್ತಾ ಬಂದಿದ್ದು, ಈ ಬಾರಿಯ ಅಲಂಕಾರ ಇನ್ನೂ ಆಕರ್ಷಕವಾಗಿದೆ. ಅಲ್ಲದೆ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರನ್ನು ಸೆಳೆದಿದೆ.

 

Leave a Reply

Your email address will not be published. Required fields are marked *