ಶ್ರೀಮದ್ರಾಜಾಧಿರಾಜಗುರು

ಅಂಕಣ ಆ ಕಣ್ಣಿಂದ : ಮೋಹನ ಭಾಸ್ಕರ ಹೆಗಡೆ ಹೆರವಟ್ಟ

ಇದು ಶ್ರೀಸಂಸ್ಥಾನ ಶ್ರೀರಾಮಚಂದ್ರಾಪುರಮಠದ ಪೂಜ್ಯರಿಗೆ ಸಲ್ಲಿಸುವ ಇನ್ನೊಂದು ಪರಾಕು. ಏನಿದರ ವಿಶೇಷ ಎಂದು ಗಮನಿಸುವಾಗ ನಾವು ರೋಮಾಂಚಗೊಳ್ಳಬೇಕು. ಸಾಮಾನ್ಯವಾಗಿ ಯತಿವರೇಣ್ಯರನ್ನು ಸಂನ್ಯಾಸಿಗಳನ್ನು ಗುರುತಿಸುವಾಗ ಅವರು ಲೌಕಿಕತೆಯಿಂದ ಆಚೆ ಇರುವ ಪಾರಿಮಾರ್ಥಿಕತೆಯನ್ನು ಮಾತ್ರ ನೋಡುತ್ತಿರಬೇಕು ಎಂಬ ಅರ್ಥದಲ್ಲಿ ಜನ ಸಾಮಾನ್ಯರು ಯೋಚಿಸುತ್ತಾರೆ. ಆದರೆ ಎಷ್ಟೋ ಸಂದರ್ಭದಲ್ಲಿ ಈ ಪೀಠವನ್ನು ರಾಜಗುರುಪೀಠ ಎನ್ನುತ್ತಾ ಬಂದಿರುವುದನ್ನು ಗಮನಿಸಿದ್ದೇವೆ. ಎಲ್ಲ ಪರಂಪರೆಗೂ ಈ ರೀತಿಯ ಉಪಾಧಿ ಇಲ್ಲ. ಹಾಗೆ ಇರುವುದಕ್ಕೆ ಸಾಧ್ಯವೂ ಇಲ್ಲ. ಆದರೆ ಈ ಶ್ರೀರಾಮಚಂದ್ರಾಪುರಮಠದ ಪೀಠಕ್ಕೆ ಹೀಗೊಂದು ವಿಶೇಷವಾದ ಪರಾಕು ಇರುವುದಕ್ಕೆ ಏನಿರಬಹದು ಕಾರಣ ಎಂದು ನೋಡುವಾಗ, ಇದು ರಾಜಗುರು ಪೀಠ ಅಷ್ಟೇ ಅಲ್ಲ, ಶ್ರೀಮದ್ರಾಜಾಧಿರಾಜಗುರು, ಎಂದರೆ ರಾಜರಿಗೆ ರಾಜನಾದ ಮಹಾರಾಜ ಚಕ್ರವರ್ತಿ, ಅಂತಹ ರಾಜಾಧಿರಾಜನಿಗೇ ರಾಜಗುರುಗಳು ಎಂದು ಇದರ ಅರ್ಥ.

ನಾವು ರಾಮಾಯಣದಲ್ಲಿ ಶ್ರೀರಾಮಚಂದ್ರನ ಆಡಳಿತ ವ್ಯವಸ್ಥೆಯನ್ನು ಗಮನಿಸಿದ್ದೇವೆ. ಅದರಲ್ಲಿ ಮಹಾರಾಜನ ಮೇಲೆ ಧರ್ಮಸಂಸತ್ತು ಕಾರ್ಯ ನಿರ್ವಹಿಸುತ್ತದೆ. ಮಹರ್ಷಿಗಳಿಂದ ಕೂಡಿದಂತಹ ಧರ್ಮಸಂಸತ್ತು ಅದು. ಮಹರ್ಷಿ ವಸಿಷ್ಠರು, ವಾಮದೇವರು, ಜಾಬಾಲಿಗಳು ಹೀಗೆ ಮಹರ್ಷಿಗಳ ಒಂದು ಮಾರ್ಗದರ್ಶನ ರಾಜಸತ್ತೆಗೆ ಸದಾ ಸಿಗುತ್ತಿರುತ್ತದೆ. ಅದು ಮೇಲಿನಿಂದ ಮಾರ್ಗದರ್ಶನ. ಇನ್ನು ರಾಜನಿಗೆ ಅವನ ಅನಂತರದಲ್ಲಿ ಮಂತ್ರಿಗಳಿಂದ ಸಲಹೆ ಸೂಚನೆಗಳು ದೊರೆಯುತ್ತಿರುತ್ತವೆ. ಹಾಗಾಗಿ ರಾಜನು ಮಂತ್ರಿಮಹೋದಯರುಗಳಿಂದ ಮಾಹಿತಿಗಳನ್ನು, ಸಲಹೆ ಸೂಚನೆಗಳನ್ನು ಪಡೆಯುತ್ತಲೂ; ಮಹರ್ಷಿಗಳಿಂದ ಮಾರ್ಗದರ್ಶನವನ್ನು ಪಡೆಯುತ್ತಲೂ ಒಂದು ಧರ್ಮವತ್ತರವಾದ ಆಳ್ವಿಕೆಯನ್ನು ನಡೆಸುತ್ತಿರುತ್ತಾನೆ. ಇದು ನಾವು ಕಾಣುವ ಒಂದು ಸತ್ಯ. ಇದೇ ಕ್ರಮವನ್ನು ನಾವು ವಿಜಯನಗರದ ಅರಸರ ಕಾಲದಲ್ಲಿಯೂ ಕಾಣುತ್ತೇವೆ. ಕೃಷ್ಣದೇವರಾಯರಾಗಿರಲಿ. ಅವರ ಪೂರ್ವಮಹಾರಾಜರಾಗಿರಲಿ ಇದೇ ರೀತಿಯ ಆಡಳಿತ ವ್ಯವಸ್ಥೆಯನ್ನು ನಡೆಸಿಕೊಂಡು ಬಂದಿರುವುದನ್ನು ನಾವು ಕಾಣಬಹುದಾಗಿದೆ.

ಪ್ರಕೃತ ರಾಮಚಂದ್ರಾಪುರಮಠದ ರಾಜಗುರುಪೀಠಕ್ಕೂ ಮಹಾರಾಜರಿಗೂ ಲಾಗಾಯ್ತಿನಿಂದಲೂ ತುಂಬ ನಿಕಟವಾದ ಸಂಪರ್ಕ. ಮಹಾರಾಜರು ಶ್ರದ್ಧಾಭಕ್ತಿಗಳಿಂದ ಶ್ರೀಸಂಸ್ಥಾನವನ್ನು ಸೇವಿಸುತ್ತಿದ್ದರು. ಅಂತಹ ಒಂದು ಸಂದರ್ಭ ರಾಮಚಂದ್ರಾಪುರಮಠದ ಪ್ರಥಮ ಶ್ರೀಮದ್ಜಗದ್ಗುರುಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀ ಮಹಾಸ್ವಾಮಿಗಳವರು ಹಂಪಿಗೆ ಹೋದಾಗ ಅಲ್ಲಿ ವಿರೂಪಾಕ್ಷರ ಸನ್ನಿಧಿಯಲ್ಲಿ ಮಹಾರಾಜರು ಶ್ರೀಸಂಸ್ಥಾನವನ್ನು ಸಮ್ಮಾನಿಸುತ್ತಾರೆ. ಹಾಗೂ ತನ್ನ ರಾಜ್ಯದ ಸಂಕಷ್ಟವನ್ನು ನಿವೇದಿಸಿಕೊಳ್ಳುತ್ತಾರೆ. ಹಾಗೆ ನಿವೇದಿಸಿಕೊಳ್ಳುವಾಗ ಇಡೀ ರಾಜ್ಯವನ್ನು ನೀವೇ ಸಂರಕ್ಷಿಸಬೇಕು, ಎಂದು ಅವರ ಪದತಲದಲ್ಲಿ ತನ್ನ ರಾಜ್ಯವನ್ನು ಅರ್ಪಿಸುತ್ತಾನೆ ಎಂಬ ಮಾತಿದೆ. ಅದನ್ನು ಸ್ವೀಕರಿಸಿ ಪುನಃ ಮಹಾರಾಜರಿಗೇ ಹಿಂತಿರುಗಿಸುತ್ತಾ ರಾಜ್ಯಭಾರ ಮಾಡುವವರು ನೀವೇ. ನಿಮಗೆ ಕುಂದು ಕೊರತೆಗಳಾಗದಂತೆ ನಾವು ನೋಡಿಕೊಳ್ಳುತ್ತೇವೆ ಎಂಬ ಆಶೀರ್ವಾದವನ್ನು ಮಾಡಿ, ಇಡೀ ಸಾಮ್ರಾಜ್ಯವನ್ನು ರಕ್ಷಿಸಿದ್ದನ್ನು ನಾವು ಕೇಳುತ್ತೇವೆ. ಯಾವ ರೀತಿಯಲ್ಲಿ ಈ ಗುರುಪೀಠವನ್ನು ವಿಜಯನಗರದ ಅರಸರು ಗೌರವಿಸುತ್ತಿದ್ದರು, ಪೀಠಕ್ಕೆ ನಡೆದುಕೊಳ್ಳುತ್ತಿದ್ದರು ಮತ್ತು ವಿಜಯನಗರದ ಅರಸರನ್ನು ರಾಮಚಂದ್ರಾಪುರಮಠದ ಶ್ರೀಸಂಸ್ಥಾನ ಆದರಿಸುತ್ತಿತ್ತು, ಆಶೀರ್ವದಿಸುತ್ತಿತ್ತು ಎನ್ನುವುದಕ್ಕೆ ತಾಮ್ರಶಾಸನವೇ ಇದೆ. ಅದು ಹಲವು ಕಡೆಗಳಲ್ಲಿ ಪ್ರಕಟವೂ ಆಗಿದೆ. ಅದನ್ನು ನಾವು ಗಮನಿಸುವಾಗ ಎಂತಹ ಅತ್ಯುನ್ನತವಾದ ಕ್ರಮದಲ್ಲಿ ಇದು ಇತ್ತು ಎನ್ನುವುದನ್ನು ನಾವು ತಿಳಿದುಕೊಳ್ಳಬಹುದಾಗಿದೆ.

1464ರಲ್ಲಿ ರಾಮಚಂದ್ರಾಪುರಮಠದ ಅಂದಿನ ಶ್ರೀಸಂಸ್ಥಾನ ಇಮ್ಮಡಿ ದೇವರಾಯನ ಆಸ್ಥಾನಕ್ಕೆ ಹೋಗಿದ್ದು, ಅವರು ನೀಡಿದ್ದ ಶಾಸನವನ್ನು ಸ್ವೀಕರಿಸಿ ಅದಕ್ಕೆ ಉತ್ತರಿಸಿದ್ದನ್ನು ನಾವು ಗಮನಿಸಬಹುದು. ಏನೆಂದು ಬರೆದಿದ್ದರು? ಪ್ರಥಮ ರಾಘವೇಶ್ವರಭಾರತೀ ಶ್ರೀಗಳವರು ಯಾವ ರೀತಿಯಲ್ಲಿ ಇಮ್ಮಡಿ ದೇವರಾಯನಿಗೆ ಆಶೀರ್ವಾದವನ್ನು ಮಾಡಿದ್ದರು. ಅವರು ಯಾವ ರೀತಿಯಲ್ಲಿ ಗುರುಗಳನ್ನು ಆದರಿಸಿದ್ದರು ಎನ್ನುವುದನ್ನು ಆ ಶಾಸನವನ್ನು ನೋಡುವುದರ ಮುಖೇನ ನಾವು ತಿಳಿಯಬಹುದಾಗಿದೆ.

ಆ ಶಾಸನ ಹೀಗಿದೆ-
ಶ್ರೀ ಗಣಾಧಿಪತಯೇ ನಮಃ|
ನಮಸ್ತುಂಗ ಶಿರಶ್ಚುಂಬಿ ಚಂದ್ರಚಾಮರ ಚಾರವೇ |
ತ್ರೈಲೋಕ್ಯ ನಗರಾರಂಭ ಮೂಲಸ್ತಂಭಾಯ ಶಂಭವೇ |
ಶ್ರೀಮನ್ಮಹಾರಾಜಾಧಿರಾಜ ವೀರ ಪರಮೇಶ್ವರ ವೀರಪ್ರತಾಪ ಯಿಂಮಡಿ ದೇವರಾಯ ಮಹಾರಾಯರು |

ವಿಜಯ ನಾನಾದೇಶದ ರಾಜಧಾನಿಯಲ್ಲೂ ಇದ್ದು ಸಮಸ್ತ ದೇಶಂಗಳಂನು ಸ್ವಧರ್ಮದಲ್ಲು ಪ್ರತಿಪಾಲಿಸುತ್ತಂ ಇದ್ದಂದಿನ ಶಕವರ್ಷ ೧೩೮೬ ನೇ ಸ್ವಭಾನು ಸಂವತ್ಸರದ ಭಾದ್ರಪದ ಕೃಷ್ಣ ೨ ಯು ಗುರುವಾರ ರೇವತಿ ಜನ್ಮ ನಕ್ಷತ್ರ ಕಂನ್ಯಾ ಸಂಕ್ರಾಂತಿ ಸಂಗಮ ಕಾಲ ಹೇಮಾದ್ರಿ ತಟಿ ಶ್ರೀ ತುಂಗಭದ್ರಾ ತೀರದಲು ಶ್ರೀಮತ್ಪರಮಹಂಸ ಪರಿವ್ರಾಜಕಾಚಾರ್ಯವರ್ಯ ಶ್ರೀಮತ್ ಭಗವತ್ಪಾದ ಪೂಜ್ಯ ಶಿಷ್ಯ ಶ್ರೀಮಛಂಕರಾಚಾರ್ಯ ಶಿಷ್ಯ ಸುರೇಶ್ವರಾಚಾರ್ಯ ಶಿಷ್ಯ ವಿದ್ಯಾನಂದಾಚಾರ್ಯ ಪರಂಪರಾಪುರಃಸರ ಭೋಗವರ್ಧನವಾಲ ಪುರುಷಾಧಿಷ್ಟಿತರಹ ಶತಶೃಂಗ ಪುರಾಧಿವಾಸ ಶ್ರೀ ಚಿದ್ಭೋಧ ಭಾರತೀ ಶ್ರೀಪಾದಂಗಳ ಗುರು ಕರಕಮಲ ಸಂಜಾತ ಶ್ರೀ ಮದ್ರಾಮಚಂದ್ರಪಾದ ಪದ್ಮಾರ್ಚಕ ಶ್ರೀ ಗೋಕರ್ಣದ ರಘೂತ್ತಮ ಮಠದ ರಾಘವೇಶ್ವರ ಭಾರತೀ ಶ್ರೀಪಾದಂಗಳೀಗೆ ಯಿಂಮಡಿ ದೇವರಾಯ ಮಹಾರಾಯರು ಪೊಡವಟ್ಟು ಕೊಟ್ಟ ವೈಭವ ತಾಂಮ್ರಶಾಸನ ಕ್ರಮವೆಂತೆಂದರೆ ಪೂರ್ವದಲ್ಲು ವಿದ್ಯಾರಣ್ಯ ಶ್ರೀಪಾಂಗಳು ಗೋಕರ್ಣದ ಶ್ರೀಮಹಾಬಲೇಶ್ವರ ಸಂನಿಧಿಯಲು ನಿಂಮ ಪೂರ್ವಾಭಿಷ್ಟಾನರಹ ಚಿದ್ಭೋಧ ಭಾರತೀ ಶ್ರೀಪಾದಂಗಳೀಗೆ ಸಿಂಹಾಸನ ಕಿರೀಟ ಆಂದೋಳಿಕ ಸ್ವೇತಛತ್ರ ಉಭಯ ಚಾಮರಮಕ(ರ) ತೋರ್ಣವ್ಯಜನ ಹಗಲು ಜ್ಯೋತಿಪೀತಪಿಶಂಗವರ್ಣ ಪತಾಕಾದಿ ಚಿಹ್ನೆ ತಾಳಶಂಖಚಕ್ರಾದಿ ವಾದ್ಯ ಮದಲಹದಂನು ಕೊಟ್ಟು ಪ್ರಕಾಶಿಶಿಬಹದರಿಂದ ಈಗ ಶ್ರೀ ವಿರೂಪಾಕ್ಷೇಶ್ವರ ದೇವರ ಸಂನಿಧಿಯಲು ಶ್ರೀ ನಿಮಗೆ ಪಂಚದೀವಟಿಕದ್ವಯ ಆಂದೋಳಿಕೋಪರಿಪಂಚಕಲಶ ಮದಲಹದಂನು ಅಧಿಕರಿಶಿ ಕೊಟ್ಟೆವಾಗಿ ನೀವು ನಿಂಮ ಶಿಷ್ಯ ಪಾಪಂಪರ್ಯವಾಗಿ ಪಂಚದೀವಟಿಕದ್ವಯ ಆಂದೋಳಿಕೋ ಪರಿಪಂಚಕಲಶ ಮದಲಹದರಿಂದ ಯುಕ್ತರಾಗಿ ನಾಲ್ಕ ದೇಶವಂನ್ನು ಸಂಚರಿಸಿ ಪ್ರಕಾಶಿಶಿ ಆಚಂದ್ರಾರ್ಕ ಸ್ಥಾಯಿಗಳಾಗಿ ಬಹರಿಯಂದು ಕೊಟ್ಟ ವೈಭವ ತಾಮ್ರಶಾಸನ
|| ಲೇಖಕತ್ವಷ್ಟಾ ವೀರಂಣಾಚಾರೀ ||
ಶುಭಮಸ್ತು || ಶ್ರೀ ವಿರೂಪಾಕ್ಷ ||
(ಕನ್ನಡಕ್ಷದಲ್ಲಿ)

ಎಂದು ಸ್ವತಃ ಮಹಾರಾಜರೇ ಕೊಟ್ಟದ್ದನ್ನು ಸ್ವೀಕರಿಸಿ ಶ್ರೀಸಂಸ್ಥಾನ ಅವರನ್ನು ಆಶೀರ್ವದಿಸಿದ್ದರು ಎನ್ನವುದರಿಂದ ತಿಳಿಯುತ್ತದೆ ಶ್ರೀರಾಮಚಂದ್ರಾಪುರಮಠದ ಶ್ರೀಸಂಸ್ಥಾನ ಶ್ರೀಪೀಠ ಎಂದರೆ ರಾಜಾಧಿರಾಜಗುರು ಪೀಠ.

ಎಲ್ಲ ರಾಜರಿಗೆ ಹೇಗೆ ಮಹಾರಾಜರು ದೊಡ್ಡವರೋ ಅಂತಹ ಹಲವು ಮಹಾರಾಜರಿಗೆ ರಾಜಾಧಿರಾಜರಿಗೇ ಅವರ ಮಹಾರಾಜರು ದೊಡ್ಡವರು. ಅವರೆಲ್ಲರಿಗೂ ಕೂಡ ಶ್ರೀರಾಮಚಂದ್ರಾಪುರಮಠದ ಶ್ರೀಸಂಸ್ಥಾನ ಮಾರ್ಗದರ್ಶಿಗಳಾಗಿ, ಗುರುಗಳಾಗಿ ಅವರನ್ನು ಅನುಗ್ರಹಿಸುತ್ತಿದ್ದರು ಎನ್ನುವುದನ್ನು ನೆನಪಿಸಿಕೊಂಡು ಈಗಲೂ ಅದನ್ನೇ ಗಮನಿಸುತ್ತಾ ಆ ಬಿರುದನ್ನು ಆ ಪರಾಕೆಯನ್ನು ಕಾಯಾ-ವಾಚಾ-ಮನಸಾ ಅನುಸಂಧಾನ ಮಾಡಿ ಶ್ರೀಸಂಸ್ಥಾನದವರು ಓಂಕಾರಪೀಠವನ್ನು ಅಧಿರೋಹಿಸುವಾಗ ಈ ಪರಾಕಿನಿಂದ ಬಹಿರ್ಮುಖರಾಗಿ ನಮ್ಮನ್ನು ಹರಸಿ ಎಂದು ಅವರನ್ನು ಸಂಪ್ರಾರ್ಥಿಸುವುದು.

Author Details


Srimukha

Leave a Reply

Your email address will not be published. Required fields are marked *