ಯೋಧರ ಬಲಿದಾನಕ್ಕೆ‌ ಯೋಗ್ಯರೇ ನಾವು?

ಅಂಕಣ ಚಿತ್ತ~ಭಿತ್ತಿ : ಡಾ. ಸುವರ್ಣಿನೀ ಕೊಣಲೆ

 

ಜಗತ್ತಿನ ಅತಿ ಪುರಾತನ ಮತ್ತು ಸನಾತನ ಸಂಸ್ಕೃತಿ ನಮ್ಮದು. ನಮ್ಮ ಇತಿಹಾಸ, ನಮ್ಮ ಕಲೆ, ನಮ್ಮ ಸಾಹಿತ್ಯ, ನಮ್ಮ ಭಾಷೆ ಎಲ್ಲವೂ ಜಗತ್ತಿಗೆ ಎಂದಿಗೂ ಅಚ್ಚರಿಯೇ. ಸಾವಿರ ವರ್ಷಕ್ಕೂ ಹೆಚ್ಚು ಕಾಲದಿಂದ ಆಕ್ರಮಣಕ್ಕೊಳಗಾಗಿಯೂ ತನ್ನತನವನ್ನು ಇನ್ನೂ ಉಳಿಸಿಕೊಂಡಿರುವ ಯಾವುದಾದರೂ ಬೇರೆ ದೇಶ ಇದೆಯೇ ಜಗತ್ತಿನಲ್ಲಿ? ಅಲೆಕ್ಸಾಂಡರನಿಂದ ಆರಂಭವಾಗಿ ಮೊನ್ನೆ ಪುಲ್ವಾಮಾದಲ್ಲಿ ನಡೆದ ಆಕ್ರಮಣದ ವರೆಗೆ, ಸಾವಿರವೇನು ಲಕ್ಷಕ್ಕೂ ಅಧಿಕ ಸಣ್ಣ-ದೊಡ್ಡ, ವಿವಿಧ ರೂಪದ ದಾಳಿಗಳು ನಡೆದಿವೆ ನಮ್ಮ ಮೇಲೆ. ಅದೆಲ್ಲದರ ಹೊರತಾಗಿಯೂ ಇಂದು ನಾವು ತಲೆ ಎತ್ತಿ ನಿಂತಿದ್ದೇವೆ.
ಭಾರತ ಎಂದೊಡನೆ ಜಗತ್ತು ಒಮ್ಮೆ ತಿರುಗಿ ನೋಡದಿದ್ದರೆ ಕೇಳಿ. ಅದಕ್ಕೆ ಈಗಿನ ನಮ್ಮ ಸಾಧನೆಗಳು ಕಾರಣವಲ್ಲ. ಲೆಕ್ಕವೇ ಇಲ್ಲದಷ್ಟು ಹಿಂದಿನ ಕಾಲದಿಂದ ಬಂದ ಬಳುವಳಿ ಅದು.

ನಮಗೆ ಹೆಮ್ಮೆ ಎನಿಸುವ ಇನ್ನೊಂದು ಮುಖ್ಯ ಅಂಶವಿದೆ ನಮ್ಮ ದೇಶದಲ್ಲಿ. ಭೂಸೇನೆ, ವಾಯುಸೇನೆ ಮತ್ತು ನೌಕಾಪಡೆಗಳನ್ನೊಳಗೊಂಡ; ಅದಲ್ಲದೇ ಕೋಸ್ಟ್ ಗಾರ್ಡ್, ಅಸ್ಸಾಮ್ ರೈಫಲ್ಸ್, ಸ್ಪೆಷಲ್ ಫ್ರೊಂಟಿಯೆರ್ ಫೋರ್ಸ್, ಸ್ತ್ರಾಟೆಜಿಕ್ ಫೋರ್ಸಸ್ ಕಮಾಂಡ್, ಅಂಡಮಾನ್ ನಿಕೋಬಾರ್ ಕಮಾಂಡ್, ಇಂಟೆಗ್ರೇಟೆಡ್ ಡಿಫೆನ್ಸ್ ಸ್ಟಾಫ್ ಎಂಬ ವಿವಿಧ ಅಂಗಗಳಿಂದ ಕೂಡಿದ ಭಾರತೀಯ ಸಶಸ್ತ್ರ ಪಡೆ. ಜಗತ್ತಿನಲ್ಲಿ ಎರಡನೆಯ ಸ್ಥಾನ ನಮ್ಮ ಭೂಸೇನೆಗೆ, ಸಂಖ್ಯೆಯಲ್ಲಿ. ಆದರೆ ನಿಮಗೆ ಗೊತ್ತಿದೆಯೇ, ಜನ ಸ್ವಇಚ್ಛೆಯಿಂದ ಸೇನೆಗೆ ಸೇರುವ ಅತಿದೊಡ್ಡ ಸೇನೆ ನಮ್ಮದು!

ಹೆಮ್ಮೆ ಎನಿಸಲು ಸಾಲದೇ ಈ ಕಾರಣ? ಕಳೆದ ಎಪ್ಪತ್ತು ವರ್ಷಗಳ ಇತಿಹಾಸದ ಒಂದೊಂದು ಪುಟವೂ ನಮ್ಮ ಯೋಧರ ಸಾಧನೆಗಳನ್ನು ಹೇಳುತ್ತವೆ. ಇದನ್ನೆಲ್ಲ ನೋಡಿಯೂ ಅವರಿಗೆ ನಮಿಸದೇ ಇರಲು ಸಾಧ್ಯವೇ ಭಾರತೀಯನಿಗೆ?

ನಮ್ಮ ಬದುಕಿನ ಪರಿಧಿ ತುಂಬ ಚಿಕ್ಕದು. ಅದನ್ನು ಮೀರಿ ಒಂದಡಿ ಇಡದ ನಾವು ದೇಶಕ್ಕಾಗಿ ಎಲ್ಲವನ್ನೂ, ಎಲ್ಲರನ್ನೂ ಬಿಟ್ಟು ಮುಂದಡಿ ಇಡುವವನ ಬಗ್ಗೆ ಮಾತನಾಡುವುದು ಹಾಸ್ಯಾಸ್ಪದವಲ್ಲವೇ? ನಮ್ಮ ಕುಟುಂಬ, ಸಂಬಂಧಿಕರು ಮತ್ತು ಸ್ನೇಹಿತರನ್ನು ಬಿಟ್ಟು ಇನ್ನೊಬ್ಬರಿಗೆ ನಾವು ಸಹಾಯ ಮಾಡುವುದೂ ಅಪರೂಪವೇ. ನಮ್ಮದೊಂದು ಸ್ವಂತ ಮನೆ ಬೇಕು ಎಂದು ದುಡಿಯುತ್ತೇವೆ ನಾವು. ಇರುವ ಮನೆಯ ಬಿಟ್ಟು ಅಲ್ಲೆಲ್ಲೋ ಬದುಕುತ್ತಾನೆ ಯೋಧ. ಸಿಗುವ ಸಂಬಳಕ್ಕಾಗಿ ಒಬ್ಬ, ಯಾವುದೇ ಕ್ಷಣದಲ್ಲಿ ಬೇಕಾದರೂ ಮೈಮೇಲೆ ಬಂದೆರಗುವ ಸಾವಿನ ಪಕ್ಕದಲ್ಲಿ ಕೆಲಸ ಮಾಡಬಲ್ಲನೇ? ದೇಶಪ್ರೇಮದ ಜ್ಯೋತಿ ಮನಸ್ಸಿನಲ್ಲಿ ಹೊತ್ತಿಸಿಕೊಂಡಿದ್ದವನಿಗೆ ಮಾತ್ರ ಅದು ಸಾಧ್ಯ. ಒಳಗೆ ಕತ್ತಲಿದ್ದವರು ಅದನ್ನೆಂದೂ ಅರಿಯಲಾರರು.

ಕಾಶ್ಮೀರದಲ್ಲೋ, ಪೂರ್ವೋತ್ತರದಲ್ಲೋ ಪಾಕಿಸ್ಥಾನ, ಚೀನಾ, ಬಾಂಗ್ಲಾ ಅತಿಕ್ರಮಿಸಿದಾಗ; ಮುಂಬೈ, ಉರಿ, ಪಠಾಣಕೋಟ್, ಪುಲ್ವಾಮಾಗಳಲ್ಲಿ ನಡೆದಂತಹ ಆಕ್ರಮಣಗಳಾದಾಗ ನಮಗೆ ನೋವು, ಬೇಸರ, ಸಿಟ್ಟು ಎಲ್ಲವೂ ಉಂಟಾಗುತ್ತದೆ. ಭಾರತೀಯನಿಗೆ ಆಗುವಂಥದ್ದೇ. ಆಗಬೇಕಾದ್ದೇ.
ಭಾರತೀಯನಿಗೇನು, ಯಾವುದೇ ಒಬ್ಬ ಮನುಷ್ಯನಿಗೆ ದುಃಖವಾಗುವಂತಹದ್ದದು. ಎದೆಯುಬ್ಬಿಸಿ ಸೇನೆ ಸೇರಿದ ಯೋಧನೊಬ್ಬನ ದೇಹ ಮಾಂಸದ ಮುದ್ದೆಯಾಗಿ ಮನೆಗೆ ಮರಳುವುದನ್ನು ನೋಡಿ ಕರಗದ ಹೃದಯ, ಅಳದ ಮನಸ್ಸು ಮನುಷ್ಯನದಾಗಿರಲು ಹೇಗೆ ಸಾಧ್ಯ?

ಪುಲ್ವಾಮಾ ದಾಳಿಯ ಅನಂತರದಲ್ಲಿ ಹೀಗೆ ನಾವೆಲ್ಲ ನೊಂದುಕೊಳ್ಳುತ್ತಿರುವಾಗ ಹೊಸತೊಂದು ಅಲೆ ಎದ್ದಿದೆ ನಮ್ಮ ದೇಶದಲ್ಲಿ. ಮೊದಲು ಕಂಡಿಲ್ಲದಂತದ್ದು. ಅದು ಕಳೆದುಕೊಂಡದ್ದರ ನೋವನ್ನು ಕಡಿಮೆ ಗೊಳಿಸುವುದಿಲ್ಲವಾದರೂ ದೇಶದೊಳಗೆ ಜಾಗರಣಗೊಳ್ಳುತ್ತಿರುವ ರಾಷ್ಟ್ರೀಯತೆಯ ಭಾವದ ಬಗ್ಗೆ ಸಮಾಧಾನ ಎನಿಸುತ್ತಿದೆ. ಸಾಮಾಜಿಕ ಜಾಲತಾಣಗಳಲ್ಲಿ ಪುಲ್ವಾಮಾದ ಘಟನೆಯ ಬಗ್ಗೆ ಸಂತಸ ವ್ಯಕ್ತಪಡಿಸಿದ, ಸೇನೆಯ ಬಗ್ಗೆ, ದೇಶದ ಬಗ್ಗೆ ಅವಹೇಳನಕಾರಿ ಮಾತುಗಳನ್ನಾಡಿದ ಹಲವು ಜನರ ಮೇಲೆ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ. ಹಲವರನ್ನು ಉದ್ಯೋಗದಿಂದ, ಹಲವರನ್ನು ವಿದ್ಯಾಸಂಸ್ಥೆ – ವಿಶ್ವವಿದ್ಯಾಲಯಗಳಿಂದ ಹೊರಹಾಕಲಾಗಿದೆ. ಅಷ್ಟೇ ಅಲ್ಲದೆ ಅವರ ಮೇಲೆ ದೇಶದ್ರೋಹಿ ಎಂದು ಪ್ರಕರಣ ದಾಖಲಿಸಿ ಬಂಧಿಸಲಾಗಿದೆ. ಇದಲ್ಲವೇ ಉತ್ತಮ ಬೆಳವಣಿಗೆ?

ಸಹಿಷ್ಣುತೆ ನಮ್ಮ ರಕ್ತದಲ್ಲಿದೆ. ಆದರೆ ಅದನ್ನೇ ನಮ್ಮ ದೌರ್ಬಲ್ಯ ಎಂದುಕೊಂಡವರಿಗೆ ಉತ್ತರ ಕೊಡಲೇಬೇಕಲ್ಲ? ಜನರನ್ನು ಪ್ರೀತಿಯಿಂದ ಗಲ್ಲಬೇಕು ಎಂಬುದನ್ನೇ ನಮ್ಮ ದೇಶ ನಮಗೆ ಯುಗಯುಗಗಳಿಂದ ಕಲಿಸಿದೆ. ಆದರೆ ಅಧರ್ಮವನ್ನು ಸಹಿಸಬಾರದೆಂಬುದನ್ನೂ ಇದೇ ನೆಲದಿಂದ ನಾವು ಕಲಿತಿದ್ದೇವೆ. ಭೀಮ ದುರ್ಯೋಧನನನ್ನು ಕಾರಣವಿಲ್ಲದೇ ಕೊಲ್ಲಲಿಲ್ಲ. ಆದರೆ ಕೌರವರು ಪಾಂಡವರ ವಿರುದ್ಧ ಹೂಡಿದ ಒಂದೊಂದು ಕುಟಿಲ ಯೋಜನೆಗಳೂ ದುರುದ್ದೇಶದಿಂದಲೇ ಅಧರ್ಮದಿಂದಲೇ ನಡೆದದ್ದಲ್ಲವೇ? ಅದಕ್ಕೆಲ್ಲ ಉತ್ತರ ಕೊಡುವುದು ಅಗತ್ಯವಿರಲಿಲ್ಲವೇ? ಪಾಂಡವರು ಯತ್ನಿಸಿದ ಸಂಧಾನಗಳನ್ನೆಲ್ಲ ಸುಯೋಧನ ತಿರಸ್ಕರಿಸಿದ ಮೇಲಷ್ಟೇ ನಡೆದದ್ದು ಯುದ್ಧ. ಅಷ್ಟು ದಿನ ಪಾಂಡವರು ಸಹಿಷ್ಣುಗಳಾಗಿದ್ದರು. ಆಗಲೂ ಯುದ್ಧಕ್ಕೆ ಮಾಡದಿದ್ದಿದ್ದರೆ? ಹೇಡಿಗಳೆನಿಸುತ್ತಿದ್ದರು; ಅಹಿಂಸಾವಾದಿಗಳಲ್ಲ.

ಭಾರತೀಯರಿಗೆ ಹೇಡಿಗಳ ಉದಾಹರಣೆಯನ್ನು ಕೊಟ್ಟುಹೋಗಬಹುದಿತ್ತೇ ಪಾಂಡವರು? ಅದೇ ರೀತಿ ಮುಂದಿನ ಪೀಳಿಗೆಗೆ ಇಂದಿನ ಸರ್ಕಾರವೋ, ಸಮಾಜವೋ ಹೇಡಿಗಳಂತೆ ಕಾಣುವುದನ್ನು ನಾವು ಸಹಿಸಬಹುದೇ? ನಮ್ಮ ಮಕ್ಕಳಿಗೆ, ಅವರ ಮಕ್ಕಳಿಗೆ, ಈ ನೆಲದಲ್ಲಿ ಮುಂದೆ ಹುಟ್ಟುವ ಪ್ರತಿಯೊಬ್ಬನಿಗೂ ನಾವು ಧರ್ಮ, ಶೌರ್ಯ, ಧೈರ್ಯ, ರಾಷ್ಟ್ರಭಕ್ತಿ, ದೇಶಪ್ರೇಮಗಳ ಉದಾಹರಣೆಯನ್ನು ಕೊಟ್ಟು ಹೋಗಬೇಕಲ್ಲವೇ? ಶಿವಾಜಿ, ಪೃಥ್ವಿರಾಜ್ ಚೌಹಾಣ್, ಝಾನ್ಸೀರಾಣಿ ಲಕ್ಷ್ಮೀಬಾಯಿ, ಕಿತ್ತೂರಿನ‌ ಚೆನ್ನಮ್ಮ, ಭಗತ್ ಸಿಂಗ್, ನೇತಾಜಿ ಹೀಗೆ ಹೆಸರು ಗೊತ್ತಿರುವ ಮತ್ತು ಗೊತ್ತಿಲ್ಲದ ಲಕ್ಷಾಂತರ ದೇಶಪ್ರೇಮಿಗಳ ನಮ್ಮ ಭೂಮಿಯಲ್ಲಿ, ಅವರು ಕಟ್ಟಿಕೊಟ್ಟ ದೇಶವನ್ನು ಉಳಿಸಿ ಮುಂದಿನ ತಲೆಮಾರಿಗೆ ತಲುಪಿಸಲಾಗದ ಹೇಡಿ ಸಮಾಜವೊಂದು ಇತ್ತೆನ್ನುವುದನ್ನು ಮುಂದಿನ ತಲೆಮಾರು ನೆನಪಿಸಿಕೊಳ್ಳಬೇಕೇ?

ನಾವು ಮಾಡಬೇಕಾದುದೇನೂ ಇಲ್ಲ. ನಾವು ಭಾರತೀಯರಾಗಿರಬೇಕು. ಅಷ್ಟೇ. ಕೇವಲ ಜನ್ಮದಿಂದಲ್ಲ ಅಥವಾ ಪಾಸ್‌ಪೋರ್ಟಿನಿಂದಲ್ಲ. ಬುದ್ಧಿಯಿಂದ, ಮನಸ್ಸಿನಿಂದ, ಆತ್ಮದಿಂದ. ಅಲ್ಲೆಲ್ಲೋ‌ ಮನುಷ್ಯರು ವಾಸಿಸಲು ಅಸಾಧ್ಯವಾದ ವಾತಾವರಣದಲ್ಲಿ, ಯಾವ ಕ್ಷಣದಲ್ಲಿ ಬೇಕಾದರೂ ಅಪ್ಪಿಕೊಳ್ಳಬಹುದಾದ ಸಾವಿನ‌ ನಿರೀಕ್ಷೆಯಲ್ಲಿ, ತನ್ನದು ಎಂಬ ಮನೆ-ಕುಟುಂಬಗಳಿಂದ ದೂರದಲ್ಲಿ, ನೆಮ್ಮದಿಯ ನಿದ್ದೆ ರುಚಿಕಟ್ಟಾದ ಊಟ ಸಿಗದಲ್ಲಿ, ನಮಗಾಗಿ ನಿಂತಿರುವ ಯೋಧರಿದ್ದಾರಲ್ಲ… ನಮಗಾಗಿ ಅವರು ಜೀವ ತೆರುವಂತಹ ಯೋಗ್ಯತೆ ನಮ್ಮದಾಗಬೇಕು. ಅವರಿಗೆ ನಾವೊಂದು ಕೃತಜ್ಞತೆ ಹೇಳಬಹುದಾದರೆ, ನಾವು ಭಾರತೀಯರಾಗುವುದರಿಂದ ಮತ್ತು ಮುಂದಿನ ಪೀಳಿಗೆಯ ಹೃದಯಗಳೊಳಗೆ ದೇಶಭಕ್ತಿಯ ದೇಶಪ್ರೇಮದ ದೀಪ ಹಚ್ಚುವುದರಿಂದ ಮಾತ್ರ ಸಾಧ್ಯ.

ಜೈ ಹಿಂದ್.

Author Details


Srimukha

Leave a Reply

Your email address will not be published. Required fields are marked *