ಅವರವರ ಭಾವಕ್ಕೆ

ಅಂಕಣ ಬಗೆಯೆಷ್ಟೋ ಮೊಗವಷ್ಟು : ಗಜಾನನ ಶರ್ಮಾ ಹುಕ್ಕಲು

ನೋಡುವುದಕ್ಕೂ ಕಾಣುವುದಕ್ಕೂ ಅಂತರವಿದೆ. ನೋಡುವುದೆಲ್ಲವನ್ನೂ ನಮಗೆ ಕಾಣುವುದಕ್ಕೆ ಸಾಧ್ಯವಾಗದು. ಹಾಗೆಯೇ ‘ನಾನು ಕಂಡಿದ್ದೇನೆ’ ಎಂದು ಹೇಳುವುದನ್ನೆಲ್ಲ ನಾವು ನೋಡಿದ್ದೇವೆ ಎಂದೂ ಹೇಳಲಾಗದು. ‘ನೋಡು’ವುದು ಕೇವಲ ಒಂದು ಕ್ರಿಯೆ ಮಾತ್ರವಾದರೆ ‘ಕಾಣು’ವುದು ಒಂದು ಭಾವ ಪ್ರಕ್ರಿಯೆ. ಕಣ್ಣುಮುಚ್ಚಿ ನಮಗೆ ಏನನ್ನೂ ನೋಡಲಾಗದು, ಆದರೆ ಬಹಳಷ್ಟನ್ನು ‘ಕಾಣ’ ಬಹುದು.

 

ಕಣ್ಣು ಬರೀ ಒಂದು ಕ್ಯಾಮರ ಮಾತ್ರ. ಅದು ತನ್ನ ದೃಷ್ಟಿಯ ವ್ಯಾಪ್ತಿಯಲ್ಲಿ ಬರುವ ದೃಶ್ಯದ ಮೇಲೆ ಬಿದ್ದ ಬೆಳಕು ಪ್ರತಿಫಲಿಸಿ, ಅಕ್ಷಿಪಟಲದ ಮೇಲೆ ಬಿದ್ದಾಗ ಅದನ್ನು ನರಗಳ ಮೂಲಕ ಮೆದುಳಿಗೆ ತಲುಪಿಸುತ್ತದೆ. ಮೆದುಳು ತನ್ನ ಅನುಭವದ ಮೂಲಕ ಆ ದೃಶ್ಯವನ್ನು ಗ್ರಹಿಸುತ್ತದೆ. ಈ ಗ್ರಹಿಕೆ ನೋಡುವ ವ್ಯಕ್ತಿಯ ಬುದ್ಧಿ ಮತ್ತು ಭಾವವನ್ನು ಅವಲಂಬಿಸಿರುತ್ತದೆ. ಹಾಗಾಗಿ ಒಂದು ದೃಶ್ಯವನ್ನು ಹಲವರು ಏಕಕಾಲದಲ್ಲಿ, ಏಕಕೋನದಲ್ಲಿ ನೋಡಿದರೂ ಅವರವರ ಗ್ರಹಿಕೆ ಬೇರೆಬೇರೆಯಾಗಿರಬಹುದು. ಯಾಕೆಂದರೆ ಕಣ್ಣಿಗೆ ಬಿದ್ದ ದೃಶ್ಯವನ್ನು ಪ್ರತಿಯೊಬ್ಬರ ಮನಸ್ಸೂ ತನ್ನದೇ ಬುದ್ಧಿ ಮತ್ತು ಭಾವದ ಮೂಲಕ ಗ್ರಹಿಸುತ್ತದೆ. ಮನಸ್ಸಿನ ಈ ಸ್ವಭಾವವನ್ನೇ ನಾವು ದೃಷ್ಟಿಕೋನ (perception) ಎನ್ನುತ್ತೇವೆ. ದೃಷ್ಟಿಕೋನ ಬದಲಾದಂತೆ ನೋಡಿದ ದೃಶ್ಯವನ್ನು ಗ್ರಹಿಸುವ ಬಗೆಯೂ ಬದಲಾಗುತ್ತದೆ. ಉದಾಹರಣೆಗೆ ಸುಂದರ ಉಡುಪು ತೊಟ್ಟು ವಿದೇಶ ಯಾತ್ರೆಗೆ ಹೊರಟ ಪ್ರಧಾನಮಂತ್ರಿ ಮೋದಿಯವರ ಚಿತ್ರ, ಒಬ್ಬನಿಗೆ ಇನ್ನೊಂದು ದೇಶವನ್ನು ಭಾರತೀಯ ಪ್ರಭಾವಕ್ಕೆ ಒಳಪಡಿಸಿ ಅದನ್ನು ರಾಜತಾಂತ್ರಿಕವಾಗಿ ಗೆಲ್ಲಲು ಹೊರಟ ಅಪ್ರತಿಮ ನಾಯಕನಂತೆ ಕಂಡರೆ ಇನ್ನೊಬ್ಬನಿಗೆ ಬಡತನದ ನೆರಳಲ್ಲಿ ನರಳುವ ದೇಶದ ಕೋಟ್ಯಂತರ ಪ್ರಜೆಗಳ ಕಷ್ಟವನ್ನು ಲೆಕ್ಕಿಸದೆ ತನ್ನ ವರ್ಚಸ್ಸನ್ನು ವೃದ್ಧಿಸಿಕೊಳ್ಳುವ ಕಾರಣದಿಂದ ದುಬಾರಿ ಉಡುಪು ತೊಟ್ಟು ವಿದೇಶಯಾತ್ರೆಗೆ ಹೊರಟ ಕೇವಲ ಒಬ್ಬ ರಾಜಕಾರಣಿಯಾಗಿ ತೋರಬಹುದು. ಇಂತಹ ಗ್ರಹಿಕೆ ಅವರ ಕಣ್ಣು ಆ ‘ದೃಶ್ಯ’ವನ್ನು ನೋಡುವ ಕೋನಕ್ಕಿಂತ ಹೆಚ್ಚಾಗಿ ಅವರ ಮನಸ್ಸು ಅದನ್ನು ಗ್ರಹಿಸುವ ಭಾವವನ್ನು ಅವಲಂಬಿಸಿರುತ್ತದೆ.

 

ಹಾಗಾಗಿಯೇ ನಿಜಗುಣ ಶಿವಯೋಗಿಗಳು ಹೇಳಿರುವುದು,
ಅವರವರ ಭಾವಕ್ಕೆ ಅವರವರ ಭಕುತಿಗೆ
ಅವರವರ ತೆರನಾಗಿ ಇರುತಿಹನು ಶಿವಯೋಗಿ ಹರಿಯ ಭಕ್ತರಿಗೆ ಹರಿ, ಹರನ ಭಕ್ತರಿಗೆ ಹರ ನರರೇನು ಭಾವಿಪರೋ ಅದರಂತೆ ತೋರುವನು

 

ಇಲ್ಲಿ ಶಿವಯೋಗಿ ಒಂದು ಪ್ರತಿಮೆ ಮಾತ್ರ. ಅದನ್ನು ನಾವು ವಸ್ತುಸ್ಥಿತಿಯೆಂದೋ, ದೇವರೆಂದೋ, ಸತ್ಯವೆಂದೋ, ಭಾವಿಸಲೂಬಹುದು. ಹಾಗಾಗಿ ಒಂದು ದೃಶ್ಯವನ್ನು ಪ್ರತ್ಯಕ್ಷ ನೋಡಿದಾಗ ಕೂಡ ಅದರ ಕುರಿತ ನಮ್ಮ ಗ್ರಹಿಕೆ ಅಂತಿಮ ಸತ್ಯವೆಂದು ಭಾವಿಸಲಾಗದು. ಆ ದೃಶ್ಯವನ್ನು ಗ್ರಹಿಸುವಾಗ ನಮಗಿದ್ದ ಮನಸ್ಥಿತಿ ಮತ್ತು ಪೂರ್ವಾಗ್ರಹಗಳು ನಮ್ಮ ಕಾಣ್ಕೆಯ ಮೇಲೆ ಖಂಡಿತ ಪ್ರಭಾವ ಬೀರಿರುತ್ತವೆ. ಈ ಸಂದರ್ಭದಲ್ಲಿ ಸಿನಿಮಾ ಹಾಡೊಂದು ನೆನಪಾಗುತ್ತದೆ,
‘ನೋಡಿದ್ದು ಸುಳ್ಳಾಗಬಹುದು
ಕೇಳಿದ್ದು ಸುಳ್ಳಾಗಬಹುದು
ನಿಧಾನಿಸಿ ಯೋಚಿಸಿದಾಗ ನಿಜವು ತಿಳಿವುದು’

 

ನಮ್ಮ ಪೂರ್ವಾಗ್ರಹದ ಕಾರಣದಿಂದ ನಮ್ಮೆದುರಿಗೆ ಪ್ರತ್ಯಕ್ಷ ಕಂಡ ವ್ಯಕ್ತಿಯನ್ನೋ ದೃಶ್ಯವನ್ನೋ ನಾವು ಸಹಜವಾಗಿ ಅರ್ಥ ಮಾಡಿಕೊಳ್ಳುವಲ್ಲೂ ಸೋಲುತ್ತೇವೆ ಎಂಬುದಕ್ಕೆ ಬಿಗ್ ಬಿ ಅಮಿತಾಬ್ ಬಚ್ಚನ್ನರು ಸ್ವತಃ ತಮ್ಮ ಬ್ಲಾಗಿನಲ್ಲಿ ಬರೆದುಕೊಂಡ ಈ ಘಟನೆ ಒಂದು ಒಳ್ಳೆಯ ನಿದರ್ಶನ.

 

ಅಮಿತಾಬ್ ತಮ್ಮ ಖ್ಯಾತಿಯ ಉತ್ತುಂಗದಲ್ಲಿದ್ದ ದಿನಗಳವು. ಅವರೊಮ್ಮೆ ಮುಂಬಯಿಯಿಂದ ದೆಹಲಿಗೆ ಹೊರಟ ವಿಮಾನವೊಂದರಲ್ಲಿ ಕುಳಿತಿದ್ದರು. ಅವರ ಪಕ್ಕದಲ್ಲಿ ಸಾಧಾರಣ ಉಡುಪು ತೊಟ್ಟ ಮದ್ಯಮ ವರ್ಗದವರಂತೆ ಕಾಣುತ್ತಿದ್ದ ವೃದ್ದರೊಬ್ಬರು ತಮ್ಮ ಪಾಡಿಗೆ ತಾವು ಪತ್ರಿಕೆ ಓದುತ್ತ ಕುಳಿತಿದ್ದರು. ಸಾಮಾನ್ಯರೊಬ್ಬರು ಎಕ್ಸಿಕ್ಯೂಟಿವ್ ಕ್ಲಾಸಿನಲ್ಲಿ ಕುಳಿತಿದ್ದು ಅಮಿತಾಬರಿಗೆ ತುಸು ಅಚ್ಚರಿ ತಂದಿದ್ದು ಸುಳ್ಳಲ್ಲ.

 

ಅಮಿತಾಬ್ ಬಚ್ಚನ್ ವಿಮಾನವೇರಿದಾಗ ಗಗನಸಖಿಯಿಂದ ಮೊದಲ್ಗೊಂಡು ವಿಮಾನದಲ್ಲಿದ್ದ ಬಹುತೇಕ ಯಾತ್ರಿಕರು ಅವರ ಕೈ ಕುಲುಕಿ, ಅವರ ಆಗಮನಕ್ಕೆ ಸಂತಸ ವ್ಯಕ್ತಪಡಿಸಿ, ಮುಂದಿನ ಪಯಣಕ್ಕೆ ಶುಭ ಕೋರಿದ್ದರು. ಆಗಲೂ ಆ ವೃದ್ದರು ನಿರ್ಲಿಪ್ತರಾಗಿ ಕಿಟಕಿಯಾಚೆ ನೋಡುತ್ತ ಕುಳಿತಿದ್ದರು. ಈಗ ವಿಮಾನ ಹೊರಟಾಗಲೂ ಹಿಂದು ಮುಂದಿನವರೆಲ್ಲ ಅಮಿತಾಬರ ಜೊತೆ ತಾವಿದ್ದೇವೆ ಎಂಬ ಆನಂದೋತ್ಸಾಹದಲ್ಲಿ ತೇಲುತ್ತ ಅವರ ಗಮನ ಸೆಳೆಯಲು ತವಕಿಸುತ್ತಿದ್ದರೆ ಆ ವೃದ್ದರು ಇದ್ಯಾವುದನ್ನೂ ಗಮನಿಸದೆ ತಮ್ಮ ಓದಿನಲ್ಲಿ‌ ತಾವು ಮಗ್ನರಾಗಿದ್ದರು. ಗಗನ ಪರಿಚಾರಕಿ ಚಹಾ ಕೊಟ್ಟಾಗ ಅವರು ಪಕ್ಕದಲ್ಲಿದ್ದ ಬಿಗ್ ಬಿ ನೋಡಿ ಸೌಜನ್ಯದಿಂದ ಮುಗಳ್ನಕ್ಕರೇ ಹೊರತು ಅವರ ಕುರಿತು ವಿಶೇಷ ಆಸಕ್ತಿಯನ್ನೇನೂ ತೋರಲಿಲ್ಲ. ತನ್ನಂತಹ ಖ್ಯಾತನೊಬ್ಬ ಪಕ್ಕದಲ್ಲಿದ್ದರೂ ಇಷ್ಟೊಂದು ನಿರ್ಭಾವುಕನಾಗಿ ಕುಳಿತ ಆ ಮುಗ್ಧರನ್ನು ಮಾತನಾಡಿಸಲೇಬೇಕೆಂದು ಅಮಿತಾಬ್ ಅವರೊಡನೆ ಮಾತಿಗಿಳಿಯುತ್ತಾರೆ. ವೃದ್ದರೂ ಸೌಜನ್ಯದಿಂದ ಸ್ಪಂದಿಸಿ, ಮಾತಿಗಿಳಿಯುತ್ತಾರೆ.

 

ಮಾತಿನ ನಡುವೆ ಅಮಿತಾಬ್, ‘ತಾವು ಸಿನಿಮಾ ನೋಡುವುದಿಲ್ಲವೇ?’ ಎಂದು ಕೇಳುತ್ತಾರೆ. ಅವರ ಮನಸ್ಸಿನಲ್ಲಿ ಸಿನಿಮಾ ಬಗ್ಗೆ ಕೇಳಿದಾಗಲಾದರೂ ಆ ಹಿರಿಯರಿಗೆ ‘ತನ್ನ’ ಕುರಿತು ಜ್ಞಾಪಕವಾದೀತೆಂಬ ಭಾವ.

 

ಅದಕ್ಕೆ ಆ ಮುಗ್ಧ ಹಿರಿಯರು, ‘ಇತ್ತೀಚೆಗೆ ಕಡಿಮೆ. ಹಿಂದೆ ಕೆಲವು ಸಿನಿಮಾಗಳನ್ನು ನೋಡಿದ್ದೆ’ ಎನ್ನುತ್ತಾರೆ.

 

ಸಿನಿಮಾ ಕ್ಷೇತ್ರದ ಕುರಿತೇ ಮಾತೆತ್ತಿದರೂ ತನ್ನ ಕುರಿತು ಜ್ಞಾನೋದಯವಾಗದ ಆ ವೃದ್ದರ ಮೌಢ್ಯದ ಕುರಿತು ಅಮಿತಾಬರ ಮನಸ್ಸು ಮರುಗುತ್ತದೆ. ‘ನಾನು ಸಿನಿಮಾ ಕ್ಷೇತ್ರದಲ್ಲೇ ಕೆಲಸ ಮಾಡುತ್ತಿದ್ದೇನೆ’ ಎನ್ನುತ್ತಾರೆ ಅಮಿತಾಬ್. ಅದಕ್ಕೆ ವೃದ್ದರು, ‘ಹೌದೇನು, ಆ ಕ್ಷೇತ್ರದಲ್ಲಿ ತಾವೇನು ಮಾಡುತ್ತಿದ್ದೀರಿ?’ ಎಂದು ತೀರ ಸಹಜವೆಂಬಂತೆ ಪ್ರಶ್ನಿಸುತ್ತಾರೆ. ವಿಷಯ ತಾನು ಬಯಸಿದ ತಿರುವನ್ನು ಪಡೆಯುತ್ತಿರುವ ಹರ್ಷದಲ್ಲಿ ಅಮಿತಾಬ್ ‘ನಟನೆ’ ಎನ್ನುತ್ತಾರೆ ತುಸು ಗರ್ವದಿಂದ. ಅದಕ್ಕೆ ಯಜಮಾನರು, ‘ಹೌದೇನು, ತುಂಬಾ ಸಂತೋಷ’ ಎಂದು ಸೌಜನ್ಯದಿಂದ ಹೇಳಿ ಮತ್ತೆ ತಮ್ಮ ಓದಿನಲ್ಲಿ ಮುಳುಗುತ್ತಾರೆ.‌ ತನ್ನಂತಹ ಖ್ಯಾತ ನಟನ ಪರಿಚಯವೂ ಇಲ್ಲದ ಆ ವೃದ್ದರ ಬಗ್ಗೆ ಕನಿಕರಿಸುತ್ತ ಅಮಿತಾಬ್ ಸುಮ್ಮನಾಗುತ್ತಾರೆ. ಸರಿ, ದೆಹಲಿಯನ್ನು ತಲುಪಿ ವಿಮಾನದಿಂದ ಇಳಿಯುವ ಸಂದರ್ಭದಲ್ಲಿ, ಹೆಸರು ಹೇಳಿದರಾದರೂ ವೃದ್ಧರು ಆಶ್ಚರ್ಯ ಮತ್ತು ಸಂತೋಷ ವ್ಯಕ್ತಪಡಿಸಬಹುದೆಂದು ಅಮಿತಾಬ್ ಅವರ ಕೈ ಕುಲುಕಿ, ‘ನಾನು, ಅಮಿತಾಬ್ ಬಚ್ಚನ್’ ಎನ್ನುತ್ತ ಅವರಿನ್ನೇನು ತಲೆತಿರುಗಿ ಬೀಳುವ ನಿರೀಕ್ಷೆಯಿಂದ ಅವರನ್ನೇ ದಿಟ್ಟಿಸಿದರೆ ಆ ವೃದ್ಧ, ‘ತುಂಬಾ ಸಂತೋಷ, ನಾನು ಜೆ. ಆರ್. ಡಿ. ಟಾಟಾ. ಇನ್ನೊಮ್ಮೆ ಭೇಟಿಯಾಗೋಣ’ ಎಂದು ಕೈ ಕುಲುಕಿ ತಮ್ಮ ಪಾಡಿಗೆ ತಾವು ಹೊರಟುಹೋಗುತ್ತಾರೆ. ತಲೆ ತಿರುಗಿ ಬೀಳುವ ಪರಿಸ್ಥಿತಿ ಅಮಿತಾಬರದ್ದಾಗಿತ್ತು.

 

ಕೆಲವು ಸಾಧನೆಗಾಗಿ ಸಮಾಜದಲ್ಲಿ ಒಂದಷ್ಟು ಗೌರವ ಪ್ರತಿಷ್ಠೆಗಳು ದೊರಕಿದಾಗ ವ್ಯಕ್ತಿಯೊಬ್ಬ ತಾನು ಉಳಿದವರಿಗಿಂತ ತುಸು ದೊಡ್ಡವನೆಂದು ಭಾವಿಸಿಕೊಳ್ಳುವುದು ಸಹಜ. ಹಾಗೆ ತನ್ನನ್ನು ತಾನು ದೊಡ್ಡವನೆಂದು ಭಾವಿಸಿಕೊಳ್ಳುವಾಗ ಎದುರು ತೋರುವ ಇನ್ನೊಬ್ಬನನ್ನು ಸಣ್ಣವ ಎಂದೇ ಪರಿಭಾವಿಸಿಬಿಡುವ ಅಪಾಯ ಇಲ್ಲದಿಲ್ಲ.‌ ಅಂದು ಅಮಿತಾಬ್ ಎದುರಿಸಿದ್ದೂ ಅದೇ ಪ್ರಸಂಗ. ಹಾಗಾಗಿ ವ್ಯಕ್ತಿಯನ್ನೋ, ದೃಶ್ಯವೊಂದನ್ನೋ ನೋಡಿದ ತಕ್ಷಣ ತೀರ್ಪನ್ನು ಕೊಡುವ ಮೊದಲು ತುಸು ನಿಧಾನಿಸುವುದು ಕ್ಷೇಮ.

 

ಸಮಾಜದ ದೃಷ್ಟಿಯೂ ಹಾಗೆಯೇ. ಎಲ್ಲ ಸಂದರ್ಭದಲ್ಲೂ ಅದು ನಿಷ್ಪಕ್ಷಪಾತದಿಂದ ಮತ್ತು ನಿರ್ಭಿಡೆಯಿಂದ ತಾನು ಕಂಡದ್ದನ್ನು ಹೇಳುತ್ತದೆ ಎಂದು ಹೇಳಲಾಗುವುದಿಲ್ಲ. ಅದು ಸಮಯ ಮತ್ತು ಸನ್ನಿವೇಶಗಳ ಒತ್ತಡದಿಂದ ಕಂಡದ್ದನ್ನು ಕಂಡಿಲ್ಲವೆಂದೋ, ಕಾಣದಿದ್ದುದನ್ನು ಕಂಡೆನೆಂದೋ ಹೇಳೀತು. ಹಾಗೆಂದೇ Robertson Davies ಎಂಬ ವಿದ್ವಾಂಸ ಹೇಳಿದ್ದು, ‘The eye sees only what the mind is prepared to comprehend’.

 

ಇದನ್ನು ನಿರೂಪಿಸಲು ನಮಗೆ, ಜಗತ್ತಿನ ನೂರಕ್ಕೂ ಹೆಚ್ಚು ಭಾಷೆಗಳಿಗೆ ಅನುವಾದಗೊಂಡ, ಡ್ಯಾನಿಷ್ ಕತೆಗಾರ ಹ್ಯಾನ್ ಕ್ರಿಶ್ಚಿಯನ್ ಬರೆದ ದಿ ‘ಎಂಪರರ್ಸ್ ನಿವ್ ಕ್ಲೋಥ್ಸ್’ ಎಂಬ ಕತೆಗಿಂತ ಇನ್ನೊಂದು ಅಂತಹ ಉದಾಹರಣೆ ಸಿಗದು. ಆ ಕತೆಯನ್ನು ನಾವು ನೀವೆಲ್ಲ ಅದರ ಭಾರತೀಯ ರೂಪದಲ್ಲಿ ಕೇಳಿರುವುದೇ.

 

ಸ್ವಾರ್ಥಿ, ದುರಾಚಾರಿ ರಾಜನೊಬ್ಬನಿಗೆ ದಿನಕ್ಕೊಂದು‌ ಹೊಸ ಉಡುಪು ಧರಿಸುವ ಖಯಾಲಿ. ಅವನ ಈ ದೌರ್ಬಲ್ಯವನ್ನು ಬಳಸಿಕೊಂಡ ದರ್ಜಿಗಳಿಬ್ಬರು ಅವನಿಗೆ ಜಗತ್ತಿನಲ್ಲೇ ದೊರೆಯದ ಅಪರೂಪದ ಉಡುಪೊಂದನ್ನು ಹೊಲಿದುಕೊಡುವುದಾಗಿಯೂ, ಅದು ತನ್ನ ಸ್ಥಾನಮಾನಕ್ಕೆ ಅಯೋಗ್ಯನೆನಿಸಿದವನ ಕಣ್ಣಿಗೆ ಕಾಣಿಸುವುದೇ ಇಲ್ಲವೆಂದೂ ಹೇಳುತ್ತಾರೆ.‌ ಆ ದರ್ಜಿಗಳಿಬ್ಬರೂ ರಾಜನಿಂದ ಹೇರಳ ಧನ ಕನಕ ಪಡೆದುಕೊಳ್ಳುತ್ತಾರೆ. ಕೊನೆಗೊಂದು ದಿನ ಬರಿಗೈಯ್ಯಲ್ಲಿ ಬಂದು ರಾಜನಿಗೆ ಉಡುಪು ಕೊಟ್ಟಂತೆ ಅಭಿನಯಿಸುತ್ತಾರೆ. ರಾಜ, ‘ತನಗೆ ಉಡುಪು ಕಾಣುತ್ತಿಲ್ಲವೆಂದರೆ ತಾನು ರಾಜನ ಸ್ಥಾನಕ್ಕೆ ಅನರ್ಹನೆಂದಾಗುತ್ತದೆ’ ಎಂದು ಅದನ್ನು ತೊಟ್ಟಂತೆ ಅಭಿನಯಿಸುತ್ತಾನೆ. ಆತನ ಅಧಿಕಾರಿವರ್ಗವೂ ತಾವು ತಮ್ಮ ಸ್ಥಾನಕ್ಕೆ ಅನರ್ಹರೆಂದು ಋಜುವಾತಾಗದಿರಲು “ಮಹಾರಾಜರ ಉಡುಪು ಚೆನ್ನಾಗಿದೆ. ಅಪೂರ್ವವಾಗಿದೆ” ಎನ್ನುತ್ತಾರೆ. ರಾಜ ಅದನ್ನು ತೊಟ್ಟು ಮೆರವಣಿಗೆ ಹೋದಾಗ ಪ್ರಜೆಗಳೂ ತಮ್ಮ ತಮ್ಮ ಸ್ಥಾನಮಾನಗಳ ಭಯದಿಂದ, “ಅದ್ಭುತ! ಚೆನ್ನಾಗಿದೆ!” ಎಂದೇ ಹೇಳುತ್ತಾರೆ. ಆದರೆ ಜನಗಳ ಮಧ್ಯದಲ್ಲಿ‌ ಕಪಟವರಿಯದ ಮುಗ್ಧ ಮಗುವೊಂದು, “ಅಯ್ಯೋ ಮಹಾರಾಜರು ಬೆತ್ತಲೆ ಇದ್ದಾರೆ. ಉಡುಪನ್ನೇ ತೊಟ್ಟಿಲ್ಲ.” ಎಂದು ಸತ್ಯವನ್ನು ಹೇಳಿಬಿಡುತ್ತದೆ. ಜನರ ನಡುವೆ ಗುಜುಗುಜು ಗದ್ದಲ ಏರ್ಪಡುತ್ತದೆ.

 

ಇದು ತಮ್ಮ ಸ್ಥಾನಮಾನ, ಅಧಿಕಾರ ಅಥವಾ ಆಮಿಷಗಳ ಒತ್ತಡಕ್ಕೆ ಬಲಿಯಾಗಿ ಎಷ್ಟೋ ವೇಳೆ ಜನಸಮೂಹವೂ ಹೇಗೆ ಕಾಣದ್ದನ್ನು ಕಂಡೆವೆಂದು ಹೇಳುತ್ತದೆ ಎನ್ನಲು ಒಂದು ಉದಾಹರಣೆ.

 

ಇದೆಲ್ಲ ನನಗೆ ನೆನಪಾದದ್ದು ಮೊನ್ನೆ ನನ್ನ ಮಿತ್ರರೊಬ್ಬರು ಒಂದು ಫೋಟೋ ತೋರಿಸಿ ಒಬ್ಬ ವ್ಯಕ್ತಿಯ ಚಾರಿತ್ರ್ಯದ ಕುರಿತು ವ್ಯಾಖ್ಯಾನ ನೀಡುತ್ತಿದ್ದರು. “ಅವರ ಕಣ್ಣು ನೋಡು, ಚಿತ್ರದಲ್ಲಿ ಅವರು ಯಾರನ್ನು ನೋಡುತ್ತಿದ್ದಾರೆ ನೋಡು. ಅದನ್ನು ನೋಡಿದರೆ ಗೊತ್ತಾಗದೇ ಅವರ ಮನೋದೌರ್ಬಲ್ಯ” ಎಂದೆಲ್ಲ ವಿವರಣೆ ನೀಡುತ್ತಿದ್ದರು. ನನಗೆ ಅವರ ಮನಸ್ಥಿತಿ ಮೊದಲೇ ತಿಳಿದಿತ್ತು. ಅವರಿಗೆ ಆ ಚಿತ್ರದಲ್ಲಿಲ್ಲದ ಏನನ್ನೋ ಅದರಲ್ಲಿ ಕಾಣಬೇಕಿತ್ತು. ವಂಚನೆ ಇದ್ದುದು ಚಿತ್ರದಲ್ಲಿದ್ದ ವ್ಯಕ್ತಿಯ ಕಣ್ಣಿನಲ್ಲಾಗಿರಲಿಲ್ಲ. ಅದು ಇದ್ದುದು ಈ ನನ್ನ ಮಿತ್ರರ ಕಣ್ಣಿನಲ್ಲಿ. ಎದುರಿಗಿರುವ ಜೆ. ಆರ್. ಡಿ. ಟಾಟಾರಂತಹ ಹಿರಿಯರ ವರ್ಚಸ್ಸನ್ನೇ ಅಮಿತಾಬರಂತಹ ವ್ಯಕ್ತಿಯೇ ಕಾಣಲಾಗಲಿಲ್ಲ. ಇಲ್ಲಿ ಚಿತ್ರದಲ್ಲಿರುವ ವ್ಯಕ್ತಿಯೊಬ್ಬರ ಕಣ್ಣಿನಲ್ಲಿ ತನಗೆ ಬೇಕೆನ್ನಿಸಿದ ಭಾವ ಸ್ಫುರಿಸುವುದನ್ನು ಕಾಣುವ ನನ್ನ ಮಿತ್ರೋತ್ತಮರ ಸಾಮರ್ಥ್ಯ ನನಗೆ ವಿಪರೀತವೆನ್ನಿಸಿದ್ದು ಸುಳ್ಳಲ್ಲ. ಆಗ ನಾನೂ ಯೋಚಿಸಿದೆ. “ಪಾಪ, ರಾಜ ಉಡುಪು ತೊಟ್ಟಿಲ್ಲ ಎಂದು ಹೇಳಿಬಿಟ್ಟರೆ ತಮ್ಮ ಸ್ಥಾನಕ್ಕೋ ಮಾನಕ್ಕೋ ಊನವಾದೀತೆಂಬ ಹ್ಯಾನ್ ಕ್ರಿಶ್ಚಿಯನ್ನನ ಕತೆಯ ಪ್ರಜೆ, ರಾಜರ ಮೈಮೇಲೆ ಇಲ್ಲದ ಉಡುಪು ಇದೆಯೆಂದು ಕಂಡಂತೆ ಈತನೂ ಯಾವುದೋ ಒತ್ತಡಕ್ಕೋ ಅಥವಾ ಆಮಿಷಕ್ಕೋ ಒಳಗಾಗಿದ್ದಾನು” ಎನ್ನಿಸಿತು. ಈ ಸಂದರ್ಭದಲ್ಲಿ ನಾನು ಮೊನ್ನೆಯೆಲ್ಲೋ ಓದಿದ್ದ ಸದ್ಗುರು ಜಗ್ಗಿ ವಾಸುದೇವರ ವಾಕ್ಯವೊಂದು ನೆನಪಾಗುತ್ತಿದೆ. ಅದು ಹೀಗಿದೆ.
‘Your entire life is a virtual reality, because you are seeing it only the way it happens in your mind.’

 

ಹಾಗಾಗಿ ನಮಗೆ ಗ್ರಹಚಾರ ಕೆಟ್ಟಾಗ ಒಳಿತು ಒಳಿತಾಗಿ ಕಾಣಿಸದು. ಕೆಡಕೇ ಸೊಗಸಾಗಿ ಕಾಣುತ್ತದೆ. ಪಾಪ, ಸೀತೆಗೆ ಗ್ರಹಚಾರ ಕೆಟ್ಟಿತ್ತು. ಅವಳಿಗೆ ಚಿನ್ನದ ಜಿಂಕೆಯಲ್ಲಿ ಇನ್ನಿಲ್ಲದ ಚೆಲುವು ಕಾಣಿಸಿತು. ರಾಮನಿಗೆ ಅದರಲ್ಲಿ ವಂಚನೆ ಕಂಡಿತು. ಆತ ಸೀತೆಗೆ ಹೇಳಿದರೂ ಅವಳಿಗಲ್ಲಿ ಮೋಸ ಕಾಣಿಸಲಿಲ್ಲ. ಲಕ್ಷ್ಮಣನಲ್ಲಿ ವಂಚನೆ ಇರಲಿಲ್ಲ. ಅವನಲ್ಲಿದ್ದುದು ರಾಮನ ಕುರಿತು ಊನವಿಲ್ಲದ ನಂಬಿಕೆ. ಆದರೆ ದುರದೃಷ್ಟ. ಲಂಕೆಯ ಶೋಕ‌ ಹಣೆಯಲ್ಲಿ ಬರೆದಿದ್ದ ಆಕೆಗೆ ಲಕ್ಷ್ಮಣನ ಕಣ್ಣಿನಲ್ಲಿದ್ದ ಅಚಂಚಲ ನಂಬಿಕೆಯ ಬದಲಿಗೆ ಕಂಡದ್ದು ಶಂಕೆ.

Author Details


Srimukha

Leave a Reply

Your email address will not be published. Required fields are marked *