ರಾಜಧಾನಿಯ ಅರಮನೆ ಮೈದಾನದಲ್ಲಿ ಹವ್ಯಕತ್ವದ ಅನಾವರಣ!

ಶಬ್ದ~ಶಿಲ್ಪ : ಮಹೇಶ ಎಳ್ಯಡ್ಕ

ಇತಿಹಾಸ:

ಸುಮಾರು ಸಾವಿರದ ಏಳುನೂರು ವರ್ಷಗಳಷ್ಟು ಹಿಂದೆ ಕದಂಬವಂಶದ ಶ್ರೇಷ್ಠ ರಾಜ ಮಯೂರವರ್ಮನು ಬನವಾಸಿಯನ್ನು ಆಳುತ್ತಿದ್ದ. ದೇಶವು ಸುಭಿಕ್ಷವಾಗಿ, ಪ್ರಜೆಗಳು ಕ್ಷೇಮವಾಗಿ, ಹಲ-ಫಲಗಳು ಯಥೇಷ್ಟವಾಗಿ ಇರುತ್ತಿದ್ದವು. ಇದಕ್ಕೆ ಕಾರಣವೂ ಇತ್ತು. ಸದಾ ರಾಜ್ಯದ ಒಳಿತಿಗಾಗಿ ಚಿಂತಿಸುತ್ತಿದ್ದ ರಾಜನು ಪ್ರಜಾಕೋಟಿಯ ಯೋಗಕ್ಷೇಮಕ್ಕಾಗಿ ಕಾಲಕಾಲಕ್ಕೆ ಸುಕಾರ್ಯಗಳನ್ನು ಕೈಗೊಳ್ಳುತ್ತಿದ್ದ. ಅದರಲ್ಲೊಂದು, ಪ್ರಜಾಹಿತಕ್ಕಾಗಿ, ಲೋಕಕಲ್ಯಾಣಕ್ಕಾಗಿ ಯಜ್ಞಯಾಗಾದಿಗಳನ್ನು ರಾಜ್ಯವಿಡೀ ನಡೆಸಿದ್ದು. ಪ್ರಜಾಹಿತಕ್ಕಾಗಿ ಯಜ್ಞ ನಡೆಸಲು ಅಷ್ಟೇ ಯೋಗ್ಯ, ನಿಸ್ಸ್ವಾರ್ಥ, ಜ್ಞಾನಿಗಳಾದ ಅಧ್ವರ್ಯುಗಳ ಅಗತ್ಯವನ್ನು ಮನಗಂಡ ಮಯೂರವರ್ಮನು ಉತ್ತರದ ಅಹಿಚ್ಛತ್ರವನ್ನು ಸಂಪರ್ಕಿಸಿದನು. ಅಲ್ಲಿಂದ ನೂರಾರು ಕುಟುಂಬಗಳನ್ನು ಕರೆತಂದುದಷ್ಟೇ ಅಲ್ಲ, ಆ ಸ್ಮಾರ್ತ ಕುಟುಂಬದ ಸಂಪೂರ್ಣ ಯೋಗಕ್ಷೇಮಕ್ಕಾಗಿ ಹೈಗುಂದವೇ ಮೊದಲಾದ ಹದಿನೆಂಟು ಗ್ರಾಮಗಳನ್ನು ಉಂಬಳಿಯಾಗಿ ಕೊಟ್ಟನು. ಮುಂದಿನ ಪೀಳಿಗೆಯ ರಾಜರು ಇನ್ನೂ ದಕ್ಷಿಣದ ದೇಶಗಳಿಗೆ ಬರಮಾಡಿಕೊಂಡರು.

 

ಅವರು ಕಾಲಕ್ರಮೇಣ ಆ ಗ್ರಾಮಗಳಲ್ಲಿ ನೆಲೆಯಾಗಿ ಹವ್ಯ-ಕವ್ಯ, ಯಜನ-ಯಾಜನಗಳನ್ನು ನಡೆಸುತ್ತಾ ಜನಾನುರಾಗಿಗಳಾದ “ಹವ್ಯಕ”ರಾಗಿ ಸಮಾಜದಲ್ಲಿ ಒಂದಾದರು. “ಹವ್ಯ-ಕವ್ಯಾದಿ ಯಜ್ಞೇಷು ನಿರತಾಃ – ಹವ್ಯಕಾಃ” ಎಂಬ ಮಾತಿದೆ.  ಲೋಕಕಲ್ಯಾಣಕ್ಕಾಗಿಯೇ ಹುಟ್ಟಿಕೊಂಡ ಸಮುದಾಯವೊಂದಿದ್ದರೆ ಅದು ಹವ್ಯಕ ಸಮುದಾಯವೇ ಎಂಬುದರಲ್ಲಿ ಎರಡು ಮಾತಿಲ್ಲ.

 

ಮುಂದೆ ಶ್ರೀಶಂಕರಾಚಾರ್ಯರಾ ಅನುಗ್ರಹದಂತೆ ಗೋಕರ್ಣ ಕ್ಷೇತ್ರದ ಅಶೋಕೆಯಲ್ಲಿ ಮಠಸ್ಥಾಪನೆಯಾಯಿತು. ಶಾಂಕರ ಪರಂಪರೆಯೊಂದು ಹರಿದು ಬಂತು. ತಲೆತಲೆಮಾರುಗಳನ್ನು ಹರಸಿ, ಮಾರ್ಗದರ್ಶಿಸುತ್ತಾ, ಇಂದಿಗೂ ಆ ಶಾಂಕರಪ್ರಭೆಯು ಅವಿಚ್ಛಿನ್ನವಾಗಿ ನಮ್ಮ ಸಮಾಜದಲ್ಲಿದೆ. ಬೇರೆ ಎಷ್ಟೋ ಶಂಕರ ಮಠಗಳಿರಬಹುದು, ಆದರೆ ಅವಿಚ್ಛಿನ್ನವಾಗಿ ಉಳಿದಿರುವುದು ನಮ್ಮ ಮಠವೊಂದೇ.

 

ನಮ್ಮ ಮಠವನ್ನು ನಮ್ಮ ಆಸ್ತಿಕ ಸಮಾಜ ರಕ್ಷಿಸಿಕೊಂಡು ಬರುತ್ತಿರುವುದು ನಿಜವಷ್ಟೇ. ಅಂತೆಯೇ, ನಮ್ಮ ಸಮಾಜವನ್ನು ಮಠವು ರಕ್ಷಿಸಿಕೊಂಡು ಬರುತ್ತಿದೆ. ಸಾವಿರಾರು ವರ್ಷಗಳಿಂದ ನಮ್ಮ ಸಮುದಾಯವು ವೇದ-ವೇದಾಂಗ, ಸಂಸ್ಕಾರ-ಸಂಸ್ಕೃತಿಗಳಿಗೆ ಹತ್ತಿರವಾಗಿಯೇ ನಡೆದುಕೊಂಡು ಬರುತ್ತಿದೆಯೆಂದರೆ ಅದರಲ್ಲಿ ಮಠದ ಪಾತ್ರ ಬಹಳವಿದೆ. ಅಂತೆಯೇ, ಪರಂಪರೆಯೊಂದನ್ನು ಅವಿಚ್ಛಿನ್ನವಾಗಿ ಕಾಪಾಡಿಕೊಂಡು ಬಂದಿದ್ದೇವೆಯೆಂದರೆ ಅದರಲ್ಲಿ ಸಮಾಜದ ಪಾತ್ರವೂ ಬಹಳವಾಗಿದೆ. ಹಾಗಾಗಿ ಮಠ ಮತ್ತು ಸಮಾಜ, ಒಂದಕ್ಕೊಂದು ಪೂರಕ.

 

ಮಠ-ಮಹಾಸಭೆ:

ಸಮಾಜಕ್ಕಾಗಿ, ಸಮಾಜದ ರಕ್ಷಣೆಗಾಗಿ ನಮ್ಮ ಮಠವು ಸದಾ ಒಂದು ಹೆಜ್ಜೆ ಮುಂದೆಯೇ. ಕಾಲಕಾಲಕ್ಕೆ ಆಯಾ ಕಾಲದ ಸಕಲ ಸೌಕರ್ಯಗಳನ್ನು ಬಳಸಿಕೊಂಡು ಸಮಾಜದೊಂದಿಗೆ ಸಂಪರ್ಕದಲ್ಲಿರುತ್ತದೆ ನಮ್ಮ ಮಠ. ಅಖಿಲ ಹವ್ಯಕ ಮಹಾಸಭೆಯೂ ನಮ್ಮ ಮಠದ ದೂರದೃಷ್ಟಿಯ ಕೂಸು.

 

ಸ್ವಾತಂತ್ರ್ಯಪೂರ್ವದಲ್ಲೇ, ಅಂದರೆ ಬ್ರಿಟಿಷರ ಆಳ್ವಿಕೆಯ ಕಾಲದಲ್ಲೇ ನಮ್ಮ ಪರಮಾಚಾರ್ಯರು (ದೊಡ್ಡ ಗುರುಗಳು) ನಮ್ಮ ಸಮುದಾಯಕ್ಕಾಗಿ ಸರ್ಕಾರೀ ನೋಂದಾಯಿತ, ಅಧಿಕೃತ ಸಂಸ್ಥೆಯೊಂದರ ಅವಶ್ಯಕತೆಯನ್ನು ಮನಗಂಡರು. ಹವ್ಯಕರು ಪ್ರಧಾನವಾಗಿ ಹರಡಿಕೊಂಡಿದ್ದ ಪ್ರದೇಶದ ಎಲ್ಲರಿಗೂ ಪ್ರಾತಿನಿಧ್ಯ ಸಿಗುವಂತೆ ಮಾಡಿ, 1943ರಲ್ಲಿ ಅಖಿಲ ಹವ್ಯಕ ಮಹಾಸಭಾ (ರಿ.) ಎಂಬ ನೋಂದಾಯಿತ ಸಂಸ್ಥೆಯೊಂದರ ಉಗಮಕ್ಕೆ ಕಾರಣೀಭೂತರಾದರು. ಆರಂಭವಷ್ಟೇ ಅಲ್ಲದೆ, ಮುಂದಿನ ಹಲವಾರು ವರ್ಷಗಳ ಕಾಲ ಮಹಾಸಭೆಯ ಸಭೆಗಳಿಗೆ, ಕಾರ್ಯಕ್ರಮಗಳಿಗೆ ಆಶ್ರಯವನ್ನಿತ್ತು, ಸಲಹೆ-ಸೂಚನೆಗಳನ್ನಿತ್ತು ಗುರುಪೀಠವಾಗಿ, ಮಾರ್ಗದರ್ಶಿಯಾಗಿ, ಸದಾ ಬೆನ್ನೆಲುಬಾಗಿ ನಿಂತರು. ಮಹಾಸಭೆಯ ಅಧಿಕೃತ ದಾಖಲೆಗಳಲ್ಲಿ ಈ ವಿಚಾರಗಳು ದಾಖಲಾಗಿವೆ.

 

ಅಖಿಲ ಹವ್ಯಕ ಮಹಾಸಭೆಯ ಸಂವಿಧಾನದಲ್ಲಿ ಶ್ರೀಗುರುಗಳಿಗೆ, ಶ್ರೀಮಠಕ್ಕೆ ಪ್ರಥಮ ಪ್ರಾಶಸ್ತ್ಯವಿದೆ. ಶ್ರೀಪೀಠದ ತೀರ್ಮಾನವೇ ಅಂತಿಮವೆಂಬ ಅಧಿಕೃತ ನಿಲುವಿದೆ.

ಮಹಾಸಭೆಯೆಂದರೆ ಮಠಾಧಿಪತಿಗಳ ಚಿಂತನೆಯ ಪ್ರತಿಫಲನ. ಗುರುಪೀಠದ ಶಿಷ್ಯಸ್ತೋಮಕ್ಕೆ ಬೆನ್ನೆಲುಬು ಮಹಾಸಭೆ. ಮಹಾಸಭೆಗೆ ಗುರುದೃಷ್ಟಿ – ಶ್ರೀಪೀಠ.

 

ಹಾಗಿದ್ದರೂ ಮಹಾಸಭೆಗೆ ಅದರದ್ದೇ ಆದ ಸದಸ್ಯತ್ವ, ನಿರ್ದೇಶಕರು, ಮತದಾನ, ಆಡಳಿತ ಯಂತ್ರ ಎಲ್ಲವನ್ನೂ ನಿರ್ದೇಶಿಸಲಾಗಿದೆ. ಜನರಿಂದ, ಜನರಿಗಾಗಿ ನಡೆಯಬೇಕೆಂಬ ಉದ್ದೇಶದಿಂದ ಶ್ರೀಶ್ರೀಪರಮಗುರುಗಳು ಮಹಾಸಭೆಯನ್ನು ಸಂಪೂರ್ಣ ಸ್ವಾಯತ್ತ ಯಂತ್ರವನ್ನಾಗಿಸಿದರು.

ಪ್ರತಿ ಮತದಾನದಲ್ಲೂ ಸದಸ್ಯರು ಸ್ವಇಚ್ಛೆಯಿಂದ ಭಾಗವಹಿಸಿ, ಯೋಗ್ಯರನ್ನು ಆರಿಸಿ ಮಹಾಸಭೆಯ ಮುಂದಿನ ಆಡಳಿತವನ್ನು ನಿರ್ದೇಶಿಸುತ್ತಾರೆ. ಈ ಬಾರಿಯೂ ಯೋಗ್ಯ ತಂಡವನ್ನು ಆರಿಸಿ, ಮಹಾಸಭೆಯ ಮೆರುಗನ್ನು ಮತ್ತಷ್ಟು ಹೆಚ್ಚಿಸಿದ್ದಾರೆ ಸದಸ್ಯರುಗಳು.

 

ಮಹಾಸಭೆಯ ದೂರದೃಷ್ಟಿ:

ಅಖಿಲ ಹವ್ಯಕ ಮಹಾಸಭೆಯ ಚುಕ್ಕಾಣಿಯನ್ನು ಪ್ರಸಕ್ತ ತಂಡವು ಹೊತ್ತಾಗ ವಿಶೇಷವಾದ ಪ್ರತೀಕ್ಷೆಯನ್ನು ಸಮಾಜ ಹೊಂದಿತ್ತು. ಮಹಾಸಭೆಯ ಆವರಣದಲ್ಲೇ ಇರುವ ಸಿದ್ಧಿವಿನಾಯಕನ ಕ್ಷೇತ್ರವನ್ನು ಪುನರ್ನವೀಕರಣಗೊಳಿಸಿ ಕೆಲಸ ಆರಂಭಿಸಿದ ತಂಡವು ಜನರ ಕಷ್ಟ-ನಷ್ಟಗಳಲ್ಲಿ, ನೊಂದ ಸದಸ್ಯರ ಕಷ್ಟಕಾಲದಲ್ಲಿ ಉಪಕಾರಿಯಾಗಿತ್ತು. ಸಾಹಿತ್ಯ, ಸಂಗೀತ ಮುಂತಾದ ವಿವಿಧ ಕ್ಷೇತ್ರಗಳಲ್ಲಿ ಹತ್ತು ಹಲವು ಕಾರ್ಯಕ್ರಮಗಳನ್ನು ನಡೆಸಿತ್ತು. ಇಷ್ಟೊಂದು ಪ್ರಬಲ ಸಮುದಾಯದ ಮಹಾಸಭೆಯ ಸದಸ್ಯತ್ವ ಪ್ರಸಕ್ತ ಆಡಳಿತಾವಧಿಯಲ್ಲಿ ದ್ವಿಗುಣವಾಗಿ ಬೆಳೆಯುತ್ತಿದೆ. ಮಹಾಸಭೆಯು ಜನಸಾಮಾನ್ಯರಿಗೆ ತಲುಪುತ್ತಿದೆ.

 

ಮಹಾಸಭೆಯೆಂಬ ಸಮಾಜದ ಅಧಿಕೃತ ಲಾಂಛನವೊಂದು ಕೇವಲ ಪೇಪರ್ ಹುಲಿಯಾಗಿರದೆ, ನಮ್ಮ ಸಮುದಾಯವನ್ನು ತಟ್ಟುವ ಪ್ರಕರಣಗಳಲ್ಲಿ ತಮ್ಮ ನಿಲುವೇನು ಎಂಬುದನ್ನು ಅಧಿಕೃತವಾಗಿ ಹೇಳುವ ಎದೆಗಾರಿಕೆಯನ್ನು ತೋರಿಸಿತ್ತು. ಮಹಾಸಭೆಯು ಯಾವತ್ತೂ ಸಮಾಜ ಕಟ್ಟುವವರೊಂದಿಗಿದೆ, ಸಮಾಜ ಒಡೆಯುವವರೊಂದಿಗೆ ಅಲ್ಲ ಎಂಬ ಸ್ಪಷ್ಟ ಸಂದೇಶವನ್ನು ಸಾರಿತ್ತು.

 

ಅದೇ ಸಂದೇಶದ ಮುಂದಿನ ಹೆಜ್ಜೆಯೇ ದ್ವಿತೀಯ ವಿಶ್ವ ಹವ್ಯಕ ಸಮ್ಮೇಳನ ಕಾರ್ಯಕ್ರಮ.

 

ಮಹಾಸಭೆಯ ಅಮೃತಮಹೋತ್ಸವ:

1943ರಲ್ಲಿ ಆರಂಭವಾದ ಮಹಾಸಭೆಗೆ ಇದು ಎಪ್ಪತ್ತೈದನೇ ವರ್ಧಂತಿ. ಅಮೃತಮಹೋತ್ಸವದ ಪುಣ್ಯಪರ್ವದ ವರ್ಷವೇ ಬೃಹತ್ ‘ವಿಶ್ವ ಹವ್ಯಕ ಸಮ್ಮೇಳನ’ ಆಯೋಜನೆಯಾಗಿರುವುದು ನಿಜಕ್ಕೂ ಹೆಮ್ಮೆಯ ವಿಷಯ. ಈ ಮೊದಲು ವಿಶ್ವ ಹವ್ಯಕ ಸಮ್ಮೇಳನ ನಡೆದಿರುವುದು ಮಹಾಸಭೆಯ ಐವತ್ತನೆಯ ವರ್ಷದ ಪ್ರಯುಕ್ತ 1996ರಲ್ಲಿ, ಪುತ್ತೂರಿನ ವಿವೇಕಾನಂದ ಮಹಾವಿದ್ಯಾಲಯದ ಆವರಣದಲ್ಲಿ. ಅಭೂತಪೂರ್ವ ಯಶಸ್ಸಿನ ಆ ಕಾರ್ಯಕ್ರಮಕ್ಕೆ ನಮ್ಮ ಪರಮಗುರುಗಳು ಆಶೀರ್ವದಿಸಿದ್ದರು. ಒಂದು ತಲೆಮಾರಿನ ಬಳಿಕ ಬರುತ್ತಿರುವ ಎರಡನೆಯ ವಿಶ್ವ ಹವ್ಯಕ ಸಮ್ಮೇಳನಕ್ಕೆ ಮೂವತ್ತಾರನೆಯ ಶಂಕರಾಚಾರ್ಯರು ಅನುಗ್ರಹಿಸಲಿದ್ದಾರೆ.

 

ತಲೆಮಾರಿಗೊಮ್ಮೆ ನಡೆಯುವ ಇಂತಹ ಕಾರ್ಯಕ್ರಮವನ್ನು ನೋಡಲು ಮರೆಯದಿರಿ. ಕಳೆದುಕೊಂಡು ನಿರಾಶರಾಗದಿರಿ.

 

~

 

ವಿಶ್ವ ಹವ್ಯಕ ಸಮ್ಮೇಳನದಲ್ಲಿ ಏನೇನಿರಲಿವೆ?

 • ವಿಶ್ವ ಹವ್ಯಕ ಸಮ್ಮೇಳನವು ಡಿಸೆಂಬರ್ 2018ರ ಡಿಸೆಂಬರ್ 28-29-30, ಮೂರು ದಿನಗಳ ಕಾಲ ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆಯಲಿದೆ.

 

ಡಿಸೆಂಬರ್ 28 ರಂದು:

 • ಬೆಳಗ್ಗೆ 9:00 ಘಂಟೆಗೆ: ಶ್ರೀಸಂಸ್ಥಾನ ಶ್ರೀಶ್ರೀರಾಘವೇಶ್ವರಭಾರತೀ ಮಹಾಸ್ವಾಮಿಗಳವರ ದಿವ್ಯ ಉಪಸ್ಥಿತಿಯಲ್ಲಿ, ದಿವ್ಯಾಶೀರ್ವಾದದಲ್ಲಿ, ಶ್ರೀಸುಬ್ರಹ್ಮಣ್ಯ ಮಠಾಧೀಶರಾದ ಶ್ರೀಶ್ರೀವಿದ್ಯಾಪ್ರಸನ್ನತೀರ್ಥ ಶ್ರೀಪಾದಂಗಳವರ ಉಪಸ್ಥಿತಿಯಲ್ಲಿ, ಕರ್ನಾಟಕ ರಾಜ್ಯದ ಘನ ರಾಜ್ಯಪಾಲರಾದ ಶ್ರೀ ವಾಜುಭಾಯಿ ವಾಲಾ  ಇವರಿಂದ ಉದ್ಘಾಟನೆಗೊಳ್ಳಲಿದೆ.
 • ಬೆಳಗ್ಗೆ 10:00 ಘಂಟೆಗೆ: ತುಂಬಿದ ಸಭಾಂಗಣದಲ್ಲಿ ಅಲ್ಲಲ್ಲಿ ವಿವಿಧ ಕಾರ್ಯಕ್ರಮಗಳು ಆರಂಭಗೊಳ್ಳಲಿದೆ. ಗೌರವಾನ್ವಿತ ಅತಿಥಿಗಳಿಂದ ಆಯಾ ಸ್ಥಳಗಳಲ್ಲಿ ಉದ್ಘಾಟನೆಯಿದೆ.
 • ಮಧ್ಯಾಹ್ನ 12:00 ಘಂಟೆಗೆ: ಅಮೃತಮಹೋತ್ಸವದ ಹೊಸ್ತಿಲಿನಲ್ಲಿ ಮಹಾಸಭೆಯು ಪ್ರಕಾಶಿಸುತ್ತಿರುವ 75 ಪುಸ್ತಕಗಳ ಲೋಕಾರ್ಪಣೆಯಿದೆ. ಒಂದೇ ವೇದಿಕೆಯಲ್ಲಿ ಇಷ್ಟೊಂದು ಸಂಖ್ಯೆಯ ಪುಸ್ತಕಗಳ ಬಿಡುಗಡೆ ದಾಖಲೆಯಾಗುವ ಐತಿಹಾಸಿಕ ಘಳಿಗೆಯಾಗಲಿದೆ.
 • ಅಪರಾಹ್ನ 2:00 ಘಂಟೆಗೆ: ಪ್ರಸಕ್ತ ಸಾಮಾಜಿಕ ವಿಚಾರಗಳ ಕುರಿತಾಗಿ ಗೋಷ್ಠಿಗಳು ನಡೆಯಲಿವೆ.
 • ಸಾಯಂ 4:00 ಘಂಟೆಗೆ: ಹವ್ಯಕ ಸಮುದಾಯವು ವೈದಿಕ ಸಮುದಾಯ. ನಮ್ಮ ನೆಲೆಯನ್ನು ಮರೆಯದೆ ಮೂಲ ಪ್ರವೃತ್ತಿಯನ್ನು ಹೆಮ್ಮೆಯಿಂದ ನಡೆಸುತ್ತಿರುವ 75 ವೈದಿಕರಿಗೆ ‘ವೈದಿಕರತ್ನ’ ಸನ್ಮಾನ ನಡೆಯಲಿದೆ.
 • ಸಾಯಂ 5:00 ಘಂಟೆಗೆ: ಗೀತಾ, ನಾಟ್ಯ, ಜಾದೂ ವೈಭವ ಮುಂತಾದುವುಗಳನ್ನು ಒಳಗೊಂಡ ಮನೋರಂಜನೆ ಕಾರ್ಯಕ್ರಮ ನಡೆಯಲಿದೆ.

 

ಡಿಸೆಂಬರ್ 29ರಂದು:

 • ಬೆಳಗ್ಗೆ 9:00 ಘಂಟೆಗೆ: ಕಾರ್ಯಕ್ರಮದ ಉದ್ಘಾಟನೆ. ನಾಡಿನ ಪ್ರಖ್ಯಾತ ರಾಜಕಾರಣಿಗಳು, ಸಾಧಕರು, ಧರ್ಮದರ್ಶಿಗಳು ಜೊತೆಯಾಗಲಿದ್ದಾರೆ.
 • ಬೆಳಗ್ಗೆ 11:00 ಘಂಟೆಗೆ: ಹವ್ಯಕರು ನಿಜವಾದ ಮಣ್ಣಿನ ಮಕ್ಕಳು. ಯಾವದೇ ವೃತ್ತಿಯಿರಲಿ, ಪ್ರವೃತ್ತಿಯಾಗಿ ಕೃಷಿಯನ್ನು ಹಚ್ಚಿಕೊಂಡವರು ಹವ್ಯಕರು. ಕೃಷಿಯಲ್ಲಿ ವಿಶೇಷ ಸಾಧನೆಗೈದ 75 ಸಾಧಕರನ್ನು ಗುರುತಿಸಿ ‘ಹವ್ಯಕ ಕೃಷಿರತ್ನ’ ಪ್ರಶಸ್ತಿಯೊಂದಿಗೆ ಸನ್ಮಾನಿಸುವ ವಿಶೇಷ ಕಾರ್ಯಕ್ರಮವಿದೆ.
 • ಮಧ್ಯಾಹ್ನ 12:00 ಘಂಟೆಗೆ: ಹೆಸರಾಂತ ಕಲಾವಿದರ ಕೂಡುವಿಕೆಯಲ್ಲಿ ಕಲಾವಿದರ ‘ಅಭಿನಯ ರಂಗ’ ಎಂಬ ವಿನೂತನ ರಂಗಕಾರ್ಯಕ್ರಮ ನಡೆಯಲಿದೆ.
 • ಅಪರಾಹ್ನ  2:00 ಘಂಟೆಗೆ: ಹವ್ಯಕ ಜನಜೀವನ ಕುರಿತಾಗಿ ವಿಚಾರಮಯ ಗೋಷ್ಠಿಗಳು ನಡೆಯಲಿದೆ.
 • ಸಾಯಂ 5:00 ಘಂಟೆಗೆ: ಪೇಜಾವರ ಅಧೋಕ್ಷಜ ಪೀಠಾಧೀಶರಾದ ಶ್ರೀಶ್ರೀವಿಶ್ವೇಶತೀರ್ಥ ಶ್ರೀಪಾದಂಗಳವರ ದಿವ್ಯ ಉಪಸ್ಥಿತಿಯಲ್ಲಿ, ಅನೇಕ ಪ್ರಸಿದ್ಧ ಕಲಾವಿದರ ಕೂಡುವಿಕೆಯಲ್ಲಿ, ಉಭಯ ತಿಟ್ಟುಗಳ ಮನಮೋಹಕ ‘ಯಕ್ಷಗಾನ ನೃತ್ಯೋತ್ಸವ’ ಎಂಬ ಯಕ್ಷ ಪ್ರದರ್ಶನ ನಡೆಯಲಿದೆ.

 

ಡಿಸೆಂಬರ್ 30ರಂದು:

 • ಬೆಳಗ್ಗೆ 9:00 ಘಂಟೆಗೆ: ಹವ್ಯಕರು ದೇಶಭಕ್ತರು. ದೇಶಸೇವೆಗಾಗಿ ಸೇನೆಯಲ್ಲಿ ಗಣನೀಯವಾಗಿ ಸೇವೆ ಸಲ್ಲಿಸಿದ ಆಯ್ದ 75 ಸೈನಿಕರಿಗೆ ‘ಹವ್ಯಕ ದೇಶರತ್ನ’ ಸನ್ಮಾನ ಸಲ್ಲಲಿದೆ. ವಾಗ್ಮಿ ಚಕ್ರವರ್ತಿ ಸೂಲಿಬೆಲೆಯವರ ದಿಕ್ಸೂಚಿ ಭಾಷಣವಿರಲಿದೆ. ದೇಶ ಕಂಡ ಸಜ್ಜನ ನಿವೃತ್ತ ಐ.ಪಿ.ಎಸ್. ಅಧಿಕಾರಿ ಶ್ರೀ ಟಿ. ಮಡಿಯಾಲ್ ಉಪಸ್ಥಿತರಿರುವರು.
 • ಬೆಳಗ್ಗೆ 10:00 ಘಂಟೆಗೆ: ವಿದ್ಯಾಕ್ಷೇತ್ರದಲ್ಲಿ ವಿಶೇಷಸಾಧನೆಗೈದು ರಾಜ್ಯ, ದೇಶಗಳ ಗಮನ ಸೆಳೆದ 75 ವಿದ್ಯಾರ್ಥಿಗಳಿಗೆ ‘ಹವ್ಯಕ ವಿದ್ಯಾರತ್ನ’ ಪುರಸ್ಕಾರವನ್ನು ನೀಡುವ ಕಾರ್ಯಕ್ರಮ. ವಿದ್ಯಾವಾಚಸ್ಪತಿ ಬನ್ನಂಜೆ ಗೋವಿಂದಾಚಾರ್ಯರು ದಿಕ್ಸೂಚಿ ಭಾಷಣ ಮಾಡಲಿದ್ದಾರೆ.
 • ಬೆಳಗ್ಗೆ 11:00 ಘಂಟೆಗೆ: ಹವ್ಯಕರ ಪರಂಪರೆ, ಕೃಷಿ, ಶಿಕ್ಷಣ, ವೃತ್ತಿ ಇವುಗಳಿಗೆ ಸಂಬಂಧಿಸಿದ ಗೋಷ್ಠಿಗಳು ನಡೆಯಲಿದೆ.
 • ಅಪರಾಹ್ನ 3:00 ಘಂಟೆಗೆ: ಸಮಾಜದ ವಿವಿಧ ಕ್ಷೇತ್ರಗಳಲ್ಲಿ ವಿಶೇಷ ಸಾಧನೆಗೈದ ಹವ್ಯಕರಿಗೆ ‘ಹವ್ಯಕ ಸಾಧಕರತ್ನ’ ಎಂಬ ಪ್ರಶಸ್ತಿ ಪುರಸ್ಕರಿಸುವ ಕಾರ್ಯಕ್ರಮ.
 • ಇದರೊಂದಿಗೇ, 75 ಯೋಗ್ಯ ಕುಟುಂಬಗಳಿಗೆ ದೇಶೀ ಗೋವುಗಳನ್ನು ಗೋದಾನ ಮಾಡುವ ಕಾರ್ಯಕ್ರಮವಿದೆ.
 • ಸಾಯಂ 4:00 ಘಂಟೆಗೆ: ಮೂರು ದಿನಗಳ ಭವ್ಯ, ದಿವ್ಯ, ಅಪೂರ್ವ ಕಾರ್ಯಕ್ರಮಕ್ಕೆ ತೆರೆ ಎಳೆಯುವ ಸುಸಮಯ. ಪರಮಪೂಜ್ಯ ಜಗದ್ಗುರುಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀ ಮಹಾಸ್ವಾಮಿಗಳವರ ದಿವ್ಯಸಾನ್ನಿಧ್ಯ ಇರಲಿದೆ. ಕೂಡಲಿ ಶೃಂಗೇರಿ ಮಠದ ಶ್ರೀಶ್ರೀವಿದ್ಯಾಭಿನವ ವಿದ್ಯಾರಣ್ಯಭಾರತೀ ಸ್ವಾಮಿಗಳು ಜೊತೆಗಿರಲಿದ್ದಾರೆ. ಕಾಂಚಿ ಕಾಮಕೋಟಿ ಪೀಠದ ಶ್ರೀಶ್ರೀಶಂಕರ ವಿಜಯೇಂದ್ರ ಸರಸ್ವತೀ ಮಹಾಸ್ವಾಮಿಗಳವರ ಉಪಸ್ಥಿತಿಯಿರಲಿದೆ. ನ್ಯಾಯಮೂರ್ತಿಗಳು, ಸಂಸದರು, ಧರ್ಮದರ್ಶಿಗಳು, ಹಿರಿಯ ರಾಜಕಾರಣಿಗಳು ನಮ್ಮೊಡನೆ ಇರಲಿದ್ದಾರೆ.
 • ಸಂಜೆ 6:00 ಘಂಟೆಗೆ: ಶ್ರೀಶ್ರೀರಾಘವೇಶ್ವರಭಾರತೀ ಮಹಾಸ್ವಾಮಿಗಳವರು ‘ಯಜ್ಞಧಾರಿಣೀ’ ಎಂಬ ಕಥಾವಸ್ತುವಿನ ರಾಮಕಥೆ ಪ್ರಸ್ತುತಪಡಿಸಲಿದ್ದಾರೆ. ಪ್ರವಚನ, ನಾದ, ಸಂಗೀತ, ರೂಪಕಗಳ ದೈವೀಪಾಕವದು.

 

ಇದರೊಂದಿಗೆ,

 • ಯಜ್ಞಶಾಲೆಯಲ್ಲಿ ಅತಿವಿಶಿಷ್ಟ ಪರಶುರಾಮ ಯಜ್ಞ
 • ನೂರಕ್ಕೂ ಹೆಚ್ಚಿನ ಯಜ್ಞಮಂಡಲಗಳ ಪ್ರದರ್ಶನ
 • ಲೋಕಕಲ್ಯಾಣಕ್ಕಾಗಿ ಹಲವಾರು ವೈದಿಕ ಕಾರ್ಯಕ್ರಮಗಳು
 • ಪಾಕೋತ್ಸವದಲ್ಲಿ ರುಚಿರುಚಿ ಅಡಿಗೆಗಳು, ಇನ್ನೂರಕ್ಕೂ ಹೆಚ್ಚಿನ ಹವ್ಯಕ ತಂಬುಳಿಗಳು
 • ಹವ್ಯಕರ ಪಾರಂಪರಿಕ ವಸ್ತುಗಳ ಪ್ರದರ್ಶನ
 • ಸ್ವಾಗತಕ್ಕಾಗಿ ವರ್ಣಮಯ ರಂಗೋಲಿಗಳು
 • ಚಿತ್ರ, ಚಿತ್ರಕಲೆ ಪ್ರದರ್ಶನ
 • ಅಡಿಕೆ ಕೃಷಿ ಕುರಿತಾದ ಪ್ರದರ್ಶನ
 • ಕರಕುಶಲ ವಸ್ತುಗಳ ಪ್ರದರ್ಶನ & ಮಾರಾಟ
 • ಕಣ್ಮರೆಯಾಗುತ್ತಿರುವ ‘ಆಲೆಮನೆ’ ಪ್ರದರ್ಶನ
 • ವಿವಿಧ ಅಪೂರ್ವ ತಳಿಗಳ ದೇಶೀಗೋವುಗಳ ಪ್ರದರ್ಶನ
 • ಭಾವ, ಮಾವ, ಅಪ್ಪಚ್ಚಿ, ಚಿಕ್ಕಮ್ಮ, ದೊಡ್ಡಪ್ಪ, ದೊಡ್ಡಮ್ಮ, ಅತ್ತೆ, ಅಜ್ಜ, ಅಜ್ಜಿಯರ ನಲ್ಮೆಯ ಮಾತುಗಳು
 • ಮಕ್ಕಳ ಆಟಕ್ಕೆ ವಿಶಾಲ ಅಂಗಣ
 • ಸುವ್ಯವಸ್ಥಿತ ಪಾರ್ಕಿಂಗ್ ವ್ಯವಸ್ಥೆ
 • ಮುಖ್ಯವಾಗಿ, ಮಧ್ಯಾಹ್ನ 1:00 ಮತ್ತು ರಾತ್ರಿ 8:00ಕ್ಕೆ ಶುಚಿ, ರುಚಿ, ವೈವಿಧ್ಯತೆಯನ್ನು ಒಳಗೊಂಡ ಸುಗ್ರಾಸ ಭೋಜನ
 • ಇನ್ನೂ ಏನೇನೋ ನೋಡಲೇಬೇಕಾದುವು, ಅನುಭವಿಸಲೇಬೇಕಾದ ಕಾರ್ಯಕ್ರಮಗಳು

 

ಒಟ್ಟಿನಲ್ಲಿ, ವಿಶ್ವ ಹವ್ಯಕ ಸಮ್ಮೇಳನ ನಾವೆಲ್ಲರೂ ಭಾಗಿಯಾಗಲೇಬೇಕಾದ ನಭೂತೋ ಕಾರ್ಯಕ್ರಮ. ಗುರುದೃಷ್ಟಿಯಿರುವ ಮಹಾಸಭಾ ತಂಡಕ್ಕೆ ಹೆಗಲಾಗಿ, ಕಾರ್ಯಕ್ರಮದ ಯಶಸ್ಸಿಗೆ ಗುರುಭಕ್ತರೆಲ್ಲರೂ ಕಾರಣರಾಗೋಣ. ಶ್ರೀಗುರುಗಳೇ ಶಿಷ್ಯರಿಗಿದು “ನಿಮಂತ್ರಣ” ಎಂದು ಆದೇಶಿಸಿರುವಾಗ, ತಡವೇಕೆ? ಬನ್ನಿ.

ಆಮಂತ್ರಣ-ನಿಮಂತ್ರಣ ಸ್ವಾಗತಾದರಾತಿಥ್ಯೋಪಚಾರ ಸ್ವಸ್ತಿವಾಚನ, ಮಂತ್ರ ಘೋಷಾದಿ ಪುರಸ್ಸರವಾಗಿ ಸಕಲ ಸಂಸ್ಕಾರಯುತ ಹವ್ಯಕರನ್ನೂ ಕರೆಯೋಣ. ಹವ್ಯಕೇತರರನ್ನೂ ಅತಿಥಿಗಳನ್ನಾಗಿ ಕರೆದು ಹವ್ಯಕ ಸಂಸ್ಕಾರವನ್ನು ಜಗತ್ತಿಗೆ ಪರಿಚಯಿಸೋಣ.

 

ಎಲ್ಲ ಒಪ್ಪಣ್ಣ, ಒಪ್ಪಕ್ಕಂದ್ರೇ, ಅಂಬಗ ನಾಡ್ತು ಕಾಂಬೊ. ಮುದ್ದಾಂ ಬನ್ನಿ.

Author Details


Srimukha

1 thought on “ರಾಜಧಾನಿಯ ಅರಮನೆ ಮೈದಾನದಲ್ಲಿ ಹವ್ಯಕತ್ವದ ಅನಾವರಣ!

 1. ಆನು ಬತ್ತೆ.
  ಎನ್ನ ಮಗನೂ ಬತ್ತ°.

  ನಾಡ್ದು ಕಾಂಬೊ.
  ವಿಶ್ವ ಹವ್ಯಕ ಸಮ್ಮೇಳನಕ್ಕೆ ಜಯವಾಗಲಿ!!

  ಹರೇ ರಾಮ

Leave a Reply

Your email address will not be published. Required fields are marked *