ಬದುಕು ಸಿಹಿಕಹಿಗಳ ಮಿಶ್ರಣ. ಆದರೆ ಇಲ್ಲಿ ಎಲ್ಲರೂ ಇಷ್ಟ ಪಡುವುದು ಕೇವಲ ಸಿಹಿಯನ್ನೇ. ಅಂತಹ ಸಿಹಿ ನೀಡೋ ಕಬ್ಬು ಅಂದ್ರೆ ಯಾರಿಗೆ ಇಷ್ಟ ಇಲ್ಲ ಹೇಳಿ?
ಆಲೆಮನೆ ಅಂದ್ರೆ ಏನೋ ಸಂಭ್ರಮ. ಬಾಲ್ಯದಲ್ಲಿ ಆಲೆಮನೆ ಅಂದ್ರೆ ಮೊದಲ ಹಾಜರಿ ನಮ್ಮದೇ. ಆಗ ಆಲೆ ಕಣೆಯಲ್ಲಿ ಆಲೆಮನೆ. ಅದಕ್ಕೆ ಕೋಣವನ್ನ ಕಟ್ಟಿ, ಅದರಲ್ಲಿ ಆಲೆಮನೆ. ಹೊಟ್ಟೆ ತುಂಬ ಹಾಲು ಕುಡಿದು, ಬಿಸಿ ಬಿಸಿ ನೊರೆ ಬೆಲ್ಲ ತಿಂದು ಮನೆಗೆ ಕಬ್ಬನ್ನು ಹಿಡ್ಕೊಂಡು ತಿಂತ ಹೋಗೋ ಮಜಾನೇ ಬೇರೆ.
ಕಾಲ ಸರಿದಂತೆ ಕಣೆಯು ಇಲ್ಲ, ಕೋಣವು ಇಲ್ಲ. ಈಗ ಎಲ್ಲ ಮಷಿನ್ ಮಹಿಮೆ. ಬಟನ್ ಒತ್ತಿದರೆ ಮೋಟರ್ ಆನ್. ಕಬ್ಬಿನ ಹಾಲು ರೆಡಿ. ಆದ್ರೂ ಕಬ್ಬಿನ ಹಾಲಿನ ರುಚಿಗೇನು ಕಮ್ಮಿ ಇಲ್ಲ ಬಿಡಿ. ನೊರೆ ಬೆಲ್ಲವನ್ನು ಮುತ್ತಗದ ಎಲೇಲಿ ಹಾಕ್ಕೊಂಡು, ಅದೇ ಕಬ್ಬಿನ ಜೆಲ್ಲೆಲಿ ಬಿಸಿ ಬಿಸಿ ಬೆಲ್ಲ ತಿನ್ನುತ್ತಾ ಇದ್ರೆ ಅದರ ಖುಷಿನೇ ಬೇರೆ.
ಇಷ್ಟೆಲ್ಲ ರುಚಿ ನೀಡೋ ಕಬ್ಬು, ರುಚಿ ಜೊತೆಗೆ ಬದುಕಿಗೆ ಒಂದಷ್ಟು ಪಾಠನೂ ಕಲಿಸತ್ತೆ.
ಪ್ರಾರಂಭದಲ್ಲಿ ಚಿಕ್ಕ ಚಿಕ್ಕ ಬೀಜದಿಂದ ಮೊಳಕೆ ಒಡೆದು ಹತ್ತಾರು ಹಿಳ್ಳುಗಳಾಗಿ ಬೆಳೆದು ನಿಂತಿತೆಂದ್ರೆ ನೋಡಲು ಸೊಗಸು. ಅದರ ರುಚಿ ನೆನೆದರೆ ಬಾಯಲ್ಲಿ ನೀರು. ಆದರೆ ಆ ಕಬ್ಬಿನಿಂದ ಸಿಹಿ ಪಡೆಯಲು ಅದನ್ನು ಹಿಂಡಿ ಹಿಪ್ಪೆಯಾಗಿಸೋದು ಅನಿವಾರ್ಯ. ಆದರೂ ಅದು ಕೇವಲ ಸಿಹಿಯನ್ನೇ ನೀಡುವುದು ಅದರ ವಿಶೇಷತೆ. ಕಬ್ಬನ್ನು ಗಾಣದಲ್ಲಿ ಹಾಕಿ ಹಿಂಡಿದಷ್ಟೂ ರುಚಿಯಾದ ಹಾಲು ಸಿದ್ದ. ಅದರ ಬೆಲ್ಲವೂ ರುಚಿ. ಹೀಗೆ ಸಿಹಿ ಕೊಡುವ ಕಬ್ಬು ಸಿಪ್ಪೆಯಾಗುವುದು ಖಂಡಿತ. ಅದೇ ಅದರ ಜೀವನ ಕೂಡ. ಜೊತೆಗೇ ಸಿಹಿಯ ಹಂಚೊದೂ.
ಹೀಗೆ ನಮ್ಮ ಬದುಕಿನ ಉದ್ದೇಶವು ಕಬ್ಬಿನಂತೆ ಸಿಹಿಯನ್ನೇ ನೀಡುವುದಾಗಿರಲಿ. ಎಷ್ಟೇ ಕಷ್ಟಗಳೆಂಬ ಪರೀಕ್ಷೆಗಳು ಸಾಲಾಗಿ ಬರಲಿ, ನಮ್ಮನ್ನು ಹಿಂಡಲಿ, ನಾವು ಒಳಿತನ್ನೇ ಬಯಸೋಣ. ಹಾಗೆಂದ ಮಾತ್ರಕ್ಕೆ ನಮ್ಮ ಜೀವನವನ್ನೇ ಸಿಪ್ಪೆಯಾಗಿಸಿ ಬೇರೆಯವರಿಗೆ ಸಿಹಿ ಕೊಡಬೆಕೆಂದೇನು ಇಲ್ಲ. ಆದರೆ ಬೇರೆಯವರಿಗೆ ಕಹಿ ಉಂಟು ಮಾಡದೆ ಸಿಹಿ ನೀಡುವ ಕಾರ್ಯ ಮಾಡಬಹುದಲ್ವಾ?
ಕಬ್ಬನ್ನು ತಿಂದು, ಹಾಲು ಕುಡಿದು, ಅದನ್ನು ಜಲ್ಲೆ ಮಾಡಿದ ನಾವು ಒಮ್ಮೆಯಾದರೂ ಅದು ತನ್ನ ಅರ್ಪಿಸಿ ನಮಗೆ ಸಿಹಿ ನೀಡಿದ್ದರೆ ಬಗ್ಗೆ ಚಿಂತಿಸಿಲ್ಲ. ಹೀಗೆ ಕಬ್ಬಿನಂತೆ ನಮಗೆ ಸಿಹಿ ನೀಡಿದವರು ಹಲವರು. ಅವರ ಪಾಡು ಹೀಗೆ. ಉಪಯೋಗಿಸಿಕೊಂಡು ಅವರಿಂದ ಸಿಹಿ ಉಂಡು ಅವರಿಗೆ ಕಹಿ ನೀಡಿ ಅವರ ಬದುಕ ಹಿಂಡಿ ಹಿಪ್ಪೆ ಮಾಡಿ ಎಸೆಯುವವರು ನಾವು. ನಮಗೆ ಒಮ್ಮೆಯಾದರು ನಮ್ಮ ತಪ್ಪಿನ ಅರಿವಾಗಲಿ, ಅವರಿಂದ ಪಡೆದ ಸಿಹಿಯಾಗಲಿ, ನೆನಪಿಗೆ ಬರದಿರುವುದು ದುರಂತ.
ತಾನು ಬಿಸಿಲ ನುಂಗಿ ತಂಪು ಕೊಡುವುದು ಮರ. ತಾನು ಹಿಪ್ಪೆಯಾಗಿ ಸಿಹಿ ಕೊಡುವ ಕಬ್ಬು. ಹೀಗೆ ಹುಡುಕಿದಷ್ಟೂ ಪಾಠವೇ ಪ್ರಕೃತಿಯಲ್ಲಿ. ಇರುವಷ್ಟು ಕಾಲ ಸಿಹಿ ನೀಡಿ ನಮ್ಮ ಬದುಕನ್ನು ಸಿಹಿಯಾಗಿಸಿ ಕೊಳ್ಳೋಣ. ಬದುಕ ಸಿಹಿಯಾಗಿಸಿದವರತ್ತ ಒಂದು ಕೃತಜ್ಞತಾ ಭಾವ ಬಿರೋಣ..