ಎಲ್ಲರೊಳಗೂ ಇರುವ ಭಗವಂತ

ಅಂಕಣ ಸ್ಫಟಿಕ~ಸಲಿಲ : ಮಹೇಶ ಕೋರಿಕ್ಕಾರು

ಝೀ ಕನ್ನಡ ವಾಹಿನಿಯ ಸರಿಗಮಪ ವೇದಿಕೆಯಲ್ಲಿ ಋತ್ವಿಕ್ ಎಂಬ ಹೆಸರಿನ ಅಪ್ರತಿಮ ಗಾಯಕನೊಬ್ಬನಿದ್ದಾನೆ. ಅವನ ಹೆಸರನ್ನು ಇಲ್ಲಿ ಹೇಳುವುದಕ್ಕೊಂದು ಕಾರಣವಿದೆ.  ಸ್ಪರ್ಧೆಯಲ್ಲಿರುವ ಉಳಿದ ಗಾಯಕರು ಕಾಣುವ ಈ ಲೋಕವನ್ನು ಅವನು ಕಾಣುವುದೇ ಇಲ್ಲ. ಹುಟ್ಟಿನಿಂದ ಕುರುಡನಾಗಿರುವ ಆತ ನಮ್ಮ ನಿಮ್ಮ ನಡುವೆಯೇ ಇದ್ದರೂ ಜೀವಿಸುತ್ತಿರುವುದು ನಾದಲೋಕದಲ್ಲಿ. ಅವನು ಹಾಡುತ್ತಿರಬೇಕಾದರೆ, ಸುತ್ತಲೂ ಕುಳಿತು ತಲೆದೂಗುವ ಪ್ರೇಕ್ಷಕರ ಚಪ್ಪಾಳೆಗಳು, ನಿರ್ಣಾಯಕರಾಗಿ ಕುಳಿತ ಮಹಾನುಭಾವರ ಬಿಚ್ಚು ನುಡಿಗಳು ಅವನ ಕಿವಿಗಳಿಗೆ ಕೇಳಿಸುತ್ತವೆಯೇ ಹೊರತು, ಆ ಹಾಡಿಗೆ ಮೈಮರೆತು ತಲೆದೂಗುವ ಅವರ ಭಾವಾಭಿವ್ಯಕ್ತಿಯು ಅವನಿಗೆ ಗೋಚರಿಸುವುದೇ ಇಲ್ಲ.  

 

ತಾನು ನಿಂತಿರುವ ವೇದಿಕೆಯಾಗಲೀ, ತನ್ನ ಹಾಡನ್ನು ಸೆರೆಹಿಡಿವ ಕ್ಯಾಮೆರಾವಾಗಲೀ, ವಿಶ್ವದುದ್ದಗಲ ಟಿವಿ ಪರದೆಯ ಮುಂದೆ ನಿಂತು ನೋಡುವ ಪ್ರೇಕ್ಷಕಗಣವಾಗಲಿ, ಹೇಗಿರುವುದೆನ್ನುವ ಕಲ್ಪನೆಯೇ ಅವನಿಗಿಲ್ಲ.

 

ಸದಾಕಾಲ ಅವನ ಬೆನ್ನ ಹಿಂದೆಯೇ ನಿಂತಿರುವ ಅವನ ತಾಯಿಯೇ ಅವನ ಕಣ್ಣುಗಳು. ಹಾಡುವ ಹೊತ್ತು ಅವನ ಕೈಹಿಡಿದು ನಿಂತಿರುವ ಆ ತಾಯಿಯ ಕರಸ್ಪರ್ಶವೇ ಅವನಿಗೆ ಆತ್ಮವಿಶ್ವಾಸ. ಹುಟ್ಟಿನಿಂದ ಇಂದಿನವರೆಗೆ ಆ ತಾಯಿ ಹೇಗಿರುವಳೆಂದು ಕಂಡು ಅರಿತವನಲ್ಲ ಅವನು. ಬಳಿ ಬಂದು ನಿಂತ ಅವರ ಸ್ಪರ್ಶ, ಮೈ ಸೋಕುವ ಅವರ ಏದುಸಿರು, ಅವರ ದೇಹದ ಗಂಧ, ಅವರ ಕಂಠದಿಂದ ಮೊಳಗುವ ಸಾಂತ್ವನ ಧ್ವನಿ, ಇವಿಷ್ಟೇ ತಾಯಿ ಇರುವಳೆಂಬ ವಿಶ್ವಾಸವನ್ನು ಅವನಲ್ಲಿ ಮೂಡಿಸುವವುಗಳು.

 

ಹಾಗೆ ನೋಡಿದರೆ, ಬರಿಗಣ್ಣಿನಿಂದ ನೋಡಿರದಿದ್ದರೂ, ನಾವ್ಯಾರೂ ನೋಡಿರದ ಅಂತ:ಚಕ್ಷುಗಳಿಂದ ಈ ಲೋಕವನ್ನವನು ನೋಡಿದ್ದಾನೆ. ನಮಗಾರಿಗೂ ಇಲ್ಲದ ವಿಶ್ವಾಸದಿಂದಲೇ ಅವನು ಈ ಲೋಕದ ಸಕಲ ಸೃಷ್ಟಿಗಳನ್ನೂ ನಂಬಿದ್ದಾನೆ.

 

ಅಂಧನಾದ ಋತ್ವಿಕನ ಹಿಂದೆ ಅವನ ಕಣ್ಣಿಗೆ ಗೋಚರಿಸದ ತಾಯಿ ಹೇಗೆ ನಿಂತಿರುವಳೋ, ಹಾಗೆಯೇ ಈ ಜಗತ್ತಿನ ತಾಯಿಯೂ ತಂದೆಯೂ ಆದ ಭಗವಂತನು ನಮ್ಮ ನಿಮ್ಮೆಲ್ಲರ ಹಿಂದೆ ಸದಾ ನಿಂತಿರುತ್ತಾನೆ. ಅವನ ಸ್ಪರ್ಶ, ಗಂಧ, ನಾದಗಳನ್ನರಿವ ಅಂತ:ಚಕ್ಷು ನಮ್ಮೊಳಗಿದ್ದರೆ ಅವನ ಇರುವನ್ನು ನಾವೂ ಗ್ರಹಿಸಿಕೊಳ್ಳಬಹುದು. ಭಗವಂತನ ಪೂಜೆಯಲ್ಲಿ ನಾವು ಬಳಸುವ ಸಾಧನಗಳನ್ನು ಒಮ್ಮೆ ನೆನೆದುಕೊಳ್ಳಿ. ಶಂಖ, ಜಾಗಟೆ, ಮಂತ್ರಘೋಷ, ಆರತಿ, ದೀಪ, ಧೂಪ, ಕರ್ಪೂರ, ಚಂದನ, ಚಾಮರ, ತೀರ್ಥ, ಹೂವು, ಹಣ್ಣು, ತುಳಸಿ, ತೆಂಗಿನಕಾಯಿ, ನಾನಾ ಬಗೆಯ ಭಕ್ಷ್ಯಗಳು. ಒಂದೇ ಎರಡೇ! ನಮ್ಮ ಕಣ್ಣ ಮುಂದಿರುವ ಯಾವೆಲ್ಲ ವಸ್ತುಗಳನ್ನು ನಾವು ಭಗವಂತನಿಗೆ ಸಮರ್ಪಿಸುವುದಿಲ್ಲ ಹೇಳಿ.

 

ನಿತ್ಯವೂ ನಮ್ಮ ಕಣ್ಣ ಮುಂದೆಯೇ ಇರುವ ಈ ಎಲ್ಲ ವಸ್ತುಗಳಲ್ಲಿ ನಾವು ಭಗವಂತನನ್ನು ಕಾಣುವುದೇ ಇಲ್ಲ. ಆದರೆ, ಪೂಜೆಯ ಆ ಹೊತ್ತು? ಮಂತ್ರದಲ್ಲಿ, ತೀರ್ಥದಲ್ಲಿ, ಹೂವಿನಲ್ಲಿ, ಜ್ಯೋತಿಯಲ್ಲಿ, ಗಂಧದಲ್ಲಿ, ಗಾಳಿಯಲ್ಲಿ ಭಗವಂತನ ಇರುವನ್ನು ಒಮ್ಮೆಯಾದರೂ ಗ್ರಹಿಸಿಕೊಳ್ಳುವುದಿಲ್ಲವೇ ನಾವು? ಹಾಗೆ ಗ್ರಹಿಸಿಕೊಳ್ಳದಿದ್ದರೆ ಅದು ಪೂಜೆಯೇ ಅಲ್ಲ. ಅಲ್ಲವೇ?

 

ತನ್ನ ಸುತ್ತಲ ನಾದದಲ್ಲಿ, ಸ್ಪರ್ಶದಲ್ಲಿ ಋತ್ವಿಕನು ತನ್ನ ತಾಯಿಯನ್ನು ಕಾಣುವಂತೆಯೇ, ನಮ್ಮ ಕಣ್ಣ ಮುಂದಿನ ಸಕಲ ವಸ್ತುಗಳಲ್ಲಿಯೂ ಭಗವಂತನನ್ನು ಕಾಣುವ ಅಂತ:ಚಕ್ಷುವು ನಮ್ಮ ನಿಮ್ಮೆಲ್ಲರೊಳಗೂ ಜಾಗೃತವಾದಂದು ಶಂಕರರು ಹೇಳಿದ ‘ಯದ್ಯತ್ ಕರ್ಮ ಕರೋಮಿ ತತ್ತದಖಿಲಂ ಶಂಭೋ ತವಾರಾಧನಂ’ ಎಂಬ ವಾಕ್ಯವು ಅರ್ಥವಾಗುವುದು.

Author Details


Srimukha

Leave a Reply

Your email address will not be published. Required fields are marked *