ಹವ್ಯಕ ಮಹಾಸಭಾ – ಶ್ರೀ ಗಿರಿಧರ ಕಜೆ

ಅಂಕಣ ಆ ಕಣ್ಣಿಂದ : ಮೋಹನ ಭಾಸ್ಕರ ಹೆಗಡೆ ಹೆರವಟ್ಟ

ಶ್ರೀ ಅಖಿಲ ಹವ್ಯಕ ಮಹಸಭಾ ಎನ್ನುವ ಸಂಸ್ಥೆಯು ಕಳೆದ ನಾಲ್ಕು ವರ್ಷಗಳಲ್ಲಿ ಸಮಾಜದ ಪ್ರತಿಯೊಂದು ಸ್ತರಗಳಲ್ಲಿಯೂ ಚರ್ಚೆಯಾಗುತ್ತಿದೆ. ಅದರಲ್ಲಿಯೂ ವಿಶೇಷವಾಗಿ ಬೇರೆ ಬೇರೆ ಸಮಾಜದವರೂ ಕೂಡ ಈ ಸಮಾಜವನ್ನು ನಿಬ್ಬೆರಗಾಗಿ ನೋಡುವಂತಹ ಸ್ಥಿತಿ ನಿರ್ಮಾಣವಾಗುತ್ತಿದೆ. ಎಲ್ಲಿಯೋ ಒಮ್ಮೆ ನಾವೂ ಹಿಂದಿರುಗಿ ನೋಡಿದಾಗ ಒಂದಿಷ್ಟು ವಿಚಾರಗಳ ನಡುವೆ ಸಿಲುಕಿಕೊಂಡು ಒಂದಿಷ್ಟು ನಿರ್ದಿಷ್ಟ ಕಾರ್ಯಕ್ರಮಗಳ ಸುತ್ತಮುತ್ತ ಸಾಗುತ್ತ, ಒಂದು ಸಮಾಜದ ಪ್ರಾತಿನಿಧಿಕ ಸಂಸ್ಥೆ ಮುಂದುವರಿಯುತ್ತಿರುವುದನ್ನು ಗಮನಿಸುತ್ತಿದ್ದೆವು.

 

ಆದರೆ ಇತ್ತೀಚೆಗೆ ಯಾವ ಕಟ್ಟಡ ಅಪೂರ್ಣವಾಗಿತ್ತೋ ಯಾವ ಕಟ್ಟಡದ ಮೇಲೆ ಋಣಭಾರ ಇತ್ತೋ ಆ ಸ್ಥಿತಿಯಲ್ಲಿ ಅದರ ಚುಕ್ಕಾಣಯನ್ನು ಹಿಡಿದು ಸತತ ನಾಲ್ಕು ವರ್ಷಗಳ ಕಾಲ ಅದನ್ನು ಮುನ್ನಡೆಸಿಕೊಂಡು ಬರುತ್ತಿರುವ ಡಾ. ಗಿರಿಧರ ಕಜೆ ಹಾಗೂ ಅವರ ಕಾರ್ಯಕಾರಿ ಮಂಡಳಿ ಸಮಾಜದ ಸಾತ್ತ್ವಿಕ ಅಭಿನಂದನೆಗೆ ಅರ್ಹವಾಗಿದೆ. ಆ ಕಣ್ಣಿಂದ ಇದನ್ನು ನೋಡುವ ಪ್ರಯತ್ನ ಮಾಡುವಾಗ ನಾವು ಕಂಡಿದ್ದು ಶ್ರೀರಾಮಚಂದ್ರಾಪುರ ಮಠದ 35ನೆಯ ಯತಿವರೇಣ್ಯರು ಯಾವ ದೂರದರ್ಶಿತ್ವದಿಂದ ಸಮಾಜದ ಸರ್ವರನ್ನೂ ಒಳಗೊಂಡಂತಹ ಒಂದು ಪ್ರಾತಿನಿಧಿಕ ಸಂಸ್ಥೆ ಇರಬೇಕು, ಅದರ ವ್ಯಾಪ್ತಿ ವಿಸ್ತಾರ ಶ್ರೇಯೋಭಿವೃದ್ಧಿಗಾಗಿ ಇರಬೇಕು,  ಸಾರ್ವಕಾಲಿಕವಾದಂತಹ ಹೆಜ್ಜೆ ಗುರುತುಗಳನ್ನು ಅದು ಮೂಡಿಸುವಂತಿರಬೇಕು ಎಂದೆಲ್ಲ ಯೋಚಿಸಿ ಆಶೀರ್ವದಿಸಿ, ಈ ಸಂಸ್ಥೆಯನ್ನು ಕಟ್ಟುವಲ್ಲಿ ಪ್ರೇರಣೆಯನ್ನೂ ಮಾರ್ಗದರ್ಶನವನ್ನೂ ನೀಡಿದರೋ ಅದರ ನಿಜವಾದ ಅರ್ಥ ಅದರ ನಿಜವಾದ ಸತ್ತ್ವ ಏನು ಎನ್ನುವುದು ಕಳೆದ ನಾಲ್ಕು ವರ್ಷಗಳಲ್ಲಿ ಕಾಣುವಂತಾಯಿತು. ಆನಂತರ ಈ ಸಮುದಾಯಕ್ಕೆ ಇರುವಂತಹ ಗುರುಪೀಠಗಳಲ್ಲಿ ಶ್ರೀರಾಮಚಂದ್ರಾಪುರ ಮಠ ಹಾಗೂ ಶ್ರೀ ಸ್ವರ್ಣವಲ್ಲೀ ಮಠ ಮತ್ತು ನೆಲೆಮಾವು ಮಠ ಇವುಗಳಿಗೆ ನಡೆದುಕೊಳ್ಳುವ ಶಿಷ್ಯರು ಸೇರುತ್ತಾರೆ.

 

    ಈ ಹವ್ಯಕ ಮಹಾಸಭಾದ ಕಾರ್ಯ ಎಂದಾಗ ಎಲ್ಲರೂ ಒಮ್ಮತದಿಂದ ನಮ್ಮ ಸಮಾಜ ಸಮುದಾಯ ಎಂಬ ಅತ್ಯುನ್ನತವಾದಂತಹ ಭಾವದಿಂದ ಕಾರ್ಯವನ್ನು ನಿರ್ವಹಿಸಬೇಕಾಗುತ್ತದೆ. ಈ ಸಂಸ್ಥೆ ತನ್ನ ಅಸ್ಮಿತೆಯನ್ನು ಉಳಿಸಿಕೊಳ್ಳುವಾಗ, ಅಸ್ಮಿತೆಯನ್ನು ವಿಸ್ತರಿಸುವಾಗ ಬೌದ್ಧಿಕತೆಯನ್ನೇ ಆಧಾರವನ್ನಾಗಿಸಿಕೊಂಡಿದೆಯೇ ಹೊರತು ಅನ್ಯಥಾ ಅಲ್ಲ. ರಾಮಕೃಷ್ಣ ಹೆಗಡೆಯವರಂಥಹ ಧೀಮಂತ ನಾಯಕರೂ ರಾಜಕೀಯ ಕ್ಷೇತ್ರದಲ್ಲಿ ಆಳಿ ಬೆಳಗಿದರು. ಆ ಎತ್ತರವನ್ನು ಈ ಸಮಾಜದಲ್ಲಿ ಇನ್ನಾರೂ ಏರಲಿಲ್ಲ. ಯಾವುದೇ ಕ್ಷೇತ್ರವನ್ನು ನಾವು ಗಮನಿಸಿದರೂ ಆ ಕ್ಷೇತ್ರಕ್ಕೆ ಈ ಸಮುದಾಯದವರ ಕೊಡುಗೆ ಇಲ್ಲದೇ ಇಲ್ಲ. ಅಂದರೆ ಅಲ್ಲೆಲ್ಲ ಈ ಸಮುದಾಯ ಕೆಲಸವನ್ನು ಮಾಡಿದೆ. ತಮ್ಮ ಬೌಧ್ಧಿಕತೆ ಅದರ ಶಕ್ತಿಸಾಮರ್ಥ್ಯಗಳನ್ನು ಅದು ತೋರ್ಪಡಿಸಿದೆ.

   

 

ಮುಖ್ಯವಾಗಿ ನಾನು ಗಮನಿಸಲಿಕ್ಕೆ ಹೊರಟಿದ್ದು ತುಂಬ ವರ್ಷಗಳ ಕಾಲ ಒಂದಿಷ್ಟು ಜನರ ಒಂದಿಷ್ಟು ಸಿದ್ಧವಾದಂತಹ ಯೋಚನೆಗಳ ವ್ಯವಸ್ಥೆಗಳ ನಡುವೆ ಸಾಗಿ ಬರುತ್ತಿತ್ತು. ಅರ್ಥಾತ್ ಎಲ್ಲಿಯೋ ಎಲ್ಲರ ಮಾತು ಎಲ್ಲೆಡೆ ಕೇಳಿ ಬಂದ ಮಾತು ನಮ್ಮ ಸಮಾಜದ ಸಂಘಕ್ಕೆ ಸಂಘಟನೆಗೆ ಅಖಿಲ ಹವ್ಯಕ ಮಹಾಸಭಾಕ್ಕೆ ಒಂದು ರೀತಿಯ ಜಾಡ್ಯತೆ ಇದೆ ಎಂದು. ಆದರೆ ಯಾವಾಗ ಡಾ. ಗಿರಿಧರ ಕಜೆಯವರು ಇದರ ನೇತೃತ್ವವನ್ನು ವಹಿಸಿಕೊಂಡರೋ ಆಡಳಿತ ಮಂಡಳಿಯನ್ನು ಕಾರ್ಯಕಾರಿ ಮಂಡಳಿಯನ್ನು ಚುರುಕುಗೊಳಿಸಿದರೋ ಈ ಕಾಲವನ್ನು ಮಹಾಸಭಾದ ಇತಿಹಾಸದ ಅಮೃತವರ್ಷದ ಹೊಸ್ತಿಲಲ್ಲಿರುವ ಈ ಸಂಘಟನೆಯ ಒಂದು ಮಹಾಸಾಧನಾ ಪರ್ವ ಅಂತ ಇದನ್ನು ಮುಕ್ತವಾಗಿ ಬಣ್ಣಿಸಬಹುದು.

 

ಹಾಗಿದ್ದರೆ ಏನು ಕಾರಣ ಎನ್ನುವದಕ್ಕೆ ಒಂದಲ್ಲ ನೂರು ಕಾರಣಗಳಿವೆ. ಕೆಲವನ್ನೇ ನಾವು ಯೋಚಿಸುವುದಾದರೂ ಮನೆಮನೆಗೆ ಈ ಸಂಘಟನೆಯ ಕಾರ್ಯಗಳು ತಲುಪಿವೆ. ಸಮುದಾಯದ ಕಟ್ಟಕಡೆಯ ವ್ಯಕ್ತಿಯೂ ಕೂಡ ಈ ಸಮುದಾಯದ ಎಲ್ಲ ಕಾರ್ಯಗಳನ್ನು ಗಮನಿಸುತ್ತಿದ್ದಾನೆ. ಕೇವಲ ಗಮನಿಸುವುದು ಮಾತ್ರವಲ್ಲ, ಪೂರ್ಣ ಪ್ರಮಾಣದಲ್ಲಿ ಅದರಲ್ಲಿ ತಾನು ತೊಡಗಿಕೊಂಡಿದ್ದಾನೆ. ಇದು ಹೇಗೆ ಸಾಧ್ಯವಾಯಿತು ಅಂತ ಕೇಳಿದರೆ ಇದನ್ನು ಕೇಂದ್ರೀಕೃತ ವ್ಯವಸ್ಥೆಯಿಂದ ಹೊರತು ಪಡಿಸಿ ಇದನ್ನು ವಿಕೇಂದ್ರೀಕರಣಗೊಳಿಸಿ ನಗರದ ಕೇಂದ್ರ ಸ್ಥಾನದ ಕಾರ್ಯದಿಂದ ಅದನ್ನು ಹೊರತು ಪಡಿಸಿ ಹಳ್ಳಿಹಳ್ಳಿಯ ಮನೆಮನೆಗಳಿಗೆ ಅದನ್ನು ತಲುಪುವಂತೆ ಮಾಡಿದ್ದು ಇದರ ಮುಖ್ಯ ಯಶಸ್ಸಿನಲ್ಲಿ ಒಂದು.

 

    ಚುನಾವಣೆಯನ್ನು ಪಾರದರ್ಶಕಗೊಳಿಸಿದ್ದು ಈ ಆಡಳಿತ ವ್ಯವಸ್ಥೆಗೆ ಹಿಡಿದ ಕನ್ನಡಿ. ಇಲ್ಲಿ ಚುನಾವಣೆಗಿಂತ ಮೊದಲೇ ಒಂದಿಷ್ಟು ಒಪ್ಪಂದಗಳನ್ನು ಮಾಡಿಕೊಂಡು ತಮಗೆ ಬೇಕಾದಂತೆ ಅದನ್ನು ನಿರ್ವಹಿಸುವ ವಿಧಾನವನ್ನು ಬದಿಗೊತ್ತಿ ಪ್ರಾಮಾಣಿಕವಾದ ಚುನಾವಣೆಯನ್ನು ಸಿದ್ಧಗೊಳಿಸಿದ್ದು ಒಂದು ಮಹತ್ತರವಾದ ಮೈಲಿಗಲ್ಲು.

 

    ಸದಸ್ಯರ ಸಂಖ್ಯೆ ವೃದ್ಧಿ ಮತ್ತು ವಿನೂತನವಾದ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು ಕೂಡ ಇವರ ಇನ್ನೊಂದು ವಿಶಿಷ್ಟವಾದ ಸಾಧನೆ.

 

    ಏನು ಹಾಗಂದರೆ?

    ಅಮೃತಮಹೋತ್ಸವದ ಹೊಸ್ತಿಲಿನಲ್ಲಿ ವಿಶ್ವಹವ್ಯಕಸಮ್ಮೇಳನ ಈ ಒಂದು ಯೋಚನೆಯನ್ನು ಕಟ್ಟಿಕೊಟ್ಟಿದ್ದು ಎಲ್ಲರೂ ಮೆಚ್ಚತಕ್ಕ ಒಂದು ಅಂಶ. ವಿಶ್ವಹವ್ಯಕಸಮ್ಮೇಳನ ಎನ್ನುವಲ್ಲಿಯೇ ಒಂದು ರೀತಿಯ ಸಮಾನತೆ ಇದೆ. ಒಂದು ರೀತಿಯ ಭವ್ಯತೆ ಇದೆ. ಒಂದು ರೀತಿಯ ಆಪ್ತತೆ ಇದೆ. ಈ ಯೋಚನೆಯನ್ನು ಮಾಡಿದ ಗಿರಿಧರ ಕಜೆಯವರು ಅಪರೂಪದ ವ್ಯಕ್ತಿಯಾಗಿ ಸಮಾಜದಲ್ಲಿ ಕಾಣಸಿಗುತ್ತಾರೆ. ವಿಶ್ವಹವ್ಯಕ ಸಮ್ಮೇಳನವನ್ನು ಕೇವಲ ಸಮುದಾಯದ ಸಮ್ಮೇಳನವನ್ನಾಗಿಸದೇ ಇರುವುದು ಅವರ ವ್ಯಕ್ತಿತ್ವಕ್ಕೆ ಹಿಡಿದ ಕೈಗನ್ನಡಿ. ಸಾಮಾನ್ಯವಾಗಿ ಅವರವರ ಸಮಾಜದ ಕಾರ್ಯಕ್ರಮ ಅದು ಜಾಗತಿಕ ಮಟ್ಟದ್ದಾದರೂ ಅದರಲ್ಲಿ ಅನ್ಯರು ಪೂರ್ಣಪ್ರಮಾಣದಲ್ಲಿ ಭಾಗವಹಿಸುವುದನ್ನು ನಾವು ಕಾಣುವುದಿಲ್ಲ. ಕೆಲವೆಡೆ ಕಂಡರೂ ಅದು ಕೇವಲ ಅಧಿಕಾರ ಅಥವಾ ರಾಜಕೀಯ ಪ್ರಲೋಭನೆಗಳ ಹಿನ್ನೋಟದಿಂದಲೇ ಇರುತ್ತಿತ್ತು. ಆದರೆ ಇಲ್ಲಿ ಚಿಂತನೆಯಲ್ಲಿ, ಸಲಹೆ ಸೂಚನೆಗಳನ್ನು ಕೊಡುವಲ್ಲಿ ಮುಂದೆ ಬೇಕಾದಂತಹ ಭವಿಷ್ಯ ನಿರ್ಮಾಣದಲ್ಲಿ ಎಲ್ಲ ಕಡೆಗಳಲ್ಲಿ ಬೇರೆ ಬೇರೆ ಕ್ಷೇತ್ರದ ತಜ್ಞರು, ಸಾಹಿತಿಗಳು, ರಾಜಕೀಯ ಧುರೀಣರು, ಸಾಮಾಜಿಕ ಗಣ್ಯರು, ಬೇರೆಲ್ಲ ಅಧಿಕಾರಗಳಲ್ಲಿರುವಂತಹ ನಿಪುಣರು ಇವರೆಲ್ಲ ಇದರಲ್ಲಿ ತೊಡಗಿಕೊಂಡಿದ್ದು ಮೂರು ದಿನಗಳ ಒಂದು ಮಹಾಸಮ್ಮೇಳನದ ಹೂರಣ. ಬಂದ ಅತಿಥಿಗಳಿಗೆ ಹವ್ಯಕರ ವಿಶೇಷ ಪಾಕಶಾಸ್ತ್ರದ ಪರಿಣ ತಿಯ ಉಣಬಡಿಸುವಿಕೆ, ನಮ್ಮ ಪಾರಂಪರಿಕ ಉದ್ಯೋಗಗಳು, ನಮ್ಮ ಕೃಷಿ ವಿಧಾನಗಳು ಈ ಎಲ್ಲ ವಿಚಾರಗಳೂ ಅದರಲ್ಲಿ ಸೇರಿದ್ದು, ವಿಚಾರ ಸಂಕಿರಣಗಳು ಒಳಗೊಂಡಿದ್ದು  ಈ ಎಲ್ಲವೂ ಒಂದಕ್ಕಿಂತ ಒಂದು ಭಿನ್ನ, ಒಂದಕ್ಕಿಂತ ಒಂದು ವಿಶೇಷ.

 

ಬೆಂಗಳೂರಿನ ಅರಮನೆ ಮೈದಾನದಲ್ಲಿ ಮೂರುದಿನಗಳ ಕಾಲ ನಡೆದ ಈ ಮಹಾ ಸಮ್ಮೇಳನ ಒಂದು ಚರಿತ್ರಾರ್ಹವಾದ ದಾಖಲೆ. ಇದರಿಂದಾಗಿ ಇಡೀ ಸಮುದಾಯದಲ್ಲಿ ಎಲ್ಲಿಯೋ ಹಾಸುಹೊಕ್ಕಾಗಿ ಸಾಗುತ್ತಿದ್ದ ಆ ಜಾಡ್ಯತೆ ಸಂಪೂರ್ಣವಾಗಿ ಕರಗಿಹೋಯಿತು, ಬಿಸಿಲ ಝಳಕ್ಕೆ ಕರಗುವ ಮಂಜುಗಡ್ಡೆಯಂತೆ. ಕೇವಲ ಕರಗಲಿಲ್ಲ, ಹೊಸಚೈತನ್ಯವನ್ನು ಪುಟಿದೆಬ್ಬಿಸಿತು. ಸಣ್ಣಪುಟ್ಟ ವಿಚಾರಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಂತ ಎಷ್ಟೋ ಜನರು ತರಗೆಲೆಗಳಂತೆ ಇದರ ಯಶಸ್ಸಿನ ಮುಂದೆ ಹಾರಿಹೋದರು. ಕೆಲವು ಸಣ್ಣಪುಟ್ಟ ವಿಚಾರಗಳನ್ನೇ ವಿಸ್ತರಿಸುವ ಅಥವಾ ಬೃಹತ್ತಾನ್ನಾಗಿಸುವ ಮನೋಭಾವದ ಅದೆಷ್ಟೋ ಜನರು ಈ ಯಶಸ್ಸಿನ ಅನಂತರ ಬೆಪ್ಪಳಸಿ ನಿಂತರು. ಕೇವಲ ಕಾರ್ಯಕ್ರಮವಲ್ಲ, ಕಾರ್ಯಕ್ರಮದುದ್ದಕ್ಕೂ ಸಾಗಿ ಬಂದ ಅಚ್ಚುಕಟ್ಟುತನ, ಅದರಲ್ಲಿ ಭಾಗವಹಿಸಿದ ಗಣ್ಯಾತಿಗಣ್ಯರುಗಳು, ಅವರ ಅಂಬೋಣಗಳು, ಊಟೋಪಚಾರಗಳ ವ್ಯವಸ್ಥೆ, ಎಲ್ಲೆಡೆ ಕಂಡುಬಂದ ಶಿಸ್ತು, ಎಲ್ಲಿಯೂ ಘರ್ಷಣೆಗೆ ಸಂಘರ್ಷಕ್ಕೆ ಒಳಗಾಗದೇ ಇರುವ ವ್ಯವಸ್ಥೆ, ಇವೆಲ್ಲವೂ ಅಪೂರ್ವ ಮತ್ತು ವಿನೂತನವಾಯಿತು. ವಾಹನಗಳನ್ನು ನಿಲುಗಡೆ ಮಾಡುವುದರಿಂದ ಹಿಡಿದು ಎಲ್ಲಿಯೂ ಶಬ್ದ ಅಂದರೆ ಹಾರ್ನ್ ಮಾಡದೇ ಗಾಡಿಗಳು ಸರಿದು ಹೋಗುತ್ತಿರುವುದನ್ನು ನಾವು ಗಮನಿಸುತ್ತಿದ್ದೆವು. ಇವೆಲ್ಲದರ ಜೊತೆಯಲ್ಲಿ ಸಾಂಗವಾಗಿ ನಡೆದ ಯಜ್ಞಗಳು, ಯಜ್ಞದ ಮಾದರಿಗಳು, ಗೋವಿನ ಕುರಿತ ಅದೆಷ್ಟೋ ವಿಚಾರಗಳು, ಗೋವುಗಳ ಪ್ರದರ್ಶನ, ಮಕ್ಕಳಿಗೆ ಗೋವುಗಳೊಂದಿಗೆ ಆಟ, ಇಂತಹ ನೂರಾರು ಕಾರ್ಯಗಳು ಅಲ್ಲಿ ಸೇರಿದವು. ಸಮಾಜದಲ್ಲಿ ಇದ್ದಂತಹ ಕಲಾಪ್ರತಿಭೆಗಳು, ಸಾಂಸ್ಕೃತಿಕ ಪ್ರತಿಭಾವಂತರು ಅನ್ಯಾನ್ಯ ಕ್ಷೇತ್ರದಲ್ಲಿ ಶ್ರೇಷ್ಠರಾಗಿದ್ದಂತಹ ಸಮಾಜದ ರತ್ನ ಸದೃಶ ವ್ಯಕ್ತಿಗಳು, ಇವರೆಲ್ಲರನ್ನು ಆದರಿಸಿ ಸತ್ಕರಿಸಿದ್ದು ಅತ್ಯಂತ ವಿಶೇಷವಾಗಿತ್ತು. ಇದೆಲ್ಲದರ ಜೊತೆಯಲ್ಲಿ ಕೃಷಿಕರನ್ನು ಗುರುತಿಸಿದ್ದು, ವೈದಿಕರನ್ನು ಗುರುತಿಸಿದ್ದು, ಸಾಧಕರನ್ನು ಗುರುತಿಸಿದ್ದು, ಎಲ್ಲದಕ್ಕೂ ಶ್ರೇಷ್ಠವಾಗಿ ಯೋಧರನ್ನು ಗುರುತಿಸಿ ಗೌರವಿಸಿದ್ದು ಕೂಡ ಒಂದು ಅಪೂರ್ವವಾದಂತಹ ಕಾರ್ಯವಾಯಿತು.

 

ಇಂಥಹ ಒಂದು ಬೃಹತ್ತಾದಂತಹ ಯೋಜನೆಯನ್ನು, ಎಲ್ಲರನ್ನೂ ಒಳಗೊಂಡ ಈ ಬೃಹತ್ತಾದಂತಹ ಸಮ್ಮೇಳನವನ್ನು ತನ್ನ ಕರ್ತೃತ್ವ ಶಕ್ತಿಯಿಂದ ಯೋಜಿಸಿ ಕಾರ್ಯಗತಗೊಳಿಸಿದ ಡಾ. ಗಿರಿಧರ ಕಜೆಯವರಿಗೆ ಸಲ್ಲಲೇಬೇಕಾದಂತಹ ಒಂದು ಅಭಿನಂದನೆ. ಆರ್ಥಿಕವಾಗಿ ಇಂತಹ ಒಂದು ಯೋಜನೆಯನ್ನು ಕೈಗೆತ್ತಿಕೊಳ್ಳುವುದು ಸುಲಭ ಸಾಧ್ಯವಲ್ಲ. ಹಲವಾರು ಜನರ ನೆರವನ್ನು ಪಡೆಯಬೇಕು. ಅವರನ್ನು ಸಂಪರ್ಕಿಸಬೇಕು. ಇವುಗಳನ್ನೆಲ್ಲ ಗಮನಿಸುವಾಗ ಅವರು ಅದನ್ನು ನಿರ್ವಹಿಸಿದ ರೀತಿ ಅಪೂರ್ವವಾಗಿತ್ತು. ಸ್ವತಃ ತಾನೂ ದೊಡ್ಡ ಮೊತ್ತದಲ್ಲಿ ತನಗಿರುವ ಇನ್ನಿತರ ಹಲವಾರು ಕಷ್ಟಗಳ ನಡುವೆಯೂ ಕೊಡುಗೆಯನ್ನು ಕೊಟ್ಟು ಅವರು ಈ ಕಾರ್ಯಕ್ರಮದಲ್ಲಿ ಭದ್ರವಾಗಿ ನಿಂತಿದ್ದನ್ನು ಈ ಸಮಾಜ ಮರೆಯಲು ಸಾಧ್ಯವಿಲ್ಲ.

 

ಸಂಸ್ಥಾಪನೋತ್ಸವ – ಸಂಭ್ರಮೋತ್ಸವ

 

ಇದರ ಜೊತೆಯಲ್ಲಿ ಸಂಸ್ಥಾಪನಾ ದಿನ ಎನ್ನುವುದನ್ನು ಕೂಡ ವಿಜೃಂಭಣೆಯಿಂದಲೇ ಆಚರಿಸಿಕೊಂಡು ಬರಲಾಗುತ್ತಿದೆ. ಬಹುದೀರ್ಘಕಾಲ ಸಂಸ್ಥಾಪನಾ ದಿನಾಚರಣೆಯನ್ನು ಕರ್ತವ್ಯ ಎಂಬ ರೀತಿಯಲ್ಲಿ ಮಾಡಲಾಗುತ್ತಿತ್ತು. ಇವರ ಕಾಲದಲ್ಲಿ ಅದೊಂದು ಸಂಭ್ರಮದ ಕರ್ತವ್ಯ ಎಂದು ಅವರು ಮಾಡಿದರು. ಸಮಾಜದ ಏಳಿಗೆಗೆ ಶ್ರೇಷ್ಠತೆಗೆ ವಿಸ್ತಾರಕ್ಕೆ ಬೇಕಾದ ಅಂಕುರಾರ್ಪಣೆಯನ್ನು ಮಾಡಿದಂತಹ ಅವರುಗಳನ್ನು ಆದರದಿಂದ ಗೌರವಿಸುವ ಇವರ ಯೋಚನೆ ಉತ್ಕೃಷ್ಟವಾದದ್ದು. ಆ ಸಂದರ್ಭದಲ್ಲಿ ಹವ್ಯಕವಿಭೂಷಣ, ಹವ್ಯಕಭೂಷಣ, ಹವ್ಯಕ ಶ್ರೀ ಎಂಬ ಸಾಧಕರನ್ನು ಗೌರವಿಸುವ ಪ್ರಶಸ್ತಿಗಳನ್ನಿತ್ತು ಅವರನ್ನು ಆದರಿಸುವ ಕಾರ್ಯ ಮತ್ತು ಪಲ್ಲವ ಪುರಸ್ಕಾರ ಎಂಬ ಮಕ್ಕಳನ್ನು ಪ್ರೋತ್ಸಾಹಿಸುವಂತಹ ಕಾರ್ಯ ಇವೆಲ್ಲವೂ ಶ್ರೇಷ್ಠ ಎಂದೇ ಅನಿಸಿದೆ.

 

ಈಗ ಹವ್ಯಕದಲ್ಲಿ ಇಂತಹ ಒಂದು ಕಾರ್ಯಕ್ರಮ ಇದೆ ಅಂತ ಗೊತ್ತಾದರೆ ನಮ್ಮ ಸಮಾಜದ ಎಲ್ಲರೂ ತಮ್ಮ ವೈಯುಕ್ತಿಕ ಕಾರ್ಯಕ್ರಮಗಳನ್ನು ಬದಿಗಿರಿಸಿ, ಕರ್ತವ್ಯ ಶ್ರದ್ಧೆ ತನ್ಮಯತೆಯಿಂದ ಅಲ್ಲಿ ಭಾಗವಹಿಸುವುದನ್ನು ನಾವು ಗಮನಿಸುತ್ತೇವೆ. ಯೋಜಕಸ್ತತ್ರ ದುರ್ಲಭಾಃ ಎಂಬ ಗೀತೆಯ ಮಾತು ಕಜೆಯವರಿಗೆ ಪರಿಪೂರ್ಣವಾಗಿ ಅನ್ವಯಿಸುತ್ತದೆ. ಒಬ್ಬ ಸಮರ್ಥನಾದ ಯೋಜಕನಿದ್ದರೆ ಆ ಕಾರ್ಯ ಸುಗಮವಾಗುವುದು ಮತ್ತು ಅದು ದಿವ್ಯತೆಯನ್ನು ಪಡೆಯುವುದು ಎನ್ನುವುದರಲ್ಲಿ ಅನುಮಾನವೇ ಇಲ್ಲ.

 

ಇಂತಹ ಒಂದು ಅಪರೂಪದ ವ್ಯಕ್ತಿತ್ವವನ್ನು ಹೊಂದಿದ ಡಾ. ಗಿರಿಧರ ಕಜೆಯವರನ್ನು ಹೀಗೆ ಅಭಿನಂದಿಸಬೇಕು ಎಂದು ಮನಸ್ಸು ಬಂತು. ವೃತ್ತಿಯಲ್ಲಿ ಆಯುರ್ವೇದ ವೈದ್ಯರು. ಆಯುರ್ವೇದವನ್ನು ಕೂಡ ಅವರು ಕೇವಲ ವೈದ್ಯರಾಗಿ ನೋಡದೇ ಸಂಶೋಧಕರಾಗಿ ಅದರ ಮೂಲ ಸಾಧ್ಯತೆಗಳನ್ನು ಅಂತೆಯೇ ವಿಸ್ತರಿಸುತ್ತ ಯಾವ ಧಾವಂತದ ಯೋಚನೆಯಲ್ಲಿ ಸಮಾಜ ಸಾಗುತ್ತಿದೆಯೋ ಅದನ್ನು ಹಿಡಿದು ಜಗ್ಗಿ ನಿಲ್ಲಿಸಿ ಪುನಃ ಆಯುರ್ವೇದದತ್ತ ತಿರುಗುವಂತೆ ಮಾಡುವ ಒಂದು ಮಹಾಪ್ರಯತ್ನವನ್ನು ಅವರು ಕೈಗೊಂಡಿದ್ದು ಕೂಡ ಶ್ಲಾಘನೀಯವಾದದ್ದು. ಬೆಂಗಳೂರಿನಂತಹ ಮಹಾನಗರಿಯಲ್ಲಿ ಆರ್ಥಿಕ ಖರ್ಚುವೆಚ್ಛಗಳ ದೃಷ್ಟಿಯಿಂದ ಅವಲೋಕಿಸುವುದಾದರೆ ಬಹುಪಾಲು ದುಸ್ತರವಾದಂತಹ ಒಂದು ಯೋಜನೆಯಲ್ಲಿ ಅವರು ತನ್ನ ವೃತ್ತಿಕ್ಷೇತ್ರದಲ್ಲಿ ಕ್ರಾಂತಿಯನ್ನು ಮಾಡಿದರು. 21 ಶಾಖೆಗಳನ್ನು ಹೊಂದಿ ಅಲ್ಲಿಯ ಎಲ್ಲ ವ್ಯವಹಾರಗಳನ್ನೂ ಕಂಪ್ಯೂಟರೀಕೃತವಾದಂತಹ ವ್ಯವಸ್ಥೆಗೆ ಅಳವಡಿಸಿ ತನ್ನಲ್ಲಿಗೆ ಬರುವ ಪ್ರತಿಯೊಬ್ಬ ವ್ಯಕ್ತಿಯ ಪರಿಶೀಲನೆಯನ್ನು ಸ್ವತಃ ತಾವೂ ಮಾಡುತ್ತ ಸೂಕ್ತವಾದಂತಹ ಔಷಧೋಪಚಾರವನ್ನು ನೀಡುತ್ತ ನಗರದ ಮಧ್ಯಭಾಗದಲ್ಲಿ ಅದನ್ನು ಕಟ್ಟಿ ನಿಲ್ಲಿಸಿದ್ದು ಅವರ ಇನ್ನೊಂದು ಹೆಗ್ಗಳಿಕೆ. ಮಹತ್ತರವಾದ ಪ್ರತಿಯೊಂದು ಹೆಜ್ಜೆಯನ್ನು ಕೂಡ ಅವರು ಲೋಕದ ಎಲ್ಲರಿಗೂ ತಿಳಿಸುತ್ತಾ ಸಾಗಿದ್ದು ಅವರ ಪ್ರಾಮಾಣಿಕತೆಗೆ ಸಾಕ್ಷಿ. ಅವರನ್ನು ಪರೀಕ್ಷಿಸಲು ಬಂದ ಅಧಿಕಾರಿಗಳ ಪರೀಕ್ಷೆ ಮುಗಿದ ಮೇಲೆ ಹೊರಡಲಿಕ್ಕೆ ಅವರು ಮುಂದಾದಾಗ ಅವರನ್ನು ತಡೆದು ನಿಲ್ಲಿಸಿ ಅವರಿಂದಲೇ ಭೇಷ್ ಎನ್ನುವಂತಹ ಮೆಚ್ಚಿಗೆಯನ್ನು ಪಡೆದವರು. ಅಂದರೆ ತನ್ನ ಕಾರ್ಯವನ್ನು ಅವರ ಎದುರಿಗೆ ವ್ಯವಸ್ಥಿತವಾಗಿ ಮನದಟ್ಟು ಮಾಡಿ ಇದರಲ್ಲಿರುವಂತಹ ದೋಷವೇನು ಎನ್ನುವಂತಹ ಸವಾಲನ್ನು ಎಸಗುವಂತೆ ಕೇಳಿ ಅವರನ್ನು ನಿರುತ್ತರರನ್ನಾಗಿಸಿದ್ದಲ್ಲದೇ ಅವರಿಂದ ಮೆಚ್ಚಿಗೆಯ ಮಾತುಗಳನ್ನು ಪಡೆದವರು. ಸತ್ಯವಂತರಿಗೆ ಹಾಗೂ ಧರ್ಮದಲ್ಲಿ ನಡೆಯುವವರಿಗೆ ಮಾತ್ರ ಈ ಎದೆಗಾರಿಕೆ ಸಹಜ!

 

ನಮ್ಮ ಸಮಾಜದ ಎರಡು ಗುರುಪೀಠಗಳಲ್ಲಿ ಹವ್ಯಕ ಸಮಾಜದ ಹವ್ಯಕ ಮಹಾಸಭಾದ ಕಾರ್ಯಕ್ರಮಗಳಲ್ಲಿ ಅವರು ಹೇಗೆ ಮಾರ್ಗದರ್ಶನವನ್ನು ನೀಡುತ್ತ ಅದನ್ನು ಗಟ್ಟಿಗೊಳಿಸಬೇಕು ಎಂದು ಯೋಚಿಸುತ್ತಾರೋ ಅದಕ್ಕೆ ವಿಶ್ವಾಸಪೂರ್ವಕವಾಗಿ ನಡೆದುಕೊಂಡು ಬರುತ್ತಿರುವ ಹೆಗ್ಗಳಕೆ ಅವರದ್ದು. ಹೀಗೆ ಒಬ್ಬ ವ್ಯಕ್ತಿ ತನ್ನ ಸಾಧ್ಯತೆಯನ್ನು ಎಷ್ಟು ವ್ಯವಸ್ಥಿತವಾಗಿ ವೃತ್ತಿಯಲ್ಲಿಯೂ ತನ್ನ ಕುಲದ ಕರ್ತವ್ಯದಲ್ಲಿಯೂ ತನ್ನ ಪ್ರವೃತ್ತಿಯ ಕ್ಷೇತ್ರದಲ್ಲಿಯೂ ನಡೆಸಿಕೊಂಡು ಬರುತ್ತಿರುವುದನ್ನು ನಾವು ಮುಕ್ತ ಮನಸ್ಸಿನಿಂದ ಅಭಿನಂದಿಸಬೇಕು. ಅವರು ಸಾಂಸ್ಕೃತಿಕವಾಗಿ ಆಸಕ್ತರೂ ಮತ್ತು ಅದರಲ್ಲಿ ಪರಿಣತರೂ ಕೂಡ.

 

ಸಾರಸ್ವತ ಕ್ಷೇತ್ರಕ್ಕೂ ಅವರ ಕೊಡುಗೆಯನ್ನು ಗಮನಿಸಬಹುದು. ತನ್ನ ಆಸ್ಪತ್ರೆಯಲ್ಲಿ ಪ್ರತಿ ತಿಂಗಳೂ ಸಾಮಗಾನ ಎನ್ನುವಂತಹ ಒಂದು ಸಾಂಸ್ಕೃತಿಕ ಕಾರ್ಯಕ್ರಮವನ್ನು ಹಲವಾರು ವರ್ಷಗಳಿಂದ ನಡೆಸಿಕೊಂಡು ಬರುತ್ತಿರುವುದನ್ನು ನಾವು ಗಮನಿಸಬೇಕು. ಇದು ಕೂಡ ಅವರು ಒಬ್ಬಂಟಿಯಾಗಿ ನಿರ್ವಹಿಸುತ್ತಿರುವ ಕಾರ್ಯ. ಅವರು ಒಬ್ಬಂಟಿಯಾಗಿಯೂ ಅವರು ಸಮಷ್ಟಿಯಲ್ಲಿಯೂ, ಒಟ್ಟಾಗಿಯೂ ವ್ಯಕ್ತಿಗತವಾಗಿಯೂ ಕೆಲಸವನ್ನು ಮಾಡುವ ಲಯವನ್ನು ಕಂಡುಕೊಂಡವರು. ಹಾಗಾಗಿ ಅವರು ವೃತ್ತಿಯಲ್ಲಿ ಮತ್ತು ವೃತ್ತಿ ಕ್ಷೇತ್ರದಲ್ಲಿ ಅವರು ಕೈಗೊಳ್ಳುವ ಕಾರ್ಯಕ್ರಮಗಳೆಲ್ಲ ವ್ಯಷ್ಟಿರೂಪದಲ್ಲಿರುತ್ತದೆ. ಹವ್ಯಕಮಹಾಸಭಾದಲ್ಲಿ ಅವರು ನಿರ್ವಹಿಸುವ ಕಾರ್ಯಗಳೆಲ್ಲ ಅವರನ್ನೂ ಒಳಗೊಂಡು ಅವರ ಯೋಜನೆಯನ್ನು ಅನುಷ್ಠಾನಗೊಳಿಸುವ ಹಾಗೂ ಅವರ ಜೊತೆ ಹೆಗಲಿಗೆ ಹೆಗಲು ಕೊಡುವ ಅವರ ಪ್ರಧಾನ ಕಾರ್ಯದರ್ಶಿಗಳು, ಕೋಶಾಧಿಕಾರಿಗಳು, ಉಪಾಧ್ಯಕ್ಷರುಗಳು ಹಾಗೂ ಬೇರೆ ಬೇರೆ ವಿಭಾಗದ ಸಂಚಾಲಕರೂ ಮತ್ತು ಎಲ್ಲ ನಿರ್ದೇಶಕರುಗಳು ಕಜೆಯವರ ಕಾರ್ಯಯೋಜನೆಯನ್ನು ಮತ್ತು ಅವರ ಪ್ರಭಾವವನ್ನು ಮನಗಂಡವರಾಗಿದ್ದಾರೆ.

ಈ ಎಲ್ಲ ಮಾತುಗಳ ಸಾರ ನಮ್ಮ ಸಮಾಜದ ಒಬ್ಬ ಶ್ರೇಷ್ಟ ಕಣ್ಮಣಿಯಾಗಿ ಡಾ. ಗಿರಿಧರ ಕಜೆಯವರು ಕಾಣುತ್ತಿದ್ದಾರೆ. ಅವರು ಒಂದು ಕಾರ್ಯವನ್ನು ನಿಯುಕ್ತಿಗೊಳಿಸುವಲ್ಲಿ ಧರ್ಮವತ್ತರವಾಗಿಯೂ ಲೋಕನೀತಿಯನ್ನು ಅನುಸರಿಸಿಯೂ ನಡೆಸಿಕೊಂಡು ಬರುತ್ತಿರುವುದನ್ನು ನಾವು ಗಮನಿಸುತ್ತಿದ್ದೇವೆ. ಸರ್ವರೂ ಗಮನಿಸಬಹುದಾಗಿದೆ. ಅದು ಶ್ಲಾಘನೀಯವಾದುದು. ಇಂತಹ ಒಬ್ಬ ಅಪರೂಪದ ವ್ಯಕ್ತಿತ್ವದ ಡಾ. ಗಿರಿಧರ ಕಜೆಯವರನ್ನು ಇಡೀ ಸಮಾಜದ ಆ ಕಣ್ಣಿಂದ ಕಂಡು, ಮುಕ್ತವಾಗಿ ನಿಸ್ಪ್ರಹ ಭಾವದಿಂದ ಅಭಿನಂದಿಸಬಯಸುತ್ತೇನೆ.

 

Author Details


Srimukha

Leave a Reply

Your email address will not be published. Required fields are marked *