ಹವ್ಯಕ ಸಮಾಜದ ಹೊಣೆಗಾರಿಕೆಗಳು

ಅಂಕಣ ಆ ಕಣ್ಣಿಂದ : ಮೋಹನ ಭಾಸ್ಕರ ಹೆಗಡೆ ಹೆರವಟ್ಟ

 

ನಮ್ಮ ಹವ್ಯಕ ಸಮಾಜ ಒಂದು ವಿಶೇಷವಾದ ಸಮಾಜವಾಗಿದ್ದು ಹಲವಾರು ವಿಷಯಗಳಲ್ಲಿ ತನ್ನದೇ ಆದ ಅಸ್ಮಿತೆಯನ್ನು ಹೊಂದಿದೆ. ಸಹ್ಯಾದ್ರಿಯ ಮಡಿಲಿನ ಬನವಾಸಿಯ ಸುತ್ತಮುತ್ತ ವ್ಯಾಪಕವಾಗಿದ್ದಂತಹ ಈ ನಮ್ಮ ಸಮುದಾಯ, ಕಾಲಾಂತರದಲ್ಲಿ ದೇಶದ ಬೇರೆ ಬೇರೆ ಕಡೆಗಳಲ್ಲಿ ವ್ಯಾಪಿಸಿತು. ಅಂತೆಯೇ ಅಹಿಚ್ಛತ್ರದಲ್ಲಿಯೂ ಕೂಡ ಅಸ್ಮಿತೆಯನ್ನು ತೋರಿಸಿತು. ಮಯೂರವರ್ಮನ ಆಳ್ವಿಕೆಯ ಕಾಲದಲ್ಲಿ ವಿಶೇಷವಾದ ಆದರಣೆಗೆ ಒಳಪಟ್ಟು, ಉತ್ತರಕನ್ನಡ ಜಿಲ್ಲೆಯ ಹೊನ್ನಾವರ ಸನಿಹದ ಹೈಗುಂದ ಎಂಬ, ಶರಾವತೀ ನದಿಯಿಂದ ಆವರಿಸಲ್ಪಟ್ಟ ಒಂದು ಪುಟ್ಟ ನಡುಗಡ್ಡೆಯಲ್ಲಿ ಪುನಶ್ಚೇತನವನ್ನು ಹೊಂದಿತು. ಅಲ್ಲಿಂದ ಮುಂದಕ್ಕೆ ದಕ್ಷಿಣೋತ್ತರ ಕನ್ನಡಜಿಲ್ಲೆಗಳಲ್ಲಿ ಶಿವಮೊಗ್ಗ, ಚಿಕ್ಕಮಗಳೂರು ಮೊದಲಾದ ಮಲೆನಾಡಿನ ಜಿಲ್ಲೆಗಳಲ್ಲಿ, ಅಷ್ಟೇ ಅಲ್ಲ ಕಾಸರಗೋಡು, ಕೊಡಗು ಹಾಗೂ ದೇಶದ ಎಲ್ಲ ಕಡೆಗಳಲ್ಲಿ ತನ್ನ ವ್ಯಾಪಕವಾದಂತಹ ಅಸ್ತಿತ್ವವನ್ನು ತೋರಿಸುತ್ತ ಬಂದಿತು.

ಹವ್ಯಕ ಸಮಾಜ ಎಂದೊಡನೆಯೇ ನೆನಪಾಗುವುದು ಯಾಗ-ಯಜ್ಞಗಳು, ಪೌರೋಹಿತ್ಯ, ಕೃಷಿ ಹಾಗೂ ವಿಶಿಷ್ಟವಾದ ಆಹಾರಪದ್ಧತಿಯ, ಒಂದು ಆರೋಗ್ಯಕರವಾದ ಜೀವನಶೈಲಿಯನ್ನು ಹೊಂದಿದ ಬುದ್ಧಿವಂತ ಸಮಾಜ. ಇದೆಲ್ಲವೂ ಈ ತನಕ ಒಂದು ವಿಶಿಷ್ಟವಾದ ಕ್ರಮದಲ್ಲಿ ಸಾಗಿ ಬಂದಿದೆ. ಆದರೆ ಇತ್ತೀಚಿನ ಕೆಲವು ವರ್ಷಗಳಿಂದ ಈ ಸಮಾಜ ನಡೆಯುವ ರೀತಿ, ನೆಲೆಗಳು ಜಗತ್ತಿನ ಕಣ್ಣು ಸೆಳೆದಿರುವುದನ್ನು ಗಮನಿಸಬಹುದು. ಒಂದು ರೀತಿಯಲ್ಲಿ ಪ್ರಗತಿ ಆದರೆ ಇನ್ನೊಂದು ರೀತಿಯಲ್ಲಿ ವಿಗತಿ ಎಂಬುದು ಒಟ್ಟೊಟ್ಟಿಗೇ ನಡೆಯುತ್ತಿರುವುದನ್ನು ಗಮನಿಸಬಹುದು. ಈ ಸಮಾಜದ ಎಲ್ಲ ಬಗೆಯ ಎಲ್ಲ ಸ್ತರದ ಜನರಲ್ಲಿ ಯಾವುದಕ್ಕೇ ಕೊರತೆಯಾದರೂ ಬೌಧ್ಧಿಕತೆಗೆ ಹಾಗೂ ಭೌತಿಕತೆಗೆ ಕೊರತೆಯಗಲಿಲ್ಲ. ಆ ಕಾರಣದಿಂದಲೇ ತುಂಬ ಗಮನಾರ್ಹವಾದಂತಹ ಒಂದು ಸಮುದಾಯವಾಗಿ ಇಂದಿಗೂ ಜನಮನ್ನಣೆಯನ್ನು ಗಳಿಸಿದೆ. ಹಲವು ಸಂದರ್ಭಗಳಲ್ಲಿ ಈ ಸಮಾಜದ ಸಾಧನೆಗಾಗಿ ಅನ್ಯ ಸಮಾಜದವರು ಬೆರಗು ಪಟ್ಟಿದ್ದಿದೆ, ಭಯಪಟ್ಟಿದ್ದು ಇದೆ. ಇದನ್ನು ಇನ್ನು ಹೆಚ್ಚು ಅಧ್ಯಯನ ಮಾಡುವ ಉದ್ದೇಶದಿಂದ ಅಥವಾ ಈ ಸಮಾಜದ ಮುಂದಿನ ನಡೆ ಹೇಗಿರಬೇಕು ಎಂಬ ವಿಷಯದಲ್ಲಿ, ಇದು ಇಂದು ಎದುರಿಸುತ್ತಿರುವ ಸಮಸ್ಯೆಗೆ ಹೇಗೆ ಪರಿಹಾರ ಕಂಡುಕೊಳ್ಳಬಹುದು ಅಥವಾ ಇದನ್ನು ಹೇಗೆ ಪರಿವರ್ತನೆಗೊಳಿಸಬಹುದು ಎಂದು ನಾನು ಯೋಚಿಸುತ್ತಿದ್ದೇನೆ. ಹಾಗಾಗಿ ಸಮಸ್ಯೆಗಳ ಪರಿಹಾರಕ್ಕೆ ಮುಖ್ಯವಾದ ಸಪ್ತಸೂತ್ರಗಳನ್ನು ತಮ್ಮ ಮುಂದೆ ಮಂಡಿಸುವ ಪ್ರಯತ್ನ ಮಾಡುತ್ತಿದ್ದೇನೆ.

*ಆತ್ಮಶಕ್ತಿಯ ವೃದ್ಧಿ:*

ನಮ್ಮ ಸಮಾಜ ಬಹು ಸುದೀರ್ಘ ಕಾಲದಿಂದ, ಕಟ್ಟುನಿಟ್ಟಿನ ಶ್ರದ್ಧೆಯ ಅನುಷ್ಠಾನಗಳಿಂದ, ಸಂದ್ಯಾವಂದನೆ, ಗೋಪೂಜೆಯೇ ಮೊದಲುಗೊಂಡು ನಿತ್ಯ ದೀಪ ಹಚ್ಚುವ, ದೀಪವನ್ನು ಆರಾಧಿಸುವ ಪದ್ಧತಿಯನ್ನು ಸಮುದಾಯದ ಎಲ್ಲ ಗೃಹಸ್ಥರು, ಗೃಹಿಣಿಯರು, ಮಕ್ಕಳು ಅನುಸರಿಸುತ್ತಿದ್ದರು. ಒಂದು ಮನೆಯಲ್ಲಿ ಹಿರಿಯರು ಇದನ್ನು ಪರಿಪಾಲಿಸುತ್ತಾ ಬಂದರೆ ಮಕ್ಕಳು ಅದನ್ನು ಮುಂದುವರಿಸುತ್ತಿದ್ದರು. ಇತ್ತೀಚಿನ ದಿನಗಳಲ್ಲಿ ಇದು ತುಂಬ ತೀವ್ರವಾಗಿ ಕುಂಠಿತಗೊಳ್ಳುತ್ತಿದೆ. ಅನ್ಯಧರ್ಮೀಯರ ಪ್ರಭಾವ ಹೆಚ್ಚಾಗಿ ಈ ವಿಷಯಗಳು ಶುಷ್ಕ ಎಂದಾದವು. ಇದೆಲ್ಲ ಮೂಢನಂಬಿಕೆಗಳು ಎಂಬ ಒಂದಿಷ್ಟು ತರ್ಕಗಳು ವ್ಯಕ್ತಿಯ ಅಥವಾ ಆ ಕುಟುಂಬದ ಆತ್ಮಶಕ್ತಿಯನ್ನು ಘಾಸಿಗೊಳಿಸುತ್ತಾ ಬಂದವು. ಇದು ಪರಿಹಾರವಾಗಬೇಕು ಎಂದರೆ ಪುನರಪಿ ಪ್ರತಿಯೊಬ್ಬ ವ್ಯಕ್ತಿಯೂ ತಾನು ಕೈಗೊಳ್ಳಬೇಕಾದ, ಆ ಮನೆಯ ಉದ್ದಾರಕ್ಕೆ ಬೇಕಾದ, ಆ ಕುಟುಂಬದ ಏಳಿಗೆಗೆ ಬೇಕಾದಂತಹ, ಆ ತಲೆಮಾರಿನ ವಿಶಿಷ್ಟತೆಗೆ ಇಂಬು ಕೊಡುವಂತಹ ದೃಷ್ಟಿಯಿಂದ ಕೆಲವನ್ನಾದರೂ ನಿತ್ಯವೂ ಆಚರಿಸಲೇ ಬೇಕು. ಅದರ ಪರಿಣಾಮಗಳನ್ನು ಅವರೆಲ್ಲರೂ ಅವರ ಬಾಳಸಂಜೆಯಲ್ಲಿ ಕಾಣುತ್ತಾರೆ ಎಂಬುದು ಅನುಭವ ಸತ್ಯ.

*2. ವೈದಿಕ ಮತ್ತು ಪೌರೋಹಿತ್ಯಕ್ಕೆ ಭಾವಸ್ಪರ್ಶ:*

ವೈದಿಕ ಅಥವಾ ಪೌರೋಹಿತ್ಯವನ್ನು ಸೀಮಿತವಾಗಿ ಒಂದಿಷ್ಟು ಜನರೇ ಆಚರಿಸಬೇಕು ಎಂಬ ಅರ್ಥದಲ್ಲಿ ನಾನಿದನ್ನು ಪ್ರತಿಪಾದಿಸುತ್ತಿಲ್ಲ. ಅತ್ಯಂತ ಪವಿತ್ರವೂ ಮತ್ತು ಎಲ್ಲರ ಮೇಲೂ ಶ್ರೇಷ್ಠವಾದ ಪ್ರಭಾವವನ್ನು ಉಂಟುಮಾಡುವಂತಹ ಈ ಎರಡು ಸೇವಾವೃತ್ತಿಗಳಲ್ಲಿ ಭಾವ ಸ್ಪರ್ಶವಿಲ್ಲದಿದ್ದರೆ ಇವಕ್ಕೆ ಮೌಲ್ಯ ಕಡಿಮೆಯಾಗುತ್ತದೆ. ಅಂದರೆ ಮಾಡುವ ಅದೇ ಕೆಲಸವನ್ನು ವ್ಯಾವಹಾರಿಕತೆಯನ್ನು ಮೀರಿದ ಭೌತಿಕತೆಯ ಛತ್ರದಡಿಯಲ್ಲಿ ಅಂದರೆ ಜೀವದಿಂದ ಜೇವಕ್ಕೆ, ಆತ್ಮದಿಂದ ಆತ್ಮಕ್ಕೆ ಆರ್ದ್ರವಾದ ಸ್ಪರ್ಶತೆಯನ್ನು ಕೊಡದೇ ಇದ್ದರೆ ಈ ಕೆಲಸವೇ ಶುಷ್ಕವಾಗುತ್ತದೆ. ಮಾಡುವವರು ಶ್ರೇಷ್ಠರೆನಿಸಿಕೊಳ್ಳುವುದಿಲ್ಲ. ಅಲ್ಪರು ಕೂಡ ಪ್ರಶ್ನೆ ಮಾಡುವ ಮಟ್ಟಕ್ಕೆ ಹೋಗುತ್ತಾರೆ.

ಹಾಗಾಗಿ ಈ ಎರಡನ್ನೂ ಸಮಾಜ ಮತ್ತು ಸರ್ವಜನಾಂಗದ ಶ್ರೇಷ್ಠವಾದ ಕೈಂಕರ್ಯ ಎಂದು ಭಾವಿಸಿ ಅದಕ್ಕೆ ಅಪಾರವಾದ ಶ್ರೇಷ್ಠತೆಯನ್ನು, ಗೌರವವನ್ನು, ಪೂಜ್ಯತೆಯನ್ನು ತಮ್ಮ ನಡುವಳಿಕೆಗಳಿಂದ ತಮ್ಮ ಕಾರ್ಯದಕ್ಷತೆಯಿಂದ ತೋರಿಸಿಕೊಡಬೇಕಾದ ಹೊಣೆಗಾರಿಕೆ ವೈದಿಕರು ಮತ್ತು ಪುರೋಹಿತರದ್ದಾಗಿದೆ. ಈ ಭಾವಸ್ಪರ್ಶವನ್ನು ಅತ್ಯಂತ ವ್ಯವಸ್ಥಿತವಾಗಿ, ಅತ್ಯಂತ ಅಚ್ಚುಕಟ್ಟುತನದಿಂದ ನಿರ್ವಹಿಸುವಂತಾದರೆ ಅದರ ಮೌಲ್ಯ ಈಗಿರುವುದಕ್ಕಿಂತ ಎಷ್ಟೋ ಪಟ್ಟು ಹೆಚ್ಚಾಗುವುದರಲ್ಲಿ ಸಂದೇಹವೇ ಇಲ್ಲ.

ಈ ವಿಚಾರವನ್ನು ಎಳವೆಯಿಂದಲೇ ಪ್ರತಿಯೊಂದು ಕುಟುಂಬವೂ ಗಮನಿಸಬೇಕು. ಪ್ರತಿಯೊಂದು ಗುರುಕುಲವೂ ಗಮನಿಸಬೇಕು. ಪ್ರತಿಯೊಂದು ಅಧ್ಯಾಪಕರು ಗಮನಿಸಬೇಕು. ಹೀಗೆ ಗಮನಿಸಿ ಅದನ್ನು ಅನುಷ್ಠಾನಕ್ಕೆ ತರುವುದರಿಂದ ಒಂದು ಜನಾಂಗದ ಮುಂದಿನ ತಲೆಮಾರು ಈ ವಿಷಯದಲ್ಲಿ ತನ್ನ ಅಸ್ಮಿತೆಯನ್ನು ಉಳಿಸಿಕೊಳ್ಳುವುದರಲ್ಲಿ ಯಾವ ಅನುಮಾನವೂ ಇಲ್ಲ.

*3. ಸಾಮೂಹಿಕ ಕೃಷಿ:*

ನಾವು ಸಾಕಷ್ಟು ಕಾಲ ಮುಂದೆ ಬಂದುಬಿಟ್ಟಿದ್ದೇವೆ. ಅಂದರೆ ಕೃಷಿಯನ್ನೇ ಆಧಾರವಾಗಿಸಿಕೊಂಡ ನಮ್ಮ ಸಮಾಜದ ಹಲವಾರು ಕೃಷಿಯನ್ನೇ ಕೈಬಿಡುವ ಮಟ್ಟಕ್ಕೆ ಬಂದರು. ಒಂದು ಕುಟುಂಬದಲ್ಲಿ ಇರುವ ಎಲ್ಲ ಮಕ್ಕಳೂ ನೌಕರಿಯ ಆಸೆಗಾಗಿ ಹೊರಗಡೆ ಹೋಗಿ ಮನೆಯ ಆಸ್ತಿಯನ್ನು ಪರಭಾರೆ ಮಾಡುವ, ಕಳೆದುಕೊಳ್ಳುವ ಹಂತಕ್ಕೆ ತಲುಪಿದ್ದಾರೆ. ಅತ್ಯಂತ ಶೋಚನೀಯವಾದ ಸಂಗತಿ ಆದರೆ ಈಗ ಪ್ರಸಕ್ತ ಅತ್ಯಂತ ಯೋಚನೀಯ ವಾದ ಸಂಗತಿ. ಯಾಕೆ ಹೀಗೆ ಆಯ್ತು ಅಂತ ನೋಡುವಾಗ, ನಾವು ಸಮಾಜದಿಂದ ಆದ ಆಘಾತಗಳನ್ನು ಎದುರಿಸಿ ಇಲ್ಲಿಯವರೆಗೆ ಬಂದಿದ್ದೇವೆ. ಅದರಿಂದ ಈ ತಲೆಮಾರಿನಲ್ಲಿ ಕಾಣುವವರು ನಮ್ಮ ಪೂರ್ವಜರನ್ನು ಶ್ರದ್ಧಾಗೌರವದಿಂದ ಕಾಣಬೇಕಿದೆ. ಉಳುವವನೇ ಭೂಮಿಯ ಒಡೆಯ ಎಂಬ ಕಾನೂನು ಬಂದಾಗ ನಮ್ಮ ಸಮಾಜದ ಹಲವಾರು ಆಸ್ತಿ-ಪಾಸ್ತಿಗಳನ್ನು ಕಳೆದು ಕೊಂಡರು. ಆಸ್ತಿ-ಪಾಸ್ತಿಗಳ ಪ್ರಮಾಣವನ್ನು ಕಡಿಮೆಗೊಳಿಸಿಕೊಂಡರು. ಅದೆಷ್ಟೋ ದುಃಖ ತೊಂದರೆಗಳನ್ನು ಅನುಭವಿಸಿದರು. ಹೀಗಿದ್ದೂ ತಲೆ ಎತ್ತಿ ನಿಂತರು. ಈಗ ನಾವು ಆ ಉಳಿಸಿಕೊಂಡ ಭೂಮಿಯನ್ನು ಕೂಡ ಯಾವುದೋ ಸಬೂಬು ಹೇಳುತ್ತಾ ಅನ್ಯರಿಗೆ ವಿಕ್ರಯಿಸುತ್ತಾ ಹೋದರೆ ನಾಳೆ ಫಲವತ್ತಾದ ಭೂಮಿಯನ್ನು ಆಳುವ, ಅದರ ಸೇವೆ ಮಾಡುವ ಸಾಧ್ಯತೆಗಳು ಹೇಗೆ ಸಾಧ್ಯ?

ಇಂದು ಕೃಷಿ ಕೇವಲ ಉಪಜೀವಿಕೆಯ ವೃತ್ತಿಯಾಗಿಲ್ಲ. ಕೃಷಿ ಜೀವನಾಧಾರಿತ ವೃತ್ತಿಯಾಗಿದೆ. ಕೃಷಿಯನ್ನು ನಂಬಿ ಸೋತವರಿಲ್ಲ. ಕೃಷಿಯನ್ನು ನಂಬಿ ದಿವಾಳಿಯಾದವರಿಲ್ಲ. ಹಾಗಾದರೆ ಏನು ಮಾಡಬೇಕು ಎಂದರೆ, ಒಂದು ಊರಿನಲ್ಲಿ ಇರುವಂತಹ ನಮ್ಮ ಸಮಾಜದ ಕೃಷಿಯ ಕುರಿತಾದಂತಹ ಒಟ್ಟು ವ್ಯಾಪ್ತಿಯನ್ನು ಸಮನ್ವಯೀಕರಿಸಿ ಅದನ್ನೊಂದು ಸಾಮೂಹಿಕ ಕೃಷಿಯ ತತ್ತ್ವದತ್ತ ಕೊಂಡೊಯ್ದರೆ ಕೂಟಸಾಧ್ಯತೆಯ ಪ್ರಮಾಣ ಹೆಚ್ಚುತ್ತದೆ. ಅದನ್ನೊಂದು ವ್ಯಾವಹಾರಿಕ ಉದ್ಯಮದ ಸ್ವರೂಪದಲ್ಲಿ ಕಟ್ಟಿ ನಿಲ್ಲಿಸಿದರೆ ಹಲವಾರು ಸಣ್ಣ ಸಣ್ಣ ಸಂಕಷ್ಟಗಳು ಅದರಿಂದ ಪರಿಹಾರವಾಗುತ್ತದೆ. ಇದನ್ನು ಸಣ್ಣ ಪ್ರಮಾಣದಲ್ಲಿ ನಮ್ಮಲ್ಲಿ ಕೊನೆಕೊಯ್ಲು ಸಂದರ್ಭದಲ್ಲಿ ಮಾಡುತ್ತಾರೆ. ಆಲೆಮನೆ ಸಂದರ್ಭದಲ್ಲಿ ನಿರ್ವಹಿಸುತ್ತಾರೆ, ಅಡಿಕೆ ಸುಲಿಯುವ ಸಂದರ್ಭದಲ್ಲಿ ನಿರ್ವಹಿಸುತ್ತಾರೆ. ಇದಕ್ಕೆ ಇನ್ನು ಹೆಚ್ಚು ವ್ಯವಸ್ಥಿತವಾದ ರೂಪವನ್ನು ಕೊಡುವುದು ಇಂದಿನ ಅಗತ್ಯ.

4. ಹಳ್ಳಿಗಳು ಬರಿದಾಗುತ್ತಿವೆ. ನಗರಗಳು ಒತ್ತಡದಿಂದ ನಲುಗುತ್ತಿವೆ. ಇದನ್ನು ಪರಿಹರಿಸಬೇಕು ಎಂದರೆ ಒಂದು ಮಾತಿನಲ್ಲಿ ಉರು ಬಿಟ್ಟು ಬಂದ ಹಳ್ಳಿಗರೆನ್ನೆಲ್ಲ ಪುನಃ ಹಳ್ಳಿಗೆ ಹೋಗಿ ವಾಪಸ್ ಎಂದು ಹೇಳುವುದು ಸಾಮಾಜಿಕ ನ್ಯಾಯವಾಗುವುದಿಲ್ಲ. ಅದಕ್ಕೆ ಈ ತಾಂತ್ರಿಕ ಯುಗದಲ್ಲಿ ನಮ್ಮವರ ಪ್ರತಿಭಾಶಕ್ತಿ ಯನ್ನು ಬಳಸಿ ಅವರ ಬೌದ್ಧಿಕತೆಯನ್ನು ಬಳಸಿ ಪ್ರತಿಯೊಂದು ಹಳ್ಳಿಯಲ್ಲೂ ನಗರದ ಎಲ್ಲ ಸೌಲಭ್ಯಗಳು ದೊರಕುವಂತೆ ನಾವೇ ಮಾಡಿಕೊಂಡರೆ ಹಳ್ಳಿಗಳು ನಳನಳಿಸುವುದರಲ್ಲಿ ಯಾವ ಅನುಮಾನವಿಲ್ಲ. ಆದರೆ ಇದನ್ನು ಪಾಲಕರು ಪಾಲಿಸುವುದಿಲ್ಲ. ನಾವು ಬಾಯಿ ತೆಗೆದರೆ ಇಂಗ್ಲಂಡ್, ಅಮೇರಿಕ, ಅಸ್ಟ್ರೇಲಿಯಾ ಅಂತ ಹೇಳುತ್ತೇವೆ. ಆಮೇಲೆ ಮಕ್ಕಳು ಪದವೀದರರು ಆದಮೇಲೆ ಅವರಲ್ಲಿ ಹಳ್ಳಿಯ ಹೆಸರನ್ನ ಹೇಳಿದರೆ ಎಲ್ಲಿ ಆಸೆ ಬರುತ್ತದೆ. ಬಿತ್ತಿದಂತೆ ಬೆಳೆ. ಹಾಗಾಗಿ ನಾವು ನಮ್ಮ ನಮ್ಮ ಹಳ್ಳಿಯ ಸಾಧ್ಯತೆಗಳನ್ನು ಶ್ರೇಷ್ಠತೆಯನ್ನು ಪರಿಸರದ ಶ್ರೇಷ್ಟತೆಯನ್ನು ವಿಚಾರಗಳನ್ನು ಬಳಸಿಕೊಳ್ಳುವಂತೆ ಆಗಬೇಕು. ಆ ಕುರಿತಾಗಿಯೇ ಮಕ್ಕಳಲ್ಲಿ ಹಳ್ಳಿಯ ಶ್ರೇಷ್ಠತೆಯನ್ನು ಹೇಳುತ್ತಾ ಹಳ್ಳಿಯಿಂದ ದಿಲ್ಲಿಗೆ ಬೆಳಕನ್ನು ಬೀರು ಎಂಬ ಅರ್ಥದ ವಿಚಾರಧಾರೆಗಳನ್ನು ತುಂಬಬೇಕು. ಈಗಲೂ ಸಾಧ್ಯತೆಯಿರುವ ಎಲ್ಲ ಸಂದರ್ಭಗಳಲ್ಲಿ ಇದನ್ನು ನಾವು ಮಾಡುವತ್ತ ಮುಂದಾದರೆ ದೊಡ್ಡ ಸಾಧನೆ. ಇದರಿಂದ ನಮ್ಮ ಸಮಾಜದ ಆಳ ಮತ್ತು ವಿಸ್ತಾರ ಹೆಚ್ಚುತ್ತದೆ.

*5. ಸ್ವಾವಲಂಬಿ ಜೀವನ ಶೈಲಿ*

ಸಮಗ್ರ ಜೀವನದಲ್ಲಿ ಯಾರನ್ನು ನೋಡಿದರು ಯಾರನ್ನು ಬೇಕಿದ್ದರು ಯಾರ ಕೆಳಗಡೆ ಕೆಲಸ ಮಾಡುತ್ತಿದ್ದರು ಸ್ವಾವಲಂಬನತನದಲ್ಲಿ ನಮ್ಮವರು ಎರಡನೆಯವರಲ್ಲ. ಉಪವಾಸ ಬಿದ್ದಾರು, ನೀರು ಕುಡಿದು ಬದುಕಿಯಾರು, ಆದರೆ ಉಪದ್ರವದ ಮಾತುಗಳನ್ನು ಸಹಿಸಿಕೊಂಡು ಬದುಕುವವರಲ್ಲ. ಅಥವಾ ಸೇವಾ ವೃತ್ತಿಯನ್ನು ಕೈಗೊಂಡು ಶಾಶ್ವತವಾಗಿ ನಡೆಯುವವರಲ್ಲ. ಎಷ್ಟೋ ದೊಡ್ಡ ದೊಡ್ಡ ಉದ್ಯಮಗಳನ್ನು ಗಮನಿಸಿ, ಆ ಉದ್ಯಮದಲ್ಲಿ ಉನ್ನತವಾದ ಸ್ಥಾನಗಳಲ್ಲಿ ನಮ್ಮವರು ಇದ್ದಾರೆ . ಅವರು ಸ್ವಾಲಂಬಿಗಳಾಗಿರುತ್ತಾರೆ. ಸ್ವತಂತ್ರ ಮನೋಬಾವದವರಾಗಿರುತ್ತಾರೆ. ಆದರೆ ತಾವೇ ಸ್ವತಃ ಉದ್ಯಮ ಮಾಡಬೇಕು , ತಾವೇ ಎಲ್ಲ ಸವಾಲುಗಳನ್ನು ಎದುರಿಸಬೇಕು ಎಂಬ ವಿಷಯ ಬಂದಾಗ ಸ್ವಲ್ಪ ಹಿಂಜರಿಯುತ್ತಾರೆ. ಕಾರಣ ಆರ್ಥಿಕ ಹಿನ್ನಡೆಗೆ ಅದನ್ನ ಎದುರಿಸಿ ನಿಲ್ಲಬಲ್ಲಂತಹ ಶಕ್ತಿ ನಮ್ಮ ಸಮಾಜದ ಬಹುತೇಕರಿಲ್ಲ. ಎಷ್ಟೋ ಜನ ಈ ಹೊತ್ತು ಸ್ವಂತ ಉದ್ಯಮದಲ್ಲಿದ್ದು, ಸ್ವಂತ ಜೀವನ ಶೈಲಿ ರೂಪಿಸಿಕೊಂಡಿದ್ದರೂ ಕೂಡ ಬಹುತೇಕರು ಸ್ವಾವಲಂಬಿ ಮನೋಭಾವದ ನಮ್ಮವರು ಇನ್ನೂ ಹೆಚ್ಚು ಪರಿಷ್ಖೃತ ರೂಪ ಪಡೆದು ಅದೊಂದು ವ್ಯವಸ್ಥಿತವಾದಂತಹ ಉದ್ಯಮ ಸ್ವರೂಪದಲ್ಲಿ ಮುಂದೆ ಬರಬೇಕು. ಮತ್ತೆ ಇಡಿ ಸಮುದಾಯ ಔದ್ಯಮಿಕ ಕ್ಷೇತ್ರದಲ್ಲಿ ಬರುವ ನಂಬಿ ಹೆಜ್ಜೆಯನ್ನಿಡುವ ಹವ್ಯಕ ಯುವ ಸಮುದಾಯವೊಂದು ಸೋಲಿಗೆ ಹೆದರದಿರಿ ಸಹಜ ಗೆಲವು ನಿಮ್ಮದಾಗ ಬೇಕು ಎಂಬಾರ್ಥದ ಧನಾತ್ಮಕ ಪ್ರೋತ್ಸಾಹದ ನುಡಿಗಳಿಂದ ಅವರನ್ನ ಬಲಿಷ್ಠಗೊಳಿಸಬೇಕಾಗಿದೆ. ಇದು ಒಂದು ಅತ್ಯಂತ ಮಹತ್ವವಾದ ಮುಂದಿನ ಹಾದಿ ಎಂದು ನಾನು ಭಾವಿಸುತ್ತೇನೆ.

*6. ಕಲೆ ಮತ್ತು ಸಂಸ್ಕೃತಿಗೆ ಆದ್ಯತೆ:*

ನಮ್ಮ ಸಮಾಜದಲ್ಲಿ ಕಲೆ ಮತ್ತು ಸಂಸ್ಖೃತಿ ಇದು ಜೀವನ್ಮೂಲವಾದಂತಹ ಒಂದು ಶಕ್ತಿ. ಅಂದರೆ ನಮ್ಮ ಸಮಾಜದ ಯಾವುದೇ ಒಬ್ಬ ವ್ಯಕ್ತಿ ಅವನು ಕಲೆ ಅಥವಾ ಸಂಸ್ಕೃತಿಯ ವಿಷಯದಲ್ಲಿ ಉಪೇಕ್ಷೆಪಡುವಂತಹ ವ್ಯಕ್ತಿ ಆಗಿರುವುದಿಲ್ಲ. ಅವನು ಶ್ರಮವಿಲ್ಲದೆ ಇದರ ರಕ್ತದ ಕಣಕಣದಲ್ಲಿ ಅಂತಹ ಒಂದು ಅಪೂರ್ವವಾದಂತಹ ಶಕ್ತಿ ಸಂಚಯವಾಗಿರುತ್ತದೆ. ವರ್ತಮಾನದಲ್ಲಿ ಻ಅದು ಯಕ್ಷಗಾನವಾಗಿರಲಿ ಭರತನೃತ್ಯವಾಗಿರಲಿ ಅಥವಾ ಐಂದ್ರಜಾಲಿಕವಾಗಿರಲಿ ಚಿತ್ರಕಲೆಯಾಗಿರಲಿ ವರ್ಣಕಲೆಗಳಾಗಿರಲಿ ಯಾವುದೇ ಒಂದು ಕಲೆಯನ್ನು ನಾವು ಪರಿಗಣಿಸಿದರೂ ಅದರಲ್ಲಿ ನಮ್ಮವರು ತಮ್ಮತನದ ಮುದ್ರೆಯನ್ನು ಒತ್ತಬಲ್ಲ ಮೇಧಾವಿಗಳು. ಇದು ಮುಂದೆ ಹೇಗೆ ಎಂಬ ಪ್ರಶ್ನೆ ಬಂದಾಗ ಸಹ ನಮ್ಮನ್ನು ದಂಗುಬಡಿಸುತ್ತದೆ. ಆದರೆ ಕೆಲವರು ಇದನ್ನೇ ಸವಾಲಾಗಿ ಸ್ವೀಕರಿಸಿ ಅಪೂರ್ವವಾಗಿ ತಮ್ಮ ಜೀವನಶೈಲಿಯನ್ನು ವೃದ್ಧಿಸಿಕೊಂಡವರಿದ್ದಾರೆ. ಹಳ್ಳಿಯಲ್ಲಿದ್ದುಕೊಂಡೂ ವಿಶ್ವಾದ್ಯಂತ ವ್ಯಾಪಿಸಿಕೊಂಡವರಿದ್ದಾರೆ. ಇನ್ನೂ ಹೆಚ್ಚು ಕ್ರಮಬದ್ಧವಾದಂತಹ ರೂಪವನ್ನು ಪಡೆಯಬೇಕು. ಇದು ಕೂಡ ಆನಂದ ಕೊಡುವ ಪ್ರಕ್ರಿಯೆ. ಅದಾಯದ ಮೂಲವನ್ನಾಗಿಯೂ ಇದನ್ನು ವ್ಯವಸ್ಥಿತಗೊಳಿಸುವ ಹೊಣೆಗೊಳಿಸುವ ಒಂದು ಕ್ರಮಬದ್ಧ ಸೂತ್ರದತ್ತ ನಡೆಯಬೇಕಾಗಿದೆ. ಇದೇನು ಈ ರೀತಿಯ ಸೂತ್ರ ಎಂದು ಕೇಳಿದರೆ ಬೇರೆ ಬೇರೆ ರೀತಿಯಲ್ಲಿ ತಮ್ಮನ್ನು ತೊಡಗಿಸಿಕೊಂಡು, ಶ್ರಮಕ್ಕೆ ತಕ್ಕ ಫಲವನ್ನು ಪಡೆಯದೆ ಕೊರಗುವ ಸ್ಥಿತಿಯೂ ಆಗದ ಹಾಗೆ ಎಚ್ಚರವಹಿಸಬೇಕು. ಹಾಗಾಗಿ ಇಲ್ಲಿಯೂ ಒಂದು ಸಮೂಹವಾದಂತಹ, ಒಂದು ಸಾಂಸ್ಥಿಕವಾದ ಸಮೂಹವನ್ನು ಕಟ್ಟಿ ಕೊಡಬೇಕಾದ ಆಗತ್ಯ ಇದೆ. ಇದಕ್ಕೆ ತಕ್ಷಣ ಕಾಲಕಾಲಕ್ಕೆ ಮಾರ್ಗದರ್ಶನದ ಅಗತ್ಯವಿದೆ. ಇದೊಂದು ಬದುಕಿನ ಬಹುದೊಡ್ಡ ಹೆಬ್ಬಾಗಿಲು, ಬಹುದೊಡ್ಡ ಭರವಸೆಯ ದಾರಿ.

*7. ನಮ್ಮ ಸಮಾಜ ಜಾಗೃತವಾಗಿರುವುದು*:

ಯಾವುದಕ್ಕೆಲ್ಲ ಜಾಗ್ರತ ವಾಗಿರ ಬೇಕು ಎಂಬ ಪ್ರಶ್ನೆ ಇದರೊಟ್ಟಿಗೆ ಹುಟ್ಟುವುದು ಸಹಜ . ಒಗ್ಗಟ್ಟಿನ ಶಕ್ತಿಯನ್ನು ಅಲ್ಪಬುದ್ಧಿಯಿಂದ ಹುಳಿ ಹಿಂಡುವ ಬುದ್ಧಿಶಕ್ತಿಯಿಂದ ಹಾಳುಮಾಡುವ ಒಂದು ಪ್ರಕ್ರಿಯೆ ಯಾವತ್ತೂ ಜಾಗ್ರತವಾಗಿರುತ್ತದೆ. ಇದನ್ನು ಒಂದು ವ್ಯವಸ್ಥಿತವಾದ ರೀತಿಯಲ್ಲಿ ಒಂದು ಕ್ರಮಬದ್ಧವಾದ ರೀತಿಯಿಂದ ಎದುರಿಸುವ ಅದರ ಸುಳಿಗೆ ಸಿಲುಕದೆ ಅದರ ಆಚೆ ಬಂದು ನಾವದನ್ನು ರಕ್ಷಿಸಿಕೊಳ್ಳಬೇಕಾದ ಅಗತ್ಯವಿದೆ. ಇದನ್ನು ನಮ್ಮ ಸಮಾಜದ ಅಗ್ರಗಣ್ಯ ಸಂಸ್ಥೆಗಳು, ನಾಯಕರು, ಹಿರಿಯರು, ಮುತ್ಸದ್ದಿಗಳು ಯೋಚಿಸುತ್ತಿರಬೇಕು. ಇವರೆಲ್ಲ ಕಾಲಕಾಲಕ್ಕೆ ಸಮಾಲೋಚಿಸಿ ಎಳೆಯರ ದುಃಖಗಳನ್ನು ಸುಖವನ್ನು ಅವರ ಬೆಳವಣಿಗೆಯ ದಾರಿಯನ್ನು ಗಮನಿಸುತ್ತಿರಬೇಕು. ಇದರಿಂದಾಗಿ ಒಂದು ಪ್ರಮಾಣದಲ್ಲಿ ಒಂದು ಭರವಸೆ ಯುವಕರಲ್ಲಿ ಹುಡುಗರಲ್ಲಿ ಬರುವುದಕ್ಕೆ ಸಾಧ್ಯವಿದೆ. ಜೊತೆಯಲ್ಲಿ ಮುಂದಿನ ಜನಾಂಗ ಈ ರೀತಿಯ ಮಾರ್ಗರ್ಶನದಿಂದ ಗೆಲುವನ್ನೂ ಒಂದು ಕ್ರಮಬದ್ಧವಾದ ನಡೆಯನ್ನು ರೂಢಿಸಿಕೊಳ್ಳಬೇಕು. ದೊಡ್ಡ ಸಾಧನೆಯನ್ನು ಮಾಡುವುದಕ್ಕೆ ಸಾಧ್ಯವಿದೆ. ಹೇಗೆ ಬೆಂಕಿ ಪೋಟ್ಟಣದಲ್ಲಿರುವಂತಹ ಕಿಡಿಯು ಸಣ್ಣದಾದರೂ ಕೂಡ ಮಹಾಯಜ್ಙಕ್ಕೆ ಸಹಕಾರಿಯಾಗಬಲ್ಲುದು, ನಮ್ಮ ಸಮಾಜ ತನ್ನ ಬೌದ್ಧಿಕತೆಯನ್ನು ಬಂಡವಾಳವಾಗಿಸಿಕೊಂಡು ಈ ಕ್ರಮದಲ್ಲಿ ಮುಂದುವರಿಯುವದಕ್ಕೆ ಸಾಧ್ಯ ಎಂದು ನಾನು ಪ್ರತಿಪಾದಿಸುತ್ತೇನೆ.

ಈ ಏಳು ಸೂತ್ರಗಳಿಂದಾಗಿ ಹವ್ಯಕರ ಮುಂದಿನ ಬದುಕಿನ ದಾರಿ ಸುಗಮವೂ ಸುಸೂತ್ರವೂ ಆಗುವುದರಲ್ಲಿ ಅನುಮಾನವಿಲ್ಲ. ಈ ವಿಚಾರಗಳನ್ನು ಒಂದು ಸಮುದಾಯಕ್ಕೆ ಸಮಷ್ಟಿಯಾಗಿಯೂ ಒಂದು ಗ್ರಾಮಕ್ಕೆ ಒಂದು ಕುಟುಂಬಕ್ಕೆ ವ್ಯಷ್ಠಿರೂಪದಲ್ಲಿಯೂ ಬಳಸಿದರೆ ಸಾಮರ್ಥ್ಯ ಸಾಧ್ಯತೆ ಹೆಚ್ಚು. ಮತ್ತು ಸಹಜೀವನ ನಮ್ಮ ಸಮುದಾಯದ ಮೂಲಮಂತ್ರ ನಮ್ಮ ಸಮುದಾಯದ ಶಕ್ತಿ. ಇದು ನಮ್ಮೆಲ್ಲ ಸಮಸ್ಯೆಗಳಿಗೆ ಪರಿಹಾರವನ್ನು ತಂದೊಡ್ಡುವುದರಲ್ಲಿ ಅನುಮಾನವೇ ಇಲ್ಲ.

ಹರೇ ರಾಮ.

Author Details


Srimukha

Leave a Reply

Your email address will not be published. Required fields are marked *