ವರದಮುನಿಗಳಿಂದ ರಾಮಾದಿ ವಿಗ್ರಹವನ್ನು ಸ್ವೀಕರಿಸಿ, ಆಚಾರ್ಯ ಶಂಕರರು ತಮ್ಮ ಶಿಷ್ಯರೊಂದಿಗೆ ಗೋಕರ್ಣದಿಂದ ಪೂರ್ವಾಭಿಮುಖವಾಗಿ ಹೊರಟರು. ಪ್ರಶಾಂತ ಪರಿಸರವನ್ನು ತಲುಪಿದರು.
ಅರೆ! ಏನಾಶ್ಚರ್ಯ!
ಆಜನ್ಮ ವೈರತ್ವವಿರುವ ಹಾವು-ಕಪ್ಪೆ, ಜಿಂಕೆಮರಿ-ಹುಲಿ ಇತ್ಯಾದಿ ಪ್ರಾಣಿಗಳು ತಮ್ಮ ಸಹಜ ವೈರತ್ವ ಮರೆತು ಸಹಬಾಳ್ವೆಗೈಯುತ್ತಿದ್ದಾರೆ. ಆಚಾರ್ಯ ಶಂಕರರಿಗೆ ಇದು ವಿಶೇಷವೂ ಆಶ್ಚರ್ಯಕರವೂ ಆಗಿ ಕಂಡಿತು. ಧರ್ಮದ ಸಹಜಭೂಮಿಯಿದು. ಕರ್ಮಗಳು ಶಾಶ್ವತವಾಗಿ ಬೆಳೆಯಬೇಕಿರುವುದು ಇಂಥ ಸ್ಥಳದಲ್ಲಿಯೇ ಎಂದು ಆಚಾರ್ಯ ಶಂಕರರು ತಿಳಿದುಕೊಂಡರು.
ಆ ಪುಣ್ಯಭೂಮಿಯೇ – ಅಶೋಕೆ.
ಹೆಸರಿಗೆ ಅನ್ವರ್ಥವಾಗಿ ಶೋಕವೇ ಇಲ್ಲವಾಗಿತ್ತು. ಹೆಸರಿನಿಂದಾಗಿ ಆ ಪ್ರದೇಶ ಹಾಗಾಗಿತ್ತೋ, ಅಥವಾ ಆ ಪ್ರದೇಶದಲ್ಲಿ ಶೋಕವಿರದುದರಿಂದ ಅಶೋಕೆಯೆನಿಸಿತೋ, ಕೈಲಾಸ ಶಂಕರನಿಗೂ, ಆಚಾರ್ಯ ಶಂಕರರಿಗೂ ಮಾತ್ರಾ ಗೊತ್ತಿರಬಹುದಷ್ಟೆ.
ವರದಮುನಿಗಳಿಗೆ ತಾವು ಕೊಟ್ಟ ಮಾತನ್ನು ಸ್ಮರಿಸುತ್ತಾ, ವಿಶೇಷ ವಿಗ್ರಹಗಳ ಶಾಶ್ವತವಾದ ಪೂಜಾ ವ್ಯವಸ್ಥೆಯನ್ನು ಸ್ಥಾಪಿಸಲು ಬಯಸುತ್ತಾರೆ. ಪ್ರದೇಶದ ಅಧಿಪತಿಯಾದ ಮಲ್ಲಿಕಾರ್ಜುನನ್ನೂ ಪೂಜಿಸುತ್ತಾರೆ.
ಮಠ ಸ್ಥಾಪನೆ:
ಅಶೋಕೆಯಲ್ಲಿ ಸ್ಥಾಪಿತಗೊಳ್ಳಲಿರುವ ಶಾಶ್ವತ ವ್ಯವಸ್ಥೆಗೆ ತಮ್ಮಿಂದಲೇ ಜ್ಞಾನಾರ್ಜನೆಗೈದ ವಿದ್ಯಾನಂದಾಚಾರ್ಯರೇ ಸೂಕ್ತ ಎಂಬುದನ್ನು ನಿರ್ಧರಿಸಿದರು. ಶಿಷ್ಯ ಸುರೇಶ್ವರಾಚಾರರಿಂದ ವಿದ್ಯಾನಂದರಿಗೆ ಸಂನ್ಯಾಸವನ್ನು ಅನುಗ್ರಹಿಸಿದರು.
‘ಯತಿಶ್ರೇಷ್ಠನಾದ ವಿದ್ಯಾನಂದನೇ ಗೋಕರ್ಣದಲ್ಲಿ ನೆಲೆಯಾಗಿ ನಿಲ್ಲು. ಮಹಾಬಲೇಶ್ವರನನ್ನೂ, ಅಗಸ್ತ್ಯಪೂಜಿತ ರಾಮಾದಿವಿಗ್ರಹವನ್ನೂ ವಿಧಿವತ್ತಾಗಿ ಅರ್ಚಿಸುತ್ತಾ, ಅನಂತಕಾಲದವರೆಗೂ ಅವಿಚ್ಛಿನ್ನವಾಗಿ, ಅದ್ವೈತವಾಗಿ ಪರಂಪರೆ ಹರಿದು ಬರಲಿ’ ಎಂದು ಅನುಗ್ರಹಿಸಿದರು.
ಅಶೋಕೆಯೆಂಬ ಪುಣ್ಯಭೂಮಿಯಲ್ಲಿ ಆ ಕ್ಷಣದಲ್ಲಿ ಮಹಾನ್ ಪರಂಪರೆಯ ಉಗಮವಾಯಿತು.
ರಘುಕುಲೋತ್ತಮ ಇಲ್ಲಿಯ ಆರಾಧ್ಯ ದೈವ. ರಘೂತ್ತಮನ ಪೂಜಿಸಲಾರಂಭಿಸಿದ ಮಠ. ಅದುವೇ ರಘೂತ್ತಮ ಮಠ, ಈಗಿನ ರಾಮಚಂದ್ರಾಪುರಮಠದ ಮೂಲ. ಸುರೇಶ್ವರಾಚಾರ್ಯರ ಜ್ಯೇಷ್ಠಶಿಷ್ಯ ವಿದ್ಯಾನಂದರು ಈ ಪರಂಪರೆಯ ಪ್ರಥಮ ಪೀಠಾಧಿಪತಿಗಳು. ಹಾಗಾಗಿ ಇದು ಜ್ಯೇಷ್ಠಶಿಷ್ಯ ಪರಂಪರೆ ಎಂದೂ ಕರೆಯಲ್ಪಡುತ್ತದೆ. ಅಂದಿನಿಂದ ಇಂದಿನವರೆಗೆ ಮೂವತ್ತಾರು ಪೀಠಾಧಿಪತಿಗಳು ನಿರಂತರವಾಗಿ ರಾಮಾದಿವಿಗ್ರಹವನ್ನು ದಿನಕ್ಕೆರಡು ಬಾರಿ ಪೂಜಿಸುತ್ತಿದ್ದಾರೆ. ಹಾಗಾಗಿ ಇದನ್ನು ಅವಿಚ್ಛಿನ್ನ ಪರಂಪರೆ ಎಂದೂ ಕರೆಯುತ್ತಾರೆ.
ವಿದ್ಯಾನಂದಾಚಾರ್ಯರು ಪ್ರಥಮ ಪೀಠಾಧಿಪತಿಗಳಾಗಿದ್ದು, ಶ್ರೀಸೀತಾರಾಮಚಂದ್ರಾದಿ ವಿಗ್ರಹಗಳನ್ನೂ, ಪಾದುಕೆಯನ್ನೂ, ಮಹಾಬಲೇಶ್ವರನನ್ನೂ ಪೂಜಿಸುತ್ತಾ, ಧರ್ಮವನ್ನು ನಿರ್ದೇಶಿಸುತ್ತಾ ಮುಂದುವರಿದರು. ಜನರಲ್ಲಿ ಧರ್ಮಾಭಿಮಾನವನ್ನೂ ಅದ್ವೈತತತ್ತ್ವವನ್ನೂ ಬಿತ್ತಿದರು. ಯೋಗ್ಯ ವಟುವನ್ನು ತಮ್ಮ ಉತ್ತರಾಧಿಕಾರಿಯಾಗಿ ನೇಮಿಸಿ, ಯೋಗಪಟ್ಟವನ್ನಿತ್ತು ಭೋಗವಾಲ / ಭೋಗವರ್ಧನವಾಲ ಪರಂಪರೆಯಂತೆ ಶ್ರೀಶ್ರೀಚಿದ್ಬೋಧಭಾರತೀ ಎಂಬ ನಾಮಕರಣವನ್ನು ಮಾಡಿ ಅನುಗ್ರಹಿಸಿದರು. ಪರಬ್ರಹ್ಮನಲ್ಲಿ ಲೀನವಾಗಿ ಶಂಕರರೊಂದಿಗೆ ಐಕ್ಯರಾದರು.
ನಮ್ಮ ಪರಂಪರೆಯ ಪ್ರಥಮ ಪೀಠಾಧಿಪತಿ ಶ್ರೀಶ್ರೀವಿದ್ಯಾನಂದಾಚಾರ್ಯರ ಸಮಾಧಿಯು ಗೋಕರ್ಣದಲ್ಲೇ ಇದೆ. ಲೌಕಿಕದ ಸಂಪರ್ಕ ತಪ್ಪಿಹೋಗಿದ್ದ ವಿದ್ಯಾನಂದರ ಸಮಾಧಿಯನ್ನು ಮತ್ತೆ 2013ರಲ್ಲಿ ಪತ್ತೆಹಚ್ಚಿ, ಅಲ್ಲಿ ತಾಮ್ರಛಾವಣಿಯ ಶಿಲಾಮಯ ಕಟ್ಟಡದೊಂದಿಗೆ ವಿದ್ಯಾನಂದರ ಮೂರ್ತಿ ಪ್ರತಿಷ್ಠಾಪಿಸಿ, ಅನಂತಕಾಲದವರೆಗೂ ನೆನಪುಳಿವಂತೆ ಮಾಡಿದ್ದು ನಮ್ಮ ಪ್ರೀತಿಯ ಶ್ರೀಸಂಸ್ಥಾನ ಶ್ರೀಶ್ರೀರಾಘವೇಶ್ವರಭಾರತೀ ಮಹಾಸ್ವಾಮಿಗಳವರು.
ಇದು ನಮ್ಮ ಮಠದ ಮೂಲ ಕಥೆ.
ಇನ್ನು, ಮೂಲಮಠದ ಕಥೆ ಏನು? ಮುಂದೆ ನೋಡೋಣ.