ಗೋಸ್ವರ್ಗ  ನಿರ್ಮಾಣವೆಂಬ ಐತಿಹಾಸಿಕ ಕಾರ್ಯ : ನಮಿತಾ ಹೆಗಡೆ ಹೊನ್ನಾವರ

ಲೇಖನ

 

 


ಸ್ವರ್ಗದೆತ್ತರಕ್ಕೆ ಏರಲು ನಮಗೆಲ್ಲ ಸಾಧ್ಯವಿದೆಯೋ ಇಲ್ಲವೋ ಗೊತ್ತಿಲ್ಲ. ಆದರೆ ಈಗಿರುವ ಭೂಮಿಯನ್ನೇ ಸ್ವರ್ಗವನ್ನಾಗಿಸಬಹುದೆಂದು  ನಮಗೆಲ್ಲ ತೋರಿಸಿಕೊಟ್ಟವರು ಪರಮಪೂಜ್ಯ ಶ್ರೀಸಂಸ್ಥಾನದವರು. ಸ್ವರ್ಗವನ್ನೂ ನಾಚಿಸುವ ರೀತಿಯಲ್ಲಿ, ಮಲೆನಾಡಿನ ಹಸಿರಿನ ಮಡಿಲಲ್ಲಿ ಸಂಪೂರ್ಣ ಗೋಸೌಖ್ಯಕ್ಕೇ ಕೇಂದ್ರಿತವಾಗಿರುವ ಗೋಸ್ವರ್ಗವೆಂಬ ಅಪೂರ್ವ ಗೋಧಾಮವನ್ನು ನಿರ್ಮಿಸಿದ ಮಹಾನ್ ಚೇತನ ನಮ್ಮ ಶ್ರೀಗುರುಗಳು. 

 


ಯಾಕೆ ಈ ಗೋಸ್ವರ್ಗ ಸ್ವರ್ಗಕ್ಕೂ ಮಿಗಿಲು ಎಂಬುದನ್ನು ಸಂಕ್ಷಿಪ್ತವಾಗಿ  ತಿಳಿದುಕೊಳ್ಳೋಣ. 

 

ಗೋಸ್ವರ್ಗದ ಮಣ್ಣಿನಲ್ಲಿ, ಗಾಳಿಯಲ್ಲಿ, ನೀರಿನಲ್ಲಿ ದೈವದ ಸಾನ್ನಿಧ್ಯವಿದೆ. ಒಂದು ದೃಷ್ಟಿಯಲ್ಲಿ  ನೋಡಿದರೆ ಅದು ವಿಶ್ವದ ಸರ್ವೋತ್ತಮ ಗೋಧಾಮ. ಇನ್ನೊಂದು ದೃಷ್ಟಿಯಲ್ಲಿ ನೋಡುವಾಗ ಅಲ್ಲಿ ಅಧ್ಯಾತ್ಮದ ಗಂಧವಿದೆ. ಅಲ್ಲಿ ಗೋವುಗಳಿವೆ, ಆದರೆ ಅವುಗಳಿಗೆ ಬಂಧನವಿಲ್ಲ. ಗೋಸ್ವರ್ಗದ ಗೋವುಗಳು ಸಂಚಾರ, ಆಹಾರ ಎಲ್ಲ ವಿಚಾರದಲ್ಲಿಯೂ ಸಂಪೂರ್ಣ ಸ್ವತಂತ್ರ. ಗೋವುಗಳಿಗೆ ಸದಾ ಕಾಲವೂ ಮೇವು, ನೀರಿನ ಪೂರೈಕೆ, ಇಚ್ಛಿಸಿದ ಸ್ಥಳದಲ್ಲಿ ಇಚ್ಛಿಸಿದಾಗ, ಇಚ್ಛಿಸಿದಷ್ಟು ಆಹಾರ, ವಿಹಾರ, ವಿರಾಮಗಳಿಗೆ ಅವಕಾಶ. ತಾಯಿ-ಕರುಗಳ ನಡುವೆ ತಡೆಗೋಡೆಯಿಲ್ಲ. ಗೋಘಾತಿಗಳ ಭಯವಿಲ್ಲ. 


ಶ್ರೀಸಂಸ್ಥಾನದವರು ತಮ್ಮ ಮನಸ್ಸಿನಲ್ಲಿ ಮೂಡಿದ, ಹತ್ತು ಹಲವು ಅನನ್ಯತೆಗಳಿಂದೊಡಗೂಡಿರುವ ಈ ಗೋಸ್ವರ್ಗ ನಿರ್ಮಾಣದ ಕನಸನ್ನು ಸಮಾಜದೆದುರು ತೆರೆದಿಟ್ಟು, ಅದರ ಲೋಕಾರ್ಪಣೆಯ ಸಮಯವನ್ನೂ ನಿಗದಿಪಡಿಸಿದಾಗ ನನಗೆ ಆಶ್ಚರ್ಯ, ಕುತೂಹಲಗಳೆರಡೂ ಒಟ್ಟಿಗೆ ಉಂಟಾದವು. ಆ ಅಪೂರ್ವ ಗೋಧಾಮ ಹೇಗಿರಬಹುದು? ಎಂಬ ಕುತೂಹಲವಾದರೆ, ಕೇವಲ 80 ದಿನಗಳಲ್ಲಿ ಇಷ್ಟು ದೊಡ್ಡ ಯೋಜನೆ ಸಾಕಾರಗೊಳ್ಳುವುದೇ ಎಂಬ ಆಶ್ಚರ್ಯ! ಅಷ್ಟೇ ಅಲ್ಲ, ಈ ಬೃಹತ್ಕಾರ್ಯ ಸಂಪನ್ನಗೊಳ್ಳುವುದಕ್ಕೆ ಬೇಕಾದ ಸಂಪತ್ತು ಹಾಗೂ ಮಾನವ ಸಂಪನ್ಮೂಲದ ಪೂರೈಕೆ ಸಾಧ್ಯವೇ? ಎಂಬ ದೊಡ್ಡ ಪ್ರಶ್ನಾರ್ಥಕ ಚಿಹ್ನೆ ಮನದಲ್ಲಿ ಮೂಡಿತು. ಈ ಪ್ರಶ್ನೆ ಇನ್ನೂ ಮನಸ್ಸಿನಲ್ಲಿ  ಸುಳಿದಾಡುತ್ತಿರುವಾಗಲೇ, 2018 ಮಾರ್ಚ್ 3ರಂದು ಗೋಸ್ವರ್ಗ ನಿರ್ಮಾಣಕ್ಕೆ ಶಿಲಾನ್ಯಾಸವೂ ಆಗಿಬಿಟ್ಟಿತು. 

 


ಗುರುಸಂಕಲ್ಪ ಸಾಕಾರವಾಗಿಯೇ ತೀರುತ್ತದೆ ಎಂದು ಬಲವಾಗಿ ತಿಳಿದಿದ್ದರೂ ಇಷ್ಟು ದೊಡ್ಡ ಯೋಜನೆ ಇಷ್ಟು ಅಲ್ಪ ಸಮಯದಲ್ಲಿ ಹೇಗಪ್ಪ? ಎಂದು ಆತಂಕವೊಂದು ಮನದ ಮೂಲೆಯಲ್ಲಿ ಮನೆಮಾಡಿತ್ತು.
ನೋಡ ನೋಡುತ್ತಿದ್ದಂತೆ ಗೋಸ್ವರ್ಗ ಎಂಬುದು ಮನೆ-ಮನೆಯ ಮಾತಾಯಿತು. ಮನ-ಮನದ ಮಂತ್ರವಾಯಿತು. 

 


ಶ್ರೀಸಂಸ್ಥಾನದವರು ಗೋಸ್ವರ್ಗ ನಿರ್ಮಾಣದ ಉದ್ದೇಶ, ಆ ಯೋಜನೆಯ ಆಳ, ವಿಸ್ತಾರವನ್ನು ಜನತೆಯ ಮುಂದೆ ಬಿತ್ತರಿಸುತ್ತಿರುವಂತೆಯೇ ಸರ್ವಸಮಾಜ ತಾನಾಗಿಯೇ ಮುಂದೆ ಬಂದಿತು. ತಮ್ಮ ತಮ್ಮ ಸೇವೆ ಸಲ್ಲಿಸಲು ಸಜ್ಜನರು ಸರದಿಯಲ್ಲಿ ನಿಂತರು. ಸಂಪತ್ತು, ಸಮಯ, ಶ್ರಮದಾನಗಳ ಸುರಿಮಳೆಯೇ ಆರಂಭವಾಯಿತು. ಗೋಸ್ವರ್ಗಕ್ಕಾಗಿ ತಮ್ಮ ಆಭರಣಗಳನ್ನು ಬಿಚ್ಚಿಟ್ಟವರು ಹಲವರು, ತಮ್ಮ ದುಡಿಮೆಯ ಭಾಗವನ್ನು, ತಮ್ಮ ಅಮೂಲ್ಯ ಸಮಯವನ್ನು ನೀಡಿದವರು ಅದೆಷ್ಟೋ ಮಂದಿ. ತಾವು ಕಷ್ಟಪಟ್ಟು ಗಳಿಸಿ ಉಳಿಸಿದ  ಹಾಗೂ ಉಡುಗೊರೆಯಾಗಿ ಬಂದ ಹಣವನ್ನು ಗೋವಿನ ಪದತಲಕ್ಕಿಟ್ಟವರು ಲೆಕ್ಕವಿಲ್ಲದಷ್ಟು ಜನರು. ಪುಟ್ಟ ಮಕ್ಕಳು, ಮಹನೀಯರು, ಮಹಿಳೆಯರು, ಯುವಕರು, ಯುವತಿಯರು, ವೃದ್ಧರು ಈ ಕಾರ್ಯದಲ್ಲಿ ಕೈಜೋಡಿಸಿದರು. ತಮ್ಮ ಮನೆ, ಕಛೇರಿ, ವೈಯಕ್ತಿಕ ಜವಾಬ್ದಾರಿಗಳಿಗಿಂತ ಗೋಸ್ವರ್ಗವೇ ಪ್ರಧಾನವಾಯಿತು ನಿಜವಾದ ಸ್ವರ್ಗಸೇವಕರಿಗೆ. ದೈವಸಂಕಲ್ಪದಂತೆ ನೆರವೇರುತ್ತಿರುವ ಈ ಸತ್ಕಾರ್ಯದಲ್ಲಿ ಪಾಲ್ಗೊಳ್ಳಲು ಜನ ಸಾಗರೋಪಾದಿಯಲ್ಲಿ ಧಾವಿಸಿ ಬಂದರು. 

 


ಗುರುಪರಂಪರೆ, ಮನೆಯ ಗೋವುಗಳು, ಆರಾಧ್ಯ ದೇವರುಗಳು, ಇಷ್ಟದೇವರುಗಳು,
ಗತಿಸಿದ ಹಿರಿಯರು, ದೇಶಪ್ರೇಮಿಗಳು, ಸ್ವಾತಂತ್ರ್ಯ ಹೋರಾಟಗಾರರು, ರಾಷ್ಟ್ರನಾಯಕರು, ಇವರೆಲ್ಲರ ನೆನಪುಗಳು ಸೇವೆಗೆ ದ್ವಾರವಾದವು. ಸಾಮಾನ್ಯನೂ ಕೂಡ ಪಾಲ್ಗೊಳ್ಳಬಹುದಾದ ಗೋಸ್ವರ್ಗದ ‘ಏಕಪದ’ ಸೇವೆ ಪ್ರವಾಹೋಪಾದಿಯಲ್ಲಿ ಹರಿದುಬಂತು . ಜನ್ಮದಿನ, ವಿವಾಹ ವಾರ್ಷಿಕೋತ್ಸವ ಇವೇ ಮೊದಲಾದ ಜೀವನದ ಪ್ರಮುಖ ಘಟ್ಟಗಳು ಸೇವೆಗೆ ಮಾಧ್ಯಮಗಳಾದವು. ಅಂಕೆಮೀರಿದ ಗೋಪ್ರೇಮಿಗಳು ಈ ಪವಿತ್ರ ಕಾರ್ಯಕ್ಕೆ ತಮ್ಮ ತಮ್ಮ ಕೊಡುಗೆಯನ್ನು ನೀಡಿ ಕೃತಾರ್ಥರಾದರು.  

 


ಗೋಸ್ವರ್ಗಕ್ಕಾಗಿ ತಮ್ಮ ಸರ್ವಸ್ವವನ್ನೂ ಧಾರೆಯೆರೆದವರು ಪರಮಪೂಜ್ಯ ಶ್ರೀಸಂಸ್ಥಾನದವರು. ದಿನೇ ದಿನೇ ಗೋಸ್ವರ್ಗವೆಂಬ ಶಿಶುವು ಬೆಳೆಯುತ್ತಿದ್ದ ರೀತಿಯು ಸಮಾಜಮಾಧ್ಯಮಗಳಲ್ಲಿ ಶ್ರೀಸಂಸ್ಥಾನದವರ ಟ್ವೀಟುಗಳಿಂದ  ಹಾಗೂ ‘ಗೋವಾಣಿ’ಯೆಂಬ ಮಾಧ್ಯಮದಿಂದ ತಿಳಿಯುತ್ತಿತ್ತು. ಅದು ಬೆಳೆದು ಯಾವ ದಿವ್ಯಾಕಾರವನ್ನು ಪಡೆದು ಪ್ರಪಂಚಕ್ಕೆ ಪ್ರಸ್ತುತವಾಗುವುದೋ ಎಂಬ ಕುತೂಹಲಗಳು ದಿನೇ ದಿನೇ ಹೆಚ್ಚುತ್ತಿದ್ದವು. ಲೋಕಾರ್ಪಣೆಯ ದಿನಗಳು ಸಮೀಪಿಸತೊಡಗಿದವು. 

 


ಆ ಸಮಯದಲ್ಲಿ ಎಲ್ಲ ಮಾರ್ಗಗಳೂ ಭಾನ್ಕುಳಿಯನ್ನು ತೋರಿದವು. ಗೋಸ್ವರ್ಗ ನಿರ್ಮಾಣದಲ್ಲಿ ಭಾಗವಹಿಸುವಿಕೆಯೇ ಒಂದು ಹಬ್ಬವಾಯಿತು. ಈಗ ಪಾಲ್ಗೊಳ್ಳದಿದ್ದರೆ ತಮ್ಮ ಗೋಪ್ರೇಮಕ್ಕೆ ಅರ್ಥವೇ ಇಲ್ಲ ಎಂಬ ಭಾವ ಹಲವರಲ್ಲಿ ಮೂಡಿ, ಯಾವೆಲ್ಲ ಮಾಧ್ಯಮಗಳಿಂದ ಸೇವೆ ಸಲ್ಲಿಸಲು ಸಾಧ್ಯವೋ ಅಂತಹ ಮಾಧ್ಯಮಗಳಲ್ಲ ಸೇವೆಗಾಗಿ ತೆರೆದುಕೊಂಡವು. 

 


ಹಲವರು ಗೋಸ್ವರ್ಗ ನಿರ್ಮಾಣಕ್ಕೆ ಧನಸಂಗ್ರಹ ಮಾಡಿಕೊಟ್ಟರೆ, ಮತ್ತುಳಿದವರು ಅದಕ್ಕೆ ಪೂರಕವಾಗಿ ಆ ಪರಿಸರದಲ್ಲೇ ನಿಂತು ಸ್ವತಃ ನಿರ್ಮಾಣ ಪ್ರಕ್ರಿಯೆಯಲ್ಲಿ ತೊಡಗಿದ್ದರು. ಕೆಲವರು ನಿರ್ಮಾಣ ಸಾಮಗ್ರಿಗಳ ಪ್ರಾಯೋಜಕರಾದರೆ,  ಇನ್ನು ಕೆಲವರು ಗೋವಿನ ಮೇವಿಗೆ, ಗೋಸೌಖ್ಯಕ್ಕೆ ಅನುಕೂಲಕರವಾದ ಪರಿಕರಗಳನ್ನೊದಗಿಸಿದರು. ಹಲವು ಗುಂಪುಗಳು ‘ಸ್ವರ್ಗ ಸಂವಾದ’ವೆಂಬ ಕಾರ್ಯಕ್ರಮಗಳ ಮೂಲಕ ಗೋಸ್ವರ್ಗವನ್ನು ಹೆಚ್ಚು ಹೆಚ್ಚು ಜನರಿಗೆ ತಲುಪಿಸುತ್ತಿದ್ದರೆ, ಇನ್ನು ಹಲವರ ಗುಂಪು ಸಮಾಜಮಾಧ್ಯಮದಲ್ಲಿ ಅಕ್ಷರಕ್ರಾಂತಿಯ ಮೂಲಕ ಇನ್ನೊಂದು ವರ್ಗದ ಜನತೆಗೆ ಗೋಸ್ವರ್ಗವನ್ನು ಪರಿಚಯಿಸುತ್ತಿತ್ತು. 

 

ಈ ನಿರ್ಮಿತಿಗೆ ತಮ್ಮ  ಜ್ಞಾನ, ಕೌಶಲ್ಯಗಳನ್ನು ನಿರಂತರವಾಗಿ ಧಾರೆಯೆರೆಯುತ್ತಿದ್ದವರನ್ನು ನಾವು ಸ್ಮರಿಸಲೇಬೇಕು. ತಳಮಟ್ಟದ ಸೇವೆಯಲ್ಲೂ ಭಾಗಿಯಾಗಿ ಗೋಸ್ವರ್ಗವನ್ನು ಶುಭ್ರಗೊಳಿಸುತ್ತಿದ್ದ ಕಾರ್ಯಕರ್ತರ ಪಡೆಯ ಸೇವೆ ಅವಿಸ್ಮರಣೀಯ. ಇವೆಲ್ಲದರ ನಡುವೆ ದಣಿದ ಕಾರ್ಯಕರ್ತರಿಗೆ ಅಮೃತಾನ್ನವನ್ನು ಉಣಬಡಿಸಿ ಅವರ ಉದರವನ್ನು ತಂಪಾಗಿಸಿದ ಬಾಣಸಿಗರ ಸೇವೆ ವಂದನಾರ್ಹ. 

 


ಇದೋ ಆ ಮಹತ್ಕಾರ್ಯದ ಸೇವಾಬಿಂದುಗಳ ಪರಿಶ್ರಮದ ಒಂದು ಝಲಕ್ ನಿಮಗಾಗಿ :

https://youtu.be/VOiw6BXZWYU

 


ಲೋಕಾರ್ಪಣೆಯ ದಿನಗಳು ಸಮೀಪಿಸುತ್ತಿದ್ದಂತೆ ಸಹಸ್ರ ಸಹಸ್ರ ಸಂಖ್ಯೆಯ  ಕಾರ್ಯಕರ್ತರು ಗೋಸ್ವರ್ಗದತ್ತ ಧಾವಿಸಿ ಬರತೊಡಗಿದರು. ದಿನೇ ದಿನೇ ಈ ಸಂಖ್ಯೆ ವೃದ್ಧಿಸತೊಡಗಿತು. ಸಾಸಿರ ಶಿರಗಳು, ಸಾಸಿರ ಕರಗಳ ಸ್ವರ್ಗಸೇವಕರ ಬೃಹತ್ ಸಮೂಹ  ಬೆವರ ಹನಿಗಳ ಮಳೆಯನ್ನೇ ಸುರಿಸಿತು. ಸಾವಿರ ಸಾವಿರ ಕಾರ್ಯಕರ್ತರು ಶ್ರಮದಾನಕ್ಕಾಗಿ ಟೊಂಕಕಟ್ಟಿ ನಿಂತರು. ಕೃಷಿಕರಿಂದ ಹಿಡಿದು
ಮಹಾನಗರಿಯಲ್ಲಿನ ಬಹುರಾಷ್ಟ್ರೀಯ ಕಂಪನಿಯ ಉದ್ಯೋಗಿಯವರೆಗೆ, ಸಾಮಾನ್ಯನಿಂದ ಹಿಡಿದು ಮಾನ್ಯರವರೆಗೆ ಗೋಸ್ವರ್ಗ ನಿರ್ಮಿತಿಯಲ್ಲಿ ಸ್ವಪ್ರೇರಿತರಾಗಿ ಪಾಲ್ಗೊಂಡ ಆ ವಿಚಿತ್ರ ಹುಮ್ಮಸ್ಸನ್ನು  ಶಬ್ದಗಳಲ್ಲಿ ಹೇಳಲಾಗದು. ಅದನ್ನು ಅನುಭವಿಸಿಯೇ ತಿಳಿಯಬೇಕು. ಗೋಸ್ವರ್ಗ ನಿರ್ಮಾಣಕ್ಕೆ ದುಡಿದ ಸೇವಾಬಿಂದುಗಳನ್ನು ಭಾವವನ್ನು, ಅನುಭೂತಿಯನ್ನು ಅವರವರ ಮಾತುಗಳಲ್ಲಿಯೇ ಕೇಳಬೇಕು. ಹಲವರು ತಮ್ಮ ಶಬ್ದಗಳಲ್ಲಿ ಅದನ್ನು ಸೆರೆಹಿಡಿಯಲು ಸಮರ್ಥರಾದರೆ ಇನ್ನು ಕೆಲವರು ಅದೊಂದು ಅನಿರ್ವಚನೀಯ ಅನುಭೂತಿಯೆಂದು ಕ್ಷಣಕಾಲ ನಿಶ್ಯಬ್ದರಾಗುತ್ತಾರೆ. 

 


ಈ ಮಹತ್ಕಾರ್ಯದಲ್ಲಿ ಅಳಿಲಸೇವೆಯನ್ನು ಸಲ್ಲಿಸುವ ಭಾಗ್ಯ ನನಗೂ ಒದಗಿತ್ತು. ಆ ಸಂದರ್ಭದಲ್ಲಿ ನನಗೆ ಅಲ್ಲಿಯ ಬಿಸಿಲು ಹಿತವೆನಿಸಿತು. ಅಲ್ಲಿ ಸುರಿಸಿದ ಬೆವರ ಹನಿಗಳು ಸಾರ್ಥಕವೆನಿಸಿದವು. ಅಲ್ಲಿ ಉಂಡ ಊಟ ಮೃಷ್ಟಾನ್ನವೆನಿಸಿತು. ಅಲ್ಲಿ ಕುಡಿದ ಬೆಲ್ಲದ ಪಾನಕ  ಅಮೃತವೆನಿಸಿತು. ಅಲ್ಲಿ ಜೊತೆಗೂಡಿದವರು ಬಂಧುಗಳೆನಿಸಿದರು. ದಣಿವು ಪ್ರಥಮ ಬಾರಿಗೆ ಆನಂದವೆನಿಸಿದ್ದು ಗೋಸ್ವರ್ಗದಲ್ಲಿ. ಅಲ್ಲಿನ ಪ್ರಯಾಣ ಅಯೋಧ್ಯಾನಗರಿಗೇ ಹೋದ ಅನುಭವವನ್ನು ತಂದಿತು. ಶ್ರೀಗಳ ಒಂದು ಕಿರುನೋಟ, ಮಂದಹಾಸ ಸಾಕ್ಷಾತ್ ಶ್ರೀಹರಿಯನ್ನೇ ನೆನಪಿಸಿತು.  

 


ಕೊನೆಗೂ ಕಾತರದಿಂದ ಕಾಯುತ್ತಿದ್ದ ಆ ದಿನ ಬಂದೇ ಬಿಟ್ಟಿತು. ಅದೇ ಗೋಸ್ವರ್ಗದ  ಲೋಕಾರ್ಪಣೆಯ ದಿನ. 27 ಮೇ 2018, ಎಷ್ಟೋ ಜನರನ್ನು ಮೂಕವಿಸ್ಮಿತರನ್ನಾಗಿಸಿದ ದಿನವದು. ಧರಿತ್ರಿಯ ಚರಿತ್ರೆಯಲ್ಲಿ ಸುವರ್ಣಾಕ್ಷರಗಳಿಂದ ಬರೆದಿಡುವ ದಿನವದು. ಜಗದ, ಯುಗದ ಪ್ರಥಮ ಗೋಸ್ವರ್ಗವು ಅನಾವರಣಕ್ಕೆ ಅಣಿಯಾಗಿ ನಿಂತಿತ್ತು. ಸಹಸ್ರಾರು ಗೋಪ್ರೇಮಿಗಳು, ಜನನಾಯಕರು, ಸಂತರು ಈ ಅಪೂರ್ವ ಕ್ಷಣಕ್ಕೆ ಸಾಕ್ಷಿಯಾದರು. ಹಿಂದೆ ನಿಂತ ಗೋಪ್ರೇಮಿಗಳು ಎಂದೂ ಜೊತೆಯಿರುವುದಾಗಿಯೂ, ಅಂದು ಗೋಸ್ವರ್ಗವನ್ನು ಕಂಡವರು ಇನ್ನು ಮುಂದೆ ತಾವೂ ಜೊತೆಯಾಗುವೆವೆಂಬ ಅನಿಸಿಕೆ ವ್ಯಕ್ತಪಡಿಸಿದರು. ವಿಸ್ಮಯವೊಂದು ನಡೆದೇ ಹೋಯಿತು ಭಾನ್ಕುಳಿಯ ಪವಿತ್ರ ಮಣ್ಣಿನಲ್ಲಿ.  

 


ಇದೋ ಗೋಸ್ವರ್ಗ ಲೋಕಾರ್ಪಣೆಯ ದಿನವನ್ನು ನೆನಪಿಸುವ ಒಂದು ಪ್ರಸ್ತುತಿ ನಿಮಗಾಗಿ:

https://youtu.be/imFD-XpeHck

 

ಗೋಸ್ವರ್ಗದ ಕನಸನ್ನು  ಸಾಕಾರಗೊಳಿಸುವಲ್ಲಿ ಅವಿಶ್ರಾಂತವಾಗಿ ಅಹರ್ನಿಶಿ ದುಡಿದವರೆಂದರೆ ಪೂಜ್ಯ ಶ್ರೀಸಂಸ್ಥಾನದವರು. ದಣಿವರಿಯದ ಧಣಿಯಾಗಿ, ಬಿಸಿಲು-ಮಳೆ, ಗಾಳಿ-ಧೂಳು, ಹಗಲು-ರಾತ್ರಿ, ಇವಾವುದರ ಭೇದವಿಲ್ಲದೇ ಗೋಸ್ವರ್ಗ ನಿರ್ಮಿತಿಯನ್ನೇ ಏಕಮಾತ್ರ ಲಕ್ಷ್ಯವಾಗಿಸಿಕೊಂಡು ಹಲವು ತಿಂಗಳುಗಳ ಕಾಲ ಆ ಪರಿಸರದಲ್ಲೇ ತಂಗಿ, ಸ್ವತಃ ನಿಂತು ಮಾರ್ಗದರ್ಶನ ನೀಡಿದ್ದರಿಂದಲೇ ಗೋಸ್ವರ್ಗವೆಂಬ ಆ ದಿವ್ಯಪುಷ್ಪ ಅಲ್ಪಾವಧಿಯಲ್ಲಿ ಜಗತ್ತಿಗೆ ಅನಾವರಣವಾಯಿತೆಂದರೆ ಅದು ಅತಿಶಯೋಕ್ತಿಯಲ್ಲ. 

80 ದಿನಗಳಲ್ಲಿ ಜಗದ ಪ್ರಥಮ ಗೋಸ್ವರ್ಗವನ್ನು ನಿರ್ಮಿಸಿ ಮತ್ತೊಂದು ಹೊಸ ಇತಿಹಾಸವನ್ನು ಬರೆದ ಕೀರ್ತಿ ನಮ್ಮ ಮಠದ್ದು. ಗೋಸ್ವರ್ಗದ ಪ್ರಥಮ ಹಂತವು ಪೂರ್ಣಗೊಂಡು ದಿವ್ಯಾಕಾರವನ್ನು ತಾಳಿ ಸಹಸ್ರಾರು ಜನರನ್ನು ತನ್ನತ್ತ ಆಕರ್ಷಿಸುತ್ತಿದೆ.  

 


ಬನ್ನಿ, ನಾವೂ ಗೋಸ್ವರ್ಗಕ್ಕೆ ಹೋಗೋಣ. ಹೆಚ್ಚು ಹೆಚ್ಚು ಜನರಿಗೆ ಗೋಸ್ವರ್ಗವನ್ನು ಪರಿಚಯಿಸೋಣ.  ಗೋಸ್ವರ್ಗವನ್ನು ವಿಶ್ವದಾದ್ಯಂತ ತಲುಪಿಸೋಣ. ದೈವವೇ ನಿಂತು ನಡೆಸುತ್ತಿರುವ ಈ ಕಾರ್ಯದಲ್ಲಿ ಭಾಗವಹಿಸಿ, ಸ್ವರ್ಗಸೇವಕರೆಂಬ ಅಭಿದಾನ ಪಡೆದು, ಭಾಗ್ಯಶಾಲಿಗಳಾಗೋಣ. 


Author Details


Srimukha

Leave a Reply

Your email address will not be published. Required fields are marked *