ಮಹಿಳಾ ಶಿಕ್ಷಣದ ‘ಜ್ಯೋತಿ’ಯನ್ನು ಹೊತ್ತಿಸಿದ ಸಾವಿತ್ರಿಬಾಯಿ ಫುಲೆ

ಅಂಕಣ ಜಾಗೃಯಾಮ : ಶಿಶಿರ ಅಂಗಡಿ

ಜ್ಞಾನವೇ ಅರಿವೆಂಬ ಬೆಳಕಿನ ಮೂಲ. ಅಕ್ಷರವೇ ಜ್ಞಾನದ ಮೂಲ. ಕ್ರಾಂತಿಯೇ ಸಾಮಾಜಿಕ ಪರಿವರ್ತನೆಗೆ ಮುನ್ನುಡಿ. ಹೀಗೆ ಮಹಿಳೆಯರಿಗೆ ಅಕ್ಷರದ ಅರಿವು ಮೂಡಿಸುವ ಕ್ರಾಂತಿಯ ಮೂಲಕ ಸಾಮಾಜಿಕ ಪರಿವರ್ತನೆಯ ಬೀಜ ಬಿತ್ತು ಭಾರತದಲ್ಲಿ ಮಹಿಳೆಯರಿಗೆ ಹೊಸ ದಿಕ್ಕು ತೋರಿಸಿದವರು ಸಾವಿತ್ರಿಬಾಯಿ ಫುಲೆ. ನಿನ್ನೆ, ಜನವರಿ 3ನೆಯ ತಾರೀಕು ಅವರ ಜನ್ಮಜಯಂತಿ. ಈ ಸಂದರ್ಭದಲ್ಲಿ ಸಮಾಜದ ಜ್ಯೋತಿಯಾಗಿದ್ದ ಅವರ ಬದುಕಿನ ಕಡೆಗೊಂದು ಬೆಳಕು ಚೆಲ್ಲುವ ಪ್ರಯತ್ನ.

 


ಬಾಲ್ಯವಿವಾಹ ವ್ಯಾಪಕವಾಗಿ ರೂಢಿಯಲ್ಲಿದ್ದ ಆ ಕಾಲಕ್ಕೆ  ಏನೂ ಅರಿಯದ‌, ಕೇವಲ 8ನೆಯ ವಯಸ್ಸಿಗೆ ಮದುವೆಯಾಗಿ, ಜೀವನೆವೆಂಬ ಯಜ್ಞಕ್ಕೆ ಧುಮಿಕಿದ್ದೇ ಸಾವಿತ್ರಿಬಾಯಿ ಫುಲೆಯವರ ಜೀವನದ ಮೊದಲ ಪ್ರಮುಖ ತಿರುವಾಗಿದ್ದು ಇತಿಹಾಸ. ಯಜಮಾನರಾದ ಶ್ರೀ‌ ಜ್ಯೋತಿಬಾ ಫುಲೆಯವರೇ ಸಾವಿತ್ರಿಬಾಯಿಯವರ ಮೊದಲ ಗುರು. ಇವರ ಯಶಸ್ಸು, ಕೀರ್ತಿಯ ಬಹುದೊಡ್ಡ ಪಾಲು ಸೇರಬೇಕಾದುದು ಜ್ಯೋತಿಬಾ ಅವರಿಗೇ.

 


ಹಿಂದುಳಿದ ಹೂಗಾರ ಜಾತಿಗೆ ಸೇರಿದ ಸಾವಿತ್ರಿಬಾಯಿ ಫುಲೆ ಅವರು 1831ರಲ್ಲಿ ಮಹಾರಾಷ್ಟ್ರದ ಸಾತಾರಾ ಜಿಲ್ಲೆಯ ನೈಗಾಂವ್ ಎಂಬಲ್ಲಿ ಜನಿಸಿದರು. ಪೇಶ್ವೆಗಳ ಆಡಳಿತದ ಅವಧಿಯಲ್ಲಿ ಹೂವನ್ನು ಮಾರುತ್ತಿದ್ದರಿಂದ ಇವರ ಕುಟುಂಬಕ್ಕೆ ಫುಲೆ ಎಂಬ ಹೆಸರು ಬಂದಿತೆಂದು ಹೇಳಲಾಗಿದೆ. ಇವರು 1847ರಲ್ಲಿ ಅಧ್ಯಾಪಕರ ತರಬೇತಿಯನ್ನು ಮಿಶೆಲ್ ಅವರ ಶಾಲೆಯಲ್ಲಿ ಪಡೆದರು. ಈ ಸಂದರ್ಭದಲ್ಲಿ ಸಮಾಜ ಅವರಿಗೆ ನಾನಾ ತೊಂದರೆ ಕೊಟ್ಟರೂ, ಉಸ್ಮಾನ್ ಶೇಖ್ ಫಾತಿಮಾ ಶೇಖ್ ಎಂಬ ಸ್ನೇಹಿತೆಯರು ಅವರಿಗೆ ಆಶ್ರಯ ನೀಡಿ ಸಹಕರಿಸಿದ್ದರು‌. ಮಹಿಳೆಯರು ಮನೆಯಿಂದ ಹೊರಗೆ ಹೆಜ್ಜೆ ಹಾಕುವುದೇ ಮಹಾಪರಾಧ, ಶಿಕ್ಷಕರಾಗುವುದು ಮಹಾಪಚಾರ ಎಂಬಂತಹ ಸನ್ನಿವೇಶದಲ್ಲೂ ಕೂಡ ಹೆಣ್ಣುಮಕ್ಕಳು ವಿದ್ಯಾರ್ಜನೆ ಮಾಡಬೇಕು ಎಂಬ ಹೊಸ ಕಲ್ಪನೆಯನ್ನು ಹುಟ್ಟುಹಾಕಿ, ಅದನ್ನು ಅನುಷ್ಠಾನಕ್ಕೆ ತಂದರು. ಅಷ್ಟೇ ಅಲ್ಲದೇ ತಾವೇ ಸ್ವತಃ ಶಿಕ್ಷಕರಾಗಿ ಸ್ಪೂರ್ತಿಯಾದರು.

 


ಮುಂದೆ 1848ರಲ್ಲಿ ಕೆಳವರ್ಗದವರಿಗಾಗಿ ಶ್ರೀ‌ ಭಿಡೆ ಅವರ ಮನೆಯಲ್ಲಿ ಪತಿ ಜ್ಯೋತಿಬಾ ಫುಲೆ ಅವರಿಂದ ಕನ್ಯಾಶಾಲೆಯೊಂದು ಪ್ರಾರಂಭವಾಯಿತು. ಕೆಳವರ್ಗದ ಶಾಲೆಯಲ್ಲಿ ಶಿಕ್ಷಕರಾಗಿ ಬರಲು ಯಾರೂ ಒಪ್ಪಲೇ ಇಲ್ಲ. ಆಗ ಅವರ ಮಡದಿ ಶ್ರೀಮತಿ ಸಾವಿತ್ರಿಬಾಯಿ ಫುಲೆ ಪ್ರಧಾನ ಶಿಕ್ಷಕರಾಗಿ ನೇಮಕಗೊಳ್ಳುವ ಮೂಲಕ ಭಾರತದ ಮೊದಲ ಮಹಿಳಾ ಶಿಕ್ಷಕರಾದರು.

 


ಅವರು ಶಾಲೆಗೆ ಹೋಗುವಾಗ ಜನರು ಅವರನ್ನು ನೋಡಿ ಅಪಹಾಸ್ಯ ಮಾಡುತ್ತಿದ್ದರು, ಕೇಕೇಹಾಕಿ ನಗುತ್ತಿದ್ದರು, ಅವರ ಮೈಮೇಲೆ ಸಗಣಿ, ತೊಪ್ಪೆ, ಕೆಸರು, ಕಲ್ಲುಗಳನ್ನು ಎಸೆಯುತ್ತಿದ್ದರು. ಇವೆಲ್ಲವುಗಳಿಂದ ಅವರು ಧೃತಿಗೆಡಲಿಲ್ಲ. ಬದಲಿಗೆ ಇನ್ನಷ್ಟು ದೃಢರಾದರು. ಅವರು ತಮ್ಮ ಬ್ಯಾಗಿನಲ್ಲಿ ಯಾವಾಗಲೂ ಇನ್ನೊಂದು ಹೆಚ್ಚುವರಿ ಸೀರೆಯನ್ನು ಇಟ್ಟುಕೊಳ್ಳುತ್ತಿದ್ದರು. ಶಾಲೆಗೆ ಬರುವಾಗ ಅಲ್ಲಿನ ಜನರ ಉಪಟಳಗಳಿಂದ ಅವರು ಧರಿಸಿದ್ದ ಸೀರೆ ಗಲೀಜಾದರೆ ಶಾಲೆಗೆ ತಲುಪುತ್ತಲೇ ಇನ್ನೊಂದು ಸೀರೆಯನ್ನು ಧರಿಸಿ ಬಂದು ನಗುನಗುತ್ತಲೇ ಮಕ್ಕಳಿಗೆ ಪಾಠ ಮಾಡುತ್ತಿದ್ದರು.

 

ಬರಹ, ಚಿತ್ರಕಲೆ ಸೇರಿದಂತೆ ವಿವಿಧ ಕಲೆಗಳಲ್ಲಿ ತೊಡಗುವಂತೆ ವಿದ್ಯಾರ್ಥಿಗಳನ್ನು ಉತ್ತೇಜಿಸುತ್ತಿದ್ದರು ಹಾಗೂ ನಿರಂತರ ಪಾಲಕ-ವಿದ್ಯಾರ್ಥಿಗಳ ಸಭೆಯನ್ನು ನಡೆಸಿ ಎಲ್ಲರಿಗೂ ಪ್ರೇರಣೆಯಾಗಿದ್ದರು. ಇವರ ಶಾಲೆಗೆ ಬರುವ ಹೆಣ್ಣುಮಕ್ಕಳನ್ನು ಸಮಾಜ ಬಹಿಷ್ಕರಿಸುವ ಬೆದರಿಕೆ ಹಾಕಿದಾಗ ಸಾವಿತ್ರಿಬಾಯಿವರು ಮನೆ ಮನೆಗೆ ತೆರಳಿ ಪೋಷಕರ ಮನವೊಲಿಸಿ, ಶಿಕ್ಷಣದ ಔನ್ನತ್ಯವನ್ನು ಮನವರಿಕೆ ಮಾಡಿ ಮಕ್ಕಳನ್ನು ವಾಪಸ್ ಶಾಲೆಗೆ ಕರೆತಂದು ಶಿಕ್ಷಣ ನೀಡಿದ್ದರು. ಇದು ಅವರ ಬದ್ಧತೆಯಾಗಿತ್ತು. ಹೀಗೆ ನಿಜವಾದ ಅರ್ಥದಲ್ಲಿ ಆಧುನಿಕ ಭಾರತದ ಶಿಕ್ಷಣ ಮಾತೆಯಾದರು.

 


ಭಾರತದಲ್ಲಿ ಇಂದು ಸ್ತ್ರೀಯರು ಸಮಾಜದ ಎಲ್ಲ ಕ್ಷೇತ್ರದಲ್ಲಿ ಸಮಾನತೆಯನ್ನು ಸಾಧಿಸಿದ್ದಾರೆಂದರೆ ಅದಕ್ಕೆ ಮುನ್ನುಡಿ ಇಟ್ಟು ಶ್ರಮಿಸಿದವರು ಮಾತೆ ಸಾವಿತ್ರಿಬಾಯಿ ಪುಲೆ. ಇವರು ಮಹಿಳಾ ಹಕ್ಕುಗಳ ಹೋರಾಟಗಾರ್ತಿಯೂ ಹೌದು. ಅಂದಿನ ದಿನಗಳಲ್ಲಿ ಹಾಸುಹೊಕ್ಕಾಗಿದ್ದ ಸಾಮಾಜಿಕ ಪದ್ದತಿಗಳಾದ ಬಾಲ್ಯವಿವಾಹ, ಸತಿಸಹಗಮನ ಪದ್ದತಿ, ಕೇಶಮುಂಡನೆ ವಿರುದ್ದ ಹೋರಾಟ ಮಾಡಿದ ಶ್ರೇಯಸ್ಸು ಇವರದ್ದೇ. ಮಹಿಳೆಯರಿಗೋಸ್ಕರ ಪ್ರಪ್ರಥಮ ಅಬಲಾಶ್ರಮ ಸ್ಥಾಪನೆ ಮಾಡಿದ ಕೀರ್ತಿಯೂ ಇವರಿಗೇ ಸಲ್ಲುತ್ತದೆ. ಇವರು ಒಟ್ಟು 14 ಶಾಲೆಗಳನ್ನು ಸ್ಥಾಪನೆ ಮಾಡಿರುತ್ತಾರೆ.


ಸಾವಿತ್ರಿಬಾಯಿ ಫುಲೆಯವರು ತೆಗೆದುಕೊಂಡ ಶೈಕ್ಷಣಿಕ ಸಾಮಾಜಿಕ ಕ್ರಾಂತಿಕಾರಿ ಹೆಜ್ಜೆಗಳು:

 

  • ಆಗಿನ ಕಾಲದಲ್ಲೇ ಶಾಲೆಯನ್ನು ತೊರೆಯದ ವಿದ್ಯಾರ್ಥಿಗಳಿಗೆ ಸ್ಟೈಫಂಡ್ ಕೊಡುವ ವ್ಯವಸ್ಥೆ ಹುಟ್ಟುಹಾಕಿದ್ದರು.
  • ಅತ್ಯಾಚಾರಕ್ಕೆ ಒಳಗಾದ ಮಹಿಳೆಯರಿಗೆ ಮತ್ತು ಅವರಿಗೆ ಹುಟ್ಟುವ ಮಕ್ಕಳಿಗಾಗಿ ‘ಬಾಲಹತ್ಯಾ ಪ್ರತಿಬಂಧಕ ಗೃಹ’ಗಳನ್ನು ತೆರೆದರು.
  • 1863ರಲ್ಲಿ ಅನಾಥವಿಧವೆಯರ ಸುರಕ್ಷಿತ ಹೆರಿಗೆಗಾಗಿ ‘ಗುಪ್ತಪ್ರಸೂತಿ ಗೃಹ’ಗಳನ್ನೂ ಸ್ಥಾಪಿಸಿದರು. ಹೀಗೆ ನೂರಾರು ಮಹಿಳೆಯರ ಮತ್ತು ಮಕ್ಕಳ ಬದುಕಿಗೊಂದು ನೆಲೆ ಕೊಟ್ಟರು.
  • ತಮಗೆ ಮಕ್ಕಳಾದರೆ ಅನಾಥಮಕ್ಕಳ ಮೇಲಿನ ತಮ್ಮ ಕಾಳಜಿ, ಪ್ರೀತಿ ಕಡಿಮೆ ಆಗಿಬಿಡಬಹುದೇನೋ ಎಂದು ಭಾವಿಸಿ ಫುಲೆ-ದಂಪತಿ, ‘ತಮಗೆ ಸ್ವಂತ ಮಕ್ಕಳು ಬೇಡ’ ಎಂಬ ಕಠೋರ ನಿರ್ಧಾರ ತೆಗೆದುಕೊಂಡರು.
  • 1848ರಲ್ಲಿ ಪುಣೆ ನಗರಿಯಲ್ಲಿ ಪತಿ ಜ್ಯೋತಿಬಾ ಫುಲೆಯವರೊಂದಿಗೆ ಸೇರಿ ತಳ ಸಮುದಾಯದ ಹೆಣ್ಣುಮಕ್ಕಳಿಗಾಗಿ ಶಾಲೆಯನ್ನು ಪ್ರಾರಂಭಿಸಿದರು.
  • ಮಹರರು, ಮಾಂಗರು ಸೇರಿದಂತೆ ಸಮಾಜದಿಂದ ತುಳಿಯಲ್ಪಟ್ಟಿದ್ದ ಹಲವು ಜನರಿಗೆ ಶಿಕ್ಷಣ ಕೊಡಿಸುವ ಮೂಲಕ ಅವರಲ್ಲಿ ಸ್ವಾಭಿಮಾನ ತುಂಬಿದ್ದರು.
  • 1855 ರಲ್ಲಿ ರೈತರಿಗಾಗಿ ಮತ್ತು ಕೂಲಿ ಕಾರ್ಮಿಕರಿಗಾಗಿ ರಾತ್ರಿ ಪಾಳಯದ ಶಾಲೆ ಸ್ಥಾಪನೆ.
  • 1868 ರಲ್ಲಿ ಸಮಾಜದಿಂದ ತಿರಸ್ಕೃತರಾಗಿದ್ದ ದಲಿತರಿಗಾಗಿ ಮನೆಯ ಕುಡಿಯುವ ನೀರಿನ ಟ್ಯಾಂಕನ್ನು ಬಿಟ್ಟುಕೊಟ್ಟರು.
  • ಬ್ರಾಹ್ಮಣ ವಿಧವೆಯ ಮಗುವೊಂದನ್ನು ದತ್ತು ತೆಗೆದುಕೊಂಡುದು.
  • ತಾವು ಸ್ಥಾಪಿಸಿದ ಸತ್ಯಶೋಧಕ ಸಮಾಜದ ಮೂಲಕ 1876–77ರ ವೇಳೆಗಾಗಲೇ ಐವತ್ತಕ್ಕೂ ಹೆಚ್ಚು ಹಾಸ್ಟೆಲ್‌ಗಳನ್ನು ನಡೆಸಿದ್ದರು.

 

ಧಾರಾವಡದಲ್ಲಿ ದಲಿತ‌ ಹುಡುಗನೊಬ್ಬ ಶಿಕ್ಷಣ‌ ಸಂಸ್ಥೆಯಲ್ಲಿ ಪ್ರವೇಶ ಪಡೆದಾಗ  ಅಂದಿನ ಸಮಾಜ ಜೋರಾಗಿ ವಿರೋಧ ವ್ಯಕ್ತಪಡಿಸಿತ್ತು. ಆದರೆ ತಲೆಕೆಡಸಿಕೊಳ್ಳದ ಬ್ರಿಟೀಷರು 1872ರ ಹೊತ್ತಿಗೆ ಶಿಕ್ಷಣ ಸಂಸ್ಥೆಗಳಲ್ಲಿ ಜಾತಿ/ಧರ್ಮ ತಾರತಮ್ಯವನ್ನು ಕೊನೆಗೊಳಿಸುವ 1836ರ ಕಾಯ್ದೆಯನ್ನು ಇನ್ನೂ ಪ್ರಬಲವಾಗಿ ಜಾರಿಗೊಳಿಸಿದರು.1874ರ ಸಮಯದಲ್ಲಿ ಮೊದಲ ಬಾರಿಗೆ ಕೆಳವರ್ಗದ ಸಮುದಾಯಕ್ಕೆ ಶಿಕ್ಷಣ ಮತ್ತು ಉದ್ಯೋಗದಲ್ಲಿ ಮೀಸಲಾತಿಯನ್ನು ಮೈಸೂರು ಸಂಸ್ಥಾನ ಜಾರಿಗೊಳಿಸಿತು. ಪೋಲಿಸ್ ಇಲಾಖೆಯ ಮಧ್ಯಮ ಮತ್ತು ಕೆಳಹಂತದ ಒಟ್ಟು ಹುದ್ದೆಗಳಲ್ಲಿ ಶೇ.20ರಷ್ಟು ಬ್ರಾಹ್ಮಣರಿಗೆ ಮಿಕ್ಕ ಶೇ.80 ಬ್ರಾಹ್ಮಣೇತರರು, ದಲಿತರು ಮತ್ತು ಇತರರಿಗಾಗಿ ಮೀಸಲಿಡಲಾಯಿತು. ಇದರ ಪರಿಣಾಮ 1902ರಲ್ಲಿ ಬಾಂಬೆ ಪ್ರೆಸಿಡೆನ್ಸಿಯ ಕೊಲ್ಹಾಪುರದ ಮಹಾರಾಜ ತನ್ನ ಸಂಸ್ಥಾನದ ಶೇ.50ರಷ್ಟು ಹುದ್ದೆಗಳನ್ನು ಕೆಳವರ್ಗದ ಸಮುದಾಯಗಳಿಗೇ ಮೀಸಲಿಟ್ಟಿದ್ದನು. ಇಂತಹ ಅದೆಷ್ಟೋ ಪರಿವರ್ತನೆಗಳ ಹಿಂದೆ ಇದ್ದದ್ದು ಸಾವಿತ್ರಿಬಾಯಿ ಫುಲೆ ಅವರ ಶಿಕ್ಷಣ ಕ್ರಾಂತಿ.


ಜನಸೇವೆಯೇ ಜನಾರ್ದನ ಸೇವೆ ಎಂಬುದನ್ನು ನಂಬಿದ್ದ ಅವರು ಜನಸಾಮಾನ್ಯರ ಸೇವೆಯನ್ನು ಅಗಾಧವಾಗಿ ಮಾಡಿದ್ದರು. ಕೊನೆಯಲ್ಲಿ 1897ರಲ್ಲಿ ಪ್ಲೇಗ್ ಪೀಡಿತ ರೋಗಿಗಳ ಸೇವೆಯಲ್ಲಿ ತೊಡಗಿದ್ದಾಗ ಸ್ವತಃ ಸಾವಿತ್ರಿಬಾಯಿ ಫುಲೆ ಅವರೇ ಆ ಕಾಯಿಲೆಯ ಸೋಂಕಿಗೆ ಬಲಿಯಾಗಿ ಮರಣವನ್ನಪ್ಪಿದರು.

 

Author Details


Srimukha

Leave a Reply

Your email address will not be published. Required fields are marked *