ನಮ್ಮೂರೇ ವಾಸಿ

ಅಂಕಣ ಭಾವ~ಬಂಧ : ಮಂಗಲಾ ಯಶಸ್ವಿ ಭಟ್.

ಬೆಳ್ಳಂಬೆಳಗ್ಗೆ ದಡಬಡಿಸಿ ಎದ್ದು, ಹಾಲಿನ ಪ್ಯಾಕೆಟ್ ಕತ್ತರಿಸಿ ಹಾಲನ್ನು ಪಾತ್ರೆಗೆ ಬಗ್ಗಿಸುವಾಗ, ದಿನವೂ ಆಗತಾನೆ ಹಟ್ಟಿಯಿಂದ ಕರೆದುತಂದ ನೊರೆಹಾಲಿನಲ್ಲಿ ಮಾಡುವ ಫಿಲ್ಟರ್ ಕಾಫಿಯ ಪರಿಮಳ ಮೂಗಿಗೆ ಬಡಿದಂತಾಗುವುದು. ತರಕಾರಿ ಸಿಪ್ಪೆಯನ್ನು, ಅಳಿದುಳಿದ ಪದಾರ್ಥಗಳನ್ನು ಕಸದ ತೊಟ್ಟಿಗೆ ಸುರಿವಾಗ, ಅಲ್ಲಿದ್ದರೆ ಗೊಬ್ಬರದ ಗುಂಡಿಗೆ ಹಾಕಬಹುದಿತ್ತು ಎಂದೆನಿಸುವುದು. ಅಕ್ಕಿ-ಬೇಳೆ ತೊಳೆದ ನೀರನ್ನು ಸಿಂಕ್ ಗೆ ಚೆಲ್ಲುವಾಗ, ಅಲ್ಲಿ ಕೊಟ್ಟಿಗೆಯಲ್ಲಿರುವ ನಂದಿನಿ, “ಚೆಲ್ಲುವ ಬದಲು ನನಗಾದರೂ ಕೊಟ್ಟಿದ್ದರೆ ಖುಷಿಯಿಂದ ಕುಡಿಯುತ್ತಿದ್ದೆ ಕಣೇ” ಎಂದಂತೆನಿಸಿ, ಅಲ್ಲಿ ಅಡುಗೆಮನೆಯ ಮೂಲೆಯಲ್ಲಿಡುವ ಅಕ್ಕಚ್ಚಿನ ಬಕೆಟ್ ನ ನೆನಪಾಗುವುದು.
    


ಹಣ ಕೊಟ್ಟು ತೆಗೆದುಕೊಂಡ ಹೂವನ್ನು ಫ್ರಿಡ್ಜ್ ಅಲ್ಲಿ ಒಂದು ವಾರದವರೆಗೂ ಇಟ್ಟು, ದೇವರ ಮುಡಿಗೇರಿಸುವಾಗ, ಅಲ್ಲಿ ಅಂಗಳದಲ್ಲಿ ನೆಟ್ಟು ಬೆಳೆಸುವ ತರತರದ ಗಿಡಗಳಲ್ಲಿ ಅರಳಿದ ಹೂವುಗಳ ನೆನಪು. ಗೀಸರ್ ನೀರನ್ನು ಬಕೆಟ್ ಗೆ ತುಂಬಿಸುವಾಗ, ಅಲ್ಲಿ ಬಚ್ಚಲುಮನೆಯಲ್ಲಿ ಹಂಡೆಯಲ್ಲಿ ಕೊತಕೊತನೆ ಕುದಿಯುವ ನೀರಿನ ನೆನಪು.



ಅಕ್ಕಪಕ್ಕದ ಮನೆಯವರನ್ನು ಬೇರೆ ಯಾವುದೋ ಗ್ರಹದಿಂದ ಬಂದಂತೆ ನೋಡುವ, ಎದುರು ಕಂಡರೂ ಒಂದು ಸ್ಮೈಲ್ ಕೂಡ ಕೊಡದಿರುವ ಜನಗಳನ್ನು ನೋಡಿದಾಗ, ಪಕ್ಕದ ಮನೆಯಲ್ಲಿ ಕಾರ್ಯಕ್ರಮವಿದ್ದರೆ, ತಮ್ಮ ಮನೆಯದೇನೋ ಎಂಬಷ್ಟು ಮುತುವರ್ಜಿಯಿಂದ ಕೆಲಸ ಮಾಡುವ, ಅಕ್ಕಪಕ್ಕದವರ ಕಷ್ಟ ಸುಖಕ್ಕಾಗುವ ಗ್ರಾಮಸ್ಥರ ನೆನಪು.

 


ನಡುರಾತ್ರಿ ಹನ್ನೆರಡು ಹೊಡೆದರೂ, ವಾಹನಗಳಿಂದ ತುಂಬಿದ ರಸ್ತೆ, ಜನರಿಂದ ತುಂಬಿದ ಬಸ್ ಸ್ಟ್ಯಾಂಡ್, ದಿನದ 24 ಗಂಟೆಯೂ ಗುರಿಯಿರದ ರನ್ನಿಂಗ್ ರೇಸನ್ನು ಕಂಡಾಗ, ಅಲ್ಲಿ ರಾತ್ರಿ ಎಂಟು, ಹೆಚ್ಚೆಂದರೆ ಒಂಭತ್ತಕ್ಕೆಲ್ಲ ಎಲ್ಲ ಕೆಲಸಗಳನ್ನು ಮುಗಿಸಿ, ಇಡೀ ಹಳ್ಳಿಯೇ ಬೆಚ್ಚಗೆ ಹೊದ್ದು ಮಲಗಿಯಾಗಿರುತ್ತದೆ ಅನ್ನಿಸುವುದು.

 


ಹೀಗೆ ಎದ್ದ ಕ್ಷಣದಿಂದ ರಾತ್ರಿ ಮಲಗುವವರೆಗೂ ಅರಿವಿಲ್ಲದೇ ನಡೆಯುವ ಉಸಿರಾಟದಂತೆ, ಪ್ರತಿಕ್ಷಣವೂ ಊರಿನ ನೆನಪು ಬಿಡದೇ ಕಾಡುತ್ತಿರುತ್ತದೆ. ಯಾವ ಕೆಲಸವೇ ಮಾಡುತ್ತಿರಲಿ, ‘ಅಲ್ಲಿರುತ್ತಿದರೆ!’ ಎಂಬ ಭಾವ ಕಾಡುತ್ತದೆ. ಕಿವಿಗೆ ಹುಟ್ಟೂರಿನ ಕರೆ ಕೇಳಿಸುತ್ತಲೇ ಇರುತ್ತದೆ.

 


ಇದು ನನ್ನೊಬ್ಬಳ ಕಥೆ. ಹಾಗಾದರೆ ನನ್ನಂತೆ ಹುಟ್ಟಿ ಬೆಳೆದ ಹಳ್ಳಿಯನ್ನು ಬಿಟ್ಟು ಪಟ್ಟಣಕ್ಕೆ ಬಂದ ಅಸಂಖ್ಯ ಜನರ ಕಥೆಯೇನಿರಬಹುದು ಎಂದು ಒಮ್ಮೆ ಯೋಚಿಸಬೇಕೆನಿಸಿತು.

 


ಹುಟ್ಟಿ ಬೆಳೆದ, ಆಡಿ ನಲಿದ ಊರನ್ನು ಬಿಟ್ಟು ಯಾವುದೋ ನಗರಕ್ಕೆ ಬಂದು ಮುಂದಿನ ಜೀವನ ನಡೆಸಲು ಅವರವರಿಗೆ ಅವರದೇ ಕಾರಣಗಳು.

 


ಒಂದು ಹಂತದ ವಿದ್ಯಾಭ್ಯಾಸವನ್ನು ಹಳ್ಳಿಯಲ್ಲಿ  ಮುಗಿಸಿ, ಉನ್ನತ ವಿದ್ಯಾಭ್ಯಾಸಕ್ಕೆಂದು ನಗರಕ್ಕೆ ಬಂದವರಿರಬಹುದು. ಡಿಗ್ರಿ ಮುಗಿಸಿ, “ಹೇಗೂ ಮುಂದಿನ ವರ್ಷ ಮದುವೆ ಮಾಡ್ತೀರಿ. ಆಮೇಲೆ ಕೆಲಸ ಮಾಡುವ ಅವಕಾಶ ಸಿಗುವುದೋ ಇಲ್ಲವೋ ಗೊತ್ತಿಲ್ಲ. ಅಷ್ಟು  ದಿನವಾದರೂ ಕೆಲಸ ಮಾಡ್ತೀನಿ. ಅಲ್ಲಿ ಅವಕಾಶಗಳು ಜಾಸ್ತಿ.” ಎಂದು ಹಠ ಮಾಡಿ, ತಂದೆ ತಾಯಿಯನ್ನು ಒಪ್ಪಿಸಿ, ನಗರಕ್ಕೆ ಕಾಲಿಟ್ಟ ಹೆಣ್ಣುಮಕ್ಕಳಿರಬಹುದು. ಯಾವುದೋ ಉದ್ವೇಗದಲ್ಲಿ ಯಾರಿಗೂ ತಿಳಿಸದೇ ಮನೆ ಬಿಟ್ಟು ಬಂದವರಿರಬಹುದು. ಹಿಂದಿನ ತಲೆಮಾರಿನವರು ಮಾಡುತ್ತಿದ್ದ ಕೃಷಿಯಲ್ಲಿ ಆಸಕ್ತಿಯಿಲ್ಲದೇ, ನಗರದಲ್ಲಿ ಸಾಕಷ್ಟು ಹಣ ಸಂಪಾದಿಸಬಹುದೆಂಬ ಕನಸು ಹೊತ್ತು ಬಂದವರಿರಬಹುದು. ಮನೆಯಲ್ಲಿ ದೊಡ್ಡವರೊಂದಿಗೆ ಹೊಂದಾಣಿಕೆಯಾಗದೇ ಜಗಳವಾಡಿ, ಆಸ್ತಿಯಲ್ಲಿ ಪಾಲು ಪಡೆದುಕೊಂಡು, ಪೇಟೆಗೆ ಬಂದು ಕಷ್ಟಪಟ್ಟು ಯಾವುದಾದರೂ ಕೆಲಸ ಗಿಟ್ಟಿಸಿಕೊಂಡವರಿರಬಹುದು. ವ್ಯಾಪಾರದಲ್ಲಿ ತೊಡಗಿಸಿಕೊಂಡವರಿರಬಹುದು. ಜೀವನದ ಸಂಧ್ಯಾಕಾಲದಲ್ಲಿ, ಮಕ್ಕಳೊಂದಿಗೆ ನಗರಕ್ಕೆ ಬಂದು ನೆಲೆಸಿದವರಿರಬಹುದು. ಕಣ್ಣಿನ ತುಂಬಾ ಕನಸು ಕಟ್ಟಿಕೊಂಡು, ಹೊಸ ಅವಕಾಶಗಳನ್ನು ಅರಸುತ್ತಾ ಪಟ್ಟಣಕ್ಕೆ ಬಂದು, ಬೇರೆ ಬೇರೆ ಕ್ಷೇತ್ರಗಳಲ್ಲಿ ಸಾಧನೆಯನ್ನು ಮಾಡಿ ಹೆಸರುಗಳಿಸಿದವರಿರಬಹುದು.

 


ಹೀಗೆ ಹುಟ್ಟೂರನ್ನು ಬಿಟ್ಟು ಬಂದು ಪಟ್ಟಣಗಳಲ್ಲಿ ನೆಲೆಸುವ ವಿಷಯದ ಕುರಿತು, ಹಾಗೆ ನೆಲೆಸಿರುವವರ ಕುರಿತು ಚಿಂತನೆ ನಡೆಸಿದಾಗ ಅಲ್ಲಿ ಯಶಸ್ಸು, ಸಂಪತ್ತು ಗಳಿಸಿದವರು ಕಣ್ಣಿಗೆ ಕಾಣುತ್ತಾರೆ. ಅವರ ಜೀವನ, ಹುಟ್ಟೂರನ್ನು ಬಿಟ್ಟು ಬರುವ ಅನೇಕರಿಗೆ ಮಾದರಿಯಾಗುತ್ತದೆ.

 


ಆದರೆ ಒಂದು ನಾಣ್ಯಕ್ಕೆ ಎರಡು ಮುಖಗಳಲ್ಲವೇ? ಎರಡನ್ನೂ ನೋಡಬೇಕಲ್ಲವೇ?

 


ಹಳ್ಳಿಯಿಂದ ಪಟ್ಟಣಕ್ಕೆ ಓದಲಿಕ್ಕೆಂದು ಬಂದು, ಇಲ್ಲಿ ಅನೇಕ ಬಾಹ್ಯ ಆಕರ್ಷಣೆಗಳಿಗೆ ಒಳಗಾಗಿ, ವ್ಯಸನಿಗಳಾಗಿ ನಾಶವಾಗಿ ಹೋದವರಿರಬಹುದು. ತಂದ ಹಣವನ್ನೆಲ್ಲ ವ್ಯಾಪಾರಕ್ಕೆ ಹಾಕಿ, ಯಾವುದೋ ಕಾರಣದಿಂದ ನಷ್ಟವಾಗಿ ಎಲ್ಲವನ್ನೂ ಕಳೆದುಕೊಂಡವರಿರಬಹುದು.
ಮಹಾನಗರದ ಮಾಯಾಜಾಲದಲ್ಲಿ ಸಿಲುಕಿ, ನಲುಗಿ, ಹೇಳಹೆಸರಿಲ್ಲದಂತೆ ಮಾಯವಾದವರಿರಬಹುದು. ಸೋಲುಂಡು, ಪುನಃ ಹಿಂತಿರುಗಿ ಹೋದವರಿರಬಹುದು.  

 


“ಮದ್ವೆಗೂ ಮೊದ್ಲು ನಾನು ನಮ್ ಹಳ್ಳಿ ಹತ್ರನೇ ಒಂದು ಫ್ಯಾಕ್ಟರಿಗೆ ಹೋಗ್ತಾ ಇದ್ದೆ ಕೆಲಸಕ್ಕೆ. ನನ್ ಗಂಡನಿಗೆ  ಮನೆಲಿ ಅಪ್ಪನ ಜೊತೆ ಸರಿ ಬರ್ಲಿಲ್ಲ. ಬೆಂಗ್ಳೂರ್ ಗೆ ಬಂದ್ವಿ. ಅವ್ರು ಕ್ಯಾಬ್ ಓಡಿಸ್ತಾರೆ. ಇಲ್ಲಿ ಒಬ್ರು ದುಡುದ್ರೆ  ಸಾಕಾಗಲ್ಲ. ಅದ್ಕೆ ನಾನು ಮನೆ ಕೆಲಸಕ್ಕೆ ಹೋಗ್ತೀನಿ. ಅಲ್ಲೇ ಚೆನ್ನಾಗಿತ್ತಕ್ಕಾ” ಅಂದಿದ್ದಳು ಒಬ್ಬಳು.

 


“ಊರಲ್ಲಿ ಹೊಲ ಐತಿ. ಆದ್ರೆ ಮೊದ್ಲಿನ ಹಂಗೆ ಮಳೆ ಇಲ್ಲ. ನೀರಿಲ್ಲ. ಕಷ್ಟ ಅಂತ ಇಲ್ಲಿಗೆ ಬಂದಿದ್ದು. ಗಂಡ ಕ್ಯಾಬ್ ಡ್ರೈವರ್. ನಾನು ಒಂದು ಹತ್ತೋ ಇಪ್ಪತ್ತೋ ಮನೆ ಕೆಲಸ ಮಾಡ್ತೀನಿ. ಮೂರು ಮಕ್ಕಳನ್ನೂ ಊರಲ್ಲೇ ಬಿಟ್ಟು ಬಂದಿದೀವಿ” ಅಂತ ಇನ್ನೊಬ್ಬಳು ತನ್ನ ಕಥೆ ಹೇಳಿದ್ದಳು.

ಹೀಗೆ ಕೇಳುತ್ತಾ ಹೋದರೆ, ಹಳ್ಳಿ ಬಿಟ್ಟು ಬೆಂಗಳೂರು ಮಹಾನಗರಕ್ಕೆ ಬಂದ ಅನೇಕ ಹೈದರ ಕಥೆಗಳಿರಬಹುದು.

 


ಬೆಳಿಗ್ಗೆ ಮನೆಮನೆಗೆ ಪೇಪರ್, ಹಾಲು ಹಾಕುವ ಹುಡುಗರು,  ಕಟ್ಟಡದ ಕೆಲಸಕ್ಕೆಂದು ಇನ್ನೂ ಕಣ್ಬಿಡದ ಶಿಶುಗಳನ್ನು ಜೋಳಿಗೆಯಲ್ಲಿ ತೂಗುಹಾಕಿ ಅಲ್ಲಿಯೇ ಬೀಡುಬಿಟ್ಟ ಕುಟುಂಬಗಳು, ಕಸ ಎತ್ತುವ ಕೆಲಸದವರು, ಕ್ಯಾಬ್-ಆಟೋ ಡ್ರೈವರ್ ಗಳು, ರೈಲ್ವೆ ಸ್ಟೇಷನ್ ನಲ್ಲಿ ಹೊರೆ ಹೊರುವ ಕೂಲಿಗಳು, delivery boyಗಳು, ರೋಡು ಸೈಡಲ್ಲಿ ಅಂಗಡಿ ಇಟ್ಟುಕೊಂಡವರು, ಹೋಟೆಲ್ ಮಾಲೀಕರು, IT-BT ಕಂಪೆನಿಗಳಲ್ಲಿ ಹಗಲಿರುಳು ದುಡಿಯುತ್ತಿರುವ ಜೀವಗಳು, ದೊಡ್ಡ ಕಂಪೆನಿಯ ಒಡೆಯರು, ಸಾಧನೆಯ ಹಾದಿಯಲ್ಲಿ ಸಾಗಲು ಯತ್ನಿಸುತ್ತಿರುವ so called ‘struggling actors’, ಪ್ರಸಿದ್ಧ ಕಲಾವಿದರು. ಹೀಗೆ ಹುಟ್ಟೂರನ್ನು ಬಿಟ್ಟುಬಂದವರ ಪಟ್ಟಿ ಮುಗಿಯದು. ಒಬ್ಬೊಬ್ಬರ ಕಥೆಯೂ ಒಂದೊಂದು ಅಂಕಣವಾಗಬಹುದು.     

 


ಹೀಗೆ ಊರು ಬಿಟ್ಟು ಬಂದವರ ಮನದ ಒಂದು  ಮೂಲೆಯಲ್ಲೆಲ್ಲೋ ಹುಟ್ಟೂರು ಕೂತಿರುತ್ತದೆ. ಅವರವರ ನಿತ್ಯಕಾಯಕದಲ್ಲಿ ಎಷ್ಟೇ ಕಳೆದುಹೋಗಿದ್ದರೂ, ಕೊನೆಪಕ್ಷ ಕನಸಿನಲ್ಲಿಯಾದರೂ ‘ನಮ್ಮೂರೇ ವಾಸಿ’ ಎಂದು ಕನವರಿಸಿರುತ್ತಾರೆ.

 


ಆದರೆ  ಒಂದು ವಿಷಯಕ್ಕೆ ಸಾಕಷ್ಟು ಕೋನಗಳು. ಹಳ್ಳಿಯಲ್ಲೇ ತಮ್ಮ ಜೀವನದ ಬಹುತೇಕ ಆಯಸ್ಸನ್ನು ಕಳೆದಿರುವ ವ್ಯಕ್ತಿಗಳನ್ನು ಕೇಳಿದರೆ, “ಅಯ್ಯೋ ಹಳ್ಳಿ ಜೀವನ ಈಗ ಕಷ್ಟವಾಗಿದೆ” ಎಂದು ಹೇಳುತ್ತಾರೆ. ಆ ವಿಷಯದ ಬಗ್ಗೆ ಇನ್ನೊಮ್ಮೆ ಮಾತಾಡೋಣ.

 


ಒಟ್ಟಿನಲ್ಲಿ  ಅನಿವಾರ್ಯ ಕಾರಣಗಳಿಂದ ಊರು ಬಿಟ್ಟು, ಮನಸ್ಸನ್ನು ಮಾತ್ರ ಅಲ್ಲಿಟ್ಟು ಬಂದವರಿಗೆ ದುಡಿದುಡಿದು, ದಣಿದಾಗ, ಇಳಿವಯಸ್ಸಿನಲ್ಲಿಯಾದರೂ ಹಳ್ಳಿಮನೆಯ ಹೆಬ್ಬಾಗಿಲಲ್ಲಿ ಆರಾಮಕುರ್ಚಿಯಲ್ಲಿ ಕೂರುವಂತಾದರೆ ಚೆನ್ನಲ್ಲವೇ?  ಬಾಯಾರಿದಾಗ ಹಿತ್ತಿಲಮನೆಯ ಬಾವಿಯ ಸಿಹಿನೀರು ಸಿಕ್ಕಿದರೆ ಚೆನ್ನಲ್ಲವೇ? ಕೊಟ್ಟಿಗೆಯಲ್ಲಿ ಕಾಮಧೇನುವಿನ ಅಂಬಾ ಕಿವಿಗೆ ಕೇಳಿಸಿದರೆ ಚೆನ್ನ. ಪ್ರಕೃತಿಗೆ ಹತ್ತಿರಿದ್ದಷ್ಟೂ ಒಳಿತಲ್ಲವೇ? ಹಿತವಲ್ಲವೇ? ಹುಟ್ಟೂರಿನಲ್ಲಿ ಕೊನೆವರೆಗೆ ಒಂದು ಸೂರಿದ್ದರೆ ಚೆನ್ನ ಎನ್ನಿಸುತ್ತಲೇ ಇರುತ್ತದೆ.

 


ಕೊನೆಹನಿ — ಅಲ್ಲಿದ್ದರೆ ಸರಿ, ಇಲ್ಲಿದ್ದರೆ ತಪ್ಪು ಎಂದಲ್ಲ. ಬಹುಷಃ ಋಣ ಎಲ್ಲಿದೆಯೋ ಅಲ್ಲಿ ನಾವು. ಎಲ್ಲಿದ್ದರೂ ತುಂಬಿದ ಹೊಟ್ಟೆಯೂ , ನೆಮ್ಮದಿಯ ನಿದ್ರೆಯೂ ಮುಖ್ಯ ತಾನೇ?  

Author Details


Srimukha

Leave a Reply

Your email address will not be published. Required fields are marked *