ನಮ್ಮ ಯಾವುದೇ ಆಚರಣೆಗಳ ಹಿಂದೆ ಅದರದ್ದೇ ಆದ ಕೆಲವು ವಿಶೇಷತೆಗೊ ಇದ್ದು. ಉಂಬ ಅಶನವನ್ನು, ಕುಡಿವ ನೀರನ್ನೂ ದೇವರು ಹೇಳಿ ಪೂಜಿಸುವ ಸಂಪ್ರದಾಯ ನಮ್ಮದು. ಹಾಂಗಾಗಿಯೇ ನಮ್ಮ ಪ್ರತಿಯೊಂದು ಆಚರಣೆಗೊಕ್ಕೂ ಒಂದೊಂದು ಮಹತ್ವ ಇರ್ತು. ಪ್ರಕೃತಿಲಿ ಕಾಂಬಲೆ ಸಿಕ್ಕುವ ಸೆಸಿ, ಮರ, ಬಳ್ಳಿಗೊಕ್ಕು ನಮ್ಮ ಕೆಲವು ಸಾಂಪ್ರದಾಯಿಕ ಆಚರಣೆಗಳಲ್ಲಿ ಪಾಲುಕೊಡ್ತು. ಹೆರಾಂಗೆ ಕಾಂಬಗ ಕಾಡು, ಸೊಪ್ಪು, ಬಲ್ಲೆ, ಬಳ್ಳಿ ಹೇಳಿ ನಾವು ಗ್ರೇಶಿದರೂ, ನಮ್ಮ ಹಿರಿಯರು ಪ್ರತಿಯೊಂದರಲ್ಲಿಯೂ ವಿಶೇಷತೆ ಗುರುತಿಸಿದ್ದವು. .
ಮದಲಿಂಗೆ ಕೃಷಿಯೇ ಜೀವನಾಧಾರ ಆಗಿದ್ದ ಕಾಲಲ್ಲಿ ಈ ಹೊಸ್ತು ಕಾರ್ಯಕ್ರಮವ ತುಂಬಾ ಮನೆಗಳಲ್ಲಿ ಮಾಡಿಕೊಂಡಿತ್ತಿದ್ದವು. ಗದ್ದೆ ಬೇಸಾಯ ಇಪ್ಪ ಮನೆಗಳಲ್ಲಂತೂ ಈ ಹೊಸ್ತು ಹಬ್ಬ, ಮನೆ ತುಂಬ್ಸುವ ಹಬ್ಬ ಹೇಳಿ ತುಂಬಾ ವಿಶೇಷ. ನಮ್ಮ ಗದ್ದೆಲಿ ಬೆಳೆಸಿದ ಭತ್ತದ ಕದಿರಿನ ಮನೆ ಯಜಮಾನ ಸಾಂಕೇತಿಕವಾಗಿ ಕೊಯ್ಕೊಂಡು ಬಂದು ಪೂಜೆ ಮಾಡಿ, ಮಹಾಲಕ್ಷ್ಮಿ ಸ್ವರೂಪಳಾದ ಧಾನ್ಯಲಕ್ಷ್ಮಿಯ ಮನೆಯೊಳಾಂಗೆ ಕರಕೊಂಡು ಬಪ್ಪದು ಹೇಳುವ ನಂಬಿಕೆ ಈ ಹಬ್ಬದ ಆಚರಣೆಲಿ ಇಪ್ಪದು.
ಹೊಸ ಕ್ರಮದ ಆಡಂಬರಂಗೊ ಇಲ್ಲದ್ದೆ, ತುಂಬಾ ಸರಳವಾಗಿ, ಸಾಂಪ್ರದಾಯಿಕವಾಗಿ ಆಚರಿಸುವ ಹಬ್ಬವೇ ಹೊಸ್ತು. ಗದ್ದೆಗಳಲ್ಲಿ ಬೆಳೆದ ಬತ್ತದ ಕದಿರಿನ ಅಂತೇ ಹೋಗಿ ಕೊಶಿವಾಶಿ ಕೊಯ್ದು ತಪ್ಪ ಕ್ರಮಯಿಲ್ಲೆ. ಅದಕ್ಕೆ ಕೆಲವು ನಿಯಮಂಗೊ ಇದ್ದು.
ಮಳೆಗಾಲದ ಸುರುವಿಂಗೆ ಭತ್ತದ ಕೃಷಿ ಸುರು ಮಾಡಿದರೆ ನವರಾತ್ರಿಗಪ್ಪಗ ಬೆಳೆಕೊಯ್ವಲಾವ್ತು. ಕನ್ನೆ – ತುಲಾ ತಿಂಗಳ ಅಂದಾಜಿಗೆ, ಚಾಂದ್ರಮಾನ ಮಾಸದ ಪ್ರಕಾರ ಹೇಳ್ತರೆ ಅಶ್ವಯುಜ ಮಾಸ ಹೇಳ್ಲಕ್ಕು.
ಬತ್ತದ ಬೆಳೆ ಬಂದು ಕದಿರು ಚಿನ್ನದ ಬಣ್ಣಕ್ಕೆ ತಿರುಗಿಯಪ್ಪಗ ಒಂದು ಒಳ್ಳೆಯ ದಿನ ನೋಡಿ ಮನೆ ಯಜಮಾನ ಅದರ ಕೊಯ್ಕೊಂಡು ಬಪ್ಪದು.
ನವರಾತ್ರಿಯ ಎಲ್ಲಾ ದಿನಂಗಳಲ್ಲೂ ಹೊಸ್ತು ಆಚರಣೆ ಮಾಡ್ಲಕ್ಕಾಡ. ಅಂದರೂ ಲಲಿತಾ ಪಂಚಮಿ, ಮಹಾನವಮಿ, ವಿಜಯದಶಮಿ ಹೆಚ್ಚು ವಿಶೇಷ. ನವರಾತ್ರಿಲಿ ಮನೆ ತುಂಬ್ಸಿದರೆ ಮತ್ತೆ ಗೆದ್ದೆ ಕೊಯ್ವಲೆ ಮುಹೂರ್ತ ನೋಡುದು ಬೇಡ ಹೇಳುದು ನಮ್ಮ ಹಿರಿಯರು ಅಚರಿಸಿಕೊಂಡು ಬಂದ ನಿಯಮ.
ನವರಾತ್ರಿಲಿ ಹೊಸ್ತು ಮಾಡದ್ರೆ ಒಳ್ಳೆ ದಿನ ನೋಡಿ ಹೊಸ್ತು ಮಾಡುದು ಕ್ರಮ. ಸಾಮಾನ್ಯವಾಗಿ ಯಾವುದೇ ಶುಭ ಕಾರ್ಯ ಸುರುಮಾಡ್ಲೆ ಒಳ್ಳೆದಲ್ಲಾಳಿ ನಾವು ಗ್ರೇಶುವ ಭರಣಿ, ಕೃತ್ತಿಕೆ ಹೊಸ್ತು ಆಚರಣೆಗೆ ತುಂಬಾ ವಿಶೇಷವಾದ ದಿನಂಗೊ.
ಇನ್ನು ಹೊಸ್ತು ಆಚರಣೆ ಹೆಂಗೇಳಿ ನೋಡುವ°.
ಹೊಸ್ತು ಆಚರಣೆ ಎಲ್ಲಾ ಮನೆಗಳಲ್ಲೂ ಒಂದೇ ರೀತಿಯೇ ಆದರೂ ಕೆಲವು ಸಣ್ಣ ಸಣ್ಣ ಬದಲಾವಣೆಗೊ ಇಪ್ಪಲೂ ಸಾಕು. ಒಂದೊಂದು ಊರಿನ, ಮನೆಗಳ ಸಂಪ್ರದಾಯ, ಆಚರಣೆಗಳಲ್ಲಿ ರೆಜ್ಜ ರೆಜ್ಜ ವೆತ್ಯಾಸ ಯೇವಗಳೂ ಇರ್ತನ್ನೇ.
ಹೊಸ್ತು ಆಚರಣೆಯ ದಿನ ನಿಗಂಟು ಮಾಡಿಕ್ಕಿ ಅದಕ್ಕೆ ಬೇಕಾದ ಎಲ್ಲಾ ವಸ್ತುಗಳನ್ನು ಮುನ್ನಾಣ ದಿನವೇ ತಂದು ರೂಡಿ ಮಾಡ್ಲಕ್ಕು. ಆದರೆ ಬತ್ತದ ಕದಿರು ಮಾತ್ರ ಆ ದಿನವೇ ಕೊಯ್ಕೊಂಡು ಬಪ್ಪದು ಕ್ರಮ.
ಮುನ್ನಾಣ ದಿನ ಮನೆಯೆಲ್ಲ ಶುದ್ಧ ಮಾಡಿ, ಸಗಣ ಬಳ್ಗಿ, ತುಳಸಿ ಕಟ್ಟೆಯ ಸುತ್ತಲುದೆ ಸಗಣ ಬಳುಗಿ ಶುದ್ಧ ಮಾಡಿ ಮಡುಗೆಕು.
ಮರದಿನ ಉದೆಕಾಲಕ್ಕೆ ಮನೆಗೆ ಧಾನ್ಯಲಕ್ಷ್ಮಿಯ ಕರಕೊಂಡು ಬಪ್ಪ ಸಂಭ್ರಮ . ಮನೆ ತುಂಬುಸುಲೇ ಬತ್ತದ ಕದಿರು ತಪ್ಪಗ ಒಟ್ಟು ಏಳು ಗದ್ದೆಂದ ಕದಿರು ತರೆಕು ಹೇಳಿ ನಮ್ಮ ಹಿರಿಯರು ಹೇಳ್ತವು.
ಮನೆ ತುಂಬ್ಸುಲೆ ತಪ್ಪ ಕದಿರು ಮಾತ್ರ ನಮ್ಮ ಗದ್ದೆಂದ ಆಗ ಹೇಳುವ ನಿಯಮವನ್ನು ಹಿರಿಯರು ಹೇಳುದು ಕೇಳಿದ್ದೆ. ಸೂರ್ಯೋದಯಂದ ಮೊದಲೇ ಗದ್ದೆಗೆ ಹೋಗಿ ಕದಿರಿಂಗೆ ಪೂಜೆ ಮಾಡಿ, ಬತ್ತದ ಕೈಯ ಬುಡಕ್ಕೆ ಹಾಲೆರದು, ಕದಿರಿನ ಕೈಲಿ ಎಳದು ಕೊಯ್ಕೊಂಡು ಬಪ್ಪದು ಸಂಪ್ರದಾಯ
ಮನೆ ಯಜಮಾನ ಗದ್ದೆಂದ ಬತ್ತದ ತೆನೆಯ ತಲೆಲಿ ಹೊತ್ತುಕೊಂಡು ಬಪ್ಪಗ ಹಾನ ಒಡ್ಡಿ, ಆರತಿಯೆತ್ತಿ ಎದುರುಗೊಂಬ ಆಚರಣೆ ಇದ್ದು.
ತಂದ ಬತ್ತದ ಕದಿರಿನ ತುಳಸಿ ಕಟ್ಟೆ ಎದುರು ರಂಗೋಲಿ ಹಾಕಿದ ಮಣೆಯ ಮೇಗೆ ತಂದು ಮಡುಗುವ ಕ್ರಮ.
ಕೆಲವು ದಿಕೆ ಬತ್ತದ ಕದಿರಿನ ಕೊಯ್ಕೊಂಡು ಬಪ್ಪಗಳೇ ಮಂಗಳವಾದ್ಯಂಗಳೊಟ್ಟಿಂಗೆ ಮನಗೆತತ್ತವು. ಶಂಖ, ಜಯಗಂಟೆ ಶಬ್ದದೊಟ್ಟಿಂಗೆ ಮನೆಯ ಮುಂದೆ ಇಪ್ಪ ತುಳಸಿಕಟ್ಟೆಗೆ ಸುತ್ತು ಬಂದು, ಅದರ ಎದುರು ಮಡುಗಿದ ಮಣೆಯ ಮೇಗೆ ಮಡುಗುದು. ಅಲ್ಲಿಯೇ ಅದಕ್ಕೆ ಆರತಿಯೆತ್ತಿ ಪೂಜೆ ಮಾಡಿಕ್ಕಿ, ಅದರಿಂದ ರಜಾ ಭತ್ತದ ಕದಿರುಗಳ ತೆಗದು, ಆದರೊಟ್ಟಿಂಗೆ ಅತ್ತಿ, ಇತ್ತಿ, ಗೋಳಿ, ಅಶ್ವತ್ಥ, ಹಲಸು, ಮಾವಿನ ಕೊಡಿಗೊ, ನೆಲ್ಲಿ ಸೊಪ್ಪು, ಬಿದಿರಿನ ಸೊಪ್ಪು, ನರಿಕಬ್ಬು, ಪೊಲಿ ಬಳ್ಳಿ ಕೆಲವು ಮನೆಗಳಲ್ಲಿ ಗೌರಿ ಹೂಗು, ತುಳಸಿ ಕೊಡಿಯನ್ನೂ ಸೇರ್ಸುತ್ತ ಕ್ರಮಯಿದ್ದು. ಹಾಂಗೆ ಎಲ್ಲವನ್ನೂ ತಗ್ಗಿಸೊಪ್ಪಿನ ಎಲೆಲಿ ಮಡುಗಿ, ದಡ್ಡಾಲ ಮರದ ನಾರಿನ ಬಳ್ಳಿಲಿ ಎಲ್ಲವನ್ನು ಸೇರ್ಸಿ ಸಣ್ಣ ಸಣ್ಣ ಕಟ್ಟ ಕಟ್ಟೆಕು.
ಮತ್ತೆ ಮನೆ ಯಜಮಾನನೇ ಅದರ ಹಾಂಗೇ ದೇವರೊಳಾಂಗೆ ತಂದು ದೇವರ ಎದುರು ಮಡುಗೆಕು.
ಮದಾಲು ದೇವರ ಪೂಜೆ, ಮಂಗಳಾರತಿ ಮಾಡಿಕ್ಕಿ, ಈ ಬತ್ತದ ಕಟ್ಟಂಗೊಕ್ಕೂ ಪೂಜೆ ಮಾಡುವ ಕ್ರಮ. ದೇವರ ಪ್ರಸಾದ ತೆಕ್ಕೊಂಡ ಮತ್ತೆ ಈ ಬತ್ತದ ಕದಿರಿನ ಕಟ್ಟಂಗಳ ತೆಗದು ಮನೆಯ ದೇವರ ಮಂಟಪಕ್ಕೆ ಮದಲು ಒಂದು ಕಟ್ಟೆಕು. ಮತ್ತೆ ಚಾವಡಿಯ ಬಾಜಿರ ಕಂಬಕ್ಕೆ ಎರಡು ಕದಿರು ಕಟ್ಟೆಕು. ಬಾಜಿರ ಕಂಬ ಇಲ್ಲದ್ದ ಮನೆಗಳಲ್ಲಿ ಮನೆ ಬಾಗಿಲಿನ ಎರಡೂ ಹೊಡೆಂಗೆ ಕಟ್ಟುತ್ತವು. ಮತ್ತೆ ತುಳಸಿಗೆ, ತೊಟ್ಲಿನ ಬಳ್ಳಿಗೆ, ಹಾಲು ಮಡುಗುವ ಸಿಕ್ಕಕ್ಕೆ, ಮಸರು ಕಡವ ಗುಂಟಕ್ಕೆ, ಹಟ್ಟಿಗೆ, ನೊಗಕ್ಕೆ, ನಾಯರಿಂಗೆ ( ನೇಗಿಲು ) ಕಟ್ಟುದು. ಭೂತಕೊಟ್ಟಗೆ ಇಪ್ಪ ಮನೆಗಳಲ್ಲಿ ಅಲ್ಲಿಗೂ ಒಂದೊಂದು ಕದಿರ ಕಟ್ಟಂಗಳ ಕಟ್ಟುವ ಕ್ರಮ ಇದ್ದಾಡ. ಪೂಜೆ ಮಾಡಿ ಕಟ್ಟಿದ ಆ ಕದಿರಿನ ಕಟ್ಟ ಸೌಭಾಗ್ಯದ ಪ್ರತೀಕ ಹೇಳುದು ನಮ್ಮ ನಂಬಿಕೆ.
ಮನೆ ತುಂಬುಸುಲೆ ತೆಗದ ಬತ್ತದ ಕದಿರಲ್ಲಿ ಒಳುದ ಕದಿರಿನ ಬತ್ತದ ಕಾಳು ಬಿಡಿಸಿ ಅಕ್ಕಿ ಮಾಡಿ, ಹಾಲಿಲ್ಲಿ ಬೇಶಿ ದೇವರಿಂಗೆ ನೈವೇದ್ಯ ಮಾಡುವ ಕ್ರಮಯಿದ್ದು. ಆ ಪರಮಾನ್ನಕ್ಕೆ ಬೆಲ್ಲ, ಸಕ್ಕರೆ ಎಲ್ಲ ಹಾಕುವ ಕ್ರಮಯಿಲ್ಲೆ.
ಗೆದ್ದೆ ಬೇಸಾಯ ಈಗ ಕಮ್ಮಿಯಾದ ಹಾಂಗೆ ಮನೆ ಮನೆಗಳಲ್ಲಿ ಹೊಸ್ತು ಆಚರಣೆಯೂ ತುಂಬಾ ಅಪರೂಪ ಆವ್ತಾಯಿದ್ದು. ಎಷ್ಟೋ ಮಕ್ಕೊಗೆ ಇದರ ವಿಶಯ ಗೊಂತೇ ಇಲ್ಲೆ ಹೇಳುದು ತುಂಬಾ ಬೇಜಾರಿನ ವಿಶಯ. ಹಳ್ಳಿಲಿಪ್ಪವಕ್ಕೆ, ಕೃಷಿಕಂಗೆ ಸಮಾಜಲ್ಲಿ ಬೆಲೆ ಕಮ್ಮಿಯಾದ ಹಾಂಗೆ ಹಳೆಯ ಆಚರಣೆಗಳೂ ಮಾಯ ಆವ್ತಾಯಿದ್ದು.
ಗದ್ದೆ ಬೇಸಾಯಕ್ಕೆ ಉಪಯೋಗ್ಸುವ ನೊಗ, ನಾಯರು ಎಲ್ಲ ಕಾಂಬದೇ ಅಪರೂಪ ಆಯಿದು. ಹಾಂಗಿದ್ದರೂ ಕೆಲವೇ ಕೆಲವು ಮನೆಗಳಲ್ಲಿ ಹಳ್ಳಿ ಜೀವನದ ಮಹತ್ವವ ಅರ್ಥ ಮಾಡಿಕೊಂಡು, ಹಿರಿಯರ ಕಾಲಂದ ಬಳವಳಿಯಾಗಿ ಸಿಕ್ಕಿದ ಕೆಲವು ಆಚರಣೆ, ಸಂಪ್ರದಾಯಂಗಳ ಒಳಿಶಿ ಬೆಳೆಶುತ್ತವು ಹೇಳುದು ರೆಜ್ಜ ಸಮದಾನದ ಸಂಗತಿಯೇ.
ನಮ್ಮ ಹಳೇಕಾಲದ ಆಚರಣೆಗಳ ಬಗ್ಗೆ, ಅದರ ಹಿಂದೆ ಇಪ್ಪ ಒಳ್ಳೆಯ ಉದ್ದೇಶಂಗಳ ಬಗ್ಗೆ ನಮ್ಮ ಮುಂದಿನ ತಲೆಮಾರಿನ ಮಕ್ಕಳೂ ತಿಳ್ಕೊಳಲಿ. ಎಡಿಗಾದರೆ ಅದರ ಆಚರ್ಸಲಿ. ಇಲ್ಲದ್ರೆ ಹೀಂಗಿದ್ದ ಚೆಂದ ಚೆಂದದ ಆಚರಣೆಗೂ ಕಣ್ಮರೆಯಪ್ಪ ದಿನಂಗೂ ದೂರಯಿಲ್ಲೆ. ಹಾಂಗಾಗದ್ದಿರಲಿ ಹೇಳುವ ಸದಾಶಯ ನಮ್ಮದು.
– ಪ್ರಸನ್ನಾ ವಿ. ಚೆಕ್ಕೆಮನೆ
ಚಿತ್ರಕೃಪೆ ವಿಜಯಲಕ್ಷ್ಮಿ ಕಲ್ಲಕಟ್ಟ