” ಗೋಮಾತೆ ದೇವತೆಗೆ ಸಮಾನ. ಆಕೆಯ ಹಾಲು ಅಮೃತ ತುಲ್ಯ . ಆಕೆಯ ಸೇವೆ ಪುಣ್ಯಪ್ರದ. ಗೋಸೇವೆಯಿಂದ ಬದುಕಿನಲ್ಲಿ ನೆಮ್ಮದಿ ಶಾಂತಿ ನೆಲೆಸಿದೆ ” ಎಂದವರು ಕುಮಟಾ ಮಂಡಲ, ಕುಮಟಾ ವಲಯದ ಪೋಸ್ಟಲ್ ಕಾಲನಿ ನಿವಾಸಿಗಳಾಗಿರುವ ಸುಬ್ರಹ್ಮಣ್ಯ ಹೆಗಡೆಯವರ ಪತ್ನಿ ಸರಸ್ವತಿ ಹೆಗಡೆ
ಕಡತೋಕ ಸುಬ್ರಾಯ ಭಾಗ್ವತ್, ಮಾದೇವಿ ದಂಪತಿಗಳ ಪುತ್ರಿಯಾದ ಸರಸ್ವತಿ ಸುಬ್ರಹ್ಮಣ್ಯ ಹೆಗಡೆಯವರು ಸುಮಾರು ಎರಡು ದಶಕಗಳಿಂದ ಶ್ರೀಮಠದ ಸೇವೆಯಲ್ಲಿ ತೊಡಗಿಸಿಕೊಂಡವರು. ಅಂಚೆ ಇಲಾಖೆಯಲ್ಲಿ ಉದ್ಯೋಗಿಯಾಗಿದ್ದ ಪತಿ ಸುಬ್ರಹ್ಮಣ್ಯ ಹೆಗಡೆ ನಿವೃತ್ತಿಯ ನಂತರ ಗುರಿಕ್ಕಾರರಾಗಿ ಶ್ರೀಮಠದ ಸೇವೆಯಲ್ಲಿ ನಿರತರಾಗಿದ್ದಾರೆ. ಕುಮಟಾ ಮಂಡಲ ಧರ್ಮಭಾರತೀ ಪ್ರಧಾನರಾಗಿಯೂ ಸೇವೆ ಸಲ್ಲಿಸುತ್ತಿರುವ ಇವರು ಪತ್ನಿಯ ಗೋಸೇವೆಗೆ ಸಂಪೂರ್ಣ ಸಹಕಾರ ನೀಡುತ್ತಿದ್ದಾರೆ.
ಆರಂಭದಲ್ಲಿ ಇನ್ನೊಬ್ಬ ಮಾಸದ ಮಾತೆಗೆ ಸಹಕಾರ ನೀಡಿದ ಸರಸ್ವತಿಯವರು ಮುಂದೆ ತಾವೇ ಮಾಸದ ಮಾತೆಯಾಗಿ ಗೋಸೇವೆ ಮಾಡಲಾರಂಬಿಸಿದರು. ಸಾವಿರದ ಸುರಭಿಯ ಮೂಲಕ ಲಕ್ಷ ಬಾಗಿನವನ್ನು ಪಡೆದ ಅವರು ಮುಂದೆ ಮಾಸದಮಾತೆಯಾಗಿಯೂ ಲಕ್ಷದ ಗುರಿ ತಲುಪಿದ್ದಾರೆ.
” ಬಾಲ್ಯದಿಂದಲೇ ಗೋವಿನ ಒಡನಾಟದಲ್ಲಿ ಬೆಳೆದವಳು ನಾನು. ಗೋಸೇವೆಯ ಸದವಕಾಶವನ್ನು ಸಮರ್ಪಕವಾಗಿ ಸದುಪಯೋಗಪಡಿಸಿಕೊಂಡೆ. ಶ್ರೀಗುರುಗಳ ಅನುಗ್ರಹದಿಂದ ಗೋಸೇವೆ ಮಾಡುವ ಅವಕಾಶ ಮತ್ತೆ ದೊರಕಿದೆ. ಹಳ್ಳಿಯಲ್ಲಿರುವಾಗ ಮನೆಯಲ್ಲಿ ಹಸುಗಳಿದ್ದವು. ಈಗ ವಯಸ್ಸಿನ ಪರಿಮಿತಿಯಿಂದಾಗಿ ಗೋವುಗಳನ್ನು ಸಾಕಲು ಸಾಧ್ಯವಾಗುತ್ತಿಲ್ಲ. ಆದರೆ ಗೋವುಗಳ ಮೇಲೆ ತುಂಬಾ ಪ್ರೀತಿಯಿದೆ. ಗೋ ಸೇವೆಯನ್ನು ಈಗಲೂ ಮುಂದುವರಿಸುತ್ತಿದ್ದೇನೆ ” ಎನ್ನುವ ಸರಸ್ವತಿಯವರ ಗೋಸೇವೆಗೆ ಅನೇಕ ಮಂದಿ ಆತ್ಮೀಯರು, ಪರಿಚಿತರು, ಬಂಧುಗಳು ಕೈಜೋಡಿಸಿದ್ದಾರೆ.
ಸರಸ್ವತಿ ಸುಬ್ರಹ್ಮಣ್ಯ ಹೆಗಡೆಯವರ ನಾಲ್ಕು ಮಂದಿ ಹೆಣ್ಣು ಮಕ್ಕಳೂ ಅವರ ಗೋಸೇವೆಗೆ ಸಹಕಾರ ನೀಡಿದ್ದಾರೆ. ಶ್ರೀಮಠದ ಸೇವೆಯಲ್ಲಿ ತೊಡಗಿಸಿಕೊಂಡು ನೆಮ್ಮದಿಯ ಜೀವನ ನಡೆಸುತ್ತಿರುವ ಇವರು ಶ್ರೀಗುರು ಸೇವೆ ಮಾಡಲು ದೊರಕಿದ ಅವಕಾಶಗಳನ್ನು ಸದ್ಬಳಕೆ ಮಾಡುತ್ತಿದ್ದಾರೆ. ಗುರು ಕಾರುಣ್ಯದಿಂದ ಬದುಕಿನಲ್ಲಿ ನೆಮ್ಮದಿ ನೆಲೆಸಿದೆ. ಇಳಿ ವಯಸ್ಸಿನಲ್ಲಿಯೂ ಆರೋಗ್ಯದಿಂದ ಗುರುಸೇವೆಯಲ್ಲಿ ತೊಡಗಿಸಿಕೊಳ್ಳಲು ಕಾರಣ ಶ್ರೀಗುರುಗಳ ಅನುಗ್ರಹ ಎಂದು ಭಾವಿಸುವ ಸರಸ್ವತಿ ಸುಬ್ರಹ್ಮಣ್ಯ ಹೆಗಡೆಯವರ ಮನೆಯಲ್ಲಿ ಕಳೆದ ವರ್ಷ ಸ್ವರ್ಣ ಪಾದುಕಾಭಿಕ್ಷೆಯೂ ನೆರವೇರಿದೆ. ಈ ಹಿಂದೆ ಶ್ರೀಗುರುಭಿಕ್ಷಾ ಸೇವೆಯನ್ನು ನಡೆಸುವ ಅವಕಾಶ ದೊರಕಿದ್ದು ತಮ್ಮ ಸುಕೃತ ಎಂದು ಭಾವಿಸುತ್ತಾರೆ ಸರಸ್ವತಿ ಸುಬ್ರಮಣ್ಯ ಹೆಗಡೆ.
” ಬಿಡುವಿನ ವೇಳೆಗಳಲ್ಲಿ ಹೊಸಾಡ ಗೋಶಾಲೆಗೆ ಹೋಗಿ ಗೋಸೇವೆ ಮಾಡುತ್ತೇವೆ. ಗುರುಸೇವೆ, ಗೋಸೇವೆಗಳಿಂದ ಬದುಕಿನಲ್ಲಿ ಒಳಿತಾಗಿದೆ. ಹೆಣ್ಣು ಮಕ್ಕಳಿಗೆಲ್ಲ ಒಳ್ಳೆಯ ಮನೆತನ ದೊರಕಿದೆ. ಮೊಮ್ಮಕ್ಕಳು ಚೆನ್ನಾಗಿ ಓದುತ್ತಿದ್ದಾರೆ ” ಎನ್ನುವ ಸರಸ್ವತಿ ಸುಬ್ರಮಣ್ಯ ಹೆಗಡೆಯವರು ತಮ್ಮ ಇಳಿ ವಯಸ್ಸಿನಲ್ಲೂ ಶ್ರೀಮಠದ ಸೇವೆ, ಗೋಸೇವೆ ಮಾಡುವ ಸಂತಸವನ್ನು ಸವಿಯುತ್ತಿದ್ದಾರೆ.
ಪ್ರಸನ್ನಾ ವಿ. ಚೆಕ್ಕೆಮನೆ.