ಕರಗಳಲ್ಲಿ ಕಲೆ ಅರಳಿಸುವ ಶ್ರೀಮಾತೆ – ಅರ್ಚನಾ ಸುಬ್ರಹ್ಮಣ್ಯ ಕಾನುಗೋಡು

ಮಾತೃತ್ವಮ್

 

ಕಲೆ, ಕಸೂತಿ, ಹೂವಿನ ಹಾರ, ರಂಗೋಲಿಯೇ ಮೊದಲಾದ ಕಲೆಗಳಲ್ಲಿ ವಿಶೇಷ ಪರಿಣತಿ ಪಡೆದು, ವೈಶಿಷ್ಟ್ಯಮಯ ವಿನ್ಯಾಸಗಳಿಂದಲೇ ಅವುಗಳಲ್ಲಿ ತಮ್ಮ ಛಾಪು ಒತ್ತಿರುವ ಅಪರೂಪದ, ಆಕರ್ಷಕ ವ್ಯಕ್ತಿತ್ವದ ಒಡತಿಯಾಗಿರುವ ಮಾಸದ ಮಾತೆ ಅರ್ಚನಾ ಸುಬ್ರಹ್ಮಣ್ಯ.

ರಾಮಚಂದ್ರಾಪುರ ಮಂಡಲದ ಕಾನುಗೋಡು ವಲಯದ ಮಾತೃ ಪ್ರಧಾನೆಯೂ ಆಗಿರುವ ಅರ್ಚನಾ ಶಿರಸಿಯ ಸಮೀಪದ ವಡ್ಡಿನಕೊಪ್ಪ ದತ್ತಾತ್ರೇಯ ರಾಯ್ಸದ್ ಹಾಗೂ ಜಯಾ ರಾಯ್ಸದ್ ದಂಪತಿಗಳ ಪುತ್ರಿ.

” ಮದುವೆಯಾದ ಆರಂಭದಲ್ಲಿ ಹಳ್ಳಿಮನೆ ಸೇರಬೇಕಾಗಿ ಬಂತಲ್ಲಾ, ಹಸುಗಳ ಕೆಲಸ, ಹಟ್ಟಿ ಕೆಲಸ ಮಾಡಬೇಕಲ್ಲಾ ಎಂದೆನಿಸುತ್ತಿತ್ತು. ಅದರಲ್ಲೂ ಹಸುಗಳ ಸೇವೆ ಮಾಡಲು ಮುಜುಗರವೇ ಆಗ್ತಿತ್ತು. ಆದರೆ ಯಾವಾಗ ವಿಶ್ವ ಗೋ ಸಮ್ಮೇಳನದಲ್ಲಿ ಭಾಗವಹಿಸಿ, ವಿವಿಧ ಗೋಷ್ಠಿಗಳನ್ನು ಕೇಳಿ, ಶ್ರೀಗುರುಗಳ ಆಶೀರ್ವಚನಗಳ ಮೂಲಕ ಗೋಮಾತೆಯ ಮಹತ್ವದ ಬಗ್ಗೆ ತಿಳಿದುಕೊಂಡೆನೋ, ಆ ಕ್ಷಣದಿಂದ ನಾನು ಸಂಪೂರ್ಣವಾಗಿ ಬದಲಾದೆ. ಗೋಮಾತೆಯ ದೇಹದಲ್ಲಿ ೩೩ ಕೋಟಿ ದೇವತೆಗಳು ನೆಲೆಸಿದ್ದಾರೆ ಎಂದು ಅರಿತುಕೊಂಡ ಮೇಲೆ ಹಸುಗಳ ಸೇವೆ ಇಷ್ಟವಾಗತೊಡಗಿತು. ಗೋ ಸಮ್ಮೇಳನದಿಂದ ತುಂಬಾ ಪ್ರಭಾವಿತಳಾದ ನಾನು ಗೋಮಾತೆಯ ಸೇವೆ ಅತ್ಯಂತ ಪುಣ್ಯದಾಯಕ ಎಂಬ ಶ್ರದ್ಧಾಭಾವದಿಂದ ಮಾಡತೊಡಗಿದೆ. ನನಗೆ ಧಾರ್ಮಿಕ ಆಚರಣೆಗಳ ಮಹತ್ವ, ಸಾಂಸ್ಕೃತಿಕ ಆಚರಣೆಗಳ ಹಿನ್ನೆಲೆ ಎಲ್ಲವೂ ಅರಿವಾಗಿದ್ದು ಶ್ರೀ ಗುರುಗಳ ಆಶೀರ್ವಚನಗಳಿಂದ. ಹಾಗಾಗಿ ಶ್ರೀಮಠದ ಸೇವೆ ಎಂದರೆ ನನಗೆ ಹೆಚ್ಚು ಶ್ರದ್ಧೆ. ಶ್ರೀಗುರುಗಳ ಕಾರ್ಯಕ್ರಮಗಳಿದ್ದರೆ ವೈವಿಧ್ಯಮಯ ವಿನ್ಯಾಸಗಳ ಹೂವಿನಹಾರ, ತುಳಸೀಹಾರಗಳನ್ನು ತಯಾರಿಸುತ್ತೇನೆ. ರಂಗೋಲಿಯಲ್ಲೂ ವೈಶಿಷ್ಟ್ಯತೆ ಮೂಡಿ ಬರಬೇಕು ಎಂಬುದು ನನ್ನ ಅಭಿಲಾಷೆ. ನಮ್ಮೆಲ್ಲರ ಬದುಕಿಗೆ ಒಳಿತಿನ ದಾರಿತೋರಿ ಹರಸುವ ಶ್ರೀಗುರುಗಳ ಸೇವೆಯಲ್ಲಿ ದೊರಕುವ ಆತ್ಮತೃಪ್ತಿ ಬೇರೆಲ್ಲಿ ಸಿಗಲು ಸಾಧ್ಯ” ಎನ್ನುವ ಅರ್ಚನಾ ಅವರ ಶ್ರೀಮಠದ ಸೇವೆಗೆ ಪ್ರೇರಣೆ ನೀಡಿದವರು ಅವರ ಪತಿ ಸುಬ್ರಹ್ಮಣ್ಯ ಕಾನುಗೋಡು.

ಸಾವಿರದ ಸುರಭಿ ಯೋಜನೆಯ ಮೂಲಕ ಗೋಮಾತೆಯ ಸೇವೆಯನ್ನಾರಂಭಿಸಿ ಗುರಿ ತಲುಪಿ, ಬಾಗಿನ ಸ್ವೀಕರಿಸಿದ ಅರ್ಚನಾ ಮುಂದೆ ಮಾತೃತ್ವಮ್ ಯೋಜನೆಯ ಮೂಲಕವೂ ಗೋಸೇವೆ ಮುಂದುವರಿಸಿದರು. ತಾವು ಒಂದು ಹಸುವಿನ ಪೋಷಣೆಯ ಗುರಿ ಸೇರಿದ ಮೇಲೆ ಇತರ ಮಾಸದ ಮಾತೆಯರಿಗೆ ಗುರಿಸೇರಲು ಸಹಾಯ ಮಾಡುತ್ತಿದ್ದಾರೆ.

” ಗೋಸೇವೆಗೆ ಎಲ್ಲ ಸಮಾಜದವರೂ ಕೈ ಜೋಡಿಸಿದ್ದಾರೆ. ಮಾತೃತ್ವಮ್ ಯೋಜನೆಗೆ ಸೇರಿದ ಒಂದೇ ತಿ೦ಗಳಲ್ಲಿ ನಾನು ಗುರಿ ತಲುಪಿದ್ದೇನೆ. ಪ್ರತೀ ತಿಂಗಳು ಗೋಮಾತೆಗೆ ಕಾಣಿಕೆ ನೀಡುವವರು ಇದ್ದಾರೆ. ವರ್ಷಕ್ಕೊಮ್ಮೆ ನೀಡುವವರೂ ಇದ್ದಾರೆ ” ಎನ್ನುವ ಅರ್ಚನಾಗೆ ಗೋವುಗಳೆಂದರೆ ವಿಶೇಷ ಮಮತೆ.

ಕುಸುರಿ ಕಲೆಗಳಲ್ಲಿ ವಿಶೇಷ ಆಸಕ್ತಿ ಹೊಂದಿರುವ ಅರ್ಚನಾ ಶ್ರೀಮಠದ ವಿಶೇಷ ಕಾರ್ಯಕ್ರಮಗಳಲ್ಲಿ ತುಳಸೀಹಾರ, ರಂಗೋಲಿ ವಿಭಾಗದ ಸಂಚಾಲಕಿಯಾಗಿ ಸೇವೆ ಮಾಡುತ್ತಾರೆ. ವಿವಿವಿ ಯ ವಿದ್ಯಾರ್ಥಿಗಳಿಗೂ ಕಲೆ, ಕಸೂತಿ, ಹೂವಿನಹಾರ ತಯಾರಿ, ರಂಗೋಲಿಯ ಬಗ್ಗೆ ಪಾಠ ಮಾಡಿದ ಅನುಭವವೂ ಇದೆ. ಕಾನುಗೋಡು ವಲಯದಲ್ಲಿ ಯಾವುದೇ ಕಾರ್ಯಕ್ರಮ ಇದ್ದರೂ ಪತಿ, ಪತ್ನಿ ಒಟ್ಟಾಗಿ ಹೋಗಿ ಸೇವೆ ಸಲ್ಲಿಸುತ್ತಾರೆ..

” ಶ್ರೀಗುರುಗಳ ಸಮಾಜಮುಖೀ ಯೋಜನೆಗಳಿಂದ ನಮ್ಮ ಸಮಾಜ ಶ್ರೀಮಠದ ಸಂಪರ್ಕಕ್ಕೆ ಬರುವಂತಾಗಿದೆ. ನಾವೆಲ್ಲ ಮಠದ ಸಂಪರ್ಕಕ್ಕೆ ಬಾರದಿರುತ್ತಿದ್ದರೆ ಬೇರೆಲ್ಲೋ ಕಳೆದು ಹೋಗುತ್ತಿದ್ದೆವು. ನಮ್ಮನ್ನು ನಾವು ಗುರುತಿಸಿಕೊಳ್ಳುವ ಅವಕಾಶ ಶ್ರೀಗುರುಗಳಿಂದ ದೊರಕಿದೆ. ಆಧುನಿಕ ಜೀವನದ ಥಳುಕು ಬಳುಕುಗಳಿಗೆ ಮಾರು ಹೋಗುತ್ತಿರುವ ಇಂದಿನ ಯುವ ಪೀಳಿಗೆಯನ್ನು ಸಾಧ್ಯವಾದಷ್ಟು ಹೆಚ್ಚು ಶ್ರೀಮಠದ ಸಂಪರ್ಕಕ್ಕೆ ತರಬೇಕು. ಶ್ರೀಗುರುಗಳ ಪ್ರವಚನಗಳನ್ನು ಅವರಿಗೆ ಕೇಳಿಸಬೇಕು. ಅವರಾಗಿಯೇ ಆಸಕ್ತಿಯಿಂದ ಶ್ರೀಮಠದ ಸಂಘಟನೆಗಳಲ್ಲಿ ತೊಡಗಿಸಿಕೊಳ್ಳುವಂತಾಗಬೇಕು. ಮಕ್ಕಳ ಬಿಡುವಿನ ವೇಳೆಗಳಲ್ಲಿ ಅವರಿಗೆ ಧಾರ್ಮಿಕ ಆಚರಣೆಗಳ ಬಗ್ಗೆ ಅರಿವು ಮೂಡಿಸಬೇಕು. ಸಮಾಜದ ಸಂಕ್ರಮಣ ಕಾಲಘಟ್ಟದಲ್ಲಿ ಶ್ರೀಗುರುಗಳ ಮಾರ್ಗದರ್ಶನ ಅತ್ಯಂತ ಉಪಯುಕ್ತವಾಗಿದೆ. ಇಂತಹ ಗುರುಗಳನ್ನು ಪಡೆಯಲು ನಾವು ಪುಣ್ಯ ಮಾಡಿದ್ದೇವೆ ” ಎನ್ನುವ ಅರ್ಚನಾ ತಮ್ಮ ಹವ್ಯಾಸಗಳಿಂದ ದೊರಕಿದ ಒಂದು ಮೊತ್ತವನ್ನು ಶ್ರೀಮಠದ ಸೇವೆಗೆ ಸಮರ್ಪಿಸುತ್ತಾರೆ.

ಇತ್ತೀಚೆಗೆ ಸಾಗರದಲ್ಲಿ ಜರಗಿದ ನವರಾತ್ರ ನಮಸ್ಯಾದ ಸಂದರ್ಭದಲ್ಲಿ ಆಕರ್ಷಕ ಹೂವಿನಹಾರಗಳನ್ನು ತಯಾರಿಸಿ ಜನಮನ ಸೆಳೆದ ಅರ್ಚನಾ ಅವರು ಧಾನ್ಯಗಳಿಂದ ನಿರ್ಮಿಸಿದ ಬಾಗಿನದ ಪರಿಕಲ್ಪನೆಯ ರಂಗವಲ್ಲಿ ಸರ್ವತ್ರ ಮೆಚ್ಚುಗೆ ಗಳಿಸಿದೆ. ನವರಾತ್ರ ನಮಸ್ಯಾದ ಸಂದರ್ಭದಲ್ಲಿ ಮಂಡಲ ಕುಂಕುಮಾರ್ಚನೆ ನಡೆಸಿ ಬಾಗಿನ ಸ್ವೀಕರಿಸಿದ್ದಾರೆ.

” ನನ್ನ ಹಾರ ನೋಡಿಯೇ ಅದು ನಾನು ಕಟ್ಟಿದ ಹಾರ ಎಂದು ಶ್ರೀಗುರುಗಳು ಗುರುತಿಸುತ್ತಾರೆ ಎಂಬುದು ಬದುಕಿನ ಸಾರ್ಥಕತೆ. ಶ್ರೀಗುರುಗಳ, ಶ್ರೀಮಠದ ಕಾರ್ಯಕ್ರಮಗಳಿದ್ದರೆ ಅಲ್ಲಿ ನನ್ನ ಸೇವೆ ಸದಾ ಇರುತ್ತದೆ ” ಎನ್ನುವ ಅರ್ಚನಾ ವಿಶ್ವ ಹವ್ಯಕ ಸಮ್ಮೇಳನದಲ್ಲಿ ನಡೆದ ಹೂವಿನ ರಂಗವಲ್ಲಿ ಸ್ಪರ್ಧೆ ಹಾಗೂ ಇಕೆಬಾನ ( ಹೂಗಳನ್ನು ಕ್ರಮಬದ್ಧವಾಗಿ ಜೋಡಿಸುವ ಜಪಾನೀ ಕಲೆ) ಸ್ಪರ್ಧೆಗಳಲ್ಲಿ ಪ್ರಥಮ ಸ್ಥಾನ ಪಡೆದಿದ್ದಾರೆ. ಧಾರ್ಮಿಕ ಆಚರಣೆಗಳ ಮಹತ್ವಗಳನ್ನು ಅರಿತುಕೊಂಡು ಸಾಂಪ್ರದಾಯಿಕತೆಗೆ ಆದ್ಯತೆ ಕೊಡುವ ಅರ್ಚನಾ ಆಧುನಿಕ ಜೀವನ ಶೈಲಿಗೂ ಸಹಜವಾಗಿ ಒಗ್ಗಿಬಿಡುತ್ತಾರೆ.
ಶ್ರೀಮಠದ ಸೇವೆ, ಗೋಸೇವೆಯ ಜೊತೆಗೆ ತಮ್ಮ ಕಲೆಯಲ್ಲಿಯೂ ಮತ್ತಷ್ಟು ಪರಿಣತಿ ಪಡೆಯುತ್ತಿರುವ ಅವರ ಸೇವಾವಕಾಶಗಳು ಇನ್ನಷ್ಟು ವಿಸ್ತಾರವಾಗಲಿ. ಯುವ ಪೀಳಿಗೆಯನ್ನು ಶ್ರೀಮಠದ ಸಂಪರ್ಕಕ್ಕೆ ತಂದು ಅವರನ್ನು ಸುಸಂಸ್ಕೃತ ಸಮಾಜದ ಭಾಗವನ್ನಾಗಿಸ ಬೇಕೆಂಬ ಅವರ ಅಭಿಲಾಷೆ ಈಡೇರಲಿ.

ಪ್ರಸನ್ನಾ ವಿ. ಚೆಕ್ಕೆಮನೆ

Leave a Reply

Your email address will not be published. Required fields are marked *