ಕೊಲ್ಲೂರಿನ ಮೂಕಾಂಬಿಕಾ ದೇವಾಲಯದಲ್ಲಿ ಧಾರ್ಮಿಕ ಪೂಜಾಪದ್ಧತಿಯನ್ನು ಸ್ಥಾಪಿಸಿದವರು ಶ್ರೀ ರಾಮಚಂದ್ರಾಪುರ ಮಠದ 33ನೇ ಪೀಠಾಧಿಪತಿಗಳಾದ ಬ್ರಹ್ಮೈಕ್ಯ ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳು ಎಂದು ಶ್ರೀರಾಮಚಂದ್ರಾಪುರ ಮಠದ 36ನೇ ಪೀಠಾಧಿಪತಿಗಳಾದ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರ ಭಾರತೀ ಮಹಾಸ್ವಾಮಿಗಳವರು ಹೇಳಿದರು.
ಬೆಂಗಳೂರಿನ ಗಿರಿನಗರದ ಶಾಖಾ ಮಠದಲ್ಲಿ ನಡೆದ 33ನೇ ಪೀಠಾಧಿಪತಿಗಳ ಸಂಸ್ಮರಣ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿ, 33 ನೇ ರಾಘವೇಶ್ವರರು ಅಧ್ಯಯನ – ತಪಸ್ಸು ಹಾಗೂ ಗ್ರಂಥ ರಚನೆಗಳಿಗೆ ಪ್ರಸಿದ್ಧರಾಗಿದ್ದು, ಅಂದು ರಾಮಚಂದ್ರಾಪುರ ಮಠದ ಕೀರ್ತಿಯನ್ನು ಹೆಚ್ಚಿಸಿದ ಹಿರಿಮೆ ಅವರದ್ದಾಗಿದೆ. ಅವರು ಅಧ್ಯಯನಕ್ಕಾಗಿ ಅಂದಿನ ಪಾಂಡ್ಯ (ಇಂದಿನ ತಮಿಳುನಾಡು) ದೇಶಕ್ಕೆ ತೆರಳಿದ್ದರು. ತಪಸ್ಸು ಹಾಗೂ ಅಧ್ಯಯನದ ಪ್ರಭಾವದಿಂದಾಗಿ ಪಾಂಡ್ಯದ ಬೊಮ್ಮರಾಜನು ಇವರಿಗೆ ಆನೆಯನ್ನು ಗೌರವದ ಕಾಣಿಕೆಯಾಗಿ ಸಮರ್ಪಿಸಿದನು. ಮುಂದೆ ರಾಮಭದ್ರನೆಂದು ಹೆಸರು ಪಡೆದ ಆ ಆನೆಯ ಮೇಲೆಯೇ ಶ್ರೀಗಳು ಯಾತ್ರೆಗಳನ್ನು ಮಾಡುತ್ತಿದ್ದರು. ಮುಂದೆ ಆನೆ ಗತಿಸಿದ ನಂತರ ಅದರ ದಂತದಿಂದಲೇ ವಿಶ್ವಪ್ರಸಿದ್ಧವಾದ ಜಗತ್ತಿನ ಏಕೈಕ ಹಸ್ತಿದಂತ ಸಿಂಹಾಸನ ನಿರ್ಮಿತವಾಯಿತು ಎಂದರು.
ಅವರಿಗೆ ಮೈಲಿಬೇನೆ ಬಂದು ದೃಷ್ಟಿಯನ್ನು ಕಳೆದುಕೊಂಡರು. ಆಗ ಕೊಡಚಾದ್ರಿಯ ಚಿತ್ರಮೂಲ ವನದಲ್ಲಿ ಕಠಿಣ ತಪಸ್ಸನ್ನು ಆಚರಿಸುವ ಮೂಲಕ ಮರಳಿ ಕಣ್ಣಿನ ದೃಷ್ಟಿಯನ್ನು ಪಡೆದರು. ಇದು ಇತಿಹಾಸದಲ್ಲಿಯೂ ನಮೂದಾಗಿದ್ದು, ಅವರ ತಪೋಬಲಕ್ಕೆ ಉದಾಹರಣೆಯಾಗಿದೆ. ಇನ್ನೊಮ್ಮೆ ಕುಮಟಾದ ಕರ್ಕಿಯಲ್ಲಿ ಮದವೇರಿದ ಆನೆಯನ್ನು ಕೇವಲ ತಮ್ಮ ಕರಸ್ಪರ್ಶದಿಂದ ಸಮಾಧಾನ ಪಡಿಸಿದ್ದ ಉದಾಹರಣೆಯೂ ಅವರ ಕಾಲದಲ್ಲಿದೆ ಎಂದರು.
ಸರ್ವಶಾಸ್ತ್ರಗಳನ್ನು ಬಲ್ಲವರಾಗಿದ್ದ ಅವರು, ‘ಉತ್ತರ ಸಹ್ಯಾದ್ರಿಯೊಳಗಿನ ಹವ್ಯಕ ದ್ರಾವಿಡ ಬ್ರಾಹ್ಮಣರ ಉತ್ಪತ್ತಿ ಇತಿಹಾಸವು’ ಎಂಬ ಗ್ರಂಥವನ್ನೂ ರಚಿಸಿದ್ದು, ಹವ್ಯಕ ಬ್ರಾಹ್ಮಣರ ಇತಿಹಾಸವನ್ನು ದಾಖಲಿಸಿದ ಈ ಕಾಲದ ಪ್ರಥಮ ಗ್ರಂಥವೂ ಇದಾಗಿದೆ ಎಂದು ಅಭಿಪ್ರಾಯಪಟ್ಟರು.
ಶ್ರೀಮಠದ 33ನೇ ಶಂಕರಾಚಾರ್ಯರ ಸಂಸ್ಮರಣಾರ್ಥವಾಗಿ 33 ಸಾಲಂಕೃತ ದೀಪಗಳನ್ನು ಬೆಳಗಿ ಜಗವನ್ನು ಬೆಳಗಿದ ಜಗದ್ಗುರುಗಳಿಗೆ ನಮನ ಸಲ್ಲಿಸಲಾಯಿತು. ಗಮಕ ಕಲಾಪರಿಷತ್ತಿನ ಅಧ್ಯಕ್ಷರಾದ ಗಂಗಮ್ಮ ಕೇಶವಮೂರ್ತಿ ಹಾಗೂ ಬೆಂಗಳೂರು ಮೊಟ್ರೋದ ನೂತನ ನಿರ್ದೇಶಕ ಸುಬ್ರಹ್ಮಣ್ಯ ಗುಡ್ಗೆ ದೀಪಪ್ರಜ್ವಲನ ಮಾಡಿದರು. ಗಂಗಮ್ಮ ಕೇಶವಮೂರ್ತಿ ಅವರು ಗಮಕ ವಾಚಿಸಿದರು. 33ನೇ ರಾಘವೇಶ್ವರ ಭಾರತೀ ಮಹಾಸ್ವಾಮಿಗಳ ಕುರಿತಾದ ಕಿರು ಪ್ರಸ್ತುತಿಯನ್ನು ಪ್ರದರ್ಶಿಸಲಾಯಿತು.