” ಶ್ರೀಗುರು ಕರುಣೆಯ ಅಮೃತದ ಸವಿ ಅನುಭವಿಸಿದವರು ಮಾತ್ರ ಬಲ್ಲರು. ಗುರು ಸ್ಮರಣೆ ಮಾತ್ರದಿಂದಲೇ ಬದುಕಿನ ಅಂಧಕಾರ ದೂರವಾಗುತ್ತದೆ. ಭಾವಪೂರ್ಣ ತನ್ಮಯತೆಯಿಂದ ಪ್ರಾರ್ಥಿಸಿದರೆ ನಮ್ಮ ಪ್ರಾರ್ಥನೆ ಫಲಿಸುತ್ತದೆ ” ಎಂದವರು ಕುಮಟಾ ಮಂಡಲ ಉಪ್ಪಿನಪಟ್ಟಣ ವಲಯದ ಉಮಾ ವಿಘ್ನೇಶ್ವರ ಕತಗಾಲ್
ಹೊನ್ನಾವರ ಸಮೀಪದ ಕಡ್ಲೆ ಗಜಾನನ ರಾಮ ಹೆಗಡೆ ಹಾಗೂ ಭಾಗೀರಥಿ ಗಜಾನನ ಹೆಗಡೆ ದಂಪತಿಗಳ ಪುತ್ರಿಯಾದ ಉಮಾ ಎರಡು ಗೋವುಗಳ ಗುರಿ ತಲುಪಿದ ಮಾಸದಮಾತೆಯಾಗಿದ್ದಾರೆ.
” ಈಶ್ವರಿ ಅಕ್ಕನ ಮಾತುಗಳಿಂದ ಮಾತೃತ್ವಮ್ ಬಗ್ಗೆ ಆಸಕ್ತಿ ಮೂಡಿತು. ಗುರುಕೃಪೆಯಿಂದ ಗುರಿ ತಲುಪಲು ಸಾಧ್ಯ ಎಂಬ ಭರವಸೆಯಿಂದ ಮಾಸದಮಾತೆಯಾದೆ. ಅನೇಕ ಮಂದಿ ನನ್ನ ಗೋಸೇವೆಗೆ ಸಹಕಾರ ನೀಡಿದ್ದಾರೆ. ದೇಶಿಯ ಗೋವುಗಳ ಮಹತ್ವ ಇಂದು ಸಮಾಜ ಅರಿತುಕೊಳ್ಳುತ್ತಿದೆ ” ಎನ್ನುವ ಉಮಾ ಅವರು ಕೆಲವು ವರ್ಷಗಳಿಂದ ಶ್ರೀಮಠದ ಸೇವೆಯಲ್ಲಿ ತೊಡಗಿಸಿಕೊಂಡವರು.
ವಲಯ ಮಾತೃ ಪ್ರಧಾನೆಯಾಗಿ, ಮುಷ್ಟಿಭಿಕ್ಷಾ ಪ್ರಧಾನೆಯಾಗಿಯೂ ಸೇವೆ ಸಲ್ಲಿಸಿದ ಉಮಾ ಕತಗಾಲ್ ಪ್ರಸ್ತುತ ಉಪ್ಪಿನಪಟ್ಟಣ ವಲಯ ಉಪಾಧ್ಯಕ್ಷೆಯಾಗಿದ್ದಾರೆ. ಪತಿ, ಇಬ್ಬರು ಹೆಣ್ಣುಮಕ್ಕಳು ಹಾಗೂ ಅತ್ತೆ ಮಾವಂದಿರ ಪ್ರೋತ್ಸಾಹದಿಂದಲೇ ಶ್ರೀಮಠದ ಸೇವೆಯಲ್ಲಿ ತೊಡಗಿಸಿಕೊಂಡವರು ಇವರು.
” ಮೊದಲೆಲ್ಲ ಪ್ರತಿವರ್ಷವೂ ಅನಾರೋಗ್ಯ ಬಂದು ಆಸ್ಪತ್ರೆ ವಾಸ ಅನುಭವಿಸಬೇಕಾಗಿ ಬರುತ್ತಿತ್ತು. ಆದರೆ ಶ್ರೀಮಠದ ಸೇವೆಯಲ್ಲಿ ತೊಡಗಿಸಿಕೊಂಡ ಮೇಲೆ ಒಂದು ಬಾರಿಯು ಆಸ್ಪತ್ರೆವಾಸ ಮಾಡುವ ಹಾಗಾಗಲಿಲ್ಲ. ಇದು ಗುರು ಕೃಪೆ. ಶ್ರೀರಾಮದೇವರ ಅನುಗ್ರಹ ” ಎನ್ನುವ ಉಮಾ ಅವರಿಗೆ ಒಂದು ಬಾರಿ ಕಣ್ಣುಗಳಿಗೆ ಸೋಂಕಾಗಿತ್ತು. ಎರಡು ಕಣ್ಣುಗಳನ್ನು ತೆರೆಯಲಾರದ ಸ್ಥಿತಿಯಲ್ಲಿರುವಾಗ ಮನಸ್ಸಿನಲ್ಲೇ ಶರಣಾಗಿದ್ದು ಶ್ರೀಕರಾರ್ಚಿತ ಶ್ರೀರಾಮ ದೇವರಿಗೆ ಹಾಗೂ ಶ್ರೀಗುರು ಚರಣಗಳಿಗೆ. ಶ್ರೀಗುರುಗಳ ಮಂತ್ರಾಕ್ಷತೆ ಧರಿಸಿ, ಶ್ರೀರಾಮ ದೇವರ ಪ್ರಾರ್ಥನೆ ಮಾಡಿದ ಉಮಾ ಅವರಿಗೆ ಮಾರನೇ ದಿನ ಬೆಳಗಾಗುವಷ್ಟರಲ್ಲಿ ದೃಷ್ಟಿ ದೋಷ ಪೂರ್ತಿ ವಾಸಿಯಾಗಿತ್ತು.
” ಈ ಘಟನೆಗಳ ಅನುಭವದಿಂದ ನನಗೆ ಶ್ರೀಮಠದ ಸೇವೆಯಲ್ಲಿ ಮತ್ತಷ್ಟು ಶ್ರದ್ಧೆ ಭಕ್ತಿ ಹೆಚ್ಚಾಯಿತು. ಬದುಕಿನ ಸಂಕಷ್ಟಮಯ ಸನ್ನಿವೇಶಗಳಲ್ಲಿ ಭಕ್ತಿಯಿಂದ ಪ್ರಾರ್ಥಿಸಿದರೆ ಶ್ರೀರಾಮ ದೇವರ, ಶ್ರೀಗುರುಗಳ ಅನುಗ್ರಹ ಬದುಕಿಗೆ ಶ್ರೀರಕ್ಷೆಯಾಗುತ್ತದೆ ಎನ್ನುವುದರಲ್ಲಿ ಅನುಮಾನವಿಲ್ಲ ” ಎನ್ನುವ ಉಮಾ ಅವರ ಇಬ್ಬರು ಹೆಣ್ಣುಮಕ್ಕಳಿಗೂ ಶ್ರೀಮಠದ ಸೇವೆಯಲ್ಲಿ ಶ್ರದ್ಧಾ ಭಾವವಿದೆ.
ಶ್ರೀಮಠದ ಕಾರ್ಯಕ್ರಮಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವ ಅವಕಾಶಗಳನ್ನು ಕುಟುಂಬ ಸಮೇತರಾಗಿ ಸದುಪಯೋಗ ಪಡಿಸುವ ಉಮಾ ಕತಗಾಲ್ ಅವರಿಗೆ ಗೋಸೇವೆಯನ್ನು ಇನ್ನಷ್ಟು ಮುಂದುವರಿಸುವ ಹಂಬಲವಿದೆ.
ಪ್ರಸನ್ನಾ ವಿ. ಚೆಕ್ಕೆಮನೆ