ಹವಿ – ಸವಿ ತೋರಣ ೧೩ ಅಟ್ಟುಂಬೊಳದ ಸುದ್ದಿ

ಲೇಖನ

ಅಟ್ಟುಂಬೊಳ ಹೇಳಿದರೆ ಅಡಿಗೊಳ ಹೇಳಿ ನಮಗೆಲ್ಲ ಗೊಂತಿದ್ದು. ಅಟ್ಟು ( ಅಡಿಗೆ ಮಾಡಿ ) ಉಂಬ ಒಳ ಹೇಳುವ ಕಾರಣಕ್ಕೆ ಆ ಉಗ್ರಾಣಕ್ಕೆ ಅಟ್ಟುಂಬೊಳ ಹೇಳುವ ಹೆಸರು ಬಂದದು ಹೇಳ್ತವು. ಇಂದು ನಾವು ಬದಲಾವಣೆ ಆವ್ತಾ ಇಪ್ಪ ಅಟ್ಟುಂಬೊಳದ ಸುದ್ದಿ ಮಾತಾಡುವ°.

ಊಟ ಬಲ್ಲವನಿಗೆ ರೋಗ ಇಲ್ಲ ‘ ಹೇಳುವ ಗಾದೆಮಾತಿನ ನಾವೆಲ್ಲ ಕೇಳಿದ್ದು. ನಮ್ಮೆಲ್ಲರ ಆರೋಗ್ಯದ ಗುಟ್ಟು ಈ ಅಟ್ಟುಂಬೊಳವೇ ಇಪ್ಪದು. ಮೊದಲಿಂಗೆ ಕೂಡು ಕುಟುಂಬ ಇಪ್ಪಗ ಹಳೇ ಕಾಲದ ಮನೆಗಳಲ್ಲಿ ಸೌದಿ ಒಲೆಗಳಲ್ಲಿ ಮಣ್ಣಳಗೆಲಿ ಅಡಿಗೆ ಮಾಡುವ ಒಂದು ಕಾಲ ಇದ್ದತ್ತು. ಉದೆಕಾಲಕ್ಕೆ ನಾಲ್ಕು ಗಂಟೆಗೆ ಎದ್ದು ಒಲೆಗೆ ಕಿಚ್ಚು ಹಾಕಿದರೆ ಅದು ನಂದುಗ ಇರುಳು ಹನ್ನೊಂದು ಗಂಟೆ ಅಪ್ಪದೂ ಇದ್ದು. ಸರಳವಾದ ಸಾತ್ವಿಕ ಆಹಾರಂಗಳ ಪ್ರೀತಿಲಿ ಶ್ರದ್ದೆಲಿ ಮಾಡಿ ಬಳುಸುವ ಹೆಮ್ಮಕ್ಕಳೇ ಪ್ರತಿ ಮನೇಲೂ ಇದ್ದದು.
ಮನೆಯ ಎಲ್ಲಾ ಹೆಮ್ಮಕ್ಕಳೂ ಒಟ್ಟಿಂಗೆ ಸೇರಿಂಡು ಪಟ್ಟಾಂಗ ಹೊಡಕ್ಕೊಂಡು ಅಡಿಗೆ ಮಾಡುವ ಚಂದ ನಮ್ಮ ಮನೆಗಳಲ್ಲಿತ್ತು.

ಒಬ್ಬ° ದೋಸೆ ಎರವದು, ಇನ್ನೊಬ್ಬ° ಕಾಯಿ ಕೆರವದು, ಮತ್ತೊಬ್ಬ° ಬೆಂದಿಗೆ ಕೊರವದು… ಹೀಂಗೆ ಒಟ್ಟಿಂಗೆ ಸೇರಿ ಮಾತಾಡಿಂಡು ಕೆಲಸ ಮಾಡುವ ಸಂಭ್ರಮ ಸಿಕ್ಕಿಕೊಂಡಿದ್ದತ್ತು. ಸರಳ, ಸಾತ್ವಿಕ ಆಹಾರಂಗಳ ಪ್ರೀತಿ ವಾತ್ಸಲ್ಯಲ್ಲಿ ಮಾಡಿ ಬಳ್ಸುವ ಅಮ್ಮಂದ್ರು ನಮ್ಮ ಸಂಸ್ಕೃತಿಯ ಜೀವಂತವಾಗಿ ಮಡುಗಿದ್ದು.

ನಮ್ಮ ಸಂಸ್ಕೃತಿಲಿ ಅನ್ನದಾನಕ್ಕೆ, ಅತಿಥಿ ಸತ್ಕಾರಕ್ಕೆ ತುಂಬಾ ಮಹತ್ವ ಇದ್ದು. ಮನೆಗೆ ಆರೇ ಬರಲಿ, ಆಸರಿಂಗೆ ಕೊಡದ್ದೆ ಬಿಡುವ ಸಂಪ್ರದಾಯ ನಮ್ಮಲ್ಲಿಲ್ಲೆ. ಆರು ಬಂದರೂ ಪ್ರೀತಿ ವಿಶ್ವಾಸದ ಉಪಚಾರ ನಮ್ಮ ಮನೆಗಳಲ್ಲಿ ಸಿಕ್ಕಿಕೊಂಡಿತ್ತು. ಬಂದವಕ್ಕೆ ಮೊದಲು ಕೊಡುದೇ ಬೆಲ್ಲ, ನೀರು. ಅದರ ನಂತರವೇ ಬೇರೆ ಆಸರಿಂಗೆ ಕೊಡುವ ಕ್ರಮ.

ಮೊದಲೆಲ್ಲ ಮನೆಗೆ ಅಂಬಗಂಬಗ ನೆಂಟ್ರುಗೊ ಬಂದುಕೊಂಡಿತ್ತಿದ್ದವು. ಹಾಂಗೆ ಬಂದ ನೆಂಟ್ರುಗೊಕ್ಕೆ ಮನೆಲಿ ಅಕ್ಕರೆಯ ಉಪಚಾರ ಸಿಕ್ಕಿಕೊಂಡಿದ್ದತ್ತು. ಮನೆಯವಕ್ಕೂ ಉಪಚಾರ ಮಾಡ್ಲೆ ತುಂಬ ಪ್ರೀತಿ. ಸುಟ್ಟವು, ಚಕ್ಕುಲಿ, ಗೆಣಸಲೆ, ಕೊಟ್ಟಿಗೆ, ಸೇಮಗೆ ಹೇಳಿ ಹೆಮ್ಮಕ್ಕಳ ಅಡಿಗೆ ಕಾರ್ಖಾನೆಗೆ ರಜವೂ ಬಿಡುವಿಲ್ಲೆ.

ನೆಟ್ಟಿಕಾಯಿ ತಪ್ಪಲೆ ಈಗಾಣ ಹಾಂಗೆ ತೊಟ್ಟೆ ಹಿಡ್ಕೊಂಡು ಸಂತೆಗೆ ಹೋಯೆಕಾದ ಅಗತ್ಯವೇ ಇಲ್ಲೆ. ಮನೆಯ ಸುತ್ತಮುತ್ತವೇ ಬೇಕಾದಷ್ಟು ನೆಟ್ಟಿಕಾಯಿ ಸಿಕ್ಕುಗು. ತೊಂಡೆ ಚಪ್ಪರ, ಬಸಳೆ ಚಪ್ಪರ, ಕುಂಬಳಕಾಯಿ, ಕೆಂಬುಡೆಕಾಯಿ ಬಳ್ಳಿ ಹೆಚ್ಚಿನ ಮನೆಲೂ ಇಕ್ಕು. ಹಲಸಿನಕಾಯಿ, ಮಾವಿನಕಾಯಿ ಸಮಯಲ್ಲಿ ಅದೂದೆ ಇಕ್ಕು. ತೆಂಗಿನಕಾಯಿ, ತೆಂಗಿನೆಣ್ಣೆಯೂ ಮನೇಲೇ ಇಕ್ಕು.
ಬಗೆ ಬಗೆಯ ತಂಬುಳಿಗೊ, ತಾಳು, ಕೊದಿಲು, ಮೇಲಾರ, ಬೋಳು ಬೆಂದಿ, ಜೀರಿಗೆ ಬೆಂದಿ, ಮೆಣಸ್ಕಾಯಿ ಹೇಳಿ ನಮ್ಮ ಹೆಮ್ಮಕ್ಕಳ ಅಡಿಗೆಯ ವೈವಿದ್ಯತೆಗೋ ಬಂದ ಅತಿಥಿಯ ಮನಸ್ಸಿಂಗೆ ಕೊಶಿ ಕೊಡುಗು. ಕುಡಿವಲೆ ಕೊತ್ತಂಬರಿ ಕಷಾಯ, ಜೀರಿಗೆ ಕಷಾಯವೇ ಹೆಚ್ಚು ಉಪಯೋಗ. ಆದರೂ ಚಾಯ, ಕಾಫಿಯೂ ಇಕ್ಕು. ಅದಕ್ಕೆ ಹಾಕುದು ಮನೆಯ ಹಟ್ಟಿಯ ಶುದ್ಧ ದೇಶೀಯ ದನದ ಹಾಲು.

ಇನ್ನು ಹಬ್ಬ, ಪೂಜೆ ಎಲ್ಲಾ ಇದ್ದರೂ ಈಗಾಣ ಹಾಂಗೆ ಅಡಿಗೆ ಮಾವ° ಬಪ್ಪಲಿಲ್ಲೆ. ಮನೆ ಹೆಮ್ಮಕ್ಕಳೇ ಸೊಂಟಕ್ಕೆ ಸೆರಗು ಕುತ್ತಿ ಒಲೆ ಬುಡಲ್ಲಿ ನಿಂಗು. ನೆರೆಕರೆ ಹೆಮ್ಮಕ್ಕಳೂದೆ ಬಂದು ಮನೆ ಹೆಮ್ಮಕ್ಕಳೊಟ್ಟಿಂಗೆ ಕೈ ಸೇರ್ಸುಗು. ಎಲ್ಲರು ಸೇರಿ ಮಾತಾಡಿಂಡು, ಕುಶಾಲು ಮಾಡಿಂಡು ಪರಸ್ಪರ ಪ್ರೀತಿ ವಿಶ್ವಾಸಲ್ಲಿ ಮಾಡುವ ಅಡಿಗೆ ಉಂಬಲೂ ಹೆಚ್ಚು ರುಚಿ. ಕೆಳ ಕೂದು ಬಾಳೆಲೆಲಿ ಉಂಡರೆ ಹೊಟ್ಟೆಯ ಹಶು ತಣಿವ ಒಟ್ಟಿಂಗೆ ಮನಸ್ಸುದೆ ತಂಪಾವ್ತು. ಆರೋಗ್ಯಕರ ಊಟ ನಮ್ಮ ಆರೋಗ್ಯಕ್ಕೂ ಹಿತ ಆಗಿಂಡಿತ್ತು.

ಇಂದು ಕಾಲಚಕ್ರ ತಿರುಗಿ ನಾವು ತುಂಬಾ ಮುಂದೆ ಬೈಂದು. ಮೊದ್ಲಾಣ ಕೂಡು ಕುಟುಂಬಂಗೊ ಈಗ ವಿಭಜನೆ ಆಯಿದು. ಮನೆಲಿ ಗಂಡ ಹೆಂಡತಿ ಇಬ್ರೂ ಉದ್ಯೋಗಿಗೊ
ಆಯಿದವು. ಸೌದಿ ಒಲೆ ಮಾಯ ಆಗಿ ಅಲ್ಲಿ ಈಗಾಣ ಹೊಸ ನಮೂನೆಯ ಗೇಸಿನ ಒಲೆ, ಕರೆಂಟಿನ ಒಲೆ ಬಂದು ಅಡಿಗೆ ಕೆಲಸ ತುಂಬಾ ಸುಲಭ ಆಯಿದು. ಮಣ್ಣಳಗೆ, ಕಬ್ಬಿಣದ ಕಾವಲಿಗೆ ಎಲ್ಲ ಹೋಗಿ ಹೊಸ ಕ್ರಮದ ಪಾತ್ರಂಗೊ ಅಡಿಗೊಳ ತುಂಬಿದ್ದು. ಎರಡು ಜನವೂ ಕೆಲಸಕ್ಕೆ ಹೋಪ ಮನೆಗಳಲ್ಲಿ ವಾರದ ರಜೆಯ ದಿನಂಗಳಲ್ಲಿ ಅಟ್ಟುಂಬೊಳಕ್ಕೂ ರಜೆ ಸಿಕ್ಕುತ್ತು. ಮನೆಗೆ ನೆಂಟ್ರುಗೊ ಬಪ್ಪದು ಅಪರೂಪ ಆಯಿದು. ಹೊಸ ತಲೆಮಾರಿನವಕ್ಕೆ ಮನೆ ಅಡಿಗೆಂದಲೂ ಹೆಚ್ಚು ಪ್ರೀತಿಯಿಪ್ಪದು ಹೆರ ಸಿಕ್ಕುವ ಹೊಸ ಕ್ರಮದ ತಿಂಡಿ ತಿನಸುಗಳತ್ರೆ ಹೇಳಿ ಆವ್ತಾಯಿದ್ದು.

ಯೇವದು ನಮ್ಮ ಆರೋಗ್ಯಕ್ಕೆ ಒಳ್ಳೆದು, ಯಾವದು ತಿಂದರೆ ನಮ್ಮ ಆರೋಗ್ಯ ಸ್ಥಿರವಾಗಿರ್ತು ಹೇಳುವುದರ ಬಗ್ಗೆ ಆಲೋಚನೆ ಮಾಡದ್ದೆ, ಕೃತಕ ಬಣ್ಣ, ರುಚಿಯ ಪಾನೀಯಂಗೊ, ಖಾದ್ಯಂಗಳನ್ನೇ ಹೆಚ್ಚಾಗಿ ತಿಂಬಲೆ ಇಷ್ಟ ಪಡ್ತವು. ಸಹಪಂಕ್ತಿ ಭೋಜನ ಹೇಳಿ ಕೆಳ ಕೂದು ಉಂಬ ಕ್ರಮ ಬಿಟ್ಟೇ ಹೋಯಿತು. ತಟ್ಟೆ ಕೈಲಿ ಹಿಡ್ಕೊಂಡು ತಿಂಬದೇ ಈಗಾಣ ಪೀಳಿಗೆಯ ಹೆಚ್ಚಿನ ಮಕ್ಕಳ ಅಭ್ಯಾಸ. ಅದರಿಂದಾಗಿ ಆರೋಗ್ಯ ಹಾಳಾವ್ತು ಹೇಳುದು ಹೆಚ್ಚಿನವರ ಗಮನಕ್ಕೆ ಹೋವ್ತಿಲ್ಲೆ. ಇದರಿಂದಾಗಿ ಆರೋಗ್ಯ ತನ್ನಷ್ಟಕ್ಕೆ ಕೆಡುತ್ತು.

ಹೆರಾಣ ತಿಂಡಿಗಳನ್ನೇ ಹೆಚ್ಚು ತಿಂಬಲೆ ಇಷ್ಟ ಪಡುವವು ಅದರ ಕಮ್ಮಿ ಮಾಡಿ ಮನೆ ಊಟ, ತಿಂಡಿಗಳ ಉಂಬ ಒಳ್ಳೆಯ ಅಭ್ಯಾಸಂಗಳ ಪುನಃ ತಾರದ್ದೆ ಇದ್ದರೆ ನಮ್ಮ ಸಂಸ್ಕೃತಿಯ ಸಾತ್ವಿಕ ಆಹಾರದ ಕ್ರಮಂಗೊ ನಿಧಾನವಾಗಿ ಮರೆಯಾಗಿ ಹೋಕು. ನಮ್ಮ ಶ್ರೀಗುರುಗೊ ಹೇಳುವ ಹಾಂಗೆ ಸಾತ್ವಿಕ ಆಹಾರ ಕ್ರಮವನ್ನೇ ನಾವು ರೂಡಿಸಿಕೊಂಬ°. ನಮ್ಮ ಅಟ್ಟುಂಬೊಳದ ಸಾಂಪ್ರದಾಯಿಕ ಅಡಿಗೆ ಕ್ರಮಂಗಳ ಮತ್ತೆ ನೆಂಪು ಮಾಡುವ°. ನಮ್ಮ ಊಟೋಪಚಾರಂಗಳಲ್ಲಿ ಒಂದು ಶಿಸ್ತಿನ ಕ್ರಮ ತಂದರೆ ಒಳ್ಳೆಯ ಆರೋಗ್ಯ ನಮ್ಮ ಕೈಲೇ ಇಕ್ಕು.

ಪ್ರಸನ್ನಾ ವಿ. ಚೆಕ್ಕೆಮನೆ

Leave a Reply

Your email address will not be published. Required fields are marked *