ಹೀಗನಿಸಿದ್ದು ನಿಜ. ಕೇಂದ್ರೀಯ ವಿದ್ಯಾಲಯಗಳಲ್ಲಿ ಸಂಸ್ಕೃತ ಮತ್ತು ಹಿಂದಿಯಲ್ಲಿ ಪ್ರಾರ್ಥನೆ ಮಾಡಬಾರದು. ಅದು ವಿದ್ಯಾರ್ಥಿ ಹಾಗು ಪಾಲಕರ ಧಾರ್ಮಿಕ ನಂಬಿಕೆಗೆ ಧಕ್ಕೆ ಬರುತ್ತದೆ ಎನ್ನುತ್ತಾ ಯಾರೋ ಒಬ್ಬ ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದಾನೆ. ಇದನ್ನು ವಿಚಾರಿಸಬೇಕೆಂದು ಕೋರ್ಟ್ ಹೇಳಿದೆ. ಅದಿರಲಿ, ನನಗನಿಸಿದ್ದು ಕೋರ್ಟ್ ನ ಬಗ್ಗೆ ಅಲ್ಲ. ಅರ್ಜಿದಾರನ ಕುರಿತು. ಭಾರತೀಯತೆಯ ಕುರಿತು, ಅದೂ ಭಾರತದಲ್ಲಿ ಇದು ಬೇಕು, ಅದು ಬೇಡ ಎನ್ನುವ ಮಟ್ಟಕ್ಕೆ ಮಾತನಾಡುತ್ತಾರೆ; ವಿರೋಧಿಸುತ್ತಾರೆ; ಪ್ರತಿಭಟಿಸುತ್ತಾರೆ. ನಿಮಗೆ ಬೇಕಾದಂತೆ ಭಾರತವನ್ನು ಬದಲಿಸಲು ಭಾರತ ನಿಮ್ಮ ಸ್ವಂತದ್ದಾ?
ಭಾರತಕ್ಕೆ ಅದರದ್ದೇ ಆದ ಸಂಸ್ಕೃತಿ ಇದೆ; ಪರಂಪರೆ ಇದೆ. ಭಾರತಕ್ಕೆ ಮಾತ್ರವಲ್ಲ ಎಲ್ಲ ರಾಷ್ಟ್ರಗಳಿಗೂ ಅಂತಹ ಪರಂಪರೆ ಇದ್ದೇ ಇದೆ. ಅದನ್ನು ಬಿಟ್ಟು ಅವರು ಇನ್ನೊಂದನ್ನು ಆಮದು ಮಾಡಿಕೊಳ್ಳರು. ಹಾಗೆಯೇ ಭಾರತವೂ ಕೂಡ. ಇಲ್ಲಿನ ಭಾಷೆ ಸಂಸ್ಕೃತ. ಅದಕ್ಕೆ ಸಾಕ್ಷಿ ಭಾರತದ ವಿವಿಧ ಪ್ರಾದೇಶಿಕ ಭಾಷೆ. ಭಾರತದಲ್ಲಿ ಹದಿನೈದಕ್ಕೂ ಅಧಿಕ ಭಾಷೆಗಳಲ್ಲಿ ಸಂಸ್ಕೃತಪದಗಳ ಬಳಕೆ. ಹಾಗಾಗಿ ಸಂಸ್ಕೃತ ಭಾರತದ ಭಾಷೆ. ಈ ರಾಷ್ಟ್ರದ ಹೆಸರೇ ಭಾರತ. ಅದೂ ಅಪ್ಪಟ ಸಂಸ್ಕೃತ. ಭಾರತದ ಊರುಗಳಲ್ಲಿ ಸಂಸ್ಕೃತಪದವೇ ಹೆಚ್ಚು. ಬುದ್ಧಸಾರದ ಅಶೋಕಸ್ತಂಭದಲ್ಲಿರುವ ಘೋಷವಾಕ್ಯ *ಸತ್ಯಮೇವ ಜಯತೇ*. ಇದೂ ಸಂಸ್ಕೃತವೇ. ನ್ಯಾಯಲಯದ ಧ್ಯೇಯಘೋಷವೂ ಅದೇ ಸಂಸ್ಕೃತ. ಯಾಕೆಂದರೆ ಇದು ಸಂಸ್ಕೃತ ನಾಡು. ಹಾಗಾಗಿ ಎಲ್ಲಿಯೂ ಸಂಸ್ಕೃತವೇ ತುಂಬಿದೆ.
ಸಂಸ್ಕೃತವೆಂದಷ್ಟೇ ಅಲ್ಲ. ಆಚರಣೆ, ಜೀವನ ಎಲ್ಲವೂ ಭಾರತೀಯರದ್ದೇ. ಅದನ್ನು ಬದಲಿಸಿ ಎನ್ನಲು ಯಾರಿಗೂ ಹಕ್ಕಿಲ್ಲ. ಅವರು ಯಾರಾದರೂ ಸರಿ. ಭಾರತಕ್ಕೆ ಬಂದಮೇಲೆ ಭಾರತವನ್ನು ಒಪ್ಪಬೇಕು. ಭಾರತೀಯರಿಗೆ ನೋವಾಗದಂತೆ ಬದುಕಬೇಕು. ಅದು ಬಿಟ್ಟು ಶ್ಲೋಕ ಹೇಳುವುದರಿಂದ ಧಾರ್ಮಿಕ ನಂಬುಗೆಗೆ ತೊಂದರೆ ಎಂದರೆ ಅದಕ್ಕೆ ಯಾರೇನು ಮಾಡುವುದು! ಅವರಿಗೆ ಅನುಕೂಲವಾಗುವ ಜಾಗದಲ್ಲಿ ಇರಬೇಕು. ಇಲ್ಲಿವೇ ಹೊಂದಿಕೊಳ್ಳಬೇಕು. ಅದು ಬಿಟ್ಟು ಬದಲಾಯಿಸಬೇಕು ಎನ್ನುವುದು ಸಹಿಸಲು ಅಸಾಧ್ಯದ ಮಾತು.
ಭಾರತವನ್ನು ಅಂದು ಆಕ್ರಮಣಗಳಿಂದ ನಾಶಮಾಡಲು ಪ್ರಯತ್ನಿಸಿದರು. ಇಂದು ಬೌದ್ಧಿಕವಾಗಿ ಆ ಪ್ರಯತ್ನವನ್ನು ಆರಂಭಿಸಿದ್ದಾರೆ. ಕಾನೂನಿನ ಮೂಲಕ ಅಂತಹ ಕಾರ್ಯಕ್ಕೆ ಕೈಹಾಕಿದ್ದಾರೆ. ದಂಡಿಸುವುದರಿಂದ ಆಗುವ ಕಾರ್ಯವಲ್ಲ ಎಂದು ಅವರೂ ಅಂದುಕೊಂಡಿದ್ದಾರೆ. ಯಾಕೆಂದರೆ ಭಾರತದ ಸತ್ತ್ವವಿರುವುದು ಹೊರಗಲ್ಲ, ಒಳಗೆ. ಹಾಗಾಗಿ ನಿಷೇಧಗಳ ಮೂಲಕ ಅಂತಹ ಪ್ರಯತ್ನವನ್ನು ಮಾಡುತ್ತಿದ್ದಾರೆ.
ಭಾರತೀಯರೇನು ಅಂಥವರಿಗೆ ಮಾರಾಟವಾದವರಾ? ಇಲ್ಲಿಯ ತನವನ್ನು ಇಲ್ಲಿನವರಿಗೇ ಉಳಿಸಿಕೊಳ್ಳಲು ಅವಕಾಶವಿಲ್ಲವಾ? ಭಾರತೀಯರೇನು ಯಾರ ಮೇಲಾದರೂ ಒತ್ತಡ ಹೇರಿದ್ದಾರಾ ನಮ್ಮ ತನವನ್ನೇ ರೂಢಿಸಿಕೊಳ್ಳಬೇಕೆಂದು? *ಸ್ವಧರ್ಮೇ ನಿಧನಂ ಶ್ರೇಯಃ* ಎನ್ನುವ ನಡೆ ನಮ್ಮದು. ಅಂಥದ್ದರಲ್ಲಿ ಇನ್ನೊಬ್ಬರ ಧರ್ಮಕ್ಕೆ ಧಕ್ಕೆ ತರುತ್ತಾರೆ.
ಈ ವಿಷಯ ಹೇಳಲು ಕಾರಣ ಇಂದು ಕೇಂದ್ರದ ವಿದ್ಯಾಯಲಯದ ನಡೆಯನ್ನು ಪ್ರಶ್ನಿಸಿ ಅರ್ಜಿಸಲ್ಲಿಕೆಯಾಗಿದೆ. ಇದು ಅಸ್ತುವಾದರೆ ಎಂತಹ ಅರ್ಜಿಗಳು ಎಷ್ಟು ಬರಬಹುದು? ಅರ್ಜಿಗಳಲ್ಲಿ ಏನೇನು ಇರಬಹುದು? ಎನ್ನುವುದು ಇರುವ ಪ್ರಶ್ನೆ. ಬಂದವರೆಲ್ಲ ಹೀಗೆ ತರತರದ ಬೇಡಿಕೆಯನ್ನು ಪೂರ್ಣಗೊಳಿಸಲು ಅರ್ಜಿಸಲ್ಲಿಸಿ ಭಾರತವನ್ನು ಏನು ಮಾಡಿಯಾರು? ಭಾರತದವರನ್ನೇ ಶಾಸನ ಮಾಡುವ ಅವರಿಗೆ ಭಾರತವೇನು ಸ್ವಂತ ಆಸ್ತಿಯಾ?
ಭಾರತೀಯರಿಗೂ ಈ ಕಲ್ಪನೆ ಬೇಕು. ಇಷ್ಟು ವರ್ಷ ಹೇಗೋ ಕಳೆದದ್ದಾಗಿದೆ. ಇನ್ನು ಕಳೆಯಬೇಕಾದುದಿದೆ. ಇಂತಹ ಘಟನೆಗಳ ವಿರುದ್ಧ ದನಿಯೇರಿಸದ್ದರೆ ನಮ್ಮ ತಲೆಮಾರಿಗೆ ನಾವೇ ಕೊಡಲಿಯಾಗಬೇಕಾಗುತ್ತದೆ. ಭಾರತದ ಯಾವ ಮೂಲೆಯಲ್ಲಿ ಇಂತಹ ಘಟನೆ ನಡೆದರೂ ನಮ್ಮದಾದ ರೀತಿಯಲ್ಲಿ ವಿರೋಧಿಸಬೇಕು. ನಮ್ಮದಲ್ಲವೆಂದು ಕೈಕಟ್ಟಿ ಕುಳಿತರೆ, ಸಾಗರದ ತೆರೆಯಂತೆ; ಹತ್ತಿರ ಬರುವುದರೊಳಗೇ ವ್ಯವಸ್ಥೆ ಮಾಡಬೇಕು. ಬಂದ ಮೇಲೆಂದರೆ ಆಗದು.
ಉತ್ತಿಷ್ಠತ | ಮಾ ಸ್ವಪ್ತ |