” ಸಮಾಜದ ಏಳಿಗೆಯನ್ನೇ ಗುರಿಯಾಗಿರಿಸಿಕೊಂಡು ನಮ್ಮ ಶ್ರೀಗುರುಗಳು ಕೈಗೊಂಡಿರುವ ವಿವಿಧ ಯೋಜನೆಗಳಲ್ಲಿ ಭಾಗಿಯಾಗುವುದು ಮನಸ್ಸಿಗೆ ಆನಂದದಾಯಕ ವಿಚಾರ. ಶ್ರೀಗುರು ಕರುಣೆಯ ಅಮೃತದ ಸವಿ ನಮ್ಮನ್ನು ಮತ್ತಷ್ಟು ಸೇವೆ ಮಾಡಲು ಪ್ರೇರೇಪಿಸುತ್ತದೆ ” ಎಂದವರು ಉಪ್ಪಿನಂಗಡಿ ಮಂಡಲ, ಪುತ್ತೂರು ವಲಯ ಕರ್ಮಲ ನಿವಾಸಿಗಳಾಗಿರುವ ವೇಣುಗೋಪಾಲ ಭಟ್ ಮಾಂಬಾಡಿ ಇವರ ಪತ್ನಿ ಶೈಲಜಾ.
ತೆಂಕಬೈಲು ಚಕ್ರಕೋಡಿ ತಿರುಮಲೇಶ್ವರ ಶಾಸ್ತ್ರಿ, ಸರಸ್ವತಿ ದಂಪತಿಗಳ ಪುತ್ರಿಯಾಗಿರುವ ಇವರು ಈಗಾಗಲೇ ಐದು ಗೋವುಗಳ ಪೋಷಣೆಯ ಗುರಿ ತಲುಪಿದ ಮಾಸದ ಮಾತೆಯಾಗಿದ್ದಾರೆ.
” ಶ್ರೀ ಮಠದ ಸಂಪರ್ಕ ಮೊದಲೇ ಇದ್ದರೂ ಎರಡು ದಶಕಗಳಿಂದ ನಾವು ನಿರಂತರವಾಗಿ ಸೇವೆ ಮಾಡುತ್ತಾ ಬಂದಿದ್ದೇವೆ. ನಮ್ಮವರು ಬ್ಯಾಂಕ್ ಉದ್ಯೋಗಿಯಾಗಿದ್ದವರು. ಪುತ್ತೂರಿಗೆ ಬಂದು ಕೆಲವು ವರ್ಷಗಳಾಗಿದ್ದಷ್ಟೆ. ಶ್ರೀಮಠದ ವಿವಿಧ ಯೋಜನೆಗಳಿಗೆ ಸಮರ್ಪಣೆ ಮಾಡಿದ್ದೇವೆ. ಈಗಲೂ ಮಾಡುತ್ತಿದ್ದೇವೆ. ಮಾತೃತ್ವಮ್ ಅಧ್ಯಕ್ಷೆ ಈಶ್ವರೀ ಬೇರ್ಕಡವು ಅವರ ಪ್ರೋತ್ಸಾಹದಿಂದ ಮಾಸದ ಮಾತೆಯಾದೆ. ಯಜಮಾನರ ಹಾಗೂ ಮಗನ ಸಹಕಾರದಿಂದ ಐದು ಗೋವುಗಳ ಗುರಿ ತಲುಪಿದ್ದೇನೆ. ಈಗಲೂ ಮಾತೃತ್ವಮ್ ಸೇವೆಯನ್ನು ಮುಂದುವರಿಸುತ್ತಿದ್ದೇನೆ. ಮಾತೃತ್ವಮ್ ಯೋಜನೆ ಸಮಾಜದಲ್ಲಿ ದೇಶೀಯ ಗೋವುಗಳ ಬಗ್ಗೆ ಸದ್ಭಾವನೆ ಮೂಡಿಸಿದೆ. ಮಾತೃತ್ವಮ್ ನಿಂದಾಗಿ ಜನರು ದೇಶೀ ಗೋವುಗಳ ಮಹತ್ವವನ್ನು ಅರಿತುಕೊಳ್ಳುತ್ತಿದ್ದಾರೆ ” ಎನ್ನುವ ಶೈಲಜಾ ತಾವು ಗುರಿ ತಲುಪಿದ ಮೇಲೆ ಇತರ ಮಾಸದ ಮಾತೆಯರಿಗೂ ಗುರಿ ತಲುಪಲು ಕೈಜೋಡಿಸಿದ್ದಾರೆ.
ಬಾಲ್ಯದಿಂದಲೂ ಗೋವುಗಳ ಒಡನಾಟದಲ್ಲಿ ಬೆಳೆದ ಶೈಲಜಾ ಅವರಿಗೆ ಈಗಲೂ ಗೋವುಗಳೆಂದರೆ ತುಂಬಾ ಪ್ರೀತಿ. ಆದರೆ ನಗರದ ಜೀವನದಲ್ಲಿ ಗೋವುಗಳನ್ನು ಸಾಕುವುದು ಸುಲಭವಲ್ಲವಾದುದರಿಂದ ಅವರು ಪ್ರತಿ ವರ್ಷವೂ ಕುಟುಂಬ ಸಮೇತರಾಗಿ ಗೋಸ್ವರ್ಗಕ್ಕೆ ತೆರಳಿ ಒಂದೆರಡು ದಿನ ಅಲ್ಲಿರುವ ಗೋವುಗಳ ಒಡನಾಟದಲ್ಲಿದ್ದು ಬರುತ್ತಾರೆ.
” ಶ್ರೀಗುರು ಸೇವೆ, ಗೋಸೇವೆಯಿಂದ ಬದುಕಿನಲ್ಲಿ ನೆಮ್ಮದಿ, ಶಾಂತಿ ನೆಲೆಸಿದೆ. ಸಾಫ್ಟ್ ವೇರ್ ಉದ್ಯೋಗಿಯಾಗಿರುವ ಮಗ ಅನೀಶ್ ಗೂ ಗೋವುಗಳೆಂದರೆ ತುಂಬಾ ಪ್ರೀತಿ. ಪ್ರತೀ ತಿಂಗಳು ಶ್ರೀಮಠದ ವಿವಿಧ ಯೋಜನೆಗಳಿಗೆ ಸಮರ್ಪಣೆ ಮಾಡುತ್ತಾನೆ. ಸೊಸೆ ಶ್ರೀದೇವಿಯೂ ಉದ್ಯೋಗಿಯಾಗಿದ್ದು ಮಂಗಳೂರು ನಂತೂರು ಶ್ರೀಭಾರತೀ ವಿದ್ಯಾಸಂಸ್ಥೆಯ ಇಬ್ಬರು ವಿದ್ಯಾರ್ಥಿಗಳ ಶಿಕ್ಷಣಕ್ಕೆ ನೆರವು ನೀಡುತ್ತಿದ್ದಾಳೆ. ನಮ್ಮ ಮಕ್ಕಳನ್ನು ಶ್ರೀಮಠದ ಸಂಪರ್ಕದಲ್ಲಿರುವಂತೆ ಮಾಡಬೇಕು. ನಮ್ಮ ಪರಂಪರೆ, ಸಾಂಸ್ಕೃತಿಕ ಸಂಪತ್ತುಗಳನ್ನು ಉಳಿಸಿ ಬೆಳೆಸ ಬೇಕಾದ ಮುಂದಿನ ತಲೆಮಾರು ಶ್ರೀಗುರುಗಳ ಮಾರ್ಗದರ್ಶನದಲ್ಲಿ ಮುನ್ನಡೆಯುವಂತಾದರೆ ಮಕ್ಕಳಲ್ಲಿ ಧರ್ಮಜಾಗೃತಿ ಮೂಡುತ್ತದೆ. ಇದರಿಂದಾಗಿ ಸಭ್ಯ ಸಮಾಜ ನಿರ್ಮಾಣವಾಗುತ್ತದೆ ” ಎನ್ನುವ ಶೈಲಜಾ ಮಾಂಬಾಡಿ ಅವರ ಮನೆಯವರೆಲ್ಲರೂ ಶ್ರೀಮಠದ ಸೇವೆಯಲ್ಲಿ ನಿರತರಾಗಿದ್ದಾರೆ.
ಬಿಡುವಿನ ವೇಳೆಯಲ್ಲಿ ಯೋಗ, ಭಜನೆ ಹಾಗೂ ಅಡುಗೆಗಳಲ್ಲಿ ತೊಡಗಿಸಿಕೊಳ್ಳುವ ಶೈಲಜಾ ಮಾಂಬಾಡಿಯವರ ಕುಟುಂಬದ ಶ್ರೀಮಠದ ಸೇವೆ ಎಲ್ಲರಿಗೂ ಮಾದರಿಯಾಗಿದೆ.
ಪ್ರಸನ್ನಾ ವಿ. ಚೆಕ್ಕೆಮನೆ