‘ ಗೋ ಉತ್ಪನ್ನಗಳ ಬಳಕೆಯಿಂದ ಪರಿಸರ ಸಂರಕ್ಷಣೆ ಸಾಧ್ಯ ‘ – ಕಮಲಾ ಮಂಜುನಾಥ ಹೆಗಡೆ ಕಡತೋಕ

ಮಾತೃತ್ವಮ್

 

” ಗೋಮಾತೆಯ ಒಡನಾಟ ನಮ್ಮಲ್ಲಿ ಸದಾ ಧನಾತ್ಮಕ ಅನುಭೂತಿಯನ್ನು ತುಂಬುತ್ತದೆ. ಗೋಮಾತೆಯ ಉತ್ಪನ್ನಗಳೆಲ್ಲವೂ ಮಂಗಳದಾಯಕ. ಪವಿತ್ರ ಹಾಗೂ ಪರಿಶುದ್ಧತೆಯ ಭಾವದಿಂದ ಅದನ್ನು ಬಳಸಬೇಕು. ದೇಶೀ ಗೋ ಉತ್ಪನ್ನಗಳ ನಿತ್ಯ ಉಪಯೋಗದಿಂದ ನಮ್ಮ ಪರಿಸರವೂ ಪರಿಶುದ್ಧಿಯಿಂದ ಕೂಡಿರುತ್ತದೆ. ಮಾತೃತ್ವಮ್ ಯೋಜನೆಯ ಮೂಲಕ ಶ್ರೀಗುರುಗಳು ತೋರಿದ ಗೋಮಾತೆಯ ಸೇವೆಯಲ್ಲಿ ಕೈಜೋಡಿಸುವ ಅವಕಾಶ ದೊರಕಿದ್ದು ಸುಕೃತ. ಮಾತೃತ್ವಮ್ ಯೋಜನೆಯಿಂದ ದೇಶೀಯ ಹಸುಗಳ ಮಹತ್ವವನ್ನು ಜನರು ಅರಿತು ಕೊಳ್ಳುತ್ತಿದ್ದಾರೆ ” ಎಂದವರು ಕುಮಟಾ ಮಂಡಲ, ಕೆಕ್ಕಾರು ವಲಯದ ಕಡತೋಕ ಹೆಗಡೆ ಮನೆಯ ಮಂಜುನಾಥ ಹೆಗಡೆಯವರ ಪತ್ನಿ ಕಮಲಾ ಯಂ. ಹೆಗಡೆ.

ಭಟ್ಕಳ ಸಮೀಪದ ಶಿರಾಣಿಕೇರಿಯ ಗಣಪತಿ ಮಹಾಬಲೇಶ್ವರ ಹೆಗಡೆ, ಮಂಜರಿ ದಂಪತಿಗಳ ಪುತ್ರಿಯಾದ ಕಮಲಾ ಹೆಗಡೆ ಮಾತೃತ್ವಮ್ ಯೋಜನೆಯ ಮೂಲಕ ಲಕ್ಷ ಭಾಗಿನಿಯಾದವರು.

” ಸ್ವಯಂ ಪ್ರೇರಣೆಯಿಂದ ಮಾಸದ ಮಾತೆಯಾದೆ. ಸಮಾಜದಲ್ಲಿ ದೇಶೀಯ ಹಸುಗಳ ಮಹತ್ವವನ್ನು ಪಸರಿಸಲು ಸಾಧ್ಯವಾಯಿತು ಎಂಬ ನೆಮ್ಮದಿಯಿದೆ. ಅನೇಕ ಮಂದಿ ಇದಕ್ಕೆ ಕೈಜೋಡಿಸಿದ್ದಾರೆ. ನಮ್ಮ ಮನೆಯವರ ಸಹಕಾರವು ಲಭಿಸಿತು. ಯಾವುದೇ ಕಾರ್ಯ ಆರಂಭಿಸುವಾಗಲು ಶ್ರೀಗುರು ಸ್ಮರಣೆ ಮಾಡಿಯೇ ಆರಂಭಿಸುತ್ತೇನೆ. ಇದರಿಂದಾಗಿ ನಮ್ಮ ಸಂಕಲ್ಪ ಶೀಘ್ರವಾಗಿ ನೆರವೇರುತ್ತದೆ ಎಂಬ ಭರವಸೆಯಿದೆ ” ಎನ್ನುವ ಕಮಲಾ ಯಂ. ಹೆಗಡೆಯವರ ಇಬ್ಬರು ಹೆಣ್ಣು ಮಕ್ಕಳಿಗೂ ಶ್ರೀಮಠದ ಸೇವೆಯಲ್ಲಿ ಶ್ರದ್ಧಾಭಾವವಿದೆ. ಪತಿ ಮಂಜುನಾಥ ಹೆಗಡೆ ಗುರಿಕ್ಕಾರರಾಗಿ ಸೇವೆ ಸಲ್ಲಿಸುತ್ತಿದ್ದಾರೆ.

” ಕೆಕ್ಕಾರು ಮಠದ ಸಮೀಪದಲ್ಲಿ ನಮ್ಮ ಮನೆಯಿದೆ. ಶ್ರೀಮಠದಲ್ಲಿ ವಿಶೇಷ ಕಾರ್ಯಕ್ರಮಗಳಿದ್ದರೆ ನಾವೆಲ್ಲರೂ ಹೋಗಿ ಯಥಾಸಾಧ್ಯ ಸೇವೆಗಳನ್ನು ಮಾಡುತ್ತೇವೆ. ಶ್ರೀಗುರುಗಳ ಅನುಗ್ರಹದಿಂದಲೇ ಅಪಘಾತವೊಂದರಿಂದ ಪಾರಾಗಿದ್ದು ಎಂಬ ವಿಶ್ವಾಸ ನಮ್ಮದು. ನನ್ನ ಅಮ್ಮನ ಅನಾರೋಗ್ಯದ ಸಂದರ್ಭದಲ್ಲಿ ನಾವು ಶ್ರೀಗುರುಚರಣಗಳಿಗೆ ಶರಣಾದೆವು. ಅಮ್ಮನ ಆರೋಗ್ಯ ಸುಧಾರಿಸಿತು. ಬದುಕಿನ ಏರಿಳಿತಗಳಲ್ಲಿ ಭರವಸೆ ನೀಡುವ ಶಕ್ತಿ ಶ್ರೀಗುರುಸ್ಮರಣೆಯೊಂದೇ. ಕುಂಕುಮಾರ್ಚನೆ, ಮುಷ್ಟಿ ಭಿಕ್ಷಾ ಯೋಜನೆಗಳಿಂದಾಗಿ ಮಾತೆಯರಿಗೂ ಶ್ರೀಮಠದ ಸೇವೆ ಮಾಡುವ ಅವಕಾಶ ಒದಗಿತು. ಮಾತೆಯರು ಸಂಘಟಿತರಾಗಲು ಇದುವೇ ಪ್ರೇರಣೆಯಾಯಿತು” ಎಂದು ನುಡಿಯುವ ಕಮಲಾ ಹೆಗಡೆಯವರು ತಮ್ಮ ಆತ್ಮೀಯ ಬಳಗದ ಮಾತೆಯರ ಜೊತೆ ಸೇರಿಕೊಂಡು ಶ್ರೀಸಂಸ್ಥಾನದವರ ಆಶೀರ್ವಾದ ಪಡೆದು ‘ಸುಸ್ವಾದು’ ಎಂಬ ಆಹಾರ ತಯಾರಿಕಾ ಘಟಕ (ಕ್ಯಾಟರಿಂಗ್) ಸ್ಥಾಪಿಸಿ ಜನರ ಬೇಡಿಕೆಯಂತೆ ಸರಬರಾಜು ಮಾಡುತ್ತಿದ್ದಾರೆ.

ತಮ್ಮ ವೈಯಕ್ತಿಕ ಕೆಲಸಗಳನ್ನು ಬದಿಗೊತ್ತಿ ಶ್ರೀಮಠದ ಸೇವೆ, ಗೋಮಾತೆಯ ಸೇವೆಗಳಿಗೆ ಮೊದಲ ಆದ್ಯತೆ ನೀಡುವ ಕಮಲಾ ಹೆಗಡೆಯವರಿಗೆ ಯುವ ಪೀಳಿಗೆಗೆ ದೇಶೀಯ ಗೋ ಉತ್ಪನ್ನಗಳ ಮಹತ್ವದ ಬಗ್ಗೆ ಅರಿವು ಮೂಡಿಸಬೇಕು ಎಂಬ ಅಭಿಲಾಷೆಯಿದೆ.

ಪ್ರಸನ್ನಾ ವಿ. ಚೆಕ್ಕೆಮನೆ

Leave a Reply

Your email address will not be published. Required fields are marked *