” ಶ್ರೀಮಠದ ಸೇವೆ ನಮ್ಮ ಉಸಿರಲ್ಲಿ ಬೆರೆತು ಹೋಗಿದೆ. ಶ್ರೀಮಠದ ಎಲ್ಲಾ ಸೇವೆಗಳಿಗೂ ನಾವು ಕೈಜೋಡಿಸುತ್ತೇವೆ. ಗುರುಸೇವೆ ಮತ್ತು ಗೋಸೇವೆ ನಮ್ಮ ಜೀವನದ ಒಂದು ಭಾಗವಾಗಿದೆ. ಗುರುಕೃಪೆಯೇ ನಮ್ಮ ಬದುಕಿಗೆ ಆಧಾರ. ಜೀವನದಲ್ಲಿ ಸುಖ, ಶಾಂತಿ, ನೆಮ್ಮದಿ ಎಲ್ಲವೂ ದೊರಕಿದ್ದು ಗುರು ಅನುಗ್ರಹದಿಂದ ” ಎಂದು ಹೃದಯ ತುಂಬಿ ನುಡಿದವರು ಹೊನ್ನಾವರ ಸಮೀಪದ ಕೊಂಡದಕುಳಿಯ ಪ್ರಸ್ತುತ ಮಂಗಳೂರು ಮಂಡಲ ಉಡುಪಿ ವಲಯ ನಿವಾಸಿಗಳಾಗಿರುವ ಮಂಜುನಾಥ ಹೆಗಡೆಯವರ ಪತ್ನಿ ಪ್ರೀತಿಶ್ರೀ.
ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ಸಮೀಪ ಮಂಚಿಕೇರಿಯ ಪದ್ಮನಾಭ ಭಟ್ಟ, ಪಾರ್ವತಿ ದಂಪತಿಗಳ ಪುತ್ರಿಯಾದ ಪ್ರೀತಿಶ್ರೀ ಬಾಲ್ಯದಿಂದಲೇ ಹಸುಗಳ ಒಡನಾಟದಲ್ಲಿ ಬೆಳೆದವರು. ಶ್ರೀಗುರು ಸೇವೆಯಲ್ಲಿ ಅಪಾರ ಶ್ರದ್ಧಾಭಕ್ತಿ ಹೊಂದಿದವರು. ಸ್ವಯಂ ಪ್ರೇರಣೆಯಿಂದ ಮಾಸದ ಮಾತೆಯಾದ ಇವರು ತಾವು ಒಂದು ಹಸುವಿನ ಗುರಿ ತಲುಪುವ ಜೊತೆಗೆ ತಮಗೆ ಗೋಮಾತೆಯ ಸೇವೆಯಲ್ಲಿ ಕೈಜೋಡಿಸಿದ ಮೂವರು ಮಾತೆಯರನ್ನು ಮಾತೃತ್ವಮ್ ಮೂಲಕ ಮಾಸದ ಮಾತೆಯಾಗಿ ಗೋಸೇವೆ ಮಾಡಲು ಪ್ರೇರಣೆ ನೀಡಿದ್ದಾರೆ. ಉದ್ಯಮಿಯಾಗಿರುವ ಪತಿ ಮಂಜುನಾಥ ಹೆಗಡೆಯವರ ಜೊತೆ ಸಹಕಾರ ನೀಡುವ ಇವರು ಗುರು ಸೇವೆಯಲ್ಲಿ ಧನ್ಯತೆಯನ್ನು ಕಂಡವರು.
ಗುರು ಕೃಪೆಯ ಬಗ್ಗೆ ಮಾತನಾಡುವಾಗ ಭಾವತುಂಬಿ ಮಾತನಾಡುವ ಇವರು
‘ ಶ್ರೀಗುರುಗಳು ನಮ್ಮ ನಿವಾಸಕ್ಕೆ ಬಂದಿದ್ದು ನಮ್ಮಪೂರ್ವಜನ್ಮದ ಸುಕೃತ. ಶ್ರೀಗುರು ಕೃಪೆಯೇ ನಮ್ಮ ಬದುಕಿನ ಶಕ್ತಿ. ವೈಯಕ್ತಿಕ ಸಮಸ್ಯೆಗಳಿರಬಹುದು, ಉದ್ಯಮ ಕ್ಷೇತ್ರದ ಸಮಸ್ಯೆಗಳಿರಬಹುದು, ನಮ್ಮ ಆರೋಗ್ಯ ಸಮಸ್ಯೆಯೇ ಇರಬಹುದು, ಎಲ್ಲಾ ಸಮಸ್ಯೆಗಳಿಗೂ ಪರಿಹಾರ ದೊರಕಿದ್ದು ಶ್ರೀಗುರು ಸೇವೆಯಿಂದ. ನಾವು ಮನಸ್ಸಿನಲ್ಲಿ ಪ್ರಾರ್ಥನೆ ಮಾಡಿದರೂ ಸಾಕು ಶ್ರೀಗುರುಗಳ ಅನುಗ್ರಹದಿಂದ ಆ ಸಂಕಷ್ಟ ಬಹಳ ಬೇಗನೆ ಪರಿಹಾರವಾಗುತ್ತದೆ’ ಎಂದು ಹೇಳುತ್ತಾರೆ. ಇವರ ಬದುಕಿನಲ್ಲಿ ನಡೆದ ಗುರು ಅನುಗ್ರಹದ ಪವಾಡ ಸದೃಶ ಘಟನೆಯೊಂದು ‘ ರಾಮಾನುಗ್ರಹ ‘ ಕೃತಿಯಲ್ಲಿ ಪ್ರಕಟವಾಗಿದೆ.
” ಮಕ್ಕಳಿಗೆ ಬಾಲ್ಯದಿಂದಲೇ ಜೀವನ ಮೌಲ್ಯಗಳ ಮಹತ್ವವನ್ನು ತಿಳಿಸಬೇಕು. ಸಂಸ್ಕಾರ, ಸೇವಾಭಾವ, ಶಿಸ್ತು ಇವುಗಳನ್ನು ಬಾಲ್ಯದಿಂದಲೇ ರೂಢಿಸಬೇಕು. ಗೋಮಾತೆಯ ಮಹತ್ವವನ್ನು ಮಕ್ಕಳಿಗೆ ತಿಳಿಸಬೇಕು. ಅವರನ್ನು ಶ್ರೀಮಠದ ಸೇವೆಯಲ್ಲಿ ತೊಡಗಿಸುವಂತೆ ಮಾಡಬೇಕು. ಸಮರ್ಪಣಾ ಭಾವದಿಂದ ಭಾವನೆಗಳು ಹೆಚ್ಚುತ್ತವೆ. ಶ್ರೀಗುರುಕೃಪೆಯ ಸಾನಿಧ್ಯದಲ್ಲಿ ಬೆಳೆಯುವ ಮಕ್ಕಳು ಜೀವನದಲ್ಲಿ ದಾರಿ ತಪ್ಪುವುದಿಲ್ಲ ಎಂಬ ಭರವಸೆಯಿದೆ ” ಎನ್ನುವ ಪ್ರೀತಿಶ್ರೀಯವರ ಇಬ್ಬರು ಮಕ್ಕಳೂ ಶ್ರೀಮಠದ ಸೇವೆಯಲ್ಲಿ ಶ್ರದ್ಧಾಭಾವ ತಳೆದಿದ್ದಾರೆ. ಅಮ್ಮನ ಗೋಮಾತೆಯ ಸೇವೆಗೆ ತಾವು ಕೈಜೋಡಿಸಿದ್ದಾರೆ.
ಶ್ರೀಗುರುಗಳ ಸಮಾಜಮುಖೀ ಯೋಜನೆಗಳಲ್ಲೆಲ್ಲ ಕೈಜೋಡಿಸಿರುವ ಈ ದಂಪತಿಗಳಿಗೆ ಶ್ರೀಮಠದ ಸೇವೆ, ಗುರು ಸೇವೆ, ಗೋಸೇವೆಯಲ್ಲಿ ಸದಾ ನಿರತರಾಗಿರಬೇಕೆಂಬುದೇ ಜೀವನದ ಸದಾಶಯ.
ಪ್ರಸನ್ನಾ ವಿ. ಚೆಕ್ಕೆಮನೆ