ಕೃಷಿ ತೋ ನಾಸ್ತಿ ದುರ್ಭಿಕ್ಷಂ
ಜಪತೋ ನಾಸ್ತಿ ಪಾತಕಂ ‘
ಹೇಳಿ ನಮ್ಮ ಹೆರಿಯವು ಹೇಳಿದ್ದು ಕೃಷಿಯ ಮಹತ್ವದ ಬಗ್ಗೆ. ಕೃಷಿ ಇಪ್ಪವ° ಎಂದೂ ಬಡವ° ಅಲ್ಲ. ‘ ಬೇಸಾಯಗಾರ° ಬೇಗ ಸಾಯ° ‘ ಹೇಳುವ ಗಾದೆಮಾತು ಬಪ್ಪಲೆ ಕಾರಣವೂ ಕೃಷಿಕರ ಮೇಗೆ ಇಪ್ಪ ಗೌರವಂದಲೇ.
ಮೊದ್ಲಾಣ ಕಾಲಲ್ಲಿ ಜನರ ಶ್ರೀಮಂತಿಕೆಯ ಅಳಕೊಂಡಿದ್ದದೇ ತೋಟ,ಗದ್ದೆ,ಹಟ್ಟಿಲಿಪ್ಪ ದನಗಳ ಸಂಖ್ಯೆಯ ಲೆಕ್ಕ ಹಾಕಿಕ್ಕಿ. ಆದರೆ ಇಂದು ಆ ಸ್ಥಿತಿ ಬದಲಾಯಿದು.
ನಮ್ಮ ದೇಶದ ಬೆನ್ನೆಲುಬಾಗಿದ್ದ ಕೃಷಿಯ ಬೆಳೆಗೊಕ್ಕೆ ಇಂದು ಸರಿಯಾದ ಬೆಲೆ ಸಿಕ್ಕುತ್ತಿಲ್ಲೆ. ಸಾಲ ಮಾಡಿ ಕೃಷಿ ಮಾಡಿದ ಅದೆಷ್ಟೋ ಕೃಷಿಕರು ಸರಿಯಾದ ಸಮಯಕ್ಕೆ ಪೈಸೆ ಕಟ್ಲೆಡಿಯದ್ದೆ ಬಂಙ ಬತ್ತವು. ಇದಕ್ಕೆಲ್ಲ ಕಾರಣ ಎಂತರಾಳಿ ನಾವು ಹುಡ್ಕಲೇ ಬೇಕು. ಮುಖ್ಯವಾಗಿ ಹವ್ಯಕ ಯುವಜನತೆ ಕೃಷಿಂದ ಮೋರೆ ತಿರುಗಿಸಿದ್ದೇಕೇಳಿ ಮೊದಲು ನೋಡುವ°.
ಯುವ ಜನತೆ ಕೃಷಿಂದ ದೂರ ಹೋಪಲೆ ಹೊರನೋಟಕ್ಕೆ ಒಂದೆರಡು ಕಾರಣಂಗೊ ಆದರೂ ನಿಜವಾಗಿ ಅದರ ಒಳಹೊಕ್ಕು ನೋಡಿರೆ ಸುಮಾರು ವಿಶಯಂಗೊ ಗೊಂತಾವ್ತು.
ಹೆಚ್ಚು ಬಂಙ ಬಾರದ್ದೆ ಆರ್ಥಿಕ ಸ್ಥಿತಿ ಬದಲಾಯೆಕು ಹೇಳುವ ಮನಃಸ್ಥಿತಿ ಇಂದು ಜನರ ಬದಲ್ಸಿದ್ದು. ಹಳ್ಳಿಯ ತೋಟ,ಗದ್ದೆಲಿ ರಟ್ಟೆ ಮುರಿವಷ್ಟು ಕೆಲಸ ಮಾಡಿಂಡಿದ್ದ ಜವ್ವನಿಗರು ಇಂದು ಪೇಟೆಯ ಹೊಡೆಂಗೆ ಮೋರೆ ಮಾಡಿದ್ದವು. ಅಲ್ಲಿ ಕೆಲಸ ಮಾಡಿದ ಕೂಡ್ಲೇ ಸಿಕ್ಕುವ ಸಂಬಳ, ಇಲ್ಲಿ ಕೃಷಿ ಮಾಡಿರೆ ಸಿಕ್ಕುತ್ತಿಲ್ಲೆ ಹೇಳುವ ಒಂದು ಕಾರಣವೂ ಇದ್ದು.
ಇದು ಒಂದು ರೀತಿಲಿ ಸತ್ಯವೇ ಆದರೂ ಹಳ್ಳಿಯ ಸಹಜವಾದ ಬದುಕು ಅವರಿಂದ ದೂರ ಆಗಿ ಬರೀ ಯಾಂತ್ರಿಕತೆ ತುಂಬಿದ ಹಾಂಗಾಯಿದು.
ಮದಲಿಂಗೆ ಕೂಡುಕುಟುಂಬಲ್ಲಿ ಮನೆ ಯಜಮಾನನ ಆಡಳಿತಕ್ಕೆ ಒಳಪಟ್ಟು ಬದ್ಕುಗ ಅಲ್ಲಿ ಸ್ವಾತಂತ್ರ್ಯ ಕಮ್ಮಿ ಇದ್ದದು. ಬೇಕಾದಾಂಗೆ ಹೋಪಲೆ ಬಪ್ಪಲೆ, ತಿಂಬಲೆ ಉಂಬಲೆ, ಬೇಕಾದ ವಸ್ತ್ರ ಸುತ್ತುಲೆ ಕೂಡ ಕೂಡು ಕುಟುಂಬಲ್ಲಿ ಸ್ವಾತಂತ್ರ್ಯ ಇತ್ತಿಲ್ಲೆ. ಮನೆ ಯಜಮಾನನ ಒಪ್ಪಿಗೆ ಇಲ್ಲದ್ದೆ ಯೇವ ಕೆಲಸವೂ ನಡೆಯ. ಅಷ್ಟಪ್ಪಗ ಒಳುದವರ ಮನಸ್ಸು ‘ ನಾವು ಹೇಂಗೂ ಹೀಂಗೆ ಬಂಙ ಬಂತು, ನಮ್ಮ ಮಕ್ಕೊ ಹೀಂಗೆ ಬಂಙ ಬಪ್ಪದು ಬೇಡ ಹೇಳಿ ಮಕ್ಕಳ ಮನಸ್ಸಿಂಗೆ ಕೃಷಿಯ ಬದಲು ಆರ್ಥಿಕ ಸ್ವಾತಂತ್ರ್ಯ ಸಿಕ್ಕುವ ಕೆಲಸ ಗಳಿಸೆಕು ಹೇಳುವ ಕನಸನ್ನೇ ಬಿತ್ತಿದವು.
ಅದು ತಪ್ಪಲ್ಲ, ಆದರೆ ಆ ಹೆರಿಯವು ಕೃಷಿ ಬದ್ಕು ಮುಂದುವರಿಸಿರೂ ಮೂರನೇ ತಲೆಮಾರಿಂಗಪ್ಪಗ ಕೃಷಿ ಕೆಲಸದ ಆಸಕ್ತಿ ಕಮ್ಮಿ ಆತು. ಪೇಟೆಲಿ ಹುಟ್ಟಿ ಬೆಳದ ಮಕ್ಕೊಗೆ ತೋಟದ ಮಣ್ಣು,ಗೊಬ್ಬರ ಮುಟ್ಲೆ ಹೇಸಿಗೆ ಅಪ್ಪಲೆ ಸುರುವಾತು.
ಅದೇ ರೀತಿಲಿ ಹವ್ಯಕರು ಕೃಷಿಂದ ದೂರ ಅಪ್ಪಲಿಪ್ಪ ಇನ್ನೊಂದು ದೊಡ್ಡ ಕಾರಣ ಪಿತ್ರಾರ್ಜಿತ ಆಸ್ತಿಲಿ ಬಂದ ನ್ಯಾಯಂಗೊ. ಎಷ್ಟೋ ಸರ್ತಿ ಕೃಷಿ ಭೂಮಿಲಿ ಬಂಙ ಬಂದು ದುಡುದವಂಗೆ ಸರಿಯಾದ ನ್ಯಾಯದ ಪಾಲು ಸಿಕ್ಕದ್ದಪ್ಪಗ ಮನಸ್ಸು ಮುರುದ ಎಷ್ಟೋ ಜನ ಕೃಷಿ ಭೂಮಿ ಹಡಿಲು ಹಾಕಿ ಜೀವನಕ್ಕೆ ಬೇರೆ ದಾರಿ ಹುಡ್ಕುದು ಕೂಡ ಮುಂದಿನ ಪೀಳಿಗೆ ಕೃಷಿಯ ಕಡೆಂಗೆ ಗಮನ ಕೊಡದ್ದಿಪ್ಪಲೆ ಕಾರಣ ಆಯಿದು.
ಹಾಂಗೇ ಮಾರುಕಟ್ಟೆಯ ಏರಿಳಿತಂಗೊ,ಬೆಳೆಗೆ ತೊಂದರೆ ಕೊಡುವ ರೋಗಂಗೊ, ಬೆಳೆ ಕೈಗೆ ಬಪ್ಪಲಪ್ಪಗ ಉಪದ್ರ ಕೊಡುವ ಪ್ರಾಣಿಗಳ ಹಾವಳಿ,ಹವಾಮಾನದ ವೈಪರೀತ್ಯಂದ ಬೆಳೆಯ ಕುಸಿತ, ಆಳುಗಳ ಕೊರತೆ,ದಿನಂದ ದಿನಕ್ಕೆ ಏರುವ ಅವರ ಸಂಬಳ…..ಇದೆಲ್ಲವೂ ಯುವಜನತೆಯ ಕೃಷಿಂದ ದೂರ ಹೋಪ ಹಾಂಗೆ ಮಾಡಿದ್ದು. ಅಷ್ಟು ಮಾತ್ರ ಅಲ್ಲ ಹೆಚ್ಚು ಬಂಙ ಬಂದು ದುಡುದ್ದಕ್ಕೆ ಪ್ರತಿಫಲ ಕಮ್ಮಿ ಇದ್ದರೂ ಸಮಾಜವುದೆ ಅವನ ಶ್ರಮಕ್ಕೆ ಬೆಲೆ ಕೊಡ್ತಿಲ್ಲೆ. ಅವಂಗೆ ಸಮಾಜಲ್ಲಿ ಗೌರವ ಕೊಡುದೂ ಕಮ್ಮಿ.
” ಅವ° ಮನೆಲಿಪ್ಪದಾಡ” ಹೇಳಿ ನಾವು ಹೇಳುವ ಒಂದೇ ಒಂದು ವಾಕ್ಯಲ್ಲಿ ಕೃಷಿಕರಿಂಗೆ ನಾವು ಎಷ್ಟು ಮರ್ಯಾದೆ ಕೊಡ್ತು ಹೇಳುದು ಅರ್ಥ ಆವ್ತು. ಯೇವ ಕೆಲಸವೂ ಸಿಕ್ಕದ್ದವ° ಮಾತ್ರ ಕೃಷಿ ಕೆಲಸಕ್ಕೆ ಇಳಿವದು ಹೇಳಿ ನಮ್ಮೆಲ್ಲೋರ ಮನಸ್ಸಿಂಗೂ ಅಂಟಿ ಹೋಯಿದು ಹೇಳುದೇ ಸತ್ಯ.
ಇವೆಲ್ಲಕ್ಕಿಂತಲೂ ಇನ್ನೊಂದು ದೊಡ್ಡ ಕಾರಣ ಕೃಷಿಕ ಮಾಣಿಯಂಗೊಕ್ಕೆ ಮದುವೆ ಅಪ್ಪಲೆ ಕೂಸು ಸಿಕ್ಕುತ್ತಿಲ್ಲೆ, ನಮ್ಮಲ್ಲಿ ಮಕ್ಕಳ ಸಂಖ್ಯೆಯೂ ಕಮ್ಮಿ ಕಮ್ಮಿ ಆವ್ತು. ಮನೆಗೊಂದೇ ಮಗು ‘ ಹೇಳುವ ತತ್ವವ ಅನುಸರಿಸುವಲ್ಲಿ ಹವ್ಯಕರೇ ಮುಂಚೂಣಿಲಿ ಇದ್ದವು ಹೇಳಿ ಕಾಣ್ತು. ಇದೆಲ್ಲ ನಮ್ಮ ಹವ್ಯಕರ ಧರ್ಮ, ಸಂಸ್ಕೃತಿಯ ಮೇಲೆ ದೊಡ್ಡ ಹೊಡೆತ ಬೀಳ್ತಾ ಇಪ್ಪ ಸಮಸ್ಯೆ. ಆದರೆ ಇದಕ್ಕೆ ಪರಿಹಾರ ಕಾಂಬದು ಅಷ್ಟು ಸುಲಭ ಇಲ್ಲೆ ಹೇಳುದೂದೆ ಸಾರ್ವಕಾಲಿಕ ಸತ್ಯ.
ಹಿಂದಾಣ ಕಾಲಲ್ಲಿ ನಮ್ಮ ಹೆರಿಯವು ನಿಷ್ಟೆಲಿ ಆಚರಿಸಿಕೊಂಡು ಬಂದ ಅದೆಷ್ಟೋ ಸಂಪ್ರದಾಯ, ಆಚರಣೆಗೊ ಇಂದು ಮೂಲೆಪಾಲಪ್ಪಲೆ ಕಾರಣ ಹವ್ಯಕ ಮಾಣಿಯಂಗಳ ಮದುವೆ ಸಮಸ್ಯೆ.
ಆದರೂ ಅಲ್ಲೊಂದು ಇಲ್ಲೊಂದು ದಿಕೆ ಯುವಕರು ಕೃಷಿ ಮಾಡಿ ಸಾಧನೆ ಮಾಡಿದವೂದೆ ಇದ್ದವು. ಕಮ್ಮಿ ಬಂಡವಾಳ ಹಾಕಿ ಹೆಚ್ಚು ಆದಾಯ ಗಳಿಸುವ ಯೋಜನೆಗೆ ಕೈ ಹಾಕಿ ಗೆದ್ದವುದೆ ಇಲ್ಲದ್ದಿಲ್ಲೆ.
ಕೊರೋನಾ ಹೇಳುವ ರೋಗ ಜಗತ್ತಿಂಗೆ ಬಂದ ಮತ್ತೆ ಪೇಟೆಲಿ ನಿಂಬಲೆಡಿಯದ್ದೆ ಮನೆಗೆ ಬಂದ ಯುವಜನತೆ ಈಗ ಕೃಷಿಯ ಕಡೆಂಗೂ ಗಮನ ಕೊಡ್ಲೆ ಸುರು ಮಾಡಿದ್ದವು ಹೇಳುದು ಸಣ್ಣ ಮಟ್ಟಿನ ನೆಮ್ಮದಿ. ಅವರ ಕೆಲಸದ ಎಡೇಲಿ ಸ್ವಯಂ ಕೃಷಿ ಮಾಡ್ಲೆ ಎಡಿಯದ್ರೂ ಮನೆಲಿ ಅಜ್ಜ ಅಜ್ಜಿ ಕೆಲಸ ಮಾಡುದು ಕಾಂಬಗ ಪುಳ್ಳಿಯಕ್ಕೊ ಅವರೊಟ್ಟಿಂಗೆ ಕೈ ಜೋಡ್ಸುದು ಕಾಣ್ತು. ಇದು ರಜಾ ಆಶಾದಾಯಕ ವಿಚಾರ ಆದರೂ ಎಷ್ಟರಮಟ್ಟಿಂಗೆ ಹೇಳಿ ಅಂದಾಜಾವ್ತಿಲ್ಲೆ.
ಯುವ ಜನತೆ ಮತ್ತೆ ಕೃಷಿಯ ಕಡೆಂಗೆ ಗಮನ ಕೊಡದ್ರೆ ಮುಂದಿನ ಒಂದೆರಡು ತಲೆಮಾರುಗಳ ನಂತರ ಜನರ ಕೈಲಿ ಬೇಕಾದಷ್ಟು ಪೈಸೆ ಇದ್ದರೂ ಉಂಬಲೆ ತಿಂಬಲೆ ಬೇಕಾದ ವಸ್ತುಗೊ ಇಲ್ಲದ್ದಕ್ಕು. ನಮ್ಮ ಹೆರಿಯವು ಒಳುಶಿಕೊಂಡು ಬಂದ ಅದೆಷ್ಟೋ ಆಚರಣೆಗೊ ನಮ್ಮ ಮುಂದಾಣ ತಲೆಮಾರಿಂಗೆ ಸಿಕ್ಕ.
ಭತ್ತದ ಬೇಸಾಯ ಇಲ್ಲದ್ದ ಮನೆಯವಕ್ಕೆ ಮನೆ ತುಂಬ್ಸುದು, ಹೊಸ್ತು ಹೇಳುವ ಆಚರಣೆ ಎಂತರಾಳಿಯೇ ಗೊಂತಾಗ. ವಿಷುವಿಂದ ಹಿಡುದು ಶಿವರಾತ್ರಿಯ ವರೆಗೆ ನಾವು ಆಚರಿಸುವ ಅದೆಷ್ಟೋ ಹಬ್ಬಂಗಳ ಹಿಂದೆ ಕೃಷಿ,ಬೆಳೆಗಳ ಮಹತ್ವದ ಅರಿವುದೆ ಇದ್ದು ಹೇಳುವ ವಿಚಾರ ನಮಗೆ ಮರದು ಹೋಯಿದು. ಇನ್ನು ಮುಂದಾಣ ತಲೆಮಾರಿಂಗೆ ತಿಳಿಶುದೆಂತರ ?
ಹೀಂಗಪ್ಪದರ ತಡವಲೆ ನಾವೇ ಮನಸ್ಸು ಮಾಡೆಕು. ನಾವು ಪೇಟೆಲಿಪ್ಪವಾದರೆ ಹಳ್ಳಿಲಿಪ್ಪ ನಮ್ಮ ಅಣ್ಣತಮ್ಮಂದ್ರ ಕಷ್ಟಂಗೊಕ್ಕೆ ಕೆಮಿ ಕೊಡೆಕು. ನಾವು ಊರಿಂಗೆ ಹೋಪಗ ಅವು ಚೆಂದಕೆ ನೆಗೆ ಮಾಡಿಂಡು ಸ್ವಾಗತ ಮಾಡುಗ ಅದರ ಹಿಂದೆ ಹುಗ್ಗಿಂಡಿಪ್ಪ ಅವರ ಬಂಙದ ಬೇಜಾರವ ನಾವು ಅರ್ಥ ಮಾಡೆಕು. ಅವಕ್ಕೆ ಸರಿಯಾದ ಗೌರವ ಕೊಡೆಕು, ಸಹಾಯ ಮಾಡೆಕು. ಸುಖದುಃಖ ವಿಚಾರಿಸೆಕು. ಕೃಷಿ ಕಾರ್ಯದ ನಡುವೆ ಅವು ರಜಾ ಆದರೂ ಮನರಂಜನೆಗೆ ಸಮಯ ಹೊಂದಾಣಿಕೆ ಮಾಡಿಕೊಂಬ ಹಾಂಗೆ ಮಾಡೆಕು.
ಇಷ್ಟು ಮಾತ್ರ ಅಲ್ಲದ್ದೆ ನಾವು ಈಗ ಮುಖ್ಯವಾಗಿ ನಮ್ಮ ಮಕ್ಕೊಗೆ ಕೃಷಿಯ ಮಹತ್ವವ ತಿಳಿಶೆಕು. ಕೃಷಿಕರಿಂಗೆ ಗೌರವ ಕೊಡ್ಲೆ ಕಲುಶೆಕು. ಯೇವದೇ ಕೆಲಸಲ್ಲಾದರೂ ಶ್ರಮ,ಶ್ರದ್ಧೆ, ತಾಳ್ಮೆ ಇದ್ದರೆ ಖಂಡಿತ ಫಲ ಕೈಗೆ ಬತ್ತು ಹೇಳುದರ ಸಣ್ಣಾದಿಪ್ಪಗಳೇ ಕಲುಶೆಕು. ಹಳ್ಳಿಲಿ ಸಾಕಷ್ಟು ಆದಾಯ ಗಳಿಸುವ ಕೃಷಿಕ° ಪೇಟೆಯ ಕೈ ತುಂಬಾ ಸಂಬಳ ತಪ್ಪ ಉದ್ಯೋಗಿಂದಲೂ ಹೆಚ್ಚು ನೆಮ್ಮದಿಲಿ ಬದ್ಕುತ್ತ ಹೇಳುವ ಸತ್ಯವ ನಾವು ಅರ್ಥ ಮಾಡಿಕೊಳ್ಳೆಕು. ಹಳ್ಳಿಲೂ ಪೇಟೆಯಷ್ಟೇ ಸೌಕರ್ಯ, ವ್ಯೆವಸ್ಥೆ ಮಾಡ್ಲಾವ್ತು ಹೇಳುದರ ಅರ್ಥ ಮಾಡ್ಸೆಕು.
ನಮ್ಮ ಹವ್ಯಕ ಸಂಸ್ಕೃತಿ, ಸಂಪ್ರದಾಯ, ಧರ್ಮ ಒಳಿಯೆಕಾರೆ ಕೃಷಿ,ಕೃಷಿ ಭೂಮಿ ಒಳಿಯೆಕು. ಅಡಕೆ,ತೆಂಗು,ಭತ್ತ,ಬಾಳೆ ಇಲ್ಲದ್ದೆ ನಮ್ಮ ಯೇವದೇ ಧಾರ್ಮಿಕ ಕಾರ್ಯಕ್ರಮವೂ ನಡೆತ್ತಿಲ್ಲೆ. ಹಾಂಗಾಗಿ ಕೃಷಿಯ ಮಹತ್ವವ ನಮ್ಮ ಮಕ್ಕೊಗೆ ತಿಳಿಶೆಕು. ಕೃಷಿ ಮಾಡಿ ಸಾಧನೆ ಮಾಡಿದವರ ನಮ್ಮ ಸಮಾಜ ಗುರುತಿಸಿ ಗೌರವಿಸೆಕು. ಕೃಷಿಕನ ಮದುವೆ ಅಪ್ಪಲೆ ನಮ್ಮ ಕೂಸುಗಳೂ ಮುಂದೆ ಬರೆಕು. ಈ ಎಲ್ಲಾ ಕಾರ್ಯವೂ ಹೇಳಿದಷ್ಟು ಸುಲಭ ಅಲ್ಲದ್ರೂ ನಿರಂತರ ಪ್ರಯತ್ನಂದ ಸಾಧ್ಯ ಆಗದ್ದದು ಯೇವದೂ ಇಲ್ಲೆ. ಹಾಂಗಾಗಿ ನಮ್ಮ ಯುವಜನತೆ ಕೃಷಿಯ ಹೊಡೆಂಗೆ ಗಮನ ಕೊಡುವ ಹಾಂಗೆ ಮಾಡುವ ಕಾರ್ಯಲ್ಲಿ ನಾವೆಲ್ಲ ಒಗ್ಗಟ್ಟಪ್ಪಲೇ ಬೇಕು.
~~~~~~~~~~~~~~
ಪ್ರಸನ್ನಾ ವಿ ಚೆಕ್ಕೆಮನೆ