ಶ್ರೀಗುರು ​ಸೇವೆಯೇ ಬದುಕಿನ ಸೌಭಾಗ್ಯ: ವಿಶಾಲಾಕ್ಷಿ ರಾಮಕೃಷ್ಣ ಹೆಗಡೆ ಹರಿಕೇರಿ

ಮಾತೃತ್ವಮ್


” ​ಜೀವನದ ಸಾರ್ಥಕತೆ ಇರುವುದು ಸೇವೆಯಲ್ಲಿ. ಅದರಲ್ಲೂ ಶ್ರೀಗುರು ಸೇವೆ ಹಾಗೂ ಗೋ ಸೇವೆಯಿಂದ ಬದುಕಿನಲ್ಲಿ ನೆಮ್ಮದಿ ಶಾಂತಿ ನೆಲೆಸುತ್ತದೆ. ಇಂತಹ ಸೇವೆಯಲ್ಲಿ ತೊಡಗಿಸಿಕೊಳ್ಳುವುದಕ್ಕೂ ದೇವರ ಅನುಗ್ರಹ ಬೇಕು ” ಎಂದವರು ಹೊನ್ನಾವರ ಸಮೀಪದ ಹರಿಕೇರಿಯ ಪ್ರಸ್ತುತ ಹೊಸಪೇಟೆ ನಿವಾಸಿಗಳಾಗಿರುವ ರಾಮಕೃಷ್ಣ ಹೆಗಡೆಯವರ ಪತ್ನಿ ವಿಶಾಲಾಕ್ಷಿ ಹೆಗಡೆ.
ಹೊನ್ನಾವರದ ಖರ್ವಾ ಗ್ರಾಮದ ಗಣಪತಿ ಹೆಗಡೆ ಮತ್ತು ಸುಭದ್ರಾ ಹೆಗಡೆ ದಂಪತಿಗಳ ಪುತ್ರಿ ವಿಶಾಲಾಕ್ಷಿಯವರು ಬಾಲ್ಯದಿಂದಲೇ ಹಸುಗಳ ಒಡನಾಟದಲ್ಲಿ ಬೆಳೆದವರು. ಪತಿಯ ಮನೆಯಲ್ಲಿಯೂ ಸುಮಾರು ೧೫-೨೦ ಹಸುಗಳನ್ನು ಸಾಕುತ್ತಿದ್ದರು. ಹಾಗಾಗಿ ಇವರಿಗೆ ಗೋವುಗಳ ಮೇಲೆ ವಿಶೇಷ ಪ್ರೀತಿ.
ಶ್ರೀಮಠದ ಸಂಪರ್ಕಕ್ಕೆ ಬಂದ ಮೇಲೆ ಎಸ್.ಆರ್. ಹೆಗಡೆ ಮತ್ತು ಕಮಲ ದಂಪತಿಗಳ ಮಾರ್ಗದರ್ಶನವು ವಿಶಾಲಾಕ್ಷಿ ಹೆಗಡೆಯವರ ಬದುಕಿಗೆ ಮಹತ್ವದ ತಿರುವು ನೀಡಿತು. ಶ್ರೀಮಠದ ವಿವಿಧ ಯೋಜನೆಗಳಲ್ಲಿ ತೊಡಗಿಸಿಕೊಳ್ಳಲು ಅವರಿಗೆ ಅವಕಾಶ ದೊರಕಿತು.

​ಶ್ರೀಗುರುಗಳ ಗೋಸೇವಾ ಯೋಜನೆಗಳು ಇವರ ಮೇಲೆ ತುಂಬಾ ಪ್ರಭಾವ ಬೀರಿದವು. ಆರಂಭದಲ್ಲಿ ‘ಸಾವಿರದ ಸುರಭಿ’ ಯೋಜನೆಯ ಮೂಲಕ ಗೋಮಾತೆಯ ಸೇವೆಯನ್ನು ಆರಂಭಿಸಿದ ಇವರು ಮುಂದೆ ‘ಮಾತೃತ್ವಮ್’ ಯೋಜನೆಯ ಮೂಲಕ ಈ ಸೇವೆಯನ್ನು ಮುಂದುವರಿಸಿದರು.
‘ ಗೋವಿನ ಮೇಲೆ ಮಮತೆಯಿದ್ದರೂ ಅದು ಸಾಕ್ಷಾತ್ ಗೋಮಾತೆ ಎಂಬ ಅರಿವು ಮೂಡಿದ್ದು ಶ್ರೀಮಠದ ಸಂಪರ್ಕಕ್ಕೆ ಬಂದ ಮೇಲೆ ‘ ಎನ್ನುವ ವಿಶಾಲಾಕ್ಷಿ ಹೆಗಡೆಯವರು ಹೊನ್ನಾವರ ವಲಯದ ಮಾತೃ ಪ್ರಧಾನೆಯಾಗಿ ಎಂಟು ವರ್ಷಗಳ ಕಾಲ ಸೇವೆ ಸಲ್ಲಿಸಿದ್ದಾರೆ. ಈ ಸಂದರ್ಭದಲ್ಲಿ ಅನೇಕ ಮಾತೆಯರನ್ನು ಸಂಘಟಿಸಿ ಗೋಮಾತೆಯ ಮಹತ್ವವನ್ನು ಸಮಾಜಕ್ಕೆ ತಿಳಿಸುವ ಕಾರ್ಯ ಮಾಡಿದ್ದಾರೆ.

‘ ಆರಂಭದ ದಿನಗಳಲ್ಲಿ ಗೋಸೇವೆಯ ಕುರಿತು ಜನರಿಗೆ ಮನವರಿಕೆ ಮಾಡಿಕೊಡುವುದು ಸವಾಲಿನ ಕೆಲಸವಾಗಿದ್ದರೂ, ಗುರುಕೃಪೆಯ ಮೇಲಿನ ಅಚಲ ನಂಬಿಕೆಯಿಂದ ಇದು ಸಾಧ್ಯವಾಯಿತು ‘ ಎನ್ನುತ್ತಾರೆ ವಿಶಾಲಾಕ್ಷಿ ಹೆಗಡೆ.
ಮಾತೃತ್ವಮ್ ಯೋಜನೆಯ ಮೂಲಕ ಸಂಪೂರ್ಣ ಮೊತ್ತವನ್ನು ಸಮರ್ಪಿಸಿ, ‘ಲಕ್ಷ ಬಾಗಿನಿ’ಯಾಗಿ ಗೋ ಸೇವೆಯಲ್ಲಿ ಎಲ್ಲರಿಗೂ ಮಾದರಿಯಾದ ಇವರು ಕಳೆದ ಎರಡು ವರ್ಷಗಳಿಂದ ಸರಕಾರದಿಂದ ನೀಡುವ ಗೃಹಲಕ್ಷ್ಮಿ ಯೋಜನೆಯ ಮೊತ್ತವನ್ನು ಗೋಸೇವೆಗೆ ಮೀಸಲಾಗಿರಿಸಿದ್ದಾರೆ.
ಕೊರೋನಾ ಕಾಲದ ಆತಂಕದ ದಿನಗಳಲ್ಲಿ ಇವರ ಪತಿ ರಾಮಕೃಷ್ಣ ಹೆಗಡೆಯವರ ಆರೋಗ್ಯ ತೀವ್ರವಾಗಿ ಹದಗೆಟ್ಟಾಗ, ವೈದ್ಯಕೀಯ ಚಿಕಿತ್ಸೆಯ ಜೊತೆಗೆ ಶ್ರೀಗುರುಗಳ ಪಾದಕ್ಕೆ ಸಂಪೂರ್ಣ ಶರಣಾದರು.
” ನಮ್ಮವರು ಸಂಪೂರ್ಣ ಗುಣಮುಖರಾಗಿ ಚೇತರಿಸಿಕೊಂಡಿದ್ದು ಗುರು ಕೃಪೆಯ ಪವಾಡವೇ ಸರಿ ” ಎಂದು ಭಾವ ತುಂಬಿ ನುಡಿಯುವ ಇವರ ಪಾಲಿಗೆ ಈ ಘಟನೆ ಗುರುಕೃಪೆಯ ಅನುಪಮ ನಿದರ್ಶನವಾಗಿದೆ.
” ಈ ಘಟನೆಯ ನಂತರ ನಮಗೆ ಶ್ರೀಮಠದ ಮೇಲೆ ಶ್ರದ್ಧೆ, ನಂಬಿಕೆ ಮತ್ತಷ್ಟು ಹೆಚ್ಚಾಗಿದೆ. ಬಿಡುವಿನ ವೇಳೆಗಳಲ್ಲಿ ಗೋಶಾಲೆಗೆ ಹೋಗಿ ಸೇವೆ ಮಾಡುತ್ತೇವೆ ” ಎನ್ನುವ ವಿಶಾಲಾಕ್ಷಿಯವರು ಹೊನ್ನಾವರದಿಂದ ಹೊಸಪೇಟೆಗೆ ಬಂದ ಮೇಲೆ ನಿರಂತರ ಶ್ರೀಮಠದ ಸಂಪರ್ಕ ಸಾಧ್ಯವಾಗುತ್ತಿಲ್ಲ ಎನ್ನುತ್ತಾರೆ.

‘ ​ಕಮಲಕ್ಕನವರೊಂದಿಗಿನ ಆತ್ಮೀಯ ಬಾಂಧವ್ಯ ಇವರ ಭಕ್ತಿ ಮತ್ತು ಸೇವಾ ಹಾದಿಗೆ ಸ್ಫೂರ್ತಿಯ ಸೆಲೆಯಾಗಿದೆ. ನನ್ನ ಎಲ್ಲಾ ಸೇವೆಗಳ ಹಿಂದೆಯೂ ನಮ್ಮ ಮನೆಯವರ ಸಂಪೂರ್ಣ ಸಹಕಾರವಿದೆ. ಬದುಕಿನಲ್ಲಿ ನಡೆದ ಒಳ್ಳೆಯ ಘಟನೆಗಳೆಲ್ಲವೂ ಶ್ರೀಗುರುಗಳ ಕೃಪೆಯಿಂದಲೇ ನಡೆದಿದೆ ” ಎಂದು ಶ್ರದ್ಧೆಯಿಂದ ನುಡಿಯುವ ವಿಶಾಲಾಕ್ಷಿ ಹೆಗಡೆಯವರ ಇಬ್ಬರು ಮಕ್ಕಳು ಕೂಡ ಶ್ರೀಮಠದ ಮೇಲೆ, ಗೋವುಗಳ ಮೇಲೆ ತುಂಬಾ ಶ್ರದ್ಧೆ ಹೊಂದಿದ್ದಾರೆ.

ಹೊಸಪೇಟೆಗೆ ಸ್ಥಳಾಂತರವಾದ ನಂತರ ದೆ ದೈಹಿಕವಾಗಿ ದೂರವಿದ್ದರೂ, ಮನಸ್ಸಿನಿಂದ ಸದಾ ಶ್ರೀಮಠದ ಸೇವಾ ಕಾರ್ಯಗಳಲ್ಲಿ ಭಾಗಿಯಾಗುವ ವಿಶಾಲಾಕ್ಷಿ ಹೆಗಡೆಯವರು ರಂಗೋಲಿ, ಪುಸ್ತಕ ಓದುವಿಕೆ ಮತ್ತು ಸ್ತೋತ್ರ ಪಠಣದಂತಹ ಹವ್ಯಾಸಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.
​ ಗುರುಗಳ ಮೇಲಿನ ನಿಷ್ಠೆ, ಗೋಮಾತೆಯ ಮೇಲಿನ ಪ್ರೀತಿ ಇವರ ಪ್ರತಿಯೊಂದು ಮಾತುಗಳಲ್ಲಿಯೂ ವ್ಯಕ್ತವಾಗುತ್ತದೆ.
” ಶ್ರೀಗುರು ಕೃಪೆಯಿದ್ದರೆ, ಸೇವೆಯ ಹಾದಿ ಎಂದಿಗೂ ಶೂನ್ಯವಾಗುವುದಿಲ್ಲ ” ಎಂಬ ಇವರ ಮಾತುಗಳು ಅವರ ಸೇವಾಪಥದ ಶ್ರದ್ಧೆಯನ್ನು ಬಿಂಬಿಸುತ್ತದೆ.

ಪ್ರಸನ್ನಾ ವಿ. ಚೆಕ್ಕೆಮನೆ

Leave a Reply

Your email address will not be published. Required fields are marked *