‘ ದುಃಖದ ಕಾರ್ಮೋಡ ಸರಿಸುವ ಶಕ್ತಿ ಗೋಮಾತೆಯ ಸೇವೆಗಿದೆ ‘ : ಯಶೋದಾ ರಾಮಚಂದ್ರ ಭಟ್ ಶಿರಸಿ

ಮಾತೃತ್ವಮ್

 

” ಗೋ ಸೇವೆ, ಶ್ರೀಮಠದ ಸೇವೆ ಮಾಡಲು ಜನ್ಮಾಂತರದ ಪುಣ್ಯ ಬೇಕು. ಶ್ರೀರಾಮದೇವರ ಅನುಗ್ರಹದಿಂದ ನನಗೆ ಅಂತಹ ಸದವಕಾಶ ದೊರಕಿದೆ. ಬದುಕಿನ ನೋವುಗಳಲ್ಲಿ ಸಾಂತ್ವನದ ತಂಪಾಗಿ ಜೊತೆಗೆ ಇದ್ದಿದ್ದು ಶ್ರೀಗುರುಗಳ ಅನುಗ್ರಹ. ಆ ದುಃಖದಿಂದ ಹೊರ ಬರುವಂತೆ ಮಾಡಿ ಜೀವನೋತ್ಸಾಹ ಮೂಡಿಸಿದ್ದು ಗೋಮಾತೆಯ ಸೇವೆ ” ಎಂದವರು ಸಿದ್ದಾಪುರ ಮಂಡಲ ಅಂಬಾಗಿರಿ ವಲಯದ ಶಿರಸಿ ನಿವಾಸಿಗಳಾಗಿರುವ ರಾಮಚಂದ್ರ ಭಟ್ ಅವರ ಪತ್ನಿ ಯಶೋದಾ.

 

ಹೊನ್ನಾವರ ಕರ್ಕಿಯ ವಿಠಲ ಹೆಗಡೆ, ಲಕ್ಷ್ಮಿ ದಂಪತಿಗಳ ಪುತ್ರಿಯಾದ ಯಶೋದಾ ಅಂಚೆ ಇಲಾಖೆಯಲ್ಲಿ ಉದ್ಯೋಗಿಯಾಗಿದ್ದವರು. ಈ ಹಿಂದೆ ಕೆಲವು ವರ್ಷಗಳ ಕಾಲ ಬೆಂಗಳೂರು ನಿವಾಸಿಗಳಾಗಿದ್ದ ಸಂದರ್ಭದಲ್ಲಿ ಗಿರಿನಗರದ ಶ್ರೀರಾಮಾಶ್ರಮಕ್ಕೆ ತೆರಳಿ ಶ್ರೀಮಠದ ಸೇವೆ, ಗೋಮಾತೆಯ ಸೇವೆಗಳನ್ನು ನಿರಂತರವಾಗಿ ಮಾಡಿದವರು.

 

” ೨೦ ವರ್ಷಗಳಿಂದ ಶ್ರೀಮಠದ ಸಂಪರ್ಕದಲ್ಲಿದ್ದೇನೆ. ಗೋಮಾತೆಯ ಸೇವೆ ಮಾಡಲು ನನಗೆ ಪ್ರೋತ್ಸಾಹ ತುಂಬಿದವರು ಸಿದ್ಧಾಪುರದ ವೀಣಕ್ಕ. ಅವರ ಪ್ರೇರಣೆಯಿಂದ ಮಾಸದಮಾತೆಯಾದೆ. ಈಗಾಗಲೇ ಮೂರು ಗೋವುಗಳ ಗುರಿ ತಲುಪಿದ್ದೇನೆ. ಆರಂಭದಲ್ಲಿ ಗುರಿ ತಲುಪಲು ಸಾಧ್ಯವಿಲ್ಲ ಎಂದು ಭಾವಿಸಿದರೂ ಗೋಮಾತೆಯ ಸೇವೆ ನನಗೆ ಕಷ್ಟವಾಗಲಿಲ್ಲ. ಈಗಲೂ ಗೋಮಾತೆಯ ಸೇವೆಯನ್ನು ಮುಂದುವರಿಸುತ್ತಿದ್ದೇನೆ. ನನ್ನ ಮಗಳು ಸೊಸೆ ಇಬ್ಬರೂ ಮಾಸದ ಮಾತೆಯಾಗಿ ಗುರಿ ತಲುಪಿದವರು. ಇದೆಲ್ಲವೂ ಶ್ರೀಗುರುಗಳ ಅನುಗ್ರಹದಿಂದ ಸಾಧ್ಯವಾಯಿತು ” ಎನ್ನುತ್ತಾರೆ ಯಶೋದಾ.

 

ಬೆಂಗಳೂರಿನಲ್ಲಿರುವಾಗ ಪ್ರತಿದಿನವೂ ಶ್ರೀರಾಮಾಶ್ರಮಕ್ಕೆ ತೆರಳಿ ಶ್ರೀಕರಾರ್ಚಿತ ದೇವರ ಸೇವೆಯ ಸಂದರ್ಭದಲ್ಲಿ ಬೆಳಗುವ ಹಣತೆಗಳಿಗೆ ಎಣ್ಣೆ ಬತ್ತಿಗಳನ್ನು ಹಾಕಿ ಜೋಡಿಸುವ ಸೇವೆಯನ್ನು ಮಾಡುತ್ತಿದ್ದ ಇವರು ಆತ್ಮೀಯರ ಬಳಗದಲ್ಲಿ ‘ ದೀಪದ ಯಶೋದಕ್ಕ ‘ ಎಂದೇ ಗುರುತಿಸಲ್ಪಡುತ್ತಿದ್ದವರು.

 

ಕಾರ್ತಿಕ ಮಾಸದಲ್ಲಿ ಶ್ರೀರಾಮ ಸನ್ನಿಧಿಯಲ್ಲಿ ಬೆಳಗಲಿರುವ ಹಣತೆಗಳನ್ನು ಒಂದು ತಿಂಗಳು ಪೂರ್ತಿ ವ್ರತದಂತೆ ಪ್ರತಿದಿನವೂ ಸಾಯಂಕಾಲ ಗಿರಿನಗರದ ಶ್ರೀರಾಮಾಶ್ರಮಕ್ಕೆ ತೆರಳಿ ಸಿದ್ಧಪಡಿಸುತ್ತಿದ್ದ ಇವರು ಧರ್ಮಭಾರತೀ ಪತ್ರಿಕೆಯ ಅಂಚೆ ವಿತರಣೆಗೆ ಜೋಡಿಸುವ ( ಪ್ಯಾಕಿಂಗ್ ) ಕಾರ್ಯಕ್ಕೆ ನೆರವಾದವರು.

 

” ಬದುಕಿನಲ್ಲಿ ಮರೆಯಲಾರದ ಅತೀವ ಸಂಕಟದ ನೋವೊಂದು ಬಾಳಿಗೆ ಆಘಾತ ನೀಡಿದಾಗ ಮಾನಸಿಕವಾಗಿ ತುಂಬಾ ಕುಸಿದು ಹೋಗಿದ್ದೆ. ಆದರೆ ಬದುಕಿಗೆ ಭರವಸೆಯ ಬೆಳಕು ನೀಡಿ ಮತ್ತೆ ಜೀವನೋತ್ಸಾಹ ಮೂಡಿದ್ದು ಶ್ರೀಮಠದ ಸೇವೆಯಿಂದ. ಶ್ರೀಗುರುಗಳ ಆಶೀರ್ವಚನಗಳ ಶ್ರವಣದಿಂದ, ಗೋಮಾತೆಯ ಸೇವೆಯಿಂದ ” ಎನ್ನುವ ಯಶೋದಾ ಅವರ ಪತಿಯೂ ಅಂಬಾಗಿರಿ ವಲಯದ ಘಟಕವೊಂದರ ಗುರಿಕ್ಕಾರರಾಗಿ ಶ್ರೀಮಠದ ಸೇವೆಯಲ್ಲಿ ನಿರತರಾಗಿದ್ದಾರೆ.

 

ನಿವೃತ್ತಿಯ ನಂತರ ಬೆಂಗಳೂರು ನಗರ ತೊರೆದು ಶಿರಸಿ ಸೇರಿದ ಯಶೋದಾ ರಾಮಚಂದ್ರ ದಂಪತಿಗಳು ಅಂಬಾಗಿರಿ ಮಠದಲ್ಲಿಯೂ ಸೇವೆ ಸಲ್ಲಿಸುತ್ತಿದ್ದಾರೆ.

 

” ನನ್ನ ಸೇವೆಗಳೇನಿದ್ದರೂ ಶ್ರೀರಾಮದೇವರ ಅನುಗ್ರಹ, ಶ್ರೀಗುರುಗಳ ಕೃಪೆಯಿಂದ ನಡೆಯುತ್ತಿದೆ. ನಾಲ್ಕು ವರ್ಷಗಳ ಕಾಲ ಕಾರ್ತಿಕ ಮಾಸದಲ್ಲಿ ಶ್ರೀರಾಮದೇವರ ದೀಪೋತ್ಸವದ ಸಂದರ್ಭದಲ್ಲಿ ಹಣತೆ ಜೋಡಿಸಿದ್ದು ಬದುಕಿನ ಧನ್ಯತೆ. ಪ್ರತೀ ಮಂಗಳವಾರ ಕುಂಕುಮಾರ್ಚನೆ ಸೇವೆ, ಶುಕ್ರವಾರ ಗೋ ಆರತಿ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದು ಮನದಲ್ಲಿ ಸಾರ್ಥಕ ಭಾವ ಮೂಡಿಸಿದೆ. ಮಕ್ಕಳಿಗೆ ಚಿಕ್ಕ ವಯಸ್ಸಿನಿಂದಲೇ ಶ್ರೀಮಠದ ಸಂಪರ್ಕ ಸಿಗುವಂತಾಗಬೇಕು. ಶ್ರೀಗುರುಸೇವೆ ಮಾಡುವ ತುಡಿತವಿದ್ದರೆ ಗುರುಕಾರುಣ್ಯ ತಾನಾಗಿ ಒದಗಿ ಬರುತ್ತದೆ ” ಎನ್ನುವ ಯಶೋದಾ ರಾಮಚಂದ್ರ ಭಟ್ ಬಿಡುವಿನ ವೇಳೆಯಲ್ಲಿ ಹಾರ್ಮೋನಿಯಂ ಕಲಿಯುತ್ತಾರೆ. ಶ್ರೀಗುರುಪಾದುಕಾ ಸ್ತೋತ್ರ ಪಠಣವನ್ನು ಮಾಡುತ್ತಾರೆ. ಅಂಬಾಗಿರಿ ಮಠದಲ್ಲಿ ನಡೆಯುವ ಪ್ರತಿಯೊಂದು ಕಾರ್ಯಕ್ರಮಗಳಲ್ಲಿ ಕಾರ್ಯಕರ್ತೆಯಾಗಿಯೂ ಭಾಗವಹಿಸುತ್ತಾರೆ. ಶ್ರೀಮಠದ ಸೇವೆಯನ್ನು ನಿರಂತರವಾಗಿ ಮುಂದುವರಿಸಬೇಕೆಂಬುದೇ ಇವರ ಮನದ ಅಭಿಲಾಷೆ.

 

ಪ್ರಸನ್ನಾ ವಿ. ಚೆಕ್ಕೆಮನೆ

Leave a Reply

Your email address will not be published. Required fields are marked *