ಬಹುಮುಖ ಪ್ರತಿಭೆ ಅಭಿಜ್ಞಾ ಭಟ್

ಅಂಕುರ

 

ಸಂಗೀತ, ಯಕ್ಷಗಾನ, ಭರತನಾಟ್ಯ, ಹರಿಕಥೆ, ಸಾಹಿತ್ಯ… ಹೀಗೆ ವಿವಿಧ ಕ್ಷೇತ್ರಗಳಲ್ಲಿ ತನ್ನದೇ ಆದ ವಿಶಿಷ್ಟ ಛಾಪನ್ನು ಮೂಡಿಸಿದ ಪ್ರತಿಭೆ ಅಭಿಜ್ಞಾ ಭಟ್ ಬೊಳುಂಬು.

ಈಕೆ ಬದಿಯಡ್ಕದ ದಿನೇಶ ಬಿ. ಮತ್ತು ಗಾನಲತಾ ಎನ್. ದಂಪತಿಗಳ ಮಗಳು. ಅಗಲ್ಪಾಡಿಯ SAPHSS ಶಾಲೆಯಲ್ಲಿ 9 ನೇ ತರಗತಿ ವ್ಯಾಸಂಗ ಮಾಡುತ್ತಿರುವ ಈಕೆ ವಿವಿಧ ಕಲೆಗಳಲ್ಲಿ ಗುರುತಿಸಿಕೊಂಡಿದ್ದಾಳೆ.

ಅಭಿಜ್ಞಾಳ ತಾಯಿ ಗಾನಲತಾ ಅವರಿಗೆ ಯಕ್ಷಗಾನವೆಂದರೆ ಅಚ್ಚುಮೆಚ್ಚು. ಇದರಿಂದಾಗಿ ಅಭಿಜ್ಞಾ 3ನೇ ವರ್ಷದವಳಿದ್ದಾಗಲೇ ಯಕ್ಷಗಾನವನ್ನು ನೋಡಿ ಅನುಕರಣೆ ಮಾಡಲು ತೊಡಗಿದ್ದಳು. ಮಗಳ ಆಸಕ್ತಿಯನ್ನು ಗಮನಿಸಿದ ಪಾಲಕರು ಈಕೆಯನ್ನು ಬದಿಯಡ್ಕದ ರಂಗಸಿರಿ ಸಾಂಸ್ಕೃತಿಕ ವೇದಿಕೆ ಸಂಸ್ಥೆಯಲ್ಲಿ ಸೂರ್ಯನಾರಾಯಣ ಪದಕಣ್ಣಾಯ ಬಾಯಾರು ಅವರ ಬಳಿಯಲ್ಲಿ ಯಕ್ಷಗಾನ ತರಬೇತಿಗೆ ಸೇರಿಸಿದರು. ಇದೀಗ ಕಳೆದ ಐದು ವರ್ಷಗಳಿಂದ ಯಕ್ಷಗಾನ ಅಭ್ಯಾಸ ಮಾಡುತ್ತಿರುವ ಈಕೆ ಬೆಂಗಳೂರಿನ ಗಿರಿನಗರ ರಾಮಾಶ್ರಮದಲ್ಲಿ ಗೆಜ್ಜೆಪೂಜೆ ಮೂಲಕ ರಂಗಪ್ರವೇಶ ಮಾಡಿ ಈವರೆಗೆ 150 ಕ್ಕೂ ಅಧಿಕ ಯಕ್ಷಗಾನ ಪ್ರದರ್ಶನ ನೀಡಿದ್ದಾಳೆ‌.

ಕೇವಲ ಯಕ್ಷಗಾನ ಮಾತ್ರವಲ್ಲದೇ ಕಲಾರತ್ನ ಶಂನಾಡಿಗ ಅವರಲ್ಲಿ ಹರಿಕಥೆ ಅಭ್ಯಾಸ ಮಾಡುತ್ತಿದ್ದು, ಬಾಲಕೃಷ್ಣ ಮಂಜೇಶ್ರ ಅವರಲ್ಲಿ ಭರತನಾಟ್ಯ ಅಭ್ಯಾಸ ಮಾಡಿ ಜ್ಯೂನಿಯರ್ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿದ್ದಾಳೆ. ರಂಗಸಿರಿ ಸಂಸ್ಥೆಯಲ್ಲಿ ಸ್ನೇಹಾ ಪ್ರಕಾಶ ಪೆರ್ಮುಖ ಅವರಲ್ಲಿ ಸುಗಮ ಸಂಗೀತ ಮತ್ತು ಯೋಗೀಶ್ ಶರ್ಮಾ ಬಳ್ಳಪದವು ಅವರಲ್ಲಿ ಶಾಸ್ತ್ರೀಯ ಸಂಗೀತ ಅಭ್ಯಸಿಸುತ್ತಿದ್ದಾಳೆ.

ಬಾಲ್ಯದ ದಿನಗಳಲ್ಲಿಯೇ ಪುಸ್ತಕಗಳನ್ನು ಓದುವ ಅಭ್ಯಾಸ ರೂಢಿಸಿಕೊಂಡಿದ್ದ ಅಭಿಜ್ಞಾ, 3 ತರಗತಿಯಲ್ಲಿದ್ದಾಗಲೇ ಮಕ್ಕಳ ಕವಿತೆ, ಕತೆಗಳನ್ನು ಬರೆಯಲು ತೊಡಗಿಸಿಕೊಂಡಿದ್ದಳು. ಮುಂದಿನ ದಿನಗಳಲ್ಲಿ ಸಣ್ಣಕಥೆಗಳನ್ನೂ ಬರೆದಳು! ಇದೀಗ ಕನ್ನಡದ ಪ್ರಸಿದ್ಧ ಪ್ರತಿಲಿಪಿ ಆಪ್‌ನಲ್ಲಿ ‘ಶಾಂತಸಾಗರ’ ಎಂಬ ಸರಣಿಯನ್ನು ಬರೆದಿದ್ದು, ಜನಪ್ರಿಯತೆ ಗಳಿಸಿದೆ.

ಭವಿಷ್ಯದಲ್ಲಿ ಕರ್ನಾಟಕದ ಹೈಕೋರ್ಟ್‌ನಲ್ಲಿ ಕ್ರಿಮಿನಲ್ ಲಾಯರ್ ಆಗಬೇಕೆಂಬ ಇಚ್ಛೆ ಇದ್ದು, ಈಗಲೇ ಸಿದ್ಧತೆ ನಡೆಸುತ್ತಿದ್ದೇನೆ ಎನ್ನುವ ಅಭಿಜ್ಞಾ, ಮನೆಯಲ್ಲಿ ತಂದೆ, ತಾಯಿ ಮತ್ತು ಅಕ್ಕನ ಪ್ರೋತ್ಸಾಹ ಕೂಡ ಸಾಧನೆಗೆ ಕಾರಣ ಎನ್ನುತ್ತಾಳೆ. ಈಕೆಯ ಸಾಧನೆಗೆ ರಾಮಚಂದ್ರಾಪುರ ಮಠದ ರಾಘವೇಶ್ವರ ಶ್ರೀಗಳಿಂದ ವಿಶೇಷ ಪುರಸ್ಕಾರ ಸೇರಿದಂತೆ ಹಲವಾರು ಪ್ರಶಸ್ತಿ, ಸನ್ಮಾನಗಳು ಸಂದಿವೆ‌.

Author Details


Srimukha

Leave a Reply

Your email address will not be published. Required fields are marked *