ಏಕದಂತನಾದ ಗಣೇಶ!

ಲೇಖನ

ಆಶ್ರಮದ ಕಡೆ ಹೊರಟ ರಾಮನಿಗೆ ಈ ಸಾಹಸಕ್ಕೆ ಕಾರಣವಾದುದು ಹರನ ಅನುಗ್ರಹ.ದರ್ಶನ ಪಡೆದು ಹರಕೆಗೊಂಡೇ ಆಶ್ರಮಕ್ಕೆ ಮರಳೋಣ ಅನ್ನಿಸಿತು .

 

ಅಕೃತವ್ರಣನೊಂದಿಗೇ ಕೈಲಾಸದತ್ತ ತಿರುಗಿದ.ತನ್ನ ತಪಶ್ಶಕ್ತಿಯ ಒಂದಂಶವನ್ನು ಅವನಿಗೂ ನೀಡಿ ಇಚ್ಛಾಗಮನ ಶಕ್ತಿಯನ್ನು ಆತನಿಗೂ ನೀಡಿದ. ಕೈಲಾಸವನ್ನು ತಲುಪಿ ಅಲ್ಲಿಯ ಯಕ್ಷಗಂಧರ್ವ ಸೇವಾ ನದಿ ಅಲಕನಂದಾದಲ್ಲಿ ಮಿಂದೆದ್ದು ಮುಂದುವರಿದರು.ಭವ್ಯ ಮಂದಿರ ,ಪ್ರಮಥರ ಕಾವಲು …ದಾಟಿ ಮುಂದೆ ಬಂದರೆ ನಂದಿಕೇಶ್ವರ ಎದುರಾದ.ಆತನ ಅಪ್ಪಣೆ ಪಡೆದು ಒಳಕ್ಕೆ ಪ್ರವೇಶಿಸಿದರು.

 

ಬಾಲಕರಂತೆ ಆಟವಾಡುತ್ತಾ ಪ್ರಮಥರೊಂದಿಗೆ ವಿಹರಿಸುತ್ತಿದ್ದ ಸ್ಕಂಧ – ಗಣೇಶರನ್ನು ಕಂಡು ನಮಸ್ಕರಿಸಿ ಶಿವದರ್ಶನಕ್ಕೆ ಒಳ ಪ್ರವೇಶಿಸಲು ಉದ್ಯುಕ್ತರಾದವರನ್ನು ಗಣೇಶ ತಡೆದು ನಿಲ್ಲಿಸಿದ.ಮತ್ತು ಹೇಳಿದ.

 

ರಾಮ,ನೀನೂ ಶಂಕರ ದೇವರಿಗೆ ಪುತ್ರ ಸಮಾನ.ತಂದೆ – ತಾಯಿಯರು ಅಂತಃ ಪುರದಲ್ಲಿದ್ದಾರೆ ಈಗಲೇ ಕಾಣಲಾಗದು.ಅವರು ಈಚೆ ಬಂದ ಮೇಲೆ ಹೋಗುವಿಯಂತೆ ಸ್ವಲ್ಪಕಾಲ ಕಾದಿರು.

 

ರಾಮ :: ಶಿವಾನುಗ್ರಹದಿಂದ ಮಹಾಪರಾಕ್ರಮಿ ಕಾರ್ತವೀರ್ಯನನ್ನು ಅವನ ಸರ್ವ ಅನುಯಾಯಿಗಳೊಂದಿಗೆ ನಿಗ್ರಹಿಸಿ ಅದನ್ನು ಭಗವಂತನಲ್ಲಿ ನಿರೂಪಿದೆ ಬೇರಾವ ಕಾರ್ಯವನ್ನೂ ಮಾಡಬಾರದೆಂದು ಅವಸರದಿಂದ ಧಾವಿಸಿ ಬಂದಿದ್ದೇನೆ.ಅನುಗ್ರಹಿಸಿದ ಸ್ವಾಮಿ ನಿಗ್ರಹಿಸುತ್ತಾನೆಯೆ?. ಈಗಲೇ ಕಾಣಬೇಕಿದೆ ದಾರಿ ಬಿಡು.

 

ಗಣೇಶ;: ರಾಮ,ಹಿರಿಯರು ಅಂತಃಪುರದಲ್ಲಿರುವಾಗ ಮಕ್ಕಳಾದ ನಾವು ಅವರನ್ನು ಕಾಣಬೇಕೆಂದು ಎಂತಹ ಅವಸರದ ಕಾರ್ಯವಿದ್ದರೂ ಅಲ್ಲಗೆ ಪ್ರವೇಶಿಸುವುದು ಅಧರ್ಮ,ಅಶಾಸ್ತ್ರೀಯ.ಹಿರಿಯರು ಅಂತಲೇ ಅಲ್ಲ ಯಾವ ದಂಪತಿಗಳನ್ನೇ ಆಗಲಿ ಏಕಾಂತದಲ್ಲಿದ್ದಾಗ ನೋಡುವುದೇ ನರಕಭಾಜನವಾಗಿಸುವ ಕಾರ್ಯ.ನೀನು ಶಾಸ್ತ್ರಗಳನ್ನು ಬಲ್ಲವ .ಶಂಕರ ಶಿಷ್ಯ.ಇದು ಅಪಚಾರ. ನಿನ್ನ ಒಳ್ಳೆಯದಕ್ಕೆ ಹೇಳುತ್ತಿರುವೆ.ಕೆಲಕಾಲ ಕಾಯಿ.ದೇವರೇ ಬರುತ್ತಾರೆ.ಈಗ ಬೇಡ.

 

ರಾಮ:: ಆ ವಿಚಾರ ತಿಳಿಯದ್ದಲ್ಲ.ಆದರೆ ಅದು ಕಾಮನೆಯುಳ್ಳವರಿಗೆ ಹೇಳಿದ ವಿಚಾರ.ಯಾವುದೇ ಮೋಹ ಮಮಕಾರಗಳಿಲ್ಲದ ನನ್ನಂಥವರಿಗಲ್ಲ.ಅಂತಹ ಸಮಸ್ಯೆ ಬರುತ್ತದೆಂದು ಮನೋವೇಗದಿಂದ ಬಂದ ನನ್ನನ್ನು ತಡೆಯಲು ಯತ್ನಿಸಬೇಡ.ಯತ್ನಿಸಿದರೂ ನಾನು ಬಿಡಲಾರೆ.ಒಳಗೆ ಹೋಗುತ್ತೇನೆ.
ಎಂದು ರಾಮ ಪ್ರವೇಶಿಸಲು ಪ್ರಯತ್ನಿಸಿದಾಗ ಗಣೇಶ ಆತನ ಕೈ ಹಿಡಿದು ಹಿಂದಕ್ಕೆ ಎಳೆದ.
ಹೋಗುತ್ತೇನೆಂದು ರಾಮ ನುಗ್ಗುವುದೂ,ಒಳಕ್ಕೆ ಹೋಗದಂತೆ ಗಣೇಶ ಎಳೆಯುವುದೂ ಸ್ವಲ್ಪ ಹೊತ್ತು ನಡೆಯಿತು. ಆಗ ಸ್ಕಂಧ ಸ್ವಾಮಿ ಇಬ್ಬರ ನಡುವೆ ನಿಂತು ತಡೆಯುವ ಪ್ರಯತ್ನವನ್ನೂ ಮಾಡಿದ. ಗಣೇಶ ರಾಮನನ್ನು ತನ್ನ ಸೊಂಡಿಲಿನಿಂದ ಎತ್ತಿ ಆಕಾಶದ ವರೆಗೂ ತೀರಿಸಿ ಕೆಳಗೆ ತಿರುಗಿಸಿ ಮೇಲೆತ್ತಿ ಇಳಿಸಿದ.
ರಾಮನಿಗೆ ನಖಶಿಖಾಂತ ಕೋಪ ಏರಿತು.ಶಿವಪುತ್ರನಿಂದಲೇ ಶಿವ ದರ್ಶನಕ್ಕೆ ತಡೆಯಾದುದಕ್ಕೆ ತಡೆಯಲಾಗಲಿಲ್ಲ. ಪರಶುವನ್ನೇ ಗಣೇಶನತ್ತ ಎಸೆದ! ಗಣೇಶನಿಗೆ ಅದನ್ನು ನಿವಾರಿಸುವುದೇನೂ ಕಷ್ಟವಲ್ಲವಾದರೂ ಶಿವದತ್ತವಾದ ಆಯುಧ, ಅದಕ್ಕೆ ಗೌರವ ನೀಡಬೇಕೆಂದು ತಿಳಿದು ತನ್ನ ಒಂದು ದಾಡೆಯನ್ನೇ ಅದಕ್ಕೆ ಅಡ್ಡವಾಗಿಸಿದ.ರಾಮನ ಲಾಘವ ಪ್ರಬಲವಾಗಿತ್ತು.ಒಂದು ದಂತವೇ ಕತ್ತರಿಸಿಹೋಯಿತು .ಪರಿಣಾಮವಾಗಿ ರಕ್ತವೂ ಹರಿಯಿತು.ಪ್ರಮಥರ ಕೋಲಾಹಲವೆದ್ದಿತು.
ಈ ಗದ್ದಲದಿಂದಾಗಿ ಏನಾಯಿತೆಂದು ತಿಳಿಯಲು ಶಿವಪಾರ್ವತಿಯರೇ ಹೊರಬಂದರು. ಗಣೇಶನ ದಂತ ಕತ್ತರಿಸಿದ್ದನ್ನು ಕಂಡು ಪಾರ್ವತೀದೇವಿ ಕುಪಿತಳಾಗಿ ಏನಾಯಿತೆಂದು ವಿಚಾರಿಸಿದಳು.
ಸ್ಕಂಧನು ನಡೆದ ಘಟನೆಯನ್ನು ವಿವರಿಸಿದ. ದೇವಿ ಕೋಪದಿಂದ ಶಿವನಲ್ಲಿ ಹೇಳುತ್ತಾಳೆ

“ಸ್ವಾಮಿ ನಿಮ್ಮ ಪ್ರಿಯ ಶಿಷ್ಯ ,ನಿಮಗೆ ಗುರುದಕ್ಷಿಣೆ ನೀಡಿದ್ದಾನೆ.ಅದು ನಿಮ್ಮ ಮಗ ಗಣೇಶನ ದಂತವನ್ನೇ.ಸ್ವೀಕರಿಸಿ.”
ಎನ್ನುವಾಗಲೇ ಪ್ರಮಾದದ ಅರಿವಾದ ರಾಮ ಪಾರ್ವತಿಯ ಪದತಲದಲ್ಲಿ ಬೀಳುತ್ತಾನೆ.ದೇವಿ ಅವನನ್ನು ಉಪೇಕ್ಷಿಸಿ ಮಾತು ಮುಂದುವರಿಸುತ್ತಾಳೆ.
“ನೀವು ಭಕ್ತ ಪರಾಧೀನರು.ನನ್ನ ಮಕ್ಕಳಿಗೆ ಏನಾದರೂ ಲಕ್ಷ್ಯವಿಲ್ಲ.ಈತ ಮಹಾಪರಾಕ್ರಮಿ ,ಯುದ್ಧಗಳನ್ನು ಗೆದ್ದವ,ಅವನನ್ನೇ ಉದ್ಧಾರಮಾಡಿ .ಮಕ್ಕಳನ್ನು ಕಟ್ಟಿಕೊಂಡು ತಂದೆ ಮನೆಗೆ ಹೋಗುತ್ತೇನೆ”
ಪರಮೇಶ್ವರನಾದರೇನು? ಸಂಸಾರಿಯ ಸಮಸ್ಯೆಯೇ ಇದು.ಈಗ ರಾಮ ವಿಷ್ಣುಶಕ್ತಿ ಸಮಾಹಿತ ಎಂಬುದು ತಿಳಿದಿತ್ತು.ಅವನೇ ಬರುವುದು ಒಳಿತು ಎಂದು ನಾರಾಯಣನನ್ನು ಧ್ಯಾನಿಸುತ್ತಾನೆ.

ಸ್ಥಿತಿ ಕರ್ತ ಕರೆಗೆ ಒಲಿದು ಬರುತ್ತಾನೆ. ಎಲ್ಲರೂ ಅಭಿವಾದನೆ ಮಾಡಿತ್ತಾರೆ.ಹರನೇ ಉಪಚಾರವಿತ್ತರೂ ರಾಮ ತಾಯಿಯ ಹರಕೆ ಸಿಗದೆ ಮೇಲೇಳಬಾರದೆಂದು ವಂದಿಸಿಯೇ ಇರುತ್ತಾನೆ.
ಆಗಿರುವ ಪ್ರಕರಣ ಮತ್ತೆ ವಿವರಣೆಯಾಯಿತು.ನಾರಾಯಣನೇ ದೇವಿಯಲ್ಲಿ ವಿನಂತಿಸುತ್ತಾನೆ.ರಾಮನ ಕ್ರೋಧಾವೇಶದಲ್ಲಿ ತನ್ನಪಾಲೂ ಇರುವುದರಿಂದ ಹೀಗಾಯಿತು.ಎನ್ನುತ್ತಾ ಗಣೇಶನನ್ನು ತಡವರಿಸುತ್ತಾ ತನ್ನ ತೊಡೆಯಮೇಲೆ ಕುಳ್ಳಿರಿಸಿಕೊಳ್ಳುತ್ತಾನೆ.ಒಸರುವ ರಕ್ತ ನಿಂತು ದಂತ ಮಾತ್ರ ತಂಡಾದ ಸ್ಥಿತಿಯಲ್ಲಿ ಹಾಗೇ ಉಳಿಯುತ್ತದೆ.
ಈಗ ರಾಮನಲ್ಲಿ ಭಕ್ತಿಯ ಜೊತೆಗೆ ಭಾವವೂ ಬೆರೆತು ತಾಯಿ ಪಾರ್ವತೀ ದೇವಿಯನ್ನು ಸ್ತೋತ್ರಗಳ ಮೂಲಕ ಹೊಗಳಲಾರಂಭಿಸುತ್ತಾನೆ.ಹರಿಯ ಕೋರಿಕೆ,ರಾಮನ ಸ್ತುತಿಗೆ ಸಂಪ್ರೀತಳಾದ ದೇವಿ ರಾಮನನ್ನು ಎತ್ತಿ ಹರಸುತ್ತಾಳೆ.ರಾಮನೆದ್ದು ಸಕಲರಿಗೂ ಕೃತಾರ್ಥನಾದೆನೆಂದು ಅಭಿವಾದನೆ ಮಾಡುತ್ತಾನೆ.ನಾರಾಯಣನು ಗಣೇಶ ರಾಮರು ಪರಸ್ಪರ ಅಪ್ಪಿಕೊಳ್ಳುವಂತೆ ಮಾಡಿ ಸ್ನೇಹಿತರಾಗುವಂತೆ ಹೇಳುತ್ತಾನೆ.ರಾಮನೂ ತಾನು ತಪ್ಪು ಮಾಡಿದೆ ಕ್ಷಮಿಸೆಂದು ಕೇಳುತ್ತಾನೆ.
ಗಣೇಶನ ಹಲವು ನಾಮಗಳಲ್ಲಿ ಏಕದಂತವೂ ಒಂದಾಗಿ ಕೀರ್ತಿತವಾಗಲೆಂದು ಹಾರೈಸುತ್ತಾನೆ. ಎಲ್ಲವೂ ಸುಖಮಯವಾದಮೇಲೆ ಅಕೃತವ್ರಣ- ರಾಮರು ಸ್ವಲ್ಪದಿನ ಅಲ್ಲಿದ್ದು ಮರಳುತ್ತಾರೆ.

Author Details


Srimukha

Leave a Reply

Your email address will not be published. Required fields are marked *