ಹವಿ ಸವಿ ತೋರಣ – ೧೧ ‘ಜೋ..ಜೋ.. ಕೃಷ್ಣಾ ಪರಮಾನಂದಾ….’

ಲೇಖನ

 

ಜೋಗುಳ, ಲಾಲಿ’ ಈ ಪದಂಗೊಕ್ಕೆ ಎಂತಹ ಆಕರ್ಷಣೆ..! ನಾವೆಲ್ಲ ಸಣ್ಣಾದಿಪ್ಪಗ ಜೋಗುಳ ಕೇಳಿಂಡೇ ಒರಗಿಂಡಿದ್ದದಲ್ಲದೋ. ಪುಟ್ಟು ಪಾಪುವಿನ ತೊಟ್ಲಿಲ್ಲಿ ಮನುಶಿ ಜೋ.. ಜೋ..’ ಹೇಳುವ ಚೆಂದದ ಒಂದು ನೋಟ ಮನಸ್ಸಿಂಗೆ ಅದೆಷ್ಟು ಕೊಶಿ ಕೊಡ್ತು.

ತೊಟ್ಲು ಅಥವಾ ತೊಟ್ಟಿಲು ಹೇಳುವ ಮಕ್ಕಳ ಮನುಶುವ ಉಯ್ಯಾಲೆಲಿ ಮಕ್ಕಳ ಒಪ್ಪಕೆ ಮನುಶಿ ಅಬ್ಬೆ
‘ಜೋ..ಜೋ..ಕೃಷ್ಣಾ….ಪರಮಾನಂದಾ….ಜೋ…ಜೋ..ದೇವಕಿ ಕಂದ ಮುಕುಂದಾ…ಜೋ…ಜೋ….’ ಹೇಳಿ ಜೋಗುಳ ಹಾಡಿದರೆ ಎಷ್ಟು ಗೆಂಟು ತರ್ಕ ಮಾಡಿ ಕೂಗುವ ಮಕ್ಕೊ ಕೂಡ ಕಣ್ಣು ಮುಚ್ಚಿ ಮನುಗುತ್ತವು. ತೊಟ್ಲಿಂಗು, ಜೋಗುಳಕ್ಕು ಅಷ್ಟು ಶಕ್ತಿಯಿದ್ದು.

ಸಂಬಂಧಂಗಳ ಎಲ್ಲ ದೈವಿಕ ಭಾವನೆಂದ ನೋಡುವ ನಮ್ಮ ಸಂಸ್ಕೃತಿಲಿ ಪ್ರತಿಯೊಂದು ಅಬ್ಬೆಗೂ ಅದರ ಪಾಪು ದೇವರ ಹಾಂಗೇ. ಆ ಪಾಪು ಕೂದರೂ, ನಿಂದರೂ ನೆಗೆ ಮಾಡಿದರು, ಕೂಗಿದರೂ ಅಬ್ಬೆಗೆ ಕೊಂಗಾಟವೇ. ಹಾಂಗಿದ್ದ ಬಾಂಧವ್ಯ ಅಬ್ಬೆ ಮಕ್ಕಳದ್ದು. ದೇವರ ಹಾಂಗಿದ್ದ ಶಿಶುವಿನ ಅಬ್ಬೆ ತೊಟ್ಲಿಲ್ಲಿ ಮನುಶಿ ತೂಗುಗ ದೇವರ ಪದ್ಯಂಗಳನ್ನೇ ಹೇಳುದು ಅದಕ್ಕೇ.

‘ ಬಂಗಾರು ಬಾಲಂಗೆ ಓಲೆ ನೇವಳ ಬೇಕು
ಮಾಣಿಯಂಗೊ ಬೇಕು ಮನೆತುಂಬ | ಆದರೂ
ಜಾಣೆಯರೆ ಬೇಕು ಸೊಸೆಯಕ್ಕೊ ||
ಹೇಳಿ ಬಾಯಿಗೆ ಬಂದ ಪದಂಗಳನ್ನೇ ಪದ್ಯದ ಹಾಂಗೆ ಹೇಳುವ ಹೆಮ್ಮಕ್ಕಳೂ ಮೊದಲಿಂಗೆ ಇತ್ತಿದ್ದವು.

ತೊಟ್ಲು ಹೇಳಿದರೆ ಮಕ್ಕೊಗೆ ಒಂದು ರೀತಿಯ ರಕ್ಷಣೆ ಕೊಡ್ತು. ಚಳಿಗೆ ಬೆಚ್ಚಂಗೆ ಮಕ್ಕಳ ಮನುಶುಲೆ ತೊಟ್ಲೇ ಲಾಯ್ಕ. ತೊಟ್ಲು ಅತ್ಯಂತ ಶುಭಕರವಾದ ವಸ್ತು. ಹೊಸ ಮನೆ ಒಕ್ಕಲು ಮಾಡುಗ ತೊಟ್ಲನ್ನು ಮದಾಲು ಮನೆಯೊಳಾಂಗೆ ತಪ್ಪ ಸಂಪ್ರದಾಯ ನಮ್ಮದು.
ಮದಲಿಂಗೆಲ್ಲ ಈಗಾಣ ಹಾಂಗಿದ್ದ ಪ್ಲಾಸ್ಟಿಕ್ ನ , ಕಬ್ಬಿಣದ, ವಸ್ತ್ರದ ತೊಟ್ಲುಗೊ ಇಲ್ಲೆ. ಎಂತ ಇದ್ದರೂ ಮರದ ತೊಟ್ಲೇ ಇಪ್ಪದು. ಬಾಳಂತನಕ್ಕೆ ಬಂದ ಮಗಳು ಹೆತ್ತು, ಬಾಳಂತನ ಮುಗುಶಿಕ್ಕಿ ಹಿಳ್ಳೆ, ಬಾಳಂತಿ ಗೆಂಡನ ಮನಗೆ ಹೋಪಗ ಅಪ್ಪನಮನೆಂದ ತೊಟ್ಲನ್ನೂ ಉಡುಗೊರೆಯಾಗಿ ಕೊಡುದು ನಮ್ಮಲ್ಲಿ ಪ್ರಾಕ್ ಪದ್ದತಿ.

ಪುಟ್ಟು ಮಕ್ಕಳ ಹೊಸ ತೊಟ್ಲಿಲ್ಲಿ ಮನುಶುಲೂ ಕೆಲವು ಕ್ರಮಂಗೊ ಇದ್ದು. ಹೊಸ ತೊಟ್ಲು ಹೇಳಿ ಸೀದಾ ಮನುಶುವ ಹಾಂಗಿಲ್ಲೆ.
ಮಗು ಹುಟ್ಟಿದ ಹನ್ನೆರಡನೇ ದಿನ ಹೆಚ್ಚಾಗಿ ಮಕ್ಕಳ ತೊಟ್ಲಿಲ್ಲಿ ಮನುಶುವ ಕಾರ್ಯಕ್ರಮ ಮಾಡ್ತವು.

ಹೊಸ ತೊಟ್ಲಾದರೆ ಅದಕ್ಕೆ ಸೇಡಿ ಬರದು ಅಲಂಕಾರ ಮಾಡಿ, ಬಳ್ಳಿಲಿ ತೂಗಿಕ್ಕಿ ಅದರೊಳಾಂಗೆ ಮದಾಲು ಗುಂಡುಕಲ್ಲು ಮಡುಗಿ ತೂಗುವ ಕ್ರಮ. ತೊಟ್ಲು ಮಾಡುಗಳೋ, ಮದಲೆಯೋ, ಮತ್ತೆಯೋ, ದುಷ್ಟಶಕ್ತಿಗೊ ಇದ್ದರೆ ಅದೆಲ್ಲ ಹೋಪಲೆ ಹೀಂಗೆ ಗುಂಡುಕಲ್ಲು ಮಡುಗುದು ಹೇಳಿ ಎನ್ನ ಸೋದರತ್ತೆ ಹೇಳುದು ಕೇಳಿದ್ದೆ.

ಮದಲಿಂಗೆ ಮನೆ ತುಂಬ ಜೆನ ಇಪ್ಪಗ ಪಾಪುವಿನ ತೊಟ್ಲಿಲ್ಲಿ ಮನುಶುವ ಕಾರ್ಯಕ್ರಮವು ಒಂದು ಗೌಜಿಯೇ. ಮನೆ ಅಜ್ಜಿ,ಅಜ್ಜನಮನೆ ಅಜ್ಜಿ, ಸಣ್ಣಜ್ಜಿ, ದೊಡ್ಡಜ್ಜಿ, ಸೋದರತ್ತೆಕ್ಕೊ, ಚಿಕ್ಕಮ್ಮಂದ್ರು ಎಲ್ಲರು ಸೇರಿ ಹಾಡು ಹೇಳುವ ಸಂಭ್ರಮವೇ ಬೇರೆ.

‘ ಕಾಲಿಗೆ ಬಿದ್ದಲ್ಲಿ ನೋವು ಮಾಡಿದನು..
ಕಾಲಿಗೆ ಮೆಣಸನು ತಾನೇ ಅರೆದನು..
ಗಟ್ಯಾದ ಗಡಿಗೆಯ ಕುಟ್ಟಿ ಒಡೆದನು..
ಕುಟ್ಟಿದ ಗಡಿಗೆಗೆ ಕಿಟ್ಟ ಅರೆದನೂ ..
ಜೋ….ಜೋ….’ ಹೇಳಿ ಗುಂಡುಕಲ್ಲಿನ ಮಡುಗಿ ಹಾಡು ಹೇಳುಗು ಅಜ್ಜಿಯಕ್ಕೊ.

‘ ಅಜ್ಜಂದಿರೈವರು ಅಜ್ಜಿಯಂದಿರೈವರು..
ಗೆಜ್ಜೆ ಕಾಲ್ಗಡವ ಮಾಡಿಸಿ ತಂದು..
ಹೆಜ್ಜಿಲ್ಲದ ಮಗನನ್ನೆಲಿಡಬೇಕೆಂದು..
ಮುದ್ದು ತಂಗ್ಯಮ್ಮನ ಕರೆದು ಕೇಳಿದರೂ..
ಜೋ…ಜೋ…’ ಆರು ಬರದ್ದು ಹೇಳಿ ಗೊಂತಿಲ್ಲದ್ರೂ ಈ ಗುಂಡಪ್ಪನ ಜೋಗುಳ ಪದ್ಯ ನೆಂಪಪ್ಪಗ ಅಜ್ಜಿಯಕ್ಕಳ ಗೌಜಿ, ಸಂಭ್ರಮ ಕಣ್ಣ ಮುಂದೆ ಕಂಡಹಾಂಗಾವ್ತು.

ಹೀಂಗೆ ಹಾಡು ಹೇಳಿ ಗುಂಡುಕಲ್ಲಿನ ತೂಗಿಕ್ಕಿ , ಮತ್ತೆ ಜೋಡುಕಾಯಿ ತಂದು ತೊಟ್ಲಿಲ್ಲಿ ಮಡುಗಿ ತೂಗುವ ಕ್ರಮ. ಮತ್ತೆ ಪುಟ್ಟು ಪಾಪುವಿಂದ ರಜಾ ದೊಡ್ಡ ಪಾಪು ಇದ್ದರೆ ಅವರ ಮನುಶಿ ತೂಗುದು. ಅದಾದ ಮತ್ತೆ ಪಾಪುವಿನ ತೊಟ್ಲಿಲ್ಲಿ ಮನುಶುದು.

‘ ಆರ ಕಂದ ನೀನಾರ ನಿಧಾನಿ ಯಾರ ರತ್ನವೊ
ನೀನಾರ ಮಾಣಿಕವೋ..
ಸೇರಿತು ಎನಗೊಂದು ಚಿಂತಾಮಣಿಯೆಂದು
ಬಾಲ ನಿನ್ನನು ಪಾಡಿ ತೂಗುವೆನಯ್ಯಾ….
ಜೋ….ಜೋ…..’ ಹೇಳಿ ಎಲ್ಲರು ಒಟ್ಟಿಂಗೆ ಹಾಡು ಹೇಳಿ ತೂಗುವ ಸಂಭ್ರಮವೇ ಮತ್ತೆ.

ಪುಟ್ಟು ಮಕ್ಕೊಗೆ ಒಪ್ಪ ಬುದ್ದಿ ಕಲುಶುದು ಜೋಗುಳದ ಪದ್ಯಂಗಳ ಮೂಲಕವೇ. ನಮ್ಮ ಅಜ್ಜಿಯಕ್ಕೊ ಹಾಡುವ ಎಷ್ಟೋ ಹಾಡುಗಳಲ್ಲಿ ಮಕ್ಕೊಗೆ ಕಲುಶುವ ನೀತಿಗೊ‌ ಇದ್ದು.

‘ ಆಚಾರಕ್ಕರಸಾಗು, ನೀತಿಗೆ ಪ್ರಭುವಾಗು
ಮಾತಿನಲಿ ಚೂಡಾಮಣಿಯಾಗು ಕಂದಯ್ಯ
ಜ್ಯೋತಿಯೇ ಆಗು ಜಗಕೆಲ್ಲಾ…
ಜೋ…ಜೋ…’ ಹೇಳಿ ಮಕ್ಕೊಗೆ ಪ್ರತಿದಿನವು ಹಾಡಿ ತೂಗಿ ಒಪ್ಪ ಬುದ್ದಿ ಕಲಿಶಿಂಡಿತ್ತವು ನಮ್ಮ ಹಿರಿಯರು.

ಇಷ್ಟು ಮಾಂತ್ರ ಅಲ್ಲ ಪುರಾಣ ಕಥೆಗಳನ್ನು ಹಾಡಿನ ರೀತಿಲಿ ಮಕ್ಕೊಗೆ ಹೇಳುಗು.
‘ ಜನಕ ರಾಯನ ಮಗಳು
ಗಿಡಕೆ ತೊಟ್ಟಿಲ ಕಟ್ಟೀ
ಲವಕುಶರ ತೂಗ್ಯಾಳು…’ ಹೇಳಿ ಅಜ್ಜಿ ಹಾಡಿಂಡಿದ್ದ ಹಾಡು ಈಗ ನೆಂಪಾವ್ತೇ ಇಲ್ಲೆ ಹೇಳುದೇ ಬೇಜಾರ.

‘ ಕೃಷ್ಣನ ಬಾಲಲೀಲೆ ‘ ಹೇಳಿ ಅಜ್ಜಿ ಸುಮಾರು ಹಾಡು ಹೇಳುಗು. ಕೃಷ್ಣ ದೇವರ ಲೂಟಿ ಪೂರಾ ಆ ಹಾಡಿಲ್ಲಿದ್ದು.

‘ ತಾಳಲಾರೆವಮ್ಮ ನಿನ್ನ ಬಾಲಕೃಷ್ಣನ | ಬಗೆಯ
ಬಾಲಕೃಷ್ಣನಾ..
ಹಾಲು ಮೊಸರು ಬೆಣ್ಣೆ ತಿಂದು
ಕೇಳಲು ನಾನಲ್ಲವೆನುವಾ..
ಬುದ್ದಿಯನ್ನು ಪೇಳಿ | ಮಗನಾ
ತಿದ್ದಿಸು ನೀನೂ ಗೋಪೀ….’
ಹೀಂಗೇ ಉದ್ದಾಕೆ ಹಾಡುವ ಹಾಡುಗೊ ಅದೆಲ್ಲ.

ಇಂದು ಹೀಂಗಿದ್ದ ಹಾಡುಗೊ‌ ಎಲ್ಲ ಎಲ್ಲೋ ಕಾಣೆ ಆಯಿದು. ಇದೆಲ್ಲ ಬಾಯಿಂದ ಬಾಯಿಗೆ ಪಗರಿ ಬಂದ ಕಾರಣ ಬರದು ಮಡುಗಿದ್ದೇ ಕಮ್ಮಿ. ಒಂದೊಂದು ಮನೆಯ ಅಜ್ಜಿಯಕ್ಕಳೂ ಒಂದೊಂದು ವಿಶ್ವವಿದ್ಯಾಲಯದಷ್ಟು ಜ್ಞಾನ ಸಂಪಾದನೆ ಮಾಡಿದವು. ಆ ಕೊಂಡಿ ಕಳಚಿಯಪ್ಪಗ ನಮ್ಮ ಸಮಾಜಕ್ಕೆ ತುಂಬಲಾರದ್ದ ನಷ್ಟ ಆವ್ತು.

ಹಳೇ ಹಾಡು ಇಲ್ಲದ್ರೂ ಇಂದ್ರಾಣ ಹೊಸ ಅಬ್ಬೆಕ್ಕೊ ಹೊಸ ಹೊಸ ಪದ್ಯ ಹಾಡ್ತವು. ಮಕ್ಕೊ ಹೇಳಿದರೆ ಅಬ್ಬೆಗೆ ಅಮೂಲ್ಯ ನಿಧಿ. ಅಬ್ಬೆಯ ಪ್ರೀತಿಗೆ ಬಡತನ, ಸಿರಿತನ ಯೇವದೂ ಅಡ್ಡ ಬತ್ತಿಲ್ಲೆ. ಹಾಂಗೇ ಅಬ್ಬೆ ಹಾಡುವ ಜೋಗುಳದ ಪದ್ಯಂಗೊಕ್ಕೂ ಭಾಷೆಯ ಬಂಧನ ಇರ್ತಿಲ್ಲೆ.
ಕನ್ನಡವೋ, ಮಲೆಯಾಳವೋ, ತಮಿಳೋ ಯೇವದೂ ಆವ್ತು. ಅಬ್ಬೆಯ ಪ್ರೀತಿ ಧಾರೆಯಾಗಿ ಪಾಪುವಿಂಗೆ ಸಿಕ್ಕಿದರೆ ಆತು.

‘ ಜೋ..ಜೋ..ರಾಮಾ….ಆನಂದಘನ ಜೋ..ಜೋ..ರಾಮಾ…’ ಹೇಳಿ ತ್ಯಾಗರಾಜರ ಅದ್ಬುತ ಕೀರ್ತನೆ ಕೇಳಿದರೆ ಮನಸ್ಸು ಈಗಲೂ ಬಾಲ್ಯಕ್ಕೆ ಹೋವ್ತು. ಅಬ್ಬೆಯ ಹಾಡು ಮತ್ತೊಂದರಿ ಕೆಮಿಗೆ ಕೇಳಿದಾಂಗಾವ್ತು. ಒರಕ್ಕು ಬಂದು ಕಣ್ಣು ತೂಗುತ್ತು….!

ನಾವೆಲ್ಲ ತೊಟ್ಲಿಲ್ಲಿ ಮನುಗಿ, ಜೋಗುಳ ಕೇಳಿಯೇ ದೊಡ್ಡಾದವು. ನಮ್ಮ ಮುಂದಿನ ತಲೆಮಾರಿನ ಮಕ್ಕೊಗೂ ತೊಟ್ಲು, ಜೋಗುಳದ ಮಹತ್ವ ತಿಳಿಶುವ°.

ಮಕ್ಕೊಗೆ ಜೋಗುಳದ ಮೂಲಕ ಪರತತ್ವ ಬೋಧಿಸಿ ಅವೆಲ್ಲ ಪರಬ್ರಹ್ಮೈಕ್ಯರಪ್ಪಾಂಗೆ ಮಾಡಿದ ಮದಾಲಸೆ ಹೇಳುವ ರಾಣಿಯ ಕಥೆ, ಅದರ ಜೋಗುಳ ಅಜ್ಜಿ ಹೇಳುದು ಕೇಳಿದ್ದೆ. ಹಾಂಗೇ ಜೋಗುಳದ ಮೂಲಕ ಮಕ್ಕೊಗೆ ಒಪ್ಪ ಬುದ್ದಿಯ ಕಲುಶುವ°. ನಮ್ಮ ಮುಂದಿನ ತಲೆಮಾರುದೆ ನಮ್ಮ‌ ಹಳೇ ಸಂಸ್ಕೃತಿ, ಸಂಪ್ರದಾಯಂಗಳ ತಿಳಿಯಲಿ. ಅದರ ಎಡಿಗಾದಷ್ಟು ಆಚರಿಸಿ ಒಳಿಶಿಕೊಳ್ಳಲಿ..

ಪ್ರಸನ್ನಾ ವಿ. ಚೆಕ್ಕೆಮನೆ

Leave a Reply

Your email address will not be published. Required fields are marked *