ಚಳಿಕಾಲ ಹೇಳಿ ಹೇಳುಗಳೇ ಮನಸ್ಸಿಂಗೆ ಒಂದುರೀತಿಯ ತಂಪು ತಂಪು ಅನುಭವ ಅಪ್ಪದು. ಹಳೆ ನೆಂಪುಗಳ ಪೆಟ್ಟಿಗೆಯ ಮುಚ್ಚಲು ತೆಗದರೆ ಚಳಿಕಾಲದ ಕತೆಗೊ ಸುಮಾರಿದ್ದು. ಚಳಿಕಾಲ ಹೇಳಿದರೆ ಧನು ಮಕರ ತಿಂಗಳಿನ ಸಮಯ. ತೋಟದ ಅಡಕ್ಕೆ ಎಲ್ಲ ಹಣ್ಣಾಗಿ ಬೀಳುವ ಕಾಲ. ಚಳಿಯ ಹನಿ ಪರದೆಯ ನಡೂಕೆ ಬೆಚ್ಚಂಗೆ ಕಂಬಳಿ ಹೊದಕೊಂಡು ಮನುಗುಲೆ ಮನಸ್ಸು ಆಶೆಪಡುವ ಉದೆಕಾಲದ ಹೊತ್ತಿನ ನೆಂಪೇ ಒಂದು ಮಧುರ ಅನುಭೂತಿ.
ಹೊಗೆ ತುಂಬಿದ ಹಾಂಗೆ ಕಾಂಬ ಹನಿಯ ಪರದೆಯ ಎಡೇಲಿ ಸೂರ್ಯನ ಚಿನ್ನದ ಗೆರೆಯ ಹಾಂಗಿದ್ದ ಬೆಣಚ್ಚು ಭೂಮಿಗೆ ಬೀಳುಗ ಅದಕ್ಕೆ ಮೈಯೊಡ್ಡಿ ನಿಂಬಲೆ ಎಷ್ಟು ಕೊಶಿ…!
ಹನಿಯ ಪರದೆ ಹಾಕಿದ ಗುಡ್ಡೆಗೊ ಕಣ್ಣಿಂಗೆ ಕಾಣದ್ದೆ ಇದ್ದರೂ ಪಚ್ಚೆ ಹುಲ್ಲಿನ ಕೊಡಿಯಂಗೆ ಅಂಟಿದ ನೀರ ಹನಿ ಸೂರ್ಯನ ಬೆಣಚ್ಚಿಂಗೆ ಫಳ ಫಳ ಹೊಳಗು.
ಅಜ್ಜಿಯೋ, ಅಬ್ಬೆಯೋ ಹಟ್ಟಿಂದ ಹಾಲು ಕರದು ತಂದ ನೊರೆಹಾಲಿನ ಕಾಸಿ ಬೆಲ್ಲ ಹಾಕಿದ ಕಶಾಯವೋ, ಕಾಫಿಯೋ ಮಾಡಿಕೊಟ್ಟರೆ ಅದರ ಊಪಿ ಕುಡಿವದು ಹೇಳಿದರೆ ಸ್ವರ್ಗವೇ ಸಿಕ್ಕಿದ ಅನುಭವ.
ಅಬ್ಬಿಕೊಟ್ಟಗೆಲಿ ಅಜ್ಜ ಬಿಸಿನೀರ ಒಲಗೆ ಕಿಚ್ಚಾಕಿಂಡಿದ್ದರೆ ಹತ್ತರೆ ಹೋಗಿ ಕೂದು ಚಳಿ ಕಾಸಿದ ಅನುಭವಂಗಳ ಜೀವನಲ್ಲಿ ಮರವಲೆಡಿಯ. ಪೂಜಗೆ ಹೂಗು ಕೊಯ್ವಲೆ ಹೋಗಿ ಸೆಸಿಗಳಿಂದ ತಟಪಟ ಬೀಳುವ ಹನಿಕ್ಕುಟ್ಟಿಂಗೆ ಮೋರೆ ಒಡ್ಡಿ ಆ ಹಿತವಾದ ಚಳಿಯ ಅನುಭವಿಸಿದ ಸುಖದ ನೆಂಪು ಈಗ ನಡೆದಾಂಗೆ ಆವ್ತು. ಮರಂಗಳ ಎಡೇಲಿ ಸಾಲಿಗನ ಬಲೆ ಇದ್ದರೆ ಅದಕ್ಕೆ ಅಂಟಿದ ಹನಿಗೊ ನವರತ್ನದ ಮಣಿಗಳ ಮಾಲೆಯ ಹಾಂಗೆ ಹೊಳಗು.
ಅಜ್ಜಿಯೋ, ಅಬ್ಬೆಯೋ ಒಲೆಲಿ ಕಾವಲಿಗೆ ಮಡುಗಿ ದೋಸೆರವ ಹೊತ್ತಿಂಗೆ ಮತ್ತೆ ಚಳಿಕಾಸಲೆ ಬಲೆಬುಡಲ್ಲಿ ಬಂದು ಕೂಪದು. ಆ ನೆಂಪೇ ಚಂದ. ಹೊತ್ತೋಪಗಳೂ ಅಷ್ಟೇ ಚಳಿ ಹೇಳಿಂಡು ಅಜ್ಜಿ ಮಾಡಿಕೊಟ್ಟ ಚಕ್ಕುಲಿಯೋ, ಸುಟ್ಟಾಕಿ ಕೊಟ್ಟ ಹಪ್ಪಳವನ್ನೋ ತಿಂದುಕೊಂಡು ಚಳಿಯ ಓಡ್ಸಿಕೊಂಡಿದ್ದ ಕಾಲ ಒಂದಿದ್ದತ್ತು.
ಕಿಚ್ಚಿನ ಬುಡಲ್ಲಿ ಕೂದು
ಬೆಚ್ಚಂಗೆ ಚಳಿಕಾಸಿದ
ಅಚ್ಚಹಸಿರಿನ ದಿನಂಗೊ
ಅಚ್ಚು ಮೆಚ್ಚಲ್ಲದೋ ಇಂದಿಗೂ..
ಕೃಷಿಯೇ ಜೀವನಾಧಾರ ಆಗಿಪ್ಪವಕ್ಕೆ ಈ ಚಳಿಯ ಎಡೆಲೂ ಕೆಲಸ ಮಾಡ್ಲೇಬೇಕು. ಎಷ್ಟೇ ಚಳಿ ಇದ್ದರೂ ಮನೆ ಹೆಮ್ಮಕ್ಕೊ ಏಳ್ಲೆ ತಡವು ಮಾಡ್ತವಿಲ್ಲೆ. ಪುಳ್ಳಿಯಕ್ಕೊ ಚಳಿ, ಚಳಿ ಹೇಳಿದರೂ ಅಜ್ಜ° ಕೈಗೆ ಕಾಲಿಂಗೆ ರಜ ತೆಂಗಿನೆಣ್ಣೆ ಪಸೆ ಮಾಡಿಕ್ಕಿ ತೋಟಕ್ಕೆ ಹೋಕು. ಚಳಿಗೆ ಕಾಲು ಒಡದರೂ, ಕೈ ಬಿರುದರೂ ಅವಕ್ಕೆ ಲಗಾವಿಲ್ಲೆ. ತೋಟಲ್ಲಿ ಗೆದ್ದೆಲಿ ಕೆಲಸ ಮಾಡಿದ ಹಿರಿಯರು ಬೆಶಿಲು, ಚಳಿ, ಮಳೆ ಹೇಳಿ ಮನೆಯೊಳ ಕೂರ್ತವೇ ಇಲ್ಲೆ. ಅವರ ದಿನಚರಿಗೆ ಬದಲಾವಣೆ ಇಲ್ಲೆ.
ಆದರೆ ಈಗ ಕಾಲ ಬದಲಾದ ಹಾಂಗೆ ನಾವುದೆ ಬದಲಾಯಿದು. ಚೆಂದದ ಚಳಿಯ ಅನುಭವಿಸುವ ಮನಸ್ಸಿಲ್ಲೆ ನಮಗೆ. ಈಗಾಣ ಒತ್ತಡದ ಜೀವನ ಶೈಲಿಲಿ ಹಳೆಯ ಜೀವನ ಶೈಲಿಯ ಕಳಕೊಂಡರೂ ಮನಸ್ಸಿನ ಮೂಲೆಲಿ ಬೆಚ್ಚನೆಯ ನೆಂಪಾಗಿ ಈಗಲೂ ಆ ಅನುಭೂತಿ ಅಲ್ಲೇ ಇದ್ದು.
ಚಳಿಯಲ್ಲಿ ನಡುಗುತ್ತ
ಹರಟೆಯನು ಹೊಡೆಯುತ್ತ
ಬೆಂಕಿಯನು ಉರಿಸುತ್ತ
ಕೈ ನೀಡಿ ಚಳಿಕಾಸಿದ
ನೆನಪಿನ ಅನುಭೂತಿ ಎಷ್ಟು ಮಧುರ
ಪ್ರಸನ್ನಾ ವಿ. ಚೆಕ್ಕೆಮನೆ