ಹವಿ ಸವಿ ತೋರಣ – ೨೪ ನೆಂಟ್ರಮನೆಯ ಪ್ರೀತಿ ಸೆಲೆ

ಲೇಖನ

 

ಮಾರ್ಚ್ ತಿಂಗಳು ಮುಗುದು ಎಪ್ರಿಲ್ ತಿಂಗಳು ಬತ್ತಾಯಿದ್ದು ಹೇಳಿದರೆ ಸಾಕು, ಶಾಲೆಗೆ ಹೋಪ ಮಕ್ಕಳ ಮನಸ್ಸು ಅಜ್ಜನ ಮನೆಯ ಕಡೆoಗೆ ಓಡ್ಲೆ ಸುರುವಾವುತ್ತು. ಶಾಲೆಯ ಪರೀಕ್ಷೆ ಮುಗಿದು ದೊಡ್ಡ ರಜೆ ಸುರುವಾದರೆ, ಮಾರಾಪು ಕಟ್ಟಿಂಡು ಬಸ್ಸು ಹತ್ತಿ ಅಜ್ಜನ ಮನೆಗೆ ಹೋಪ ಆ ಸಂಭ್ರಮ ಇದ್ದಲ್ಲದಾ, ಅದು ಈಗಾಣ ಯೇವದೇ ಪೇಟೆಯ ದೊಡ್ಡ ದೊಡ್ಡ ವಾಣಿಜ್ಯ ಮಳಿಗೆಗಳಲ್ಲಿ ತಿರುಗಿರೂ ಸಿಕ್ಕ . ನಮ್ಮ ಬಾಲ್ಯದ ಚಿನ್ನದ ಹಾಂಗಿದ್ದ ದಿನಂಗೊ ಅದೆಲ್ಲ. ಆ ದಿನಂಗೊ ಬರೀ ಅಜ್ಜನ ಮನೆಗೆ ಮಾತ್ರ ಸೀಮಿತ ಆಗಿತ್ತಿಲ್ಲೆ. ದೊಡ್ಡಮ್ಮ, ಚಿಕ್ಕಮ್ಮ, ಸೋದರತ್ತೆ…. ಹೀಗೆ ನೆಂಟರಿಷ್ಟರ ಮನೆಗೊಕ್ಕೆ ರಜೆಲಿ ಸುತ್ತಾಡುವುದೇ ಒಂದು ದೊಡ್ಡ ಹಬ್ಬದ ಹಾಂಗೆ. ಆ ಗೌಜಿಯ ಈಗ ಒಂದರಿ ನೆಂಪು ಮಾಡುವನಾ..!

ಅಜ್ಜನ ಮನೆ ಹೇಳಿರೆ ಅದು ಬರೀ ಕಲ್ಲು ಮಣ್ಣಿನ ಗೋಡೆಯ ಮನೆಯಲ್ಲ. ಅದು ಪ್ರೀತಿಯ, ಸಂಸ್ಕಾರದ, ಹೊಸ ರುಚಿಗಳ ಒಂದು ದೊಡ್ಡ ಲೋಕ.

ಅಜ್ಜನಮನೆ ಜಾಲಿಂಗೆ ಕಾಲು ಮಡುಗುಗಲೇ ಅಜ್ಜಿ ಓಡಿ ಬಂದು

“ಬಂದೆಯಾ ಪುಳ್ಳೀ… ಬಪ್ಪಗ ದಾರಿಲಿ ಎಂತ ಬಂಙ ಆಯಿದಿಲ್ಲೆನ್ನೇ ? ಕೈಕಾಲು ತೊಳಕೊಂಡು ಬನ್ನಿ, ಬಂದು ಆಸರಿಂಗೆ ಕುಡಿರಿ ” ಹೇಳಿ ಅಜ್ಜಿ ಪ್ರೀತಿಲಿ ಹೇಳುಗ ಸಿಕ್ಕುವ

ಆ ಬೆಚ್ಚನೆಯ ಅನುಭವ ನಮಗೆ ಬೇರೆಲ್ಲೂ ಸಿಕ್ಕ.

ಅಜ್ಜನಮನೆಲಿ ಅಜ್ಜನೊಟ್ಟಿಂಗೆ ತೋಟಕ್ಕೋಪದು, ಅಜ್ಜ° ಅಡಕ್ಕೆ ಹೆರ್ಕುಗ ಸೇರುದು. ತೋಟಕ್ಕೆ ನೀರು ಚೇಪುಗ ಹಾಳೆ ಕಿಳ್ಳಿ ಹಿಡ್ಕೊಂಡು ಅಜ್ಜನೊಟ್ಟಿಂಗೆ ಗೌಜಿ ಕಟ್ಟುದು ಎಲ್ಲ ಎಷ್ಟು ಚಂದದ ನೆಂಪುಗೊ.

ಅಜ್ಜ° ತೋಟಲಿಪ್ಪ ಬೇರೆ ಬೇರೆ ಮರಂಗಳ ಗುರ್ತ ಹೇಳುಗು. ಬೇರೆ ಬೇರೆ ಹೆಸರಿನ ಎಷ್ಟೆಷ್ಟೋ ಮರಂಗಳ ಗುರ್ತ ಮಾಡಿಕ್ಕಿ ಅದೆಲ್ಲ ಯೇವ ಯೇವ ಉಪಯೋಗಕ್ಕೆ ಆವ್ತು ಹೇಳುವ ಸಸ್ಯಶಾಸ್ತ್ರದ ವಿದ್ಯೆಯ ಅಜ್ಜ ಸಣ್ಣಾದಿಪ್ಪಗಳೇ ಮಕ್ಕೊಗೆ ಹೇಳಿ ಕೊಡುಗು.

ಇನ್ನು ಅವರ ಹತ್ತರೆ ಕೂದು ಕಥೆ ಕೇಳುವ ಕೆಲಸ. ಅಜ್ಜ° ಅಜ್ಜಿ ಹೇಳುವ ಕಥೆಗೊ

ಮಕ್ಕಳ ಬುದ್ಧಿವಂತಿಕೆಯನ್ನು ಹೆಚ್ಚಿಸುತ್ತು.

ಪುರಾಣದ ಕಥೆಗೊ ಆಗಿಕ್ಕು , ಕುಟುಂಬದ ಹಿರಿಯರ ಸಾಹಸದ ಕತೆಗೊ ಇಕ್ಕು , ಇದಲ್ಲದ್ದೆ ಕಾಡಿನ ಪ್ರಾಣಿಗಳ ಕತೆ, ನೀತಿ ಕಥೆಗೊ… ಹೀಂಗೆ ಸುಮಾರಿದ್ದು ಇವೆಲ್ಲವನ್ನೂ ಅಜ್ಜ ಹೇಳುವ ರೀತಿಲಿ ಒಂದು ವಿಶೇಶ ಚೆಂದ ಇರ್ತು. ಅಜ್ಜ° ಅಜ್ಜಿ ಬರೀ ಕಥೆ ಹೇಳುದಲ್ಲ, ಜೀವನದ ಮೌಲ್ಯಂಗಳನ್ನು ಕೂಡ ಅಲ್ಲಿಯೇ ತಿಳಿಶಿಕೊಡ್ತವು.

ಇನ್ನು ಅಜ್ಜಿಯ ಕೈರುಚಿಯ ಬಗ್ಗೆ ಹೇಳ್ಲೆ ಹೆರಟರೆ ಪದಂಗಳೇ ಸಾಲ. ಬೇಸಗೆ ಹೇಳಿರೆ ಮಾವಿನ ಹಣ್ಣು, ಹಲಸಿನಹಣ್ಣು ಎಲ್ಲ ಅಪ್ಪ ಸಮಯ. ಅಜ್ಜಿ ಮಾಡುವ ಮಾವಿನ ಹಣ್ಣಿನ ಸಾಸಮೆ, ಮೆಡಿ ಉಪ್ಪಿನಕಾಯಿ, ಹಲಸಿನ ಹಣ್ಣಿನ ಕೊಟ್ಟಿಗೆ, ಗೆಣಸಲೆ, ಸುಟ್ಟವು…. ಈ ಪಟ್ಟಿ ಇಲ್ಲಿಗೆ ಮುಗಿತ್ತಿಲ್ಲೆ. ಅಜ್ಜನ ಮನಗೆ ಹೋಗಿ ಅಜ್ಜಿ ಮಾಡಿದ ಅಡಿಗೆ ಉಂಡವಕ್ಕೆ ಈಗಲೂ ಆ ಹಳೇ ರುಚಿ ನಾಲಗೆ ಕೊಡೀಲಿ ಇಕ್ಕು.

ಬರೀ ಅಜ್ಜಿ ಅಜ್ಜ° ಮಾ೦ತ್ರ ಅಲ್ಲ ಅಜ್ಜನಮನೆಲಿಪ್ಪದು. ಸೋದರ ಮಾವಂದ್ರು°, ಅತ್ತೆಕ್ಕೊ ಮಾವಂದ್ರ ಮಕ್ಕೊ ಎಲ್ಲರೂ ಇಪ್ಪ ಮನೆಲಿ ಅವರೊಟ್ಟಿಗೆ ಸಂತೋಷಲ್ಲಿ ಮಧ್ಯಾಹ್ನಪ್ಪಗ ಎಲ್ಲರೂ ಸಾಲಾಗಿ ಕೂದು, ಅಜ್ಜಿ ಬಳ್ಸುವ ಕೆಂಪಕ್ಕಿ ಅಶನ, ಪುನರ್ಪುಳಿ ಸಾರು, ಬೇರೆ ಬೇರೆ ಸೊಪ್ಪುಗಳ ತಂಬುಳಿ ಹಾಕಿ ಉಂಡ ನೆಂಪು ಜೀವನಲ್ಲಿ ಮರವಲೆಡಿಯ.

ದೊಡ್ಡಮ್ಮನ ಅಥವಾ ಚಿಕ್ಕಮ್ಮನ ಮನೆಗೆ ಹೋದರೆ ಅಲ್ಯಾಣದ್ದು ಬೇರೆಯೇ ಒಂದು ಲೋಕ. ಅಲ್ಲಿಪ್ಪ ನಮ್ಮ ಅಣ್ಣ-ತಮ್ಮಂದಿರೊಟ್ಟಿಂಗೆ, ಅಕ್ಕತಂಗೆಕ್ಕಳೊಟ್ಟಿಂಗೆ ಸೇರಿ ಆಡುವ ಆಟ0ಗೊ ಇದ್ದನ್ನೇ….! ದೊಡ್ಡವರ ಕೈಂದ ಎಷ್ಟು ಬೈಗಳು ತಿಂದರೂ ನಾಟದ್ದ ಹಾಂಗಿದ್ದ ದಿನಂಗೂ ಅದೆಲ್ಲ.

ಕೆರೆಗೆ ಹೋಗಿ ನೀರಿಂಗೆ ಹಾರುದು, ಈಜಲೆ ಕಲಿವದು, ಒಬ್ಬನ ಮೇಲೆ ಒಬ್ಬ ನೀರು ಚೇಪಿ ಆಡುದು,ಇದೆಲ್ಲ ಈಗಾಣ ಪೇಟೆಯ ಈಜುವ ಹೊಂಡಂಗಳಲ್ಲಿ (ಸ್ವಿಮ್ಮಿಂಗ್ ಪೂಲ್‌) ಸಿಕ್ಕ.

ಮಾವಿನ ಮರದ ಕೆಳ ಗಾಳಿ ಬಂದಪ್ಪಗ ಬೀಳುವ ಹಣ್ಣುಗಳನ್ನು ಹೆರ್ಕಲೆ ಓಡುವುದು, ಆರಿಂಗೆ ಹೆಚ್ಚು ಸಿಕ್ಕಿತ್ತು ಹೇಳಿ ಲೆಕ್ಕ ಹಾಕುದು ಕೂಡಾ ಒಂದು ಸಂಭ್ರಮ. ಬೀಜ ಕೊಯ್ವ ಸಮಯಲ್ಲಿ ಮಕ್ಕೊ ಯೇವಗಲೂ ಬೀಜದ ಮರ ಹತ್ತಿ ನೇತಾಡಿಂಡೇ ಇಪ್ಪದು.

ಮನೇಲಿ ಮಾಂಬಳ ಮಾಡುವಗ, ಹಲಸಿನ ಕಾಯಿ ಹಪ್ಪಳ ಮಾಡುವಗ ಸಣ್ಣ ಸಣ್ಣ ಸಕಾಯ ಮಾಡುದು, ಆ ಹಪ್ಪಳದ ಹಿಟ್ಟಿನ ಗುಟ್ಟಾಗಿ ತಿ೦ಬದು ಬಾಲ್ಯದ ಅವಿಸ್ಮರಣೀಯ ಕ್ಷಣಂಗೊ

ಮರಕ್ಕೆ ಹತ್ತುದು ಹೇಳಿರೆ ಅದೊಂದು ಸಹಜವಾದ ವಿದ್ಯೆ. ನೇರಳೆ ಮರಕ್ಕೋ, ಪೇರಳೆ ಮರಕ್ಕೋ ಹತ್ತಿ ಹಣ್ಣು ಕೊಯ್ವದು. ನಕ್ಷತ್ರ ನೇರಳೆ, ಚಿಕ್ಕು, ಪೇರಳೆ ಹೇಳಿ ಸಿಕ್ಕಿದ ಹಣ್ಣುಗಳ ಅಲ್ಲೇ ಕೂದು ಕಚ್ಚಿ ತಿ೦ಬ ರುಚಿ ಆಹಾ….ಅದರ ವರ್ಣಿಸಲೇ ಎಡಿಯ.

ಇಂದು ಕಾಲ ಬದಲಿದ್ದು. ಎಷ್ಟೋ ಮಕ್ಕೊಗೆ ಹೀಂಗಿದ್ದ ಬಾಂಧವ್ಯಂಗಳ ವಿಶಯವೇ ಗೊಂತಿಲ್ಲೆ. ಪೇಟೆಲಿಪ್ಪ ಮಕ್ಕೊ ಊರಿಂಗೆ ಬಂದರೆ ಹೆಚ್ಚು ದಿನ ನಿಂಬಲೆ ಅವಕಾಶ ಸಿಕ್ಕುತ್ತಿಲ್ಲೆ. ರಜಲಿ ಬೇರೆ ಬೇರೆ ಶಿಬಿರಂಗೋ, ಕಾರ್ಯಕ್ರಮಂಗೊ, ತಿರುಗಾಟ ಹೇಳಿ ಈಗಾಣ ಮಕ್ಕೊಗೆ ಪುರ್ಸೊತ್ತೇ ಇರ್ತಿಲ್ಲೆ. ಆದರೂ ಒಂದೊಂದರ್ಯಾದರೂ ನಮ್ಮ ಮಕ್ಕಳ ನೆಂಟರ ಮನೆಗೆ ಕಳ್ಸೆಕು. ಅಲ್ಲಿಪ್ಪ ಹಿರಿಯರ ಒಡನಾಟ ಸಿಕ್ಕುವ ಹಾಂಗೆ ಮಾಡೆಕು. ನೆಂಟರ ಮನೆಯ ಒಡನಾಟ ಕಮ್ಮಿಯಾಗದ್ದಾಂಗೆ ಮಾಡಿ, ಮಕ್ಕೊಗೆ ಹಳ್ಳಿಯ ಕೃಷಿ, ತೋಟ, ಗದ್ದೆ ಇದರ ಮಹತ್ವವ ಎಲ್ಲ ನಾವು ತಿಳಿಶೆಕು. ನಮ್ಮ ಮಕ್ಕಳ ಬಾಂಧವ್ಯದ ಬೇರುಗೊ ಇನ್ನೂದೆ ಗಟ್ಟಿಯಾಗಲಿ.

 

ಪ್ರಸನ್ನಾ ವಿ ಚೆಕ್ಕೆಮನೆ

Leave a Reply

Your email address will not be published. Required fields are marked *