ಹವಿ ಸವಿ ತೋರಣ – ೨೬ ವಿಷು ಕಣಿಯ ಸಂಭ್ರಮ

ಲೇಖನ

ಹಬ್ಬಂಗೊ, ಆಯನಂಗೊ, ವ್ರತಂಗೊ, ನಮ್ಮ ಹಿರಿಯರು ನಮಗೆ ಬಳುವಳಿಯಾಗಿ ಕೊಟ್ಟ ಕೆಲವು ಆಚರಣೆಗೊ ಇದೆಲ್ಲವೂ ನಮ್ಮ ಸಂಸ್ಕೃತಿಯ ಅವಿಭಾಜ್ಯ ಅಂಗಂಗೊ. ತಲೆತಲಾಂತರಂದ ನಮ್ಮ ಹಿರಿಯರು ನಡೆಸಿಕೊಂಡು ಬಂದ ಕೆಲವು ಸಂಭ್ರಮದ ಆಚರಣೆಗೊ ಮಂಗಳಕರ ನಿಯಮಂಗೊ ಇದೆಲ್ಲವನ್ನು ನಾವು ತುಂಬಾ ಪೂಜ್ಯ ಭಾವನೆಯಿಂದ ಕಾಣ್ತು. ಅಷ್ಟೇ ಶ್ರದ್ಧೆoದ ಆಚರಿಸುತ್ತಾ ಇದ್ದು.
‘ ಬದುಕಿಲ್ಲಿ ಸುಖ – ದುಃಖ, ಏಳು – ಬೀಳು ತುಂಬಾ ಸಹಜವಾಗಿ ಇಪ್ಪದು. ಅದರ ನಾವು ಒಂದೇ ರೀತಿಯಲ್ಲಿ ಸ್ವೀಕರಿಸೆಕು ‘ ಹೇಳುವ ಸಂದೇಶ ಹೊತ್ತು ತಂದ ಚಾಂದ್ರಮಾನ ಯುಗಾದಿಯ ನಂತರ ಈಗ ನಾವು ಸೌರಮಾನ ಯುಗಾದಿ, ನಮ್ಮ ಭಾಷೆಲಿ ಹೇಳ್ತರೆ ವಿಷು ಹಬ್ಬದ ಸಂಭ್ರಮದ ಹೊಸ್ತಿಲಿಲ್ಲಿ ಇದ್ದು.
ಸೌರಮಾನ ಯುಗಾದಿ ಹಬ್ಬವ ನಾವೆಲ್ಲ ವಿಷು ಹೇಳಿಯೇ ಹೇಳುದು. ಸೂರ್ಯದೇವರು ಮೀನ ರಾಶಿಂದ ಮೇಷ ರಾಶಿಗೆ ಬಪ್ಪ ಶುಭದಿನವನ್ನೇ ವಿಷು ಸಂಕ್ರಮಣ ಹೇಳುದು. ಮೇಷ ತಿಂಗಳ ಸುರುವಾಣ ದಿನವ ಹೊಸ ವರ್ಷ ವಿಷು ಹೇಳಿ ನಾವು ಆಚರಿಸುತ್ತು.

ವಿಷು ಹೇಳುಗ ಮದಾಲು ನೆಂಪಪ್ಪದೇ ವಿಷು ಕಣಿ ದರ್ಶನ. ಹೊಸ ವರ್ಷದ ದಿನ ಉದಿಯಪ್ಪಗ ಎದ್ದಾಂಗೆ ಸುವಸ್ತುಗಳ ನೋಡಿದರೆ ಬದುಕಿಲ್ಲಿ ಸದಾ ಒಳ್ಳೆದೇ ಆವ್ತು ಹೇಳಿ ನಮ್ಮ ನಂಬಿಕೆ. ಹಾಂಗಾಗಿ ವಿಷುವಿನ ದಿನ ಮನೆಯವ್ವೆಲ್ಲ ಎದ್ದಾಂಗೆ ಕಣಿ ನೋಡುದು.
ದೇವರೊಳ ದೇವರ ಪೀಠದ ಹತ್ತರೆ ರಂಗೋಲಿ ಹಾಕಿ, ಮಣೆ ಮಡುಗಿ, ಅದರ ಮೇಗಂಗೆ ಪಟ್ಟೆವಸ್ತ್ರ ಹಾಕಿ ಕಣಿ ಮಡುಗುವ ಸುವಸ್ತುಗಳ ಜೋಡ್ಸುವ ಕ್ರಮ.
ಹರಿವಾಣ ಅಥವಾ ಕೊಡಿಬಾಳೆಲಿ ಅಕ್ಕಿ, ತೆಂಗಿನಕಾಯಿ, ಭತ್ತ, ಎಲೆ, ಅಡಕೆ, ಬಾಳೆಹಣ್ಣು ಎಲ್ಲ ಮಡುಗುದು. ಕಲಶ, ಕನ್ನಾಟಿ, ಅರಶಿನ, ಕುಂಕುಮ, ಚಿನ್ನಾಭರಣಂಗೊ, ಪೈಸೆ, ಹೂಗು, ಹಣ್ಣುಗೊ, ನಮ್ಮಲ್ಲಿ ಬೆಳದ ನೆಟ್ಟಿಕಾಯಿ….ಹೀಂಗೆ ಎಲ್ಲಾ ಸುವಸ್ತುಗಳ ಮಡುಗಿ ದೇವರ ದೀಪ ಹೊತ್ಸಿ ಮಡುಗಿದ ವಿಷುಕಣಿ ದರ್ಶನವೇ ಕಣ್ಣಿಂಗೊಂದು ಹಬ್ಬ.

ಇಲ್ಲಿ ಕಣಿ ಮಡುಗುವ ಪ್ರತಿಯೊಂದು ವಸ್ತುವಿಂಗೂ ಒಂದೊಂದು ವಿಶೇಶತೆಗೊ ಇದ್ದು. ಭತ್ತ ಬೆಳೆಯ ಸಂಕೇತ ಆದರೆ, ತೆಂಗಿನಕಾಯಿ ಸಂಪತ್ತಿನ ಗುರುತಾಡ. ಹೂಗು- ಹಣ್ಣುಗೊ ಶ್ರೇಯಸ್ಸಿನ ಚಿಹ್ನೆ, ಚಿನ್ನ ಐಶ್ವರ್ಯದ ಪ್ರತೀಕ ಹೇಳಿ ಹಿರಿಯರು ಹೇಳುಗು. ಇನ್ನು ಕೇರಳಲ್ಲಿ ಕಣಿ ಮಡುಗುಗ ಸಂಪತ್ತು, ಅಭಿವೃದ್ಧಿಗಳ ಚಿಹ್ನೆ ಹೇಳಿ ಅವು ನಂಬುವ ಕೊಂದೆ ಹೂಗನ್ನೂ (ಕರ್ಣಿಕಾರ ) ಮಡುಗುತ್ತವು. ಆದರೆ ನಮ್ಮಲ್ಲಿ ಗೋ ಸಂಪಗೆ ಹೂಗಿನ ವಿಶೇಶವಾಗಿ ಮಡುಗುದು ಬಿಟ್ಟರೆ, ಕೊಂದೆ ಹೂಗು ಮಡುಗುವ ಕ್ರಮಯಿಲ್ಲೆ.

ಉದಿಯಪ್ಪಗ ಎದ್ದಾಂಗೆ ಕಣಿ ನೋಡಿಕ್ಕಿ, ಮನೆಯ ಕಿರಿಯರೆಲ್ಲ ಹಿರಿಯರಿಂಗೆ ಹೊಡಾಡಿ ಆಶೀರ್ವಾದ ತೆಕ್ಕೊಂಬ ಕ್ರಮ. ಹಿಂದೆ ಗೇಣಿ – ಒಕ್ಕಲು ಕ್ರಮ ಇಪ್ಪಗ ಒಕ್ಕಲಾಗಿದ್ದವು ಅವರ ಮನೇಲಿ ಬೆಳೆಶಿದ ನೆಟ್ಟಿಕಾಯಿ, ಅಥವಾ ಬೇರೆ ಸುವಸ್ತುಗಳ ಯಜಮಾನನ ಮನಗೆ ತಂದುಕೊಟ್ಟು, ಯಜಮಾನನ ಕಾಲು ಹಿಡಿದು ಅವು ಕೊಟ್ಟ ಅಕ್ಕಿ, ತೆಂಗಿನಕಾಯಿ ಎಲ್ಲ ತೆಕೊಂಡು ಹೋಪ ಕ್ರಮ ಇದ್ದು.

ವಿಷುವಿನ ಮುನ್ನಾಳ ದಿನವೇ ಮನೆ ಹೆಮ್ಮಕ್ಕೊಗೆ ಕೆಲಸದ ಗೌಜಿ ಸುರುವಾವ್ತು. ಕಣಿ ಮಡುಗಲೆ ಸುವಸ್ತುಗಳ ಅಟ್ಟಣೆ ಮಾಡೆಕು. ಮರದಿನ ಉದಿಯಪ್ಪಗ ಕಾಫಿಗೆ ಮೂಡೆ ಕೊಟ್ಟಿಗೆ, ಕಾಯಾಲು ಮಾಡ್ಲೆ ತಯಾರಿ ಆಯೆಕು. ಮಧ್ಯಾಹ್ನಕ್ಕೆ ಸೀವು ಮಾಡ್ಲೆ ಚೋರೆ ( ಎಳತ್ತು ಗೇರು ಬೀಜ) ತಂದು ಸಜ್ಜಿ ಮಾಡಿ ಮಡುಗೆಕು. ವಿಷುವಿನ ದಿನ ಮನಗೆ ಬಂದವರ ಅಂತೇ ಕಳ್ಸುವ ಕ್ರಮಯಿಲ್ಲೆ. ಹಾಂಗಾಗಿ ಮನೆ ಹೆಮ್ಮಕ್ಕೆೊ ಬಂದವಕ್ಕೆ ಕೊಡ್ಲೂ ತಿಂಡಿ ಮಾಡೆಕಾವ್ತು.
ಸೌರಮಾನ ಯುಗಾದಿ ಹಬ್ಬ ಸಹೃದಯೀ ಸಂಬಂಧಂಗಳ ಮತ್ತಷ್ಟು ಹತ್ತರೆ ಮಾಡ್ತು. ಹಿರಿಯರ, ಕಿರಿಯರ ಎಡೇಲಿ ಒಳ್ಳೆ ಬಾಂಧವ್ಯ ಒಳಿವಲೆ ಈ ಹಬ್ಬ ತುಂಬಾ ಸಹಕಾರಿ. ಮನೆಯಿಂದ ದೂರ ಇದ್ದವು ಕೂಡ ವರ್ಷಕ್ಕೊಂದರಿ ವಿಷುಕಣಿ ನೋಡಿ ಮನೆ ಹಿರಿಯರ ಆಶೀರ್ವಾದ ಪಡವಲೆ ಮನೆಗೆ ಬತ್ತವು.
ಆಧುನಿಕ ಜಗತ್ತಿನ ಯಾಂತ್ರಿಕತೆಯ ಗಾಳಿ ಬೀಸುವ ಈ ಹೊತ್ತಿಲ್ಲಿ ಬಾಕಿದ್ದ ಹಬ್ಬಂಗಳ ಹಾಂಗೆ ವಿಷು ಹಬ್ಬವುದೆ ಪರಂಪರೆಯ, ಸಾಂಪ್ರದಾಯಿಕ ಕೊಂಡಿಗಳ ಕಳಚಿಕೊಳ್ಳುತ್ತಾ ಇದ್ದು ಹೇಳುದು ಬೇಜಾರಿನ ವಿಶಯವೇ ಆದರೂ, ನಾವೆಲ್ಲರೂ ಮನಸ್ಸು ಮಾಡಿದರೆ ಹಳೆಯ ಅರ್ಥಪೂರ್ಣ ಸಂಪ್ರದಾಯಂಗಳ ಒಳಿಶಿ ಬೆಳಶಲೆಡಿಗು. ನಮ್ಮ ಮಕ್ಕೊಗೆ ಈ ಹಬ್ಬಂಗಳ ಮಹತ್ವ ತಿಳಿಸಿಕೊಡೆಕು. ಅದರ ಆಚರಿಸುವ ಕ್ರಮಂಗಳನ್ನು ತಿಳಿಶೆಕು. ಪ್ರತಿಯೊಂದು ಮನೆಲ್ಲಿಯೂ ಹಬ್ಬಂಗಳ ಆಚರಣೆ ಬೇರೆ ಬೇರೆ ಕ್ರಮ ಇಕ್ಕು. ಪ್ರತಿ ಮನೆಯವೂ ಅವರವರ ಮನೆಯ ಆಚರಣೆಗಳ ಆ ಮನೆಯ ಕಿರಿಯ ಸದಸ್ಯರಿಗೆ ಹೇಳಿಕೊಡುವ ಮೂಲಕ ಆ ಮನೆಯ ಸಂಪ್ರದಾಯವ ಒಳುಶುವ°
ಸಮೃದ್ಧಿಯ ಸಂಪತ್ಭರಿತ, ಐಶ್ವರ್ಯದ ಪ್ರತೀಕವಾದ ಸೌರಮಾನ ಯುಗಾದಿ ವಿಷು ಹಬ್ಬ ಎಲ್ಲರಿಗೂ ಶುಭವನ್ನೇ ತರಲಿ ಹೇಳುವ ಶುಭಹಾರೈಕೆ.

ಪ್ರಸನ್ನಾ ವಿ. ಚೆಕ್ಕೆಮನೆ

Leave a Reply

Your email address will not be published. Required fields are marked *