ಪಿತೃಪಕ್ಷ ಮುಗುದು ನವರಾತ್ರಿಯ ಗೌಜಿಯೂ ಸುರುವಾತು ನೋಡಿ..!
ಮನೆಮನೆಗಳಲ್ಲಿಯೂ ನವರಾತ್ರಿ ಪೂಜೆಯ ಸಂಭ್ರಮದ ತಯಾರಿ ಆವ್ತಾ ಇಕ್ಕು. ಪೂಜೆ ಹೇಳುಗ ನೆಂಪಪ್ಪದು ಹೂಗನ್ನೇ. ಹಾಂಗಾಗಿ ಈ ಸರ್ತಿ ಹೂಗು ಕೊಯ್ವ ವಿಶಯವನ್ನೇ ಬರವಲೆ ತೆಕ್ಕೊಂಡೆ.
ಪೂಜೆಗೆ ಹೂಗು ಕೊಯ್ವದರ್ಲಿ ಎಂತ ವಿಶೇಶಯಿದ್ದೂಳಿ ಗ್ರೇಶೆಡಿ. ಅದರ್ಲೂ ಒಂದಿಷ್ಟು ವಿಶಯಂಗೊ ಇದ್ದು.
ನಿತ್ಯಪೂಜೆ ಇಪ್ಪ ಮನೆಯ ಹೆಮ್ಮಕ್ಕೊಗೆ ಅದರ ಅನುಭವಯಿದ್ದು. ಅದೂದೆ ಒಂದು ರೀತಿಯ ಪೂಜೆಯಷ್ಟೇ ಶ್ರದ್ಧೆಲಿ ಮಾಡುವ ಕೆಲಸ.
ಉದಿಯಪ್ಪಗ ಪೂಜೆಯಿಪ್ಪ ಮನೆಗಳಲ್ಲಿ ಹೆಮ್ಮಕ್ಕೊಗೆ ಗಡಿಬಿಡಿ ಅಪ್ಪದೇ ಹೀಂಗೆ. ಹಟ್ಟಿಕೆಲಸ, ಮನೆಕೆಲಸ, ಹಾಲು, ಮಜ್ಜಿಗೆ ಕೆಲಸ, ಶಾಲಗೋಪ ಮಕ್ಕೊ ಇದ್ದರೆ ಅವಕ್ಕೆ ಕೊಂಡೋಪಲೆ ಬುತ್ತಿ ತಯಾರು ಮಾಡೆಕು. ಒಟ್ಟಿಂಗೆ ಪೂಜೆಯೂ ಇದ್ದರೆ ಪೂಜೆ ಸಾಹಿತ್ಯವು ಆಯೆಕು. ಎಲ್ಲಾ ಹೊಡೆಂದಲೂ ಅಂಬ್ರೆಪ್ಪು( ಅವಸರ) ಅಪ್ಪದು.
ಅಷ್ಟಪ್ಪಗ ಮನೆಲಿ ಕೂಸುಗೊ ಇದ್ದರೆ ಆ ಕೆಲಸ ಅವಕ್ಕೆ ಸಿಕ್ಕುತ್ತು.
‘ ಹೆಮ್ಮಕ್ಕೊ ಪೂಜೆಗೆ ಹೂಗು ಕೊಯ್ತರೆ ಮಿಂದೇ ಆಯೆಕೂಳಿಲ್ಲೇಡ. ಹಾಂಗಾಗಿಯೇ ಅವು ಉದಿಯಪ್ಪಗ ಎದ್ದಕೂಡ್ಲೇ ದೇವರ ದೀಪ ಹೊತ್ಸಿ, ಶಂಖ ಊದುದು ‘ ಎನ್ನ ಅಜ್ಜಿ ಅಂಬಗಂಬಗ ಈ ಮಾತು ಹೇಳುದರ ಕೇಳಿದ್ದೆ. ಅಂಬಗ ಅದರ ಕಾರಣ ಗೊಂತಿತ್ತಿದ್ದಿಲ್ಲೆ. ಮತ್ತೆ ಗೊಂತಾತು.
ದೇವರು ಹೆಮ್ಮಕ್ಕೊಗೆ ವಿಶೇಷವಾಗಿ ಅನುಗ್ರಹಿಸಿದ ಮಾತೃತ್ವದ ಪ್ರತೀಕವಾದ ರಜಸ್ವಲಾ ನಿಯಮ ಇಪ್ಪ ಕಾರಣ ಅವಕ್ಕೆ ಈ ಶುದ್ಧ ಬಪ್ಪದು ಹೇಳಿ ಒಬ್ಬರು ವಿದ್ವಾಂಸರು ಒಂದು ಪ್ರವಚನಲ್ಲಿ ಹೇಳುದು ಕೇಳಿದೆ.
ನಾವೀಗ ಹೂಗು ಕೊಯ್ವಲೆ ಹೋಪ°. ದೇವರ ಪೂಜೆಗೆ ಹೂಗು ಕೊಯ್ವಗ ಶ್ರದ್ಧೆಲಿ ಕೊಯ್ಯೆಕು ಹೇಳುಗು ಹಿರಿಯರು.
‘ ತಾವರೆ ಸುಮವನು ಭಾವದಿ ಕೊಯ್ ತಂದು
ಭಾವಜ ಪಿತನಿರ್ಪಿಸಿ…..’ ಹೇಳಿ ಅಜ್ಜಿ ಹೂಗು ಕೊಯ್ವಗ ಹಾಡು ಹೇಳುಗು. ನಾವು ಯಾವುದೇ ಕೆಲಸ ಮಾಡುಗಲೂ ದೇವರ ಸ್ಮರಣೆ ಮಾಡಿಂಡು ಮಾಡಿದರೆ ಒಳ್ಳೆದಾಡ. ಹಾಂಗಾಗಿ ಆದಿಕ್ಕು ಹಳೇ ಕಾಲದ ಹೆಮ್ಮಕ್ಕೊ ಅಷ್ಟೊಂದು ಹಾಡುಗಳ ಹೇಳಿಂಡಿದ್ದದು.
‘ ಸುರಗಿ ಮಲ್ಲಿಗೆ ಜಾಜಿ ವರಸಂಪಿಗೆ
ಮಲ್ಲಿಗೆಯ
ಪರಿಮಳ ಕುಸುಮವ ಕೊಯ್ತಂದು ಅರ್ಪಿಸಿ
ಉದಯದಲಿ ನಿನ್ನ ನೆನೆವೆನೂ….’ ಹೂಗು ಕೊಯ್ವಲೆ ಕುರುವೆ ತೆಕೊಂಡು ಹೆರಡುಗ ಈ ಸಾಲುಗೊ ನೆಂಪಪ್ಪದು.
ಕುರುವೆ ಹೇಳಿದರೆ ಈಗಾಣವಕ್ಕೆ ಗೊಂತಿದ್ದಾ ಇಲ್ಲೆಯಾ, ಸಣ್ಣ ಹೆಡಗೆ ಹೇಳ್ಲಕ್ಕು. ಕನ್ನಡಲ್ಲಿ ಬುಟ್ಟಿ ಹೇಳ್ತವು. ಕಾಡಿಲ್ಲಿಪ್ಪ ಮರಂಗಳಲ್ಲಿ ಹಬ್ಬಿದ ಕಾಡು ಬಳ್ಳಿಗಳಿಂದ ಮಾಡುವ ಬೇರೆ ಬೇರೆ ನಮೂನೆಯ ಕುರುವೆಗೊ ಇದ್ದತ್ತು ಮದಲಿಂಗೆ.
ಕೈಕ್ಕುರುವೆ ಸಣ್ಣ ನಮೂನೆಯ ಉರುಟಾಗಿ ನೇಯ್ದ ಕುಞ್ಞಿ ಹೆಡಗೆ. ಅದರ ಚೆಂದವೇ ಬೇರೆ. ಕವಂಗ ಕುರುವೆಯೂ ಉರುಟೇ. ಆದರೆ ಅದಕ್ಕೆ ಕೈ ಇರ್ತು. ಬಳ್ಳಿಯನ್ನೇ ಕಮಾನಿನ ಹಾಂಗೆ ಮಾಡಿ ಜೋಡ್ಸಿದ ಕವಂಗ ಕುರುವೆ ಹೆಚ್ಚಾಗಿ ಅಡಕ್ಕೆ ಹೆರ್ಕಲೆ, ಬೀಜಹಣ್ಣು ( ಗೇರುಬೀಜ) ಕೊಯ್ವಲೆ ಉಪಯೋಗ್ಸುದು.
ಮದಲಿಂಗೆ ಈಗಾಣ ಹಾಂಗಿದ್ದ ಆಂಗ್ಲ ಬಾಶೆಯ ಹೆಸರಿಪ್ಪ ಹೂಗುಗೊ ಕಮ್ಮಿ. ಎಂತ ಇದ್ದರೂ ಮದಾಲು ಕಾಂಬದು ದಾಸನ ಹೂಗೇ. ಬೆಳಿ ದಾಸನ, ಕೆಂಪು ದಾಸನ, ಮುದ್ದೆ ದಾಸನ, ಅಕ್ಕಚ್ಚು ಬಣ್ಣದ ದಾಸನ, ಕುಞ್ಞಿದಾಸನ, ದೊಡ್ಡ ದಾಸನ……ಹೀಂಗೇ ಅದೆಷ್ಟು ಜಾತಿಯ ದಾಸನ ಹೂಗುಗೊ ಇತ್ತಿದ್ದು.
ನಿತ್ಯಪೂಜೆಗೆ ಕೊಯ್ವ ಹೂಗುಗಳಲ್ಲಿ ಮದ್ಲಾಣ ಆಯ್ಕೆ ಯೇವಗಳೂ ದಾಸನ ಹೂಗಿಂಗೇ. ಮನೆಯ ಸುತ್ತಮುತ್ತ ಬರೆಕರೆಯ ಮೂಲೆಲಿ, ತೋಟದ ಕರೇಲಿ, ಹಟ್ಟಿ ಹಿಂದೆ ಹೀಂಗಿದ್ದ ಜಾಗೆಲೇ ದಾಸನ ಸೆಸಿಗೊ ಇಪ್ಪದು. ಅದರ ಬುಡಕ್ಕೆ ಹೋಗಿ ಗೆಲ್ಲು ಬಗ್ಸಿ ಹೂಗು ಕೊಯ್ಯೆಕಷ್ಟೆ.
ಉದಿಯಪ್ಪಾಣ ಹೊತ್ತಿಲ್ಲಿ ಹೋಗಿ ದಾಸನ ಗೆಲ್ಲು ಬಗ್ಸುಗ ಅದರ ಎಲೆಯ ಕೊಡಿಲಿಪ್ಪ ಹನಿಕ್ಕುಟ್ಟು( ಇಬ್ಬನಿ) ಮೋರೆಗೆ ಬೀಳುಗ ಅದೆಂತೋ ಸಂತೋಷ.
ಬರೀ ದಾಸನ ಮಾಂತ್ರ ಅಲ್ಲ, ಮನೆಯ ಸುತ್ತಮುತ್ತ ಬೇರೆ ಬೇರೆ ನಮೂನೆಯ ಹೂಗುಗೊ ಇಕ್ಕು. ಕೆಂಪು ತೊಟ್ಟಿನ ಬೆಳೀ ಹೂಗು ಪಾರಿಜಾತ, ದೇವಲೋಕಂದ ಸತ್ಯಭಾಮೆಯು ಕೃಷ್ಣದೇವರುದೆ ಹೋಗಿ ತಂದ ಹೂಗಾಡ ಅದು. ಕುಞ್ಞಿ ಹೂಗಾದರೂ ಎಂತದೋ ವಿಶೇಶ ಚೆಂದ ಅದಕ್ಕೆ. ಅಶೋಕ ಹೂಗುದೆ ದೇವರ ಪೂಜೆಗೆ ವಿಶೇಶವೇ.
ಸುರುಳಿ ಬೆಳಿ , ಅರಶಿನ ಬಣ್ಣದ್ದು. ರತ್ನಗೆಂಟಿಗೆ ಕೆಂಪು, ಅರಶಿನ ಬಣ್ಣದ್ದು. ಕರವೀರ, ಮಂಜಟ್ಟಿ ಐದೆಸಳು, ಹತ್ತೆಸಳು, ಅರುವತ್ತೆಸಳು ಹೇಳಿ ಸುಮಾರು ಜಾತಿದು ಇದ್ದು.
ಬೆಳಿ ಹೂಗಿಂಗೇ ರಜ ಹೆಚ್ಚು ಪ್ರಾಮುಖ್ಯ ಇಪ್ಪ ಕಾರಣ ಮಲ್ಲಿಗೆ, ಮಂದಾರ, ಮಂಜಟ್ಟಿ, ಬಟ್ಲು ಮಂದಾರ..!
ರೆಂಜೆ, ಸಂಪಗೆ, ಸುರಗಿ, ಸೇವಂತಿಗೆ, ಕಿಸ್ಕಾರ, ತುಳಸಿ…ಹೇಳಿ ಅಜ್ಜಿಯ ಹಾಡಿಲ್ಲಿ ಬಪ್ಪ ಹೂಗುಗಳ ಪಟ್ಟಿ ಮಾಡ್ತರೆ ಸುಮಾರಿದ್ದು.
ದೇವರ ಪೂಜೆಗೆ ಯಾವಾಗಲೂ ಒಳ್ಳೆಯ ಹೂಗನ್ನೇ ಹಾಕೆಕು ಹೇಳುಗು. ಹುಳು ಕೆರಕ್ಕಟೆ , ಕುಸುಮ ಇಲ್ಲದ್ದ ಹೂಗುಗಳ ಹಾಕಲಾಗ.
ಒಂದೊಂದು ಬಣ್ಣದ ಹೂಗುಗಳನ್ನು ಕೊಯ್ದು ಚೆಂದಕೆ ಹರಿವಾಣಲ್ಲಿ ಜೋಡಿಸಿಯಪ್ಪಗ ಮನಸ್ಸಿಂಗಪ್ಪ ಒಂದು ಕೊಶಿಯೇ ಬೇರೆ. ನಮ್ಮ ಮಠಲ್ಲಿ ಶ್ರೀಕರಾರ್ಚಿತ ಪೂಜೆಗೆ ಹೆಮ್ಮಕ್ಕೊ ಎಲ್ಲ ಸೇರಿ ಎಷ್ಟು ಚೆಂದಕೆ ಹೂಗುಗಳ ವಿಂಗಡಿಸಿ ಮಡುಗುತ್ತವು. ಶ್ರೀಕರಾರ್ಚಿತ ಪೂಜೆಯ ನಮಗೆಲ್ಲ ನೋಡಿ ಗೊಂತಿದ್ದು. ಬಣ್ಣ ಬಣ್ಣದ ಹೂಗುಗಳಿಂದ ಅಲಂಕಾರ ಮಾಡಿದ ಆ ದೇವರ ನೋಡುದೇ ಮನಸ್ಸಿಂಗೆ ತಂಪು. ನಮ್ಮ ಮನಸ್ಸಿನ ಎಲ್ಲಾ ಸಂಕಟವು ಮರದು ಹೋವ್ತು.
ದೇವರ ಪಾದ ಸೇರಿದರೆ ಹೂಗಿನ ಜನ್ಮ ಸಾರ್ಥಕ ಆಡ. ಪೂಜೆಗೆ ಹೂಗು ಕೊಯ್ವಗ ಮನಸ್ಸಿಂಗೆ ಅದೇ ಭಾವ ಬರೆಕು. ನಮ್ಮ ಮನಸ್ಸಿಲ್ಲಿಯೂ ದೇವರ ಮೇಲೆ ಶ್ರದ್ಧೆ, ಭಕ್ತಿ ಇದ್ದರೆ ಈ ಹೂಗು ಕೊಯ್ವ ಕೆಲಸವು ಕೂಡಾ ಒಂದು ಭಾವಪೂಜೆಯೇ.
‘ ನವರತ್ನಮಣಿಮಯ ಮಕುಟರಂಜಿಪಳಿಗೆ
ಶಿವನಿಗೊಲ್ಲಭೆಯಾದ ಪಾರ್ವತಿಗೆ
ನವಮೋಹನಾಂಗಿ ಶಂಕರಿ ಜಗನ್ಮಾತೆಗೆ
ನವಭಕ್ತಿಯಿಂದಾರತಿಯೆತ್ತಿರೇ
ಚೆಲ್ವ ಕಾಮಿನಿ ದುರ್ಗೆಗಾರತಿಯೆತ್ತಿರೇ…..’
ನವರಾತ್ರಿಲಿ ನವರತ್ನ ಮಕುಟ ಧರಿಸಿದ ನವಮೋಹನಾಂಗಿ ಜಗನ್ಮಾತೆಯ ಸ್ತುತಿಸುವ°
ಪ್ರಸನ್ನಾ ವಿ ಚೆಕ್ಕೆಮನೆ