ದೀಪಕ್ಕೂ ನಮಗೂ ತುಂಬಾ ಹತ್ರಾಣ ಸಂಬಂಧ. ಭಾರತೀಯ ಸಂಪ್ರದಾಯಲ್ಲಿ ದೀಪಕ್ಕೆ ಸುರುವಾಣ ಸ್ಥಾನ. ನಮ್ಮ ದೇಶದ ಹೆಸರಿನ ಸುರುವಾಣ ಅಕ್ಷರವೇ ಭಾ. ‘ ಭಾ ‘ ಹೇಳಿದರೆ ಬೆಣಚ್ಚು, ದೀಪ ಹೇಳುವ ಅರ್ಥ. ಅದು ಜ್ಞಾನದ ರೂಪ. ದೀಪ ನಮ್ಮ ಬದುಕಿನ ಇಹ – ಪರ ಎರಡನ್ನೂ ಪ್ರತಿನಿಧಿಸುತ್ತು. ಸುಮಂಗಲೆಯರಾದ ಹೆಮ್ಮಕ್ಕೊ ಅಗ್ನಿ ಸ್ವರೂಪಿಣಿಯರು ಹೇಳಿ ಹಿರಿಯರು ಹೇಳುಗು. ಪ್ರತಿ ಮನೆಲೂ ಅಗ್ನಿಯ ಆರಾಧನೆಯಪ್ಪದು ಹೆಮ್ಮಕ್ಕಳ ಮೂಲಕವೇ.
ಹೆಚ್ಚಿನ ಮನೆಗಳಲ್ಲೂ ದಿನ ಸುರುವಪ್ಪದೇ ಆ ಮನೆಯ ಹೆಮ್ಮಕ್ಕೂ ದೀಪ ಹೊತ್ಸಿ, ಶಂಖ ಊದುವ ಮೂಲಕ. ದೀಪ ಹೇಳಿದರೆ ಬರೀ ಕಸ್ತಲೆಯ ದೂರ ಮಾಡುದು ಮಾಂತ್ರ ಅಲ್ಲ. ದೀಪದ ರೂಪಲ್ಲಿಪ್ಪ ಪರಮಾತ್ಮನ ಸ್ಮರಣೆ ಮಾಡ್ಸುತ್ತು. ಅದಕ್ಕೆ ಬೇಕಾಗಿಯೇ ದೇವರ ದೀಪ ಹೊತ್ಸುಗ ಈ ಶ್ಲೋಕ ಹೇಳುದು.
ದೀಪಜ್ಯೋತಿ: ಪರಂಬ್ರಹ್ಮ
ದೀಪಜ್ಯೋತಿ ಜನಾರ್ಧನಃ
ದೀಪೋ ಹರತಿ ಪಾಪಾನಿ
ಸಂಧ್ಯಾದೀಪ ನಮೋಸ್ತುತೇ |
ಪ್ರತಿಯೊಂದುಮನೆ ಬೆಳಗುವ ದೀಪ ಹೇಳಿದರೆ ಹೆಮ್ಮಕ್ಕಳೇ, ಅದಕ್ಕೇ ಮನೆಲಿ ದೀಪ ಹೊತ್ಸುದು ಅವ್ವೇ. ಪೂಜೆ ಮಾಡ್ಲೆ, ಜೆಪ ಮಾಡ್ಲೆ ನಾವು ನಿತ್ಯ ದೇವರ ದೀಪ ಹೊತ್ಸುತ್ತು.
ದೀಪ ಹೇಳಿದರೆ ಜ್ಞಾನದ ಸಂಕೇತ. ದೀಪ ಹೊತ್ಸಿಯಪ್ಪಗ ಮನಸ್ಸಿಂಗೆ ಶಾಂತಿ ಸಿಕ್ಕುತ್ತು. ಹೃದಯಲ್ಲಿ ಭಕ್ತಿ ತುಂಬಿ, ಶ್ರದ್ದೆಲಿ ದೀಪ ಹೊತ್ಸೆಕು. ಆ ಬೆಣಚ್ಚು ಮನೆಯಿಡೀ ಹರಡುತ್ತು.
ನಮ್ಮ ಯಾವುದೇ ಶುಭ ಕಾರ್ಯ ಸುರು ಮಾಡ್ತರೂ ದೀಪ ಹೊತ್ಸೆಕು. ಪೂಜೆ ಹೋಮ ಹೀಂಗಿದ್ದ ಧಾರ್ಮಿಕ ಕಾರ್ಯಕ್ರಮಂಗೊಕ್ಕೆ ಮನೆ ಹೆಮ್ಮಕ್ಕಳೇ ದೀಪ ಹೊತ್ಸುದು. ಮನೆಯ ಬಾಗಿಲು ಯಾವ ಹೊಡೆಂಗೆ ಇದ್ದರೂ ದೇವರೊಳ ದೀಪ ಹೊತ್ಸುಗ ಅದರ ಮೂಡ ಗೋಡೆಯ ಹತ್ತರೆ, ಬಡಗಕ್ಕೆ ಒತ್ತಿ, ಪಡು ಹೊಡೆಂಗೆ ಇಪ್ಪಾಂಗೆ ಮಡುಗಿ ಹೊತ್ಸುದು ಸಂಪ್ರದಾಯ.
ಹತ್ತಿ ಅಲ್ಲದ್ರೆ ಶುದ್ಧವಾದ ಹತ್ತಿಯ ವಸ್ತ್ರಂದ ಮನೆಲೇ ಮಾಡುವ ನೆಣೆ ದೀಪಕ್ಕೆ ಹಾಕಲೆ ಶ್ರೇಷ್ಠ. ದೀಪದ ನೆಣೆಯ ಕೈಲಿ ಮುಟ್ಟುವ ಕ್ರಮ ಇಲ್ಲೆ. ಸಣ್ಣ ಕಡ್ಡಿಯ ಮೂಲಕ ದೀಪವ ದೊಡ್ಡ ಸಣ್ಣ ಮಾಡೆಕು. ಹಾಂಗೇ ದೀಪ ತೆಗವಗ ಅದರ ನಂದ್ಸುದು ಹೇಳುವ ಕ್ರಮ ಇಲ್ಲೆ. ದೇವರು ಮಾಡುದು, ದೀಪ ಕೂಡುದು ಹೇಳುದು. ಕೈಲಿ ಮುಟ್ಟಿದರೆ, ಬಾಯಿಲಿ ಊಪಿದರೆ ದೀಪದ ಪರಿಶುದ್ಧತೆ ನಷ್ಟ ಆವ್ತು.
ಪ್ರತಿನಿತ್ಯ ಹೊತ್ಸುವ ದೇವರ ದೀಪಕ್ಕೆ ಹಾಕುವ ಎಣ್ಣೆಯ ನಾವು ಅಡಿಗೆ ಮಾಡ್ಲೆ ಅಥವಾ ಬೇರೆಂತಾರು ಅಗತ್ಯಕ್ಕೆ ಮಡುಗಿದ ಪಾತ್ರಂದ ತೆಗವಲಾಗ. ದೇವರ ದೀಪಕ್ಕೆ ಹಾಕುವ ಎಣ್ಣೆಯ ಬೇರೆ ಪಾತ್ರಲ್ಲಿ ಮಡುಗೆಕು. ದನದ ತುಪ್ಪ, ಎಳ್ಳೆಣ್ಣೆ ಉಪಯೋಗಿಸಿ ಹೊತ್ಸುವ ದೀಪ ಅತ್ಯಂತ ಶ್ರೇಷ್ಠ ಹೇಳಿ ಶಾಸ್ತ್ರಂಗಳಲ್ಲಿ ಹೇಳ್ತು. ತೆಂಗಿನೆಣ್ಣೆಯನ್ನೂ ಉಪಯೋಗಿಸುವ ಕ್ರಮ ಇದ್ದು.
ಪ್ರತಿ ದಿನವೂ ಮನೆಲಿ ದೀಪ ಬೆಳಗಿದರೆ ದೇವತೆಗೊಕ್ಕೆ ಕೊಶಿ ಆವ್ತಾಡ. ಮಂಗಲಮಯವಾದ ದೀಪ ಬೆಳಗುವ ಮನೆಲಿ ಸದಾ ಸಂತೋಶ ನೆಲೆಸಲಿ ಹೇಳಿ ಅವು ಹರಸುತ್ತವಾಡ. ಕೆಲವು ಮನೆಗಳ ದೇವರೊಳ ನಂದದ್ದೇ ಬೆಳಗುವ ನಂದಾದೀಪ ಇರ್ತು. ಆ ದೀಪ ಅತ್ಯಂತ ಶುಭ ಸೂಚಕ ಹೇಳಿಯೂ, ದೇವರ ಪ್ರತೀಕ ಹೇಳಿಯೂ ನಂಬಿಕೊಂಡು ಬತ್ತವು.

ಇನ್ನು ಪೂಜೆಯ ಹೊತ್ತಿಲ್ಲಿ ದೀಪದಾರತಿ ಎತ್ತಿ ನಾವು ದೇವರ ಅನುಗ್ರಹ ಬೇಡುತ್ತು. ಆರತಿ ಮಾಡುವ ಹೊತ್ತಿಲ್ಲಿ ಹೆಮ್ಮಕ್ಕೊ ಹಾಡು ಹೇಳುವ ಕ್ರಮ ಇದ್ದತ್ತು ಮೊದಲಿಂಗೆ.
‘ ಸಾಸಿರ ನಾಮದ ಲಲಿತೆಗೆ ಪದ್ಮ ಕೇಸರದಾರತಿಯಾ ಬೆಳಗೀರೇ….’
‘ ಸಾಲು ದೀವಿಗೆ ಹಚ್ಚಿ….. ಶ್ರೀ ಗೌರಿಗೆ ನೀಲದ ಧೂಪ ದೀಪದಾರತಿಗಳ ಮಾಡಿ….’
‘ ಕುಂದರದನೆ ಚಂದ್ರವದನೆ ಕುಂದಣಾರತಿ…
ಮಂದಗಮನೆ ಸಿಂದರದನೆ ವಂದ್ಯೆಗಾರತಿ..
ರನ್ನ ನೀಲ ಮುತ್ತು ವಜ್ರ ಚಿನ್ನದಾರತಿ.. ಭಿನ್ನವಿಸಿ ಪದಕ್ಕೆ ಬೆಳಗುವೆ ರನ್ನದಾರತಿ…..
ಹೀಂಗೆ ದುರ್ಗಾ ಪೂಜೆಗೆ ಹಾಡಿದರೆ, ಶಿವಪೂಜೆಯ ಹಾಡು ಬೇರೇ ಇದ್ದು.
‘ ಭೂಸುರವಂದ್ಯ ಸದಾಶಿವ ರುದ್ರಗೆ ಭಾಸುರದಾರತಿಯ ಬೆಳಗೀರೆ…
‘ ರುಂಡಮಾಲೆಯ ಧರಿಸಿದ ಕಪರ್ದಿಗೆ ಕುಂಡಲಿಯಾರತಿಯಾ ಬೆಳಗಿರೇ….
‘ ಕಪ್ಪು ಕೊರಳನಾಗಿರುವ ಮಹೇಶಗೆ ಕರ್ಪೂರದಾರತಿಯಾ ಬೆಳಗಿರೆ….’
ಬಹುಶಃ ಹಳೇ ಕಾಲದ ಹೆಮ್ಮಕ್ಕೊ ನಿತ್ಯ ಸ್ತೋತ್ರಂದಲೂ ಹೆಚ್ಚು ದೇವರ ಸ್ಮರಣೆ ಮಾಡಿಂಡಿದ್ದದು ಹೀಂಗಿದ್ದ ಹಾಡುಗಳ ಮೂಲಕ ಹೇಳಿ ಕಾಣ್ತು.
ಇನ್ನು ಮದುವೆ ಉಪನಯನದ ಹಾಂಗಿದ್ದ ಶುಭಕಾರ್ಯಂಗಳಲ್ಲಿ ಕೂಡ ದೀಪಕ್ಕೆ ಮಹತ್ವ ಇದ್ದು. ಉಪನಯನಲ್ಲಿ ಬ್ರಹ್ಮಚಾರಿಗೆ, ಮದುವೆಲಿ ವಧೂವರರಿಂಗೆ, ಬಾರ್ಸಲ್ಲಿ (ನಾಮಕರಣ) ಶಿಶುವಿಂಗೆ ಅವು ದೇವತಾ ಸ್ವರೂಪಿಗೊ ಹೇಳಿ ಆರತಿ ಎತ್ತುದು ನಮ್ಮ ಸಂಪ್ರದಾಯ.
ಅದೇ ರೀತಿಲಿ ವರ್ಷಾಂತದ (ಪ್ರಥಮಾಬ್ದಿಕ ಶ್ರಾದ್ಧ) ದಿನ ಕರ್ತೃಗೊಕ್ಕೆ ಆರತಿ ಎತ್ತುವ ಕ್ರಮ ಇದ್ದು. ಅದಕ್ಕೆ ಮಂಗಲ ಮಂತ್ರಾಕ್ಷತೆ ಹೇಳ್ತವು. ಒಂದು ವರ್ಷದ ದೀಕ್ಷೆ ಮುಗುತ್ತು ಹೇಳುವ ಸೂಚನೆ ಅದು.
ಕಾರ್ತಿಕ ಮಾಸ ಹತ್ತರೆ ಬಂತು. ನಮ್ಮ ಸಂಸ್ಕೃತಿಲಿ ಅದು ಅಗ್ನಿಯ ಉಪಾಸನೆಯ ತಿಂಗಳು. ದೇವಸ್ಥಾನಂಗಳಲ್ಲಿ, ಧಾರ್ಮಿಕ ಕ್ಷೇತ್ರಂಗಳಲ್ಲಿ ಈ ತಿಂಗಳು ಪೂರ್ತಿ ಸಾಲು ಸಾಲು ಹಣತೆಯ ಹೊತ್ಸಿ ವಿಶೇಷವಾದ ಪೂಜೆ ಮಾಡ್ತವು. ದೀಪದ ಹಬ್ಬ ದೀಪಾವಳಿಯೂ ಇದೇ ತಿಂಗಳಿಲ್ಲಿ ಬಪ್ಪದು. ದೀಪ ಆನಂದದಾಯಕ. ಮಂಗಳಕಾರಕ. ಸತ್ಯದ ಪ್ರತೀಕ. ದೀಪ ಯಾವ ರೀತಿಲಿ ತಾನು ಹೊತ್ತಿ ಉರಿದರೂ ಸುತ್ತಲಿನವಕ್ಕೆ ಬೆಣಚ್ಚು ಕೊಡ್ತೋ ಅದೇ ರೀತಿ ನಾವುದೆ ನಮ್ಮ ಒಳ್ಳೆಯ ಗುಣದ ಮೂಲಕ, ಚೆಂದದ ವ್ಯಕ್ತಿತ್ವದ ಮೂಲಕ ನಮ್ಮ ಆತ್ಮೀಯರಿಂಗೆ, ನೆರೆಕರೆಯವಕ್ಕೆ ಒಳ್ಳೇದು ಮಾಡುವ°.
ಪ್ರಸನ್ನಾ ವಿ. ಚೆಕ್ಕೆಮನೆ