ಪಂಚಗವ್ಯ ಚಿಕಿತ್ಸಾ‌ ಶಿಬಿರ : ಮಂಗನಖಾಯಿಲೆ ಬರದಂತೆ ತಡೆಯುವಲ್ಲಿ ಪಂಚಗವ್ಯಗಳ ಪಾತ್ರ‌ ಮಹತ್ತ್ವದ್ದು – ಶ್ರೀ ಆರ್. ಜಿ. ಪೈ

ಗೋವು

ಸಿದ್ದಾಪುರ : ತಾಲೂಕಿನ ದೊಡ್ಮನೆ ಸಮೀಪದ ಬಾಳ್ಗೋಡಿನಲ್ಲಿ ಮಂಗನಖಾಯಿಲೆಗೆ ಮುಂಜಾಗ್ರತಾ ಕ್ರಮವಾಗಿ ಭಾರತೀಯ ಗೋಪರಿವಾರ ಕರ್ನಾಟಕ, ಸಿದ್ದಾಪುರ ಹವ್ಯಕ ಮಂಡಲ, ಟಿ.ಎಸ್‍.ಎಸ್., ಟಿ.ಎಮ್.ಎಸ್. ಸಂಸ್ಥೆಗಳ ಸಹಯೋಗದಲ್ಲಿ ಪಂಚಗವ್ಯ ಚಿಕಿತ್ಸಾ ಶಿಬಿರ ಸಂಪನ್ನವಾಯಿತು.

ಇತ್ತೀಚೆಗೆ ಸಿದ್ದಾಪುರ ಪ್ರಾಂತ್ಯದ ಹಲವೆಡೆ ಮಂಗನ ಖಾಯಿಲೆ ಕಾಣಿಸಿಕೊಂಡಿದ್ದು, ನೂರಾರು ಮಂಗಗಳನ್ನು ಬಲಿ ತೆಗೆದುಕೊಂಡಿದ್ದಲ್ಲದೇ, ಹತ್ತಕ್ಕೂ ಅಧಿಕ ಮನುಷ್ಯರ ಜೀವವನ್ನೂ ತೆಗೆದಿದೆ. ಮಾರಣಾಂತಿಕವಾಗಿ ಪರಿಣಮಿಸಿದ ಈ ಖಾಯಿಲೆಯ ಕುರಿತು ಆತಂಕದಿಂದ ಶ್ರೀಸಂಸ್ಥಾನದವರ ಸನ್ನಿಧಿಗೆ ಪ್ರಾರ್ಥಿಸಿದಾಗ, ಅವರು ಅಭಯಾಶೀರ್ವಾದ ನೀಡಿ, ರೋಗಪೀಡಿತ ಸ್ಥಳಗಳಲ್ಲಿ ಪಂಚಗವ್ಯ ಚಿಕಿತ್ಸೆ ನಡೆಸುವ ಮೂಲಕ ಆರೋಗ್ಯದ ಜಾಗೃತಿ ಮೂಡಿಸಬೇಕು ಎಂದು ಸೂಚಿಸಿದ್ದರು.
ಶ್ರೀಸಂಸ್ಥಾನದವರ ಅಪ್ಪಣೆಯಂತೆ ನಿನ್ನೆ ಇಲ್ಲಿನ ಬಾಳಗೋಡ್ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಊರ ಗ್ರಾಮಸ್ಥರ ಆರೋಗ್ಯ ತಪಾಸಣೆ ನಡೆಸಿ, ಮಂಗನ ಖಾಯಿಲೆಯ ಬಗ್ಗೆ ವಿಸ್ತೃತ ಮಾಹಿತಿ ನೀಡಿ, ರೋಗ ನಿರೋಧಕ ಶಕ್ತಿಯನ್ನು ವೃದ್ಧಿಸುವ ಔಷಧಿಗಳನ್ನು ವಿತರಸಿಲಾಯಿತು.

ಉದ್ಘಾಟನಾ ಸಮಾರಂಭದಲ್ಲಿ
ದೊಡ್ಮನೆ ಹವ್ಯಕ ವಲಯದ ಅಧ್ಯಕ್ಷರಾದ ಶ್ರೀ ಎಮ್. ಆರ್. ಹೆಗಡೆಯವರು ಸ್ವಾಗತಿಸಿದರು.
ಸಿದ್ದಾಪುರ ತಾಲೂಕು ಗೋಪರಿವಾರ ಅಧ್ಯಕ್ಷರಾದ ಶ್ರೀ ಆರ್. ಜಿ. ಪೈ ಅವರು ಜ್ಯೋತಿ ಬೆಳಗಿಸುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಗೋಪರಿವಾರದ ಪಂಚಗವ್ಯ ಚಿಕಿತ್ಸೆ ವಿಭಾಗದ ರಾಜ್ಯಾಧ್ಯಕ್ಷರಾದ ಡಾ. ರವಿ ಮಾತನಾಡುತ್ತಾ ಮಂಗನ ಖಾಯಿಲೆಯ ಇತಿಹಾಸ‌ , ಹರಡುವ ಸ್ವರೂಪ ಹಾಗೂ ನಾವು ವಹಿಸಬೇಕಾದ ಮುನ್ನೆಚ್ಚರಿಕೆ ಕ್ರಮಗಳ ಕುರಿತು ವಿಸ್ತೃತ ಮಾಹಿತಿ ನೀಡಿದರು. ಈ ಕಾರ್ಯಕ್ರಮದಲ್ಲಿ ಕೊಡಲ್ಪಡುತ್ತಿರುವ ಔಷಧಿಗಳು ರೋಗ ನಿರೋಧಕ ಶಕ್ತಿಯನ್ನು ವೃದ್ಧಿಸುತ್ತದೆಯೇ ಹೊರತು ಮಂಗನ ಖಾಯಿಲೆ ಗುಣಪಡಿಸುವ ಔಷಧಿ ಅಲ್ಲ, ಕಾಯಿಲೆ ಪೀಡಿತರು ಎಂದಿನಂತೆ ತಮ್ಮ ಔಷಧೋಪಚಾರವನ್ನು ಮುಂದುವರೆಸುವಂತೆ ಸಲಹೆ ನೀಡಿದರು.
ಇದೇ ಮೊದಲ ಬಾರಿಗೆ ಖಾಯಿಲೆಯು ಸಿದ್ದಾಪುರ ಸಮೀಪ‌ ಕಾಣಿಸಿಕೊಳ್ಳುತ್ತಿದ್ದು, ಗ್ರಾಮಸ್ಥರು ಚಿಂತೆಪಡುವ ಅಗತ್ಯ ಇಲ್ಲ ಎಂದರು.

ದೊಡ್ಮನೆಯ ಆಯುಷ್ ವೈದ್ಯಾಧಿಕಾರಿ ಡಾ. ಮಲ್ಲಿಕಾರ್ಜುನ ಅವರು ‘ಇದಕ್ಕೆ ಸಮೀಪದ ಸಾಮ್ಯತೆ ಇರುವ ಖಾಯಿಲೆಯೊಂದು ಫ್ರಾನ್ಸ್ ದೇಶದಲ್ಲಿ ಇದ್ದು, ಜೈವಿಕ ಯುದ್ಧದ ನೆಪದಲ್ಲಿ ಸೊರಬದ ಗುಡವಿ ಪಕ್ಷಿಧಾಮಕ್ಕೆ ವಲಸೆ ಬರುವ ಪಕ್ಷಿಗಳ ಮೂಲಕ‌ ಭಾರತದ ಮೇಲೆ ಫ್ರಾನ್ಸ್ ಈ ರೀತಿ ದಾಳಿ‌ ಮಾಡುತ್ತಿದೆಯಾ ಎಂಬ ಗುಮಾನಿ ಹರಡಿತ್ತು, ಆದರೆ ಅದಕ್ಕೂ ಈ ಮಂಗನ ಖಾಯಿಲೆಗೂ ಯಾವುದೇ ಸಂಬಂಧ ಇಲ್ಲ. ಇದು ಇಲ್ಲಿನ ಮಂಗಗಳಿಗೆ ಬರುವ ಖಾಯಿಲೆ, ಉಣುಗುಗಳ ಮೂಲಕ ಮನುಷ್ಯರಿಗೂ ಹರಡುತ್ತದೆ. ಈ ರೋಗದ ಜೀವಾಣುಗಳು ಕೇವಲ ಮಂಗ ಮತ್ತು ಮನುಷ್ಯನ ದೇಹದಲ್ಲಿ ವೃದ್ಧಿಸುತ್ತದೆ. ಜಾನುವಾರುಗಳಿಗೆ ಯಾವುದೇ ತೊಂದರೆ ಆಗುವುದಿಲ್ಲ ಎಂದರು. ಈ ವರೆಗೆ ಒಟ್ಟೂ 23 ಜನರು ಚಿಕಿತ್ಸೆ ಪಡೆಯುತ್ತಿದ್ದು,
50ಕ್ಕೂ ಅಧಿಕ ಜನರಲ್ಲಿ ರೋಗದ ಲಕ್ಷಣಗಳು ಪತ್ತೆಯಾಗಿವೆ. ಆದರೆ ಸಾವಿನ ಪ್ರತಿಶತ ಕೇವಲ 2% ಇರುವುದರಿಂದ ಗ್ರಾಮಸ್ಥರು ಹೆದರಬೇಕಿಲ್ಲ, ಅಗತ್ಯ ಸುರಕ್ಷಾ ಕ್ರಮಗಳನ್ನು ಕೈಗೊಳ್ಳುವುದರ ಮೂಲಕ ಸ್ವಚ್ಚತೆ ಮತ್ತ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು ಎಂದರು.

ಕಾರ್ಯಕ್ರಮ ಉದ್ಘಾಟಿಸಿದ ಸಿದ್ದಾಪುರ ಗೋಪರಿವಾರ ಅಧ್ಯಕ್ಷರಾದ ಶ್ರೀ ಆರ್.ಜಿ. ಪೈ ಮಾತನಾಡಿ, ರೋಗ ಬಂದ‌ ಮೇಲೆ ವಾಸಿ ಮಾಡುವುದಕ್ಕಿಂತ ರೋಗ ಬರುವುದನ್ನೇ ತಡೆಯಬೇಕು‌. ಈ ನಿಟ್ಟಿನಲ್ಲಿ ರಾಘವೇಶ್ವರಭಾರತೀ ಶ್ರೀಗಳ ಆಶೀರ್ವಾದದಿಂದ ನಡೆಯುತ್ತಿರುವ ಈ ಶಿಬಿರ ಅತ್ಯಂತ ಪ್ರಮುಖ ಪಾತ್ರವಹಿಸಲಿದೆ ಎಂದರು.

ಗೋಸ್ವರ್ಗದ ಅಧ್ಯಕ್ಷರಾದ ಶ್ರೀ ಆರ್.ಎಸ್. ಹೆಗಡೆಯವರು ಮಾತನಾಡಿ, ಇದು ಭಕ್ತರ ಪ್ರಾರ್ಥನೆಗೆ ಶ್ರೀಗಳು ಕರುಣಿಸಿದ ಅಭಯಪೂರ್ವಕ ಶಿಬಿರ, ಇದರ ಪ್ರಯೋಜನವನ್ನು ಎಲ್ಲರೂ ಪಡೆದುಕೊಳ್ಳಬೇಕು ಎಂದರು. ಶ್ರೀ ಜಿ. ಜಿ. ಹೆಗಡೆ ಬಾಳಗೋಡು ಅವರು ನಿರೂಪಿಸಿದರು. ಪಂಚಗವ್ಯ ಚಿಕಿತ್ಸಾ ಶಿಬಿರದ ಸಂಚಾಲಕರಾದ ಶ್ರೀ ಶಿಶಿರ ಅಂಗಡಿಯವರು ಉಪಸ್ಥಿತರಿದ್ದರು.

ಶಿಬಿರದ ಅವಧಿಯಲ್ಲಿ ಗ್ರಾಮಸ್ಥರನ್ನು ವೈಯುಕ್ತಿಕವಾಗಿ ಒಬ್ಬೊಬ್ಬರನ್ನೇ ಪರೀಕ್ಷಿಸಲಾಯಿತು ಹಾಗೂ ಇತರ ಆರೋಗ್ಯ ಸಮಸ್ಯೆಗಳ ಕುರಿತು ಚರ್ಚಿಸಲಾಯಿತು. ಪ್ರತಿಯೊಬ್ಬರಿಗೂ ಗೋಮೂತ್ರದಿಂದ ತಯಾರಿಸಿದ ಒಂದು ಗುಳಿಗೆ ಮತ್ತು ಒಂದು ಪುಡಿಯನ್ನು ಎರಡು ವಾರಗಳ ಅವಧಿಗೆ ಕೊಡಲಾಯಿತು. ಇತರ ಆರೋಗ್ಯ ಸಮಸ್ಯೆಗಳಿಗೂ ಗವ್ಯಾಧಾರಿತ ಔಷಧಿಗಳನ್ನು ಆಗಮಿಸಿದ್ದ ವೈದ್ಯರು ಸೂಚಿಸಿದರು.
ದೊಡ್ಮನೆ ಪ್ರಾಥಮಿಕ ಆರೋಗ್ಯ ಕೇಂದ್ರದಿಂದ ಶ್ರೀಮತಿ ಡಾ. ಜ್ಯೋತಿ ಹೆಗಡೆ, ಡಾ. ರೇಖಾ ಗೌಡ, ಡಾ. ಮಲ್ಲಿಕಾರ್ಜುನ, ಡಾ. ರವಿ ಪಾಂಡವಪುರ ಗ್ರಾಮಸ್ಥರ ಪರೀಕ್ಷೆ ನಡೆಸಿದರು.

ಶ್ರೀಸಂಸ್ಥಾನದವರ ಮಾರ್ಗದರ್ಶನದಂತೆ ನಡೆದ ಈ ಶಿಬಿರದಿಂದ ಗ್ರಾಮಸ್ಥರಲ್ಲಿ ಆತ್ಮವಿಶ್ವಾಸ ಹೆಚ್ಚಾಗಿದ್ದು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ.

ರೋಗಪೀಡಿತ ಇತರ ಗ್ರಾಮಗಳಲ್ಲಿಯೂ ಇದೇ ರೀತಿಯ ಪಂಚಗವ್ಯ ಚಿಕಿತ್ಸಾ ಶಿಬಿರಗಳನ್ನು ಭಾರತೀಯ ಗೋಪರಿವಾರ ಆಯೋಜಿಲಿದೆ.

 

Author Details


Srimukha

Leave a Reply

Your email address will not be published. Required fields are marked *