ಧಾರ್ಮಿಕ ಕಾರ್ಯಕಮಗಳೊಂದಿಗೆ ನೀರ್ಚಾಲು ವಲಯೋತ್ಸವ ಸಂಪನ್ನ – ಶ್ರೀಮಠದ ರಕ್ಷಣೆಯ ಪ್ರತಿಜ್ಞೆಗೈಯ್ದ ಭಕ್ತರು

ಸಮಾರಂಭ ಸುದ್ದಿ

ಮುಳ್ಳೇರಿಯಾ ಮಂಡಲದ ನೀರ್ಚಾಲು ವಲಯದ ವಲಯೋತ್ಸವ ಕಾರ್ಯಕ್ರಮವು ೧೧/೧೧/೨೦೧೮ ರಂದು ಅಗ್ರಸಾಲೆ ಶ್ರೀ ಶಾಸ್ತಾರ ಮಂದಿರದಲ್ಲಿ ನಡೆಯಿತು. ವಲಯೋತ್ಸವದ ಪ್ರಯುಕ್ತ ಬೆಳಗ್ಗೆ ಕುಂಕುಮಾರ್ಚನೆ, ಭಜನ ರಾಮಾಯಣ ಪಾರಾಯಣಗಳು ನಡೆದವು. ಕಾರ್ಯಕ್ರಮಕ್ಕೆ ವಲಯದ ನಿವೃತ್ತ ಹಿರಿಯ ಗುರಿಕ್ಕಾರರಾದ ಶ್ರೀ ವಾಶೆ ಸುಬ್ರಹ್ಮಣ್ಯ ಭಟ್ ಧ್ವಜಾರೋಹಣಗೈಯುವ ಮೂಲಕ ಹಾಗೂ ಶ್ರೀಮತಿ ಸರಸ್ವತಿ ಕಡಗಂಜಿ ದೀಪ ಪ್ರಜ್ವಲನೆಗೈಯುವ ಮೂಲಕ ಚಾಲನೆ‌ ನೀಡಿದರು.

೧೧.೦೦ ಗಂಟೆಗೆ ಸರಿಯಾಗಿ ಸಭಾ ಕಾರ್ಯಕ್ರಮ ಆರಂಭಗೊಂಡಿತು. ಸಭೆಯಲ್ಲಿ ಮಾತನಾಡಿದ ಮುಳ್ಳೇರಿಯಾ ಮಂಡಲ ಕಾರ್ಯದರ್ಶಿ ಶ್ರೀಬಾಲಸುಬ್ರಹ್ಮಣ್ಯ ಭಟ್
ಹಲವು ವರ್ಷಗಳಿಂದ ನಮ್ಮ ರಾಮಚಂದ್ರಾಪುರ ಮಠದ ಮೇಲೆ, ಗುರುಗಳ ಮೇಲೆ ಮಿಥ್ಯಾರೋಪಗಳು ಬರುತ್ತಿದ್ದು ಅದನ್ನು ಸಮರ್ಥವಾಗಿ ಎದುರಿಸಲು ರೂಪೀಕರಿಸಿದ ಶ್ರೀರಾಮಚಂದ್ರಾಪುರ ಮಠ ಸಂರಕ್ಷಣಾ ಸಮಿತಿಯ ಕುರಿತು ಹಾಗೂ ಸಮಿತಿಯ ಕಾರ್ಯಗಳ ಕುರಿತು ಮಾಹಿತಿ ನೀಡಿದರು. ಅನಂತರ ದೀಪಕ್ಕೆ ಎಣ್ಣೆ ಹಾಕಿ ಪ್ರಾರ್ಥನೆ ಹಾಗೂ ಪ್ರತಿಜ್ಞೆಯನ್ನು ಮಾಡಲಾಯಿತು.

ಮುಳ್ಳೇರಿಯಾ ಮಂಡಲ ಉಪಾಧ್ಯಕ್ಷರಾದ ಶ್ರೀ ಕುಮಾರಸುಬ್ರಹ್ಮಣ್ಯ ಪೈಸಾರಿ ಪ್ರಾರ್ಥನೆ ಹಾಗೂ ಪ್ರತಿಜ್ಞಾ ವಿಧಿಯನ್ನು ಬೋಧಿಸಿದರು. ಪ್ರತಿಜ್ಞೆಯ ಅನಂತರ ಆಗಮಿಸಿದವರಲ್ಲಿ‌ ಹಲವರು ಸಂರಕ್ಷಣಾ ನಿಧಿಗೆ ನಿಧಿ ಸಮರ್ಪಿಸಿದರು.

ಇದೇ ಸಂದರ್ಭದಲ್ಲಿ ವಲಯದಲ್ಲಿ ಹಲವು ವರ್ಷಗಳ ಕಾಲ ಗುರಿಕ್ಕಾರರಾಗಿ ಗುರುಸೇವೆ ಮಾಡಿ ಕಳೆದ ವರ್ಷ ಸೇವೆಯಿಂದ ನಿವೃತ್ತಿ ಪಡೆದ ಶ್ರೀ ವಾಶೆ ಸುಬ್ರಹ್ಮಣ್ಯ ಭಟ್ ಅವರಿಗೆ ಗೌರವಾರ್ಪಣೆಯನ್ನು ಮಾಡಲಾಯಿತು. ವಲಯ ಸೇವಾ ವಿಭಾಗದ ಶ್ರೀ ಗೋಪಾಲಕೃಷ್ಣ ಶಿಮಲಡ್ಕ ಎಲ್ಲರಿಗೂ ಚಿರಪರಿಚಿತರಾದ ಶ್ರೀಯುತರನ್ನು ಸಭೆಗೆ ಪರಿಚಯಿಸಿದರು. ಶಾಲು, ಹಣ್ಣುಹಂಪಲು ಹಾಗೂ ಸ್ಮರಣಿಕೆಯನ್ನು ನೀಡಿ ಅವರನ್ನು ಗೌರವಿಸಲಾಯಿತು. ಶ್ರೀಯುತ ವಾಶೆ ಸುಬ್ರಹ್ಮಣ್ಯ ಭಟ್ಟರು ತಮ್ಮ ಅನಿಸಿಕೆಗಳನ್ನು ಸಭೆಯಲ್ಲಿ ಹಂಚಿಕೊಂಡರು.

ನೀರ್ಚಾಲು ವಲಯದ ಉಪಾಧ್ಯಕ್ಷರಾದ ಕನಕವಲ್ಲಿ ಬಡಗಮೂಲೆ ಕಾರ್ಯಕ್ರಮಕ್ಕೆ ಸ್ವಾಗತಿಸಿದರು. ವಲಯ ಕಾರ್ಯದರ್ಶಿ ಶ್ರೀ ಗೋಪಾಲಕೃಷ್ಣ ಭಟ್ ಕಕ್ಕಳ ಪ್ರಸ್ತಾವನೆ ಹಾಗೂ ವಲಯದ ವಾರ್ಷಿಕ ವರದಿಯನ್ನು ಮಂಡಿಸಿದರು. ವಲಯ ಕೋಶಾಧಿಕಾರಿ ಶ್ರೀ ಈಶ್ವರ ಭಟ್ ಹಳೆಮನೆ ಲೆಕ್ಕಪತ್ರ ಮಂಡಿಸಿದರು.

ಸಭೆಯ ಬಳಿಕ ವಲಯದಲ್ಲಿ ಹಲವು ಕಾಲ ವೈದಿಕರಾಗಿ ಮಾರ್ಗದರ್ಶನ ಮಾಡಿದ ಪ್ರಸ್ತುತ ಸಭೆಗೆ ಆಗಮಿಸಲು ಅಶಕ್ತರಾದ ವೈದಿಕರು ವೇ.ಮೂ. ಕಿಳಿಂಗಾರು ಶಂಕರನಾರಾಯಣ ಭಟ್ ಅವರ ಮನೆಗೆ ತೆರಳಿ ಗೌರವ ಅರ್ಪಿಸಲಾಯಿತು. ಮಹಾಮಂಡಲಾಧ್ಯಕ್ಷ ಶ್ರೀಮತಿ ಈಶ್ವರಿ ಶ್ಯಾಮ ಭಟ್ ಬೇರ್ಕಡವು, ಮಂಡಲಾಧ್ಯಕ್ಷರಾದ ಪ್ರೊ.ಶ್ರೀಕೃಷ್ಣ ಭಟ್, ಮಂಡಲ ಶಿಷ್ಯಮಾಧ್ಯಮ ವಿಭಾಗದ ಶ್ರೀ ಸರಳಿ ಮಹೇಶ, ವಲಯಾಧ್ಯಕ್ಷ ಶ್ರೀ ಜಯದೇವ ಖಂಡಿಗೆ, ಕಾರ್ಯದರ್ಶಿ ಶ್ರೀ ಗೋಪಾಲಕೃಷ್ಣ ಭಟ್ ಕಕ್ಕಳ, ಕೋಶಾಧಿಕಾರಿ ಶ್ರೀ ಈಶ್ವರ ಭಟ್ ಹಳೆಮನೆ ಉಪಸ್ಥಿತರಿದ್ದರು.

ಮಹಾಮಂಡಲದ ವತಿಯಿಂದ ನಮ್ಮ ಸಮಾಜದಲ್ಲಿ ಒಳ್ಳೆಯ ಅಂಕ ಪಡೆದ ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳಿಗೆ ನೀಡುವ ವಿದ್ಯಾ ಆರ್ಥಿಕ ಸಹಾಯ ನಿಧಿಯನ್ನು ಮುಳ್ಳೇರಿಯಾ ಮಂಡಲ ವ್ಯಾಪ್ತಿಯ 32 ಜನ ವಿದ್ಯಾರ್ಥಿಗಳಿಗೆ ನೀಡಲಾಯಿತು.

ಮಹಾಮಂಡಲ ಪ್ರಧಾನ ಕಾರ್ಯದರ್ಶಿಗಳಾದ ಶ್ರೀ ಹರಿಪ್ರಸಾದ್ ಪೆರಿಯಾಪು ವಿದ್ಯಾ ಆರ್ಥಿಕ ಸಹಾಯಧನವನ್ನು ವಿದ್ಯಾರ್ಥಿಗಳಿಗೆ ವಿತರಿಸಿದರು ಹಾಗೂ ವಿದ್ಯಾ ಸಹಾಯದ ಕುರಿತು ವಿವರ ನೀಡಿದರು. ಮುಳ್ಳೇರಿಯಾ ಮಂಡಲದ ವಿದ್ಯಾರ್ಥಿ ವಾಹಿನಿ ವಿಭಾಗದ ಶ್ರೀ ಕೇಶವ ಪ್ರಸಾದ ಎಡೆಕ್ಕಾನ ಅವರ ನೇತೃತ್ವದಲ್ಲಿ ಈ ಕಾರ್ಯಕ್ರಮ ನಡೆಯಿತು.

ಮುಳ್ಳೇರಿಯಾ ಮಂಡಲ ಶಿಷ್ಯಮಾಧ್ಯಮ ವಿಭಾಗದ ಶ್ರೀ ಸರಳಿ ಮಹೇಶ ಧರ್ಮಭಾರತಿ ಚಂದಾಗಾರಿಕೆ, ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಗುರುಗಳನ್ನು ಹಿಂಬಾಲಿಸುವುದರಿಂದಾಗುವ ಪ್ರಯೋಜನಗಳ ಕುರಿತು ಮಾಹಿತಿ ನೀಡಿದರು.
ಮಂಡಲ ಅಧ್ಯಕ್ಷರಾದ ಶ್ರೀ ಪ್ರೊ. ಶ್ರೀಕೃಷ್ಣ ಭಟ್ ಮಾತನಾಡುತ್ತಾ ವಿದ್ಯಾನಿಧಿ ಯೋಜನೆಯ ಅಡಿಯಲ್ಲಿ ವಿದ್ಯಾರ್ಥಿಗಳಿಗೆ ನೀಡುವ ಸಹಾಯಧನವನ್ನು ಸದುಪಯೋಗ ಮಾಡಿ ಎಂದು ಹಾರೈಸಿದರು ಹಾಗೂ ಶ್ರೀ ಮಠದ ಯೋಜನೆಗಳ ಕುರಿತು ಸಮಗ್ರ ಪರಿಚಯವನ್ನು ನೀಡಿದರು.

ಮಹಾಮಂಡಲದ ಅಧ್ಯಕ್ಷರಾದ ಶ್ರೀಮತಿ ಈಶ್ವರಿ ಶ್ಯಾಮ ಭಟ್ ಬೇರ್ಕಡವು ಅವರು ಮಠದ ವಿವಿಧ ವಿಭಾಗಗಳ ಕುರಿತು, ಯೋಜನೆಗಳ ಕುರಿತು ಮಾಹಿತಿ ನೀಡಿ ನಾವು ನಮ್ಮ ಜವಾಬ್ದಾರಿಯನ್ನು ಸಮರ್ಥವಾಗಿ ನಿಭಾಯಿಸೋಣ ಎಂದು ತಿಳಿಸಿದರು.

ಕಾರ್ಯಕ್ರಮದ ಅಧ್ಯಕ್ಷರೂ ವಲಯಾಧ್ಯಕ್ಷರೂ ಆದ ಶ್ರೀ ಜಯದೇವ ಖಂಡಿಗೆ ಅವರು ನಮ್ಮ ಮಠದ ಎಲ್ಲ ಯೋಜನೆಗಳಲ್ಲಿ ನಮ್ಮ ವಲಯದ ಎಲ್ಲರೂ ಒಟ್ಟಾಗಿ ಭಾಗಿಯಾಗಿ, ಸಮರ್ಥವಾಗಿ ನಿಭಾಯಿಸಿ ಸಂಘಟನೆಯನ್ನು ಇನ್ನಷ್ಟು ಬಲಗೊಳಿಸೋಣ ಎಂದರು. ಹಾಗೂ ಮಧೂರಿನಲ್ಲಿ ನಡೆಯುತ್ತಿರುವ ಜೀರ್ಣೋದ್ಧಾರ ಕೆಲಸಗಳಲ್ಲಿ ಇದುವರೆಗೆ ಶ್ರಮದಾನದಲ್ಲಿ ಸಹಕರಿಸಿದ ಎಲ್ಲ ವಲಯಗಳ ಹವ್ಯಕ ಬಾಂಧವರಿಗೂ ಕೃತಜ್ಞತೆಯನ್ನು ಸಮರ್ಪಿಸಿದರು.

ಮುಳ್ಳೇರಿಯಾ ಮಂಡಲ ವಿದ್ಯಾರ್ಥಿ ವಾಹಿನಿ‌ ವಿಭಾಗದ ಶ್ರೀ ಕೇಶವಪ್ರಸಾದ ಎಡಕ್ಕಾನ, ಶ್ರೀಮತಿ ಕುಸುಮಾ ಪೆರ್ಮುಖ ಉಪಸ್ಥಿತರಿದ್ದರು.

ಗುರಿಕ್ಕಾರರೂ ಸಂಸ್ಕಾರ ವಿಭಾಗ ಪ್ರಧಾನರೂ ಆದ ಶ್ರೀ ಉದಯಶಂಕರ ಕುಂಟಿಕಾನ ಮಠ ಧನ್ಯವಾದವಿತ್ತರು. ವಲಯ ಶಿಷ್ಯಮಾಧ್ಯಮ ವಿಭಾಗದ ಶ್ರೀ ಮಹೇಶ ಕೃಷ್ಣ ತೇಜಸ್ವಿ ಕಾರ್ಯಕ್ರಮ ನಿರೂಪಿಸಿದರು. ಶಾಂತಿಮಂತ್ರ, ಶಂಖನಾದ, ಧ್ವಜಾವತರಣದೊಂದಿಗೆ ಕಾರ್ಯಕ್ರಮ ಮುಕ್ತಾಯಗೊಂಡಿತು.

Author Details


Srimukha

Leave a Reply

Your email address will not be published. Required fields are marked *