ಬದಿಯಡ್ಕ: ಮುಜುಂಗಾವು ಶ್ರೀಭಾರತೀ ವಿದ್ಯಾಪೀಠದಲ್ಲಿ ಮೂರು ದಿನಗಳ ಕಾಲ ಕಾಸರಗೋಡು ಜಿಲ್ಲಾ ಮಟ್ಟದ ಸ್ಕೌಟ್ಸ್ ಮತ್ತು ಗೈಡ್ಸ್ ಶಿಬಿರ ನಡೆಯಿತು. ಶಿಬಿರದ ಮೂರನೇ ದಿನವಾದ ಭಾನುವಾರ ರಾಷ್ಟ್ರದ ಇತಿಹಾಸ, ಪರಂಪರೆಗಳ ಪ್ರದರ್ಶನಗಳು ನಡೆದವು. ಮಂಜೇಶ್ವರ ಉಪಜಿಲ್ಲಾವಿದ್ಯಾಧಿಕಾರಿ ಶ್ರೀ ದಿನೇಶ್ ವಿ. ಅಧ್ಯಕ್ಷತೆಯಲ್ಲಿ ಗ್ರಾ.ಪಂ. ಸದಸ್ಯ ಶ್ರೀ ಹರೀಶ್ ಗಟ್ಟಿ ಪ್ರದರ್ಶನ ಉದ್ಘಾಟಿಸಿದರು. ಶಿಕ್ಷಣ ತಜ್ಞ, ಸಿರಿಗನ್ನಡ ವೇದಿಕೆ ಜಿಲ್ಲಾಧ್ಯಕ್ಷ ಶ್ರೀ ವಿ.ಬಿ. ಕುಳಮರ್ವ ಉಪಸ್ಥಿತರಿದ್ದರು.
ಆ ಬಳಿಕ ಶಿಬಿರದ ಜರುಗಿದ
ಸಮಾರೋಪ ಸಮಾರಂಭದಲ್ಲಿ ಅತಿಥಿಗಳಾಗಿ ಮಂಜೇಶ್ವರ ಬ್ಲಾ.ಪಂ. ಅಧ್ಯಕ್ಷ ಶ್ರೀ ಎ. ಕೆ. ಎಂ. ಅಶ್ರಫ್ ಪಾಲ್ಗೊಂಡಿದ್ದರು. ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ವಿದ್ಯಾರ್ಥಿಜೀವನದ ಪಾಠಗಳು ಭವಿಷ್ಯದ ಬದುಕಿನ ಸುಲಲಿತತೆಗೆ ಮಾರ್ಗದರ್ಶಿಯಾಗಿರುತ್ತದೆ. ಹೆಚ್ಚು ಅನುಭವಗಳು ಬದುಕನ್ನು ಸ್ಫುಟವಾಗಿ ರೂಪಿಸಿಕೊಳ್ಳಲು ನೆರವಾಗುತ್ತದೆ. ಸ್ವಾವಲಂಬನೆ, ಸ್ವಚ್ಚತೆ ಹಾಗೂ ಸಾಹಸ ನಿರ್ವಹಣೆಯಲ್ಲಿ ಮಾರ್ಗದರ್ಶಿಯಾಗಿ ಮುನ್ನಡೆಸುವ ಸ್ಕೌಟ್ಸ್-ಗೈಡ್ಸ್ ರಾಷ್ಟ್ರ ನಿರ್ಮಾಣದಲ್ಲಿ ಪ್ರಧಾನ ಪಾತ್ರ ವಹಿಸುತ್ತಿವೆ. ಸ್ವಾಮಿ ವಿವೇಕಾನಂದರಿಂದ ಮಾಜೀ ರಾಷ್ಟ್ರಪತಿಗಳಾಗಿದ್ದ ಕ್ಷಿಪಣ ಜನಕ ಕಲಾಂ ವರೆಗೆ ಜಗತ್ತಿಗೇ ಭಾರತದ ಶಕ್ತಿ, ಸಾಮರ್ಥ್ಯವನ್ನು ತಿಳಿಯಪಡಿಸಿದ ಮಹಾತ್ಮರ ಆದರ್ಶಗಳು ಹೊಸ ತಲೆಮಾರಿಗೆ ಎಂದಿಗೂ ಬೆಳಕಾಗಬೇಕು ಎಂದು ಅವರು ಕರೆ ನೀಡಿದರು.
ಕುಂಬಳೆ ಗ್ರಾ.ಪಂ. ಸ್ಥಾಯೀ ಸಮಿತಿ ಅಧ್ಯಕ್ಷ ಶ್ರೀ ಎ. ಕೆ. ಆರೀಫ್ ಅಧ್ಯಕ್ಷತೆ ವಹಿಸಿ ಮಾತನಾಡಿ, ಬೃಹತ್ ಸಂಖ್ಯೆಯಲ್ಲಿ ಜಿಲ್ಲೆಯ ವಿವಿಧೆಡೆಗಳಿಂದ ಆಗಮಿಸಿದ ಶಿಬಿರಾರ್ಥಿಗಳಿಂದ ಮಿನಿ ಕ್ಯಾಂಪೂರಿ ವಿಶಿಷ್ಟವಾಗಿ ಮೂಡಿಬಂದಿದೆ ಎಂದರು.
ಗೈಡ್ಸ್ ಅಧಿಕಾರಿಗಳಾದ ಶ್ರೀಮತಿ ಆಶಾಲತಾ, ಶ್ರೀಮತಿ ಉಷಾ ಪಿ.ಟಿ., ಶ್ರೀ ಸಾಬು ಥೋಮಸ್, ಶಾಲಾ ಆಡಳಿತಾಧಿಕಾರಿ ಶ್ರೀ ಶ್ಯಾಂ ಭಟ್ ದರ್ಬೆಮಾರ್ಗ ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಗೈಡ್ಸ್ ತರಬೇತುದಾರರಾದ ಶ್ರೀಮತಿ ರೇಷ್ಮಾ ಹಾಗೂ ಶ್ರೀಮತಿ ವಿನುತಾ ಅವರನ್ನು ಗೌರವಿಸಲಾಯಿತು.
ಶಿಬಿರ ನಿರ್ವಹಣಾ ಸಮಿತಿ ಪ್ರಧಾನ ಸಂಚಾಲಕ ಶ್ರೀ ಎಸ್. ಎನ್. ರಾವ್ ಮುನ್ನಿಪ್ಪಾಡಿ ಸ್ವಾಗತಿಸಿ, ಮಾತನಾಡುತ್ತಾ ಪಂಚಮುಖೀ ಶಿಕ್ಷಣವನ್ನು ನೀಡುತ್ತಿರುವ ಶಾಲೆಯಲ್ಲಿ ಇಂತಹ ಶಿಬಿರವನ್ನು ಆಯೋಜಿಸಲು ಅವಕಾಶ ಮಾಡಿಕೊಟ್ಟ ಅಧಿಕಾರಿಗಳು ಅಭಿನಂದನೆ ಸಲ್ಲಿಸಿದರು. ಸ್ಕೌಟ್ಸ್ ಜಿಲ್ಲಾ ಕಾರ್ಯದರ್ಶಿ ಶ್ರೀ ಕಿರಣ್ ಪ್ರಸಾದ್ ಕೂಡ್ಲು ಧನ್ಯವಾದ ಸಮರ್ಪಣೆಯನ್ನು ಮಾಡುತ್ತಾ ಜಿಲ್ಲಾಮಟ್ಟದ ಶಿಬಿರ ಅದ್ಧೂರಿಯಾಗಿ ನಡೆದಿದೆ. ಇದರ ಎಲ್ಲ ಶ್ರೇಯಸ್ಸು ಶ್ರೀಸಂಸ್ಥಾನದವರ ನೇತೃತ್ವದಲ್ಲಿ ನಡೆಯುತ್ತಿರುವ ಈ ಶಾಲೆಗೆ ಸಲ್ಲುತ್ತದೆ. ಪ್ರತಿಯೊಂದು ಚಟುವಟಿಕೆಗಳಿಗೂ ವಿಶಾಲವಾದ ಸ್ಥಳಾವಕಾಶವಿರುವ ಇಲ್ಲಿ ಉತ್ತಮವಾದ ಆಹಾರ ಸಹಿತ ಎಲ್ಲ ಸೌಲಭ್ಯಗಳನ್ನು ಒದಗಿಸಿರುವುದಲ್ಲದೇ, ಯಾವುದೇ ಕುಂದುಕೊರತೆಯಿಲ್ಲದೆ ಶಿಬಿರವನ್ನು ಸಂಘಟಿಸಲಾಗಿದ್ದು ಮಾದರಿಯಾಗಿದೆ ಎಂದರು.
ಕುಂಬಳೆ ಗ್ರಾ.ಪಂ. ಸದಸ್ಯ ಶ್ರೀ ಹರೀಶ್ ಗಟ್ಟಿ, ಶಾಲಾ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಶ್ರೀ ಪುರುಷೋತ್ತಮ ಆಚಾರ್ಯ, ಸ್ಕೌಟಿಂಗ್ ದಕ್ಷಿಣ ವಲಯಾಧಿಕಾರಿ ಶ್ರೀ ಪ್ರಶಾಂತ್ ಉಪಸ್ಥಿತರಿದ್ದು ಶುಭಹಾರೈಸಿದರು. ಜಿಲ್ಲಾ ಸ್ಕೌಟ್ಸ್ ಆಯುಕ್ತ ಶ್ರೀ ಗುರುಮೂರ್ತಿ ನಾಯ್ಕಾಪು ಹಾಗೂ ಶ್ರೀ ಅಜಿತ್ ಕಾರ್ಯಕ್ರಮ ನಿರ್ವಹಿಸಿದರು.