ನಂತೂರು: ರಾಜ್ಯದಲ್ಲಿ ಅತೀ ಹೆಚ್ಚು ಆದಾಯ ಹೊಂದಿರುವ ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರದ ವತಿಯಿಂದ ೮ ದೇಗುಲಗಳ ಅಭಿವೃದ್ಧಿಯನ್ನು ಮಾಡಲಾಗುತ್ತಿದೆ. ಆದಾಯವನ್ನು ಧಾರ್ಮಿಕ ಕೇಂದ್ರಗಳಿಗೆ, ಕಾರ್ಯಗಳಿಗೆ ಹಂಚಲಾಗುತ್ತಿದೆ ಎಂದು ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರದ ವ್ಯವಸ್ಥಾಪನ ಸಮಿತಿ ಸದಸ್ಯ ಮಹೇಶ್ ಕುಮಾರ್ ಕರಿಕ್ಕಳ ಹೇಳಿದರು.
ಅವರು ಅ.೬ರಂದು ಮಂಗಳೂರು ನಂತೂರು ಶ್ರೀ ಭಾರತೀ ಸಮೂಹ ಸಂಸ್ಥೆಯಲ್ಲಿ ನಡೆದ ಆಶ್ಲೇಷಾ ಬಲಿ ಮತ್ತು ಸಗ್ರಹಮಖ ನವಚಂಡಿಕಾಯಾಗದ ಧಾರ್ಮಿಕ ಸಭೆಯಲ್ಲಿ ಸಮ್ಮಾನ ಸ್ವೀಕರಿಸಿ, ಮಾತನಾಡಿದರು.
ಮಂಗಳೂರು ಶಾಸಕ ವೇದವ್ಯಾಸ ಕಾಮತ್ ಭೇಟಿ ನೀಡಿ, ಸಂಸ್ಥೆಯ ಆವರಣಗೋಡೆಗೆ ಅನುದಾನ ಬಿಡುಗಡೆಗೊಳಿಸಲು ಪ್ರಯತ್ನಿಸುವುದಾಗಿ ತಿಳಿಸಿದರು.
ಮಂಗಳೂರು ಮಹಾನಗರಪಾಲಿಕೆ ಸದಸ್ಯೆ ರೂಪಾ ಬಂಗೇರ ಮಾತನಾಡಿ ಸಂಸ್ಕಾರಯುತ ಶಿಕ್ಷಣ ನೀಡುವ ಶ್ರೀ ಭಾರತೀ ಸಮೂಹ ಸಂಸ್ಥೆಯು ವಿದ್ಯಾರ್ಥಿಗಳ ಉತ್ತಮ ಭವಿಷ್ಯ ರೂಪಿಸಲು ಮಾರ್ಗದರ್ಶನ ಮಾಡುತ್ತಿದೆ. ಸಂಸ್ಥೆಯ ಅಭಿವೃದ್ಧಿಗೆ ಕೈಜೋಡಿಸಲು ನಾವು ಸದಾ ಸಿದ್ಧರಾಗಿದ್ದೇವೆ ಎಂದು ಹೇಳಿದರು.
ಸಂಸ್ಥೆಯ ಅಧ್ಯಕ್ಷ ಹಾರಕರೆ ನಾರಾಯಣ ಭಟ್ ಅವರು ಅಧ್ಯಕ್ಷತೆ ವಹಿಸಿದ್ದರು. ಮಧುಸೂದನ ಭಟ್ ಸೊಂದಿ ಧಾರ್ಮಿಕ ಉಪನ್ಯಾಸ ನೀಡಿದರು. ಸುಬ್ರಹ್ಮಣ್ಯ ಕ್ಷೇತ್ರದ ವ್ಯವಸ್ಥಾಪನ ಸಮಿತಿ ಸದಸ್ಯ ಮಹೇಶ್ ಕುಮಾರ್ ಕರಿಕ್ಕಳ ಮತ್ತು ವೇದಮೂರ್ತಿ ಅಮೈ ಶಿವಪ್ರಸಾದ ಭಟ್ ಅವರನ್ನು ಸಮ್ಮಾನಿಸಲಾಯಿತು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಪ್ರಾಯೋಜಕತ್ವದಲ್ಲಿ ಮಹಿಷಮರ್ದಿನಿ ಎಂಬ ಯಕ್ಷಗಾನ ಬಯಲಾಟ ನಡೆಯಿತು.
ಹವ್ಯಕ ಮಹಾಮಂಡಲ ಉಪಾಧ್ಯಕ್ಷೆ ಶೈಲಜಾ ಕೆ.ಟಿ.ಭಟ್, ಮಂಗಳೂರು ಹವ್ಯಕ ಮಂಡಲ ಅಧ್ಯಕ್ಷ-ಸಂಸ್ಥೆಯ ಕಾರ್ಯಾಧ್ಯಕ್ಷ ಗಣೇಶಮೋಹನ ಕಾಶಿಮಠ, ಮಾಜಿ ಅಧ್ಯಕ್ಷ ಡಾ.ರಾಜೇಂದ್ರಪ್ರಸಾದ್, ಮಂಗಳೂರು ಹವ್ಯಕ ಸಭಾ ಅಧ್ಯಕ್ಷ ಬಾಲಸುಬ್ರಹ್ಮಣ್ಯ ಭಟ್ ಕಬೆಕ್ಕೋಡು, ರುದ್ರ ಸಮಿತಿ ಅಧ್ಯಕ್ಷ ಡಾ.ಐ.ಬಿ.ಪಳ್ಳಾದೆ, ದ.ಕ.-ಕಾಸರಗೋಡು ಹವ್ಯಕ ಮಹಾಜನಸಭಾ ಅಧ್ಯಕ್ಷ ಎನ್.ಕೃಷ್ಣ ಭಟ್, ಸಂಸ್ಥೆಯ ಉಪಾಧ್ಯಕ್ಷ ಪ್ರೊ.ಟಿ.ಶ್ರೀಕೃಷ್ಣ ಭಟ್, ಸೇರಾಜೆ ಸುಬ್ರಹ್ಮಣ್ಯ ಭಟ್, ಸುಬ್ರಹ್ಮಣ್ಯ ಭಟ್ ನಿಡುಗಳ, ಕಾರ್ಯಾಲಯ ಕಾರ್ಯದರ್ಶಿ ಎಂ.ಟಿ.ಭಟ್, ಸರವು ರಮೇಶ ಭಟ್, ಯಾಗದ ಪ್ರಧಾನ ಯಜಮಾನತ್ವ ವಹಿಸಿದ ದಿವಾಣ ಗೋವಿಂದ ಭಟ್, ವಿವಿಧ ವಲಯಗಳ ಅಧ್ಯಕ್ಷರು, ಪದಾಧಿಕಾರಿಗಳು, ಪದವಿ ಪ್ರಾಂಶುಪಾಲ ಪ್ರೊ.ಜೀವನ್‌ದಾಸ್, ಉಪಪ್ರಾಂಶುಪಾಲರಾದ ಗಂಗಾರತ್ನ ಮುಗುಳಿ, ಪಿಯುಸಿ, ಪ್ರೌಢಶಾಲೆ ಪ್ರಾಂಶುಪಾಲರಾದ ವಿದ್ಯಾ ಭಟ್ ಮೊದಲಾದವರು ಉಪಸ್ಥಿತರಿದ್ದರು.
ಕಾರ್ಯದರ್ಶಿ ಶ್ರೀಕೃಷ್ಣ ನೀರಮೂಲೆ ಸ್ವಾಗತಿಸಿದರು. ಸಹಕಾರ್ಯದರ್ಶಿ ಪ್ರೊ.ವಿ.ಜಿ.ಭಟ್ ನಿರೂಪಿಸಿ, ವಂದಿಸಿದರು.