ಮಂಗಳೂರು ಹೋಬಳಿಯ ಸಾವಿರಾರು ಮಂದಿ ಮಹನೀಯರು, ಮಾತೆಯರು ಜತೆ ಸೇರಿ ಸೂರ್ಯೋದಯದಿಂದ ಸೂರ್ಯಾಸ್ತದ ತನಕ ಅಖಂಡ ಆದಿತ್ಯಹೃದಯ ಪಾರಾಯಣ, ವೇದಪಾರಾಯಣ, ಗಾಯತ್ರಿ ಜಪ ಮಾಡಿ ಭಗವಂತನ ಅನುಗ್ರಹ ಮತ್ತು ಸಂಪ್ರೀತಿಗೆ ಕಾರಣರಾಗಿದ್ದಾರೆ. ಸಂಘಟನೆಯಿಂದ ವಿಭಿನ್ನ ರೀತಿಯ ಸೇವೆ ಸಂದಿದೆ. ಶ್ರೀರಾಮಚಂದ್ರಾಪುರ ಮಠದ ಎಲ್ಲ ಶಿಷ್ಯ ಭಕ್ತರು ನಿರಂತರವಾಗಿ ಇಂತಹ ಚಟುವಟಿಕೆಗಳಿಂದ ಗಮನಸೆಳೆಯುತ್ತಾರೆ ಎಂದು ವಜ್ರದೇಹಿ ಮಠದ ಶ್ರೀ ರಾಜಶೇಖರಾನಂದ ಸ್ವಾಮೀಜಿ ಶ್ಲಾಘಿಸಿದರು.
ಅವರು ಕಲ್ಲಡ್ಕ ಗೇರುಕಟ್ಟೆಶ್ರೀ ಉಮಾಶಿವ ಕ್ಷೇತ್ರದಲ್ಲಿ ಹವ್ಯಕ ಮಹಾಮಂಡಲಾಂತರ್ಗತ ಮಂಗಳೂರು ಹೋಬಳಿಯ ಮಂಗಳೂರು, ಮುಳ್ಳೇರಿಯ, ಉಪ್ಪಿನಂಗಡಿ ಮಂಡಲಗಳ ಸಹಯೋಗದಲ್ಲಿ ರವಿ – ಗುರುನಮನ ಎಂಬ ಹೆಸರಿನಲ್ಲಿ ಮಕರಸಂಕ್ರಮಣದಂದು ಸೂರ್ಯೋದಯದಿಂದ ಸೂರ್ಯಾಸ್ತದ ತನಕ ಅಖಂಡ ಆದಿತ್ಯಹೃದಯ ಪಾರಾಯಣ ಮತ್ತು ಇತರ ಧಾರ್ಮಿಕ ಚಟುವಟಿಕೆ ಬಳಿಕ ನಡೆದ ಧಾರ್ಮಿಕ ಸಭೆಯಲ್ಲಿ ಆಶೀರ್ವಚನ ನೀಡಿದರು.
ಹವ್ಯಕ ಮಹಾಮಂಡಲ ಅಧ್ಯಕ್ಷ ಹರಿಪ್ರಸಾದ್ ಪೆರಿಯಾಪು ಅಧ್ಯಕ್ಷತೆ ವಹಿಸಿದ್ದರು. ಬಂಟ್ವಾಳ ಶಾಸಕ ರಾಜೇಶ್ ನಾೖಕ್ ಉಳಿಪ್ಪಾಡಿಗುತ್ತು, ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯದ ಸಹಾಯಕ ಪ್ರಾಧ್ಯಾಪಕ ಡಾ.ರಾಮಕೃಷ್ಣ ಭಟ್ ಕೂಟೇಲು, ಶ್ರೀರಾಮಚಂದ್ರಾಪುರ ಮಠದ ಶ್ರೀ ಚರಣ ಖಂಡದ ಶ್ರೀಸಂಯೋಜಕ ರಾಘವೇಂದ್ರ ಮಧ್ಯಸ್ಥ, ಮಾಣಿ ಪೆರಾಜೆ ಶ್ರೀರಾಮಚಂದ್ರಾಪುರ ಮಠದ ಸೇವಾ ಸಮಿತಿ ಅಧ್ಯಕ್ಷ ಹಾರಕರೆ ನಾರಾಯಣ ಭಟ್, ಕಲ್ಲಡ್ಕ ಗೇರುಕಟ್ಟೆಶ್ರೀ ಉಮಾಶಿವ ಕ್ಷೇತ್ರ ಸೇವಾ ಸಮಿತಿ ಅಧ್ಯಕ್ಷ ರಾಕೋಡಿ ಈಶ್ವರ ಭಟ್, ರವಿ ಗುರುನಮನ ಸಮಿತಿ ಪ್ರಧಾನ ಸಂಚಾಲಕ ರಾಜಶೇಖರ ಭಟ್ ಕಾಕುಂಜೆ ಮತ್ತಿತರರು ಉಪಸ್ಥಿತರಿದ್ದರು.
ಸಮಿತಿಯ ಕೆ.ಟಿ.ಗಣೇಶ್ ಭಟ್ ಸ್ವಾಗತಿಸಿ, ಜನಾರ್ದನ ಭಟ್ ಅಮೈ ವಂದಿಸಿದರು. ಉದಯಶಂಕರ್ ನೀರ್ಪಾಜೆ ಕಾರ್ಯಕ್ರಮ ನಿರೂಪಿಸಿದರು.