ಬಜಕೂಡ್ಲು: ಭಗವಾನ್ ಗೋಪಾಲಕೃಷ್ಣನು ಗೋವರ್ಧನಗಿರಿಯನ್ನೆತ್ತಿ ಗೋಕುಲವನ್ನು ಸಂರಕ್ಷಿಸಿದ ಪರ್ವಕಾಲದಲ್ಲಿ ಗೋಪಾಷ್ಟಮೀ ಮಹೋತ್ಸವ ನ.೪ರಂದು ವೈಭವದಿಂದ ಆಚರಿಸಲಾಯಿತು.
ಬೆಳಗ್ಗೆ ೭ ರಿಂದ ಗುರುವಂದನೆ, ಕಾರ್ತಿಕ ಸೋಮವಾರದ ಪ್ರಯುಕ್ತ ಶತರುದ್ರಾಭಿಷೇಕ ಶಿವಪೂಜೆ, ಗೋಪೂಜೆ, ಸ್ತೋತ್ರಪಾರಾಯಣಗಳು, ಗಣಪತಿಹವನ, ನವಗ್ರಹಶಾಂತಿ, ಗೋವರ್ಧನಹವನ, ಕಾಮಧೇನುಹವನ, ಗೋಪಾಲಕೃಷ್ಣಹವನಗಳು ನಡೆದವು. ಮಾತೆಯರು ಕುಂಕುಮಾರ್ಚನೆ, ಭಜನೆ ನಡೆಸಿದರು.
ಸಾಯಂಕಾಲ ೪ ರಿಂದ ಗುರುವಂದನೆ, ದೇಶೀ ಹಸುವಿನ ಗೋಮಯನಿರ್ಮಿತ ಭವ್ಯ ಗೋವರ್ಧನ ಪರ್ವತದಲ್ಲಿ ಗೋಪಾಲಕೃಷ್ಣ ಪೂಜೆ,ಭಕ್ತರಿಂದ ವಿಷ್ಣುಸಹಸ್ರನಾಮ ಪಾರಾಯಣ, ಲಕ್ಷ್ಮೀನೃಸಿಂಹಕರಾವಲಂಬಸ್ತೋತ್ರ ಪಠಣ, ಗೋಪೂಜೆ, ತುಳಸೀಪೂಜೆ, ಭಜನೆ ಹಾಗೂ ದೀಪೋತ್ಸವ ನಡೆಯಿತು.
ಮಹಾಮಂಗಳಾರತಿಯ ಸಂದರ್ಭದಲ್ಲಿ ಗೋವರ್ಧನ ಗೋಪಾಲಕೃಷ್ಣ ದೇವರಿಗೆ ಅಷ್ಟಾವಧಾನ ಸೇವೆ ನಡೆಯಿತು.ಪ್ರಸಾದ ಭೋಜನದೊಂದಿಗೆ ಕಾರ್ಯಕ್ರಮ ಸಮಾಪ್ತವಾಯಿತು.